ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮೈಸೂರು ನಗರದ ೧೨೩ ವೃತ್ತಗಳು, ೧೪೬ ಕಿ.ಮೀ. ಉದ್ದದ ರಸ್ತೆಗಳು ಹಾಗೂ ೮೦ ಪ್ರತಿಕೃತಿಗಳು ಮತ್ತು ಸ್ವಾಗತ ಕಮಾನುಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸಂಜೆ ೭ರಿಂದ ರಾತ್ರಿ ೧೧ ಗಂಟೆಯವರೆಗೆ ಕಂಗೊಳಿಸುವ ಈ ದೀಪಾಲಂಕಾರ ಮೈಸೂರಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ.
ಆದರೆ, ದೀಪಾಲಂಕಾರ ವೀಕ್ಷಿಸುವಾಗ ರಸ್ತೆ ಮಧ್ಯೆ ನಿಂತು ಸೆಲ್ಛಿ ತೆಗೆಯುವುದು, ವಾಹನ ಸಂಚಾರಕ್ಕೆ ಅಡ್ಡಿಪಡಿಸುವುದು ಹಾಗೂ ವಿದ್ಯುತ್ ಕಂಬ, ತಂತಿಗಳನ್ನು ಮುಟ್ಟುವುದು ಅಪಾಯಕಾರಿ. ಆದ್ದರಿಂದ ದೀಪಾಲಂಕಾರವನ್ನು ಸುರಕ್ಷಿತ ಅಂತರದಿಂದಲೇ ವೀಕ್ಷಿಸಬೇಕು. ಜನಸಂದಣಿಯಲ್ಲಿ ಮಕ್ಕಳು ಮತ್ತು ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ರಸ್ತೆ ದಾಟುವಾಗ ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೆ, ಸಂಚಾರ ಸುಗಮವಾಗಿರಲು ಸಹಕರಿಸಬೇಕು. ಸಾರ್ವಜನಿಕರು ತಾಳ್ಮೆಯಿಂದ ವರ್ತಿಸಿ, ನೂಕುನುಗ್ಗಲು ಉಂಟಾಗದಂತೆ ನೋಡಿಕೊಳ್ಳಬೇಕು. ಪೊಲೀಸ್ ಹಾಗೂ ವಿದ್ಯುತ್ ಇಲಾಖೆಯ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ.
-ಬಿ.ಗಣೇಶ್, ಕನ್ನೇಗೌಡನ ಕೊಪ್ಪಲು, ಮೈಸೂರು



