ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್‌ಆಪ್, ಇನ್‌ಸ್ಟಾಗ್ರಾಮ್ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಹಾಗೂ ಜನ ಸಾಮಾನ್ಯರ ಮೇಲೆ ಸಾಕಷ್ಟು ಪ್ರಭಾವ ಉಂಟು ಮಾಡಿವೆ. ಇವುಗಳಿಂದಾಗಿ ಸಮಾಜದ ಸ್ವಾಸ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ಕೋಮು ವಿರೋಧಿ ಭಾವನೆ, ಧರ್ಮ-ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವುದು, ಪರಸ್ಪರ ವೈರತ್ವ ಬೆಳೆಸುವುದು, ವ್ಯಕ್ತಿ ನಿಂದನೆ, ಜಾತಿ ನಿಂದನೆ ಮುಂತಾದವುಗಳನ್ನು ಒಳಗೊಂಡ ಸುದ್ದಿ ಸಮಾಚಾರಗಳು, ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾಗಿ ಕಾಣಿಸಿಕೊಳ್ಳುತ್ತಿವೆ. ಧರ್ಮಸ್ಥಳದ ಪರವಾಗಿ ಹಾಗೂ ವಿರುದ್ಧ್ದವಾಗಿ ನೂರಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಗೊಂದಲ ಇವುಗಳನ್ನು ನೋಡಿದವರಿಗೆ ಉಂಟಾಗುತ್ತಿದೆ. ಬೇಡದ್ದನ್ನೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡುವುದು ದುರಂತವೇ ಸರಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನು ಮೇಲಾದರೂ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರಬೇಕಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





