Mysore
22
overcast clouds

Social Media

ಗುರುವಾರ, 03 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಕೆಪಿಎಸ್‌ಸಿ ಶುದ್ಧೀಕರಣದ ಅಗತ್ಯ

ಓದುಗರ ಪತ್ರ

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ಅತ್ಯುನ್ನತ ನಾಗರಿಕ ಸೇವೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳು ಸರಣಿ ಹಗರಣಗಳು, ಪ್ರಶ್ನೆ ಪತ್ರಿಕೆ ಸೋರಿಕೆ, ಡಿಜಿಟಲ್ ಮೌಲ್ಯಮಾಪನದಲ್ಲಿ ಲೋಪದೋಷಗಳು ಮತ್ತು ಭ್ರಷ್ಟಾಚಾರದ ಆರೋಪಗಳಿಂದ ಸದಾ ಸುದ್ದಿಯಲ್ಲಿರುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.

ವರ್ಷಗಟ್ಟಲೆ ಹಗಲಿರುಳು ಕಷ್ಟಪಟ್ಟು ಓದುವ ಲಕ್ಷಾಂತರ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಈ ವ್ಯವಸ್ಥೆ ಆಟವಾಡುತ್ತಿದೆ. ಪರೀಕ್ಷೆಗಳನ್ನು ಮುಂದೂಡುವುದು, ಪರೀಕ್ಷೆ ಬರೆದವರು ನ್ಯಾಯಾಲಯದ ಮೆಟ್ಟಿಲೇರುವುದು ಮತ್ತು ಮರುಪರೀಕ್ಷೆಗಳನ್ನು ನಡೆಯುವುದರಿಂದ ಅಭ್ಯರ್ಥಿಗಳು ಮಾನಸಿಕವಾಗಿ ಜರ್ಜರಿತರಾಗುತ್ತಿದ್ದಾರೆ. ಇಂತಹ ಅವ್ಯವಹಾರಗಳು ಆಯೋಗದ ಮೇಲಿರುವ ನಂಬಿಕೆಯನ್ನೇ ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ. ಈ ವ್ಯವಸ್ಥೆಯನ್ನು ಸರಿಪಡಿಸಲು ಕಟ್ಟುನಿಟ್ಟಾದ ತಂತ್ರಜ್ಞಾನದ ಬಳಕೆ ಮಾಡಬೇಕಿದೆ. ಪ್ರಶ್ನೆ ಪತ್ರಿಕೆಗಳ ತಯಾರಿಕೆಯಿಂದ ಹಿಡಿದು ವಿತರಣೆಯವರೆಗೆ ಅತ್ಯಾಧುನಿಕ, ಸೈಬರ್ ಸುರಕ್ಷಿತ ತಂತ್ರಜ್ಞಾನವನ್ನು ಬಳಸಬೇಕು. ಬಯೋಮೆಟ್ರಿಕ್ ಮತ್ತು ಜಿಪಿಎಸ್ ಆಧಾರಿತ ಕಣ್ಗಾವಲು ಕಡ್ಡಾಯಗೊಳಿಸುವ ಅವಶ್ಯಕತೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸಂಸ್ಥೆಯು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿ, ಉನ್ನತ ಮಟ್ಟದ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಮಾತ್ರ ಆಯೋಗದ ಪ್ರಮುಖ ಹುದ್ದೆಗಳಿಗೆ ನೇಮಿಸಬೇಕಿದೆ. ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರು ಆಯೋಗದಲ್ಲಿ ಸುಧಾರಣೆಗಳನ್ನು ತರಲು ತಕ್ಷಣವೇ ಮುಂದಾಗಬೇಕಿದೆ.

– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

 

Tags:
error: Content is protected !!