ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ಕುರಿತಾಗಿ ಕೇಳಿಬರುತ್ತಿರುವ ಭ್ರಷ್ಟಾಚಾರ ಹಾಗೂ ಅವ್ಯವಹಾರದ ಸುದ್ದಿಗಳು ಕನ್ನಡ ಪ್ರೇಮಿಗಳಿಗೆ ನೋವುಂಟು ಮಾಡಿವೆ. ಕನ್ನಡಿಗರ ಭಾವನೆಗಳ ಜತೆ ಅವಿನಾಭಾವ ಸಂಬಂಧ ಹೊಂದಿರುವ ಪರಿಷತ್, ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡ ಭಾಷೆಯ ಪ್ರಚಾರಕ್ಕೆ ಅಹರ್ನಿಶಿ ಕಾರ್ಯನಿರ್ವಹಿಸಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರತಿಷ್ಠಿತ ಸಂಸ್ಥೆಯ ಮೇಲೆಯೇ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿರುವುದು ವಿಷಾದದ ಸಂಗತಿ.
ಸಾಹಿತ್ಯ ಪರಿಷತ್‌ನಿಂದ ಜನರಿಗೆ ಕನ್ನಡದ ಸೇವೆ, ಪಾರದರ್ಶಕ ನಿರ್ವಹಣೆ ಮತ್ತು ಸಾಹಿತ್ಯ ಪ್ರೋತ್ಸಾಹದ ನಿರೀಕ್ಷೆಯಿದೆ.ಆದರೆ ಈ ಸ್ಥಾನದಲ್ಲಿ ಕುಳಿತಿರುವವರೇ ಅಧಿಕಾರ ದುರುಪಯೋಗ, ಹಣಕಾಸಿನ ಅವ್ಯವಹಾರ ಮತ್ತು ಸ್ವಾರ್ಥದ ನಡವಳಿಕೆಯಲ್ಲಿ ತೊಡಗಿರುವರೆಂಬ ಆರೋಪ ಕೇಳಿ ಬಂದಿರುವುದು ಕನ್ನಡ ಸಂಸ್ಕೃತಿಗೆ ಮಾಡಿದ ಅಪಮಾನ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಪರ್ ಸೀಡ್ ಮಾಡಲು ಕ್ರಮ ಕೈಗೊಳ್ಳುವುದು ಸೂಕ್ತ. ಕೇವಲ ಆಡಳಿತಾಽಕಾರಿಯನ್ನು ನೇಮಕ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮೂಲಭೂತ ಬದಲಾವಣೆಗಳು, ಕಾನೂನು ಬದ್ಧತೆ, ಪಾರದರ್ಶಕ ಹಣಕಾಸು ವ್ಯವಸ್ಥೆ ಮತ್ತು ನೈತಿಕ ಹೊಣೆಗಾರಿಕೆಗಳನ್ನೊಳಗೊಂಡ ಸುಧಾರಣೆಗಳು ಅಗತ್ಯ. ಸಾಹಿತ್ಯ ಪರಿಷತ್ ರಾಜಕೀಯ ವೇದಿಕೆಯಾಗಬಾರದು, ಅದು ಕನ್ನಡಿಗರ ಗೌರವದ ಸಂಕೇತವಾಗಿ ಉಳಿಯಬೇಕು.
– ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು





