Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಗರಿಕೆಕಂಡಿ – ಪಾಲಾರ್ ನಡುವೆ ರಸ್ತೆ ನಿರ್ಮಿಸಿ

ಓದುಗರ ಪತ್ರ

ಹನೂರು ತಾಲ್ಲೂಕಿನ ನಾಲ್‌ರೋಡ್-ಗರಿಕೆಕಂಡಿ ರಸ್ತೆಯನ್ನು ದುರಸ್ತಿಗೊಳಿಸುವ ಬಗ್ಗೆ ಆಂದೋಲನ ದಿನಪತ್ರಿಕೆಯಲ್ಲಿ ಜೂ. 21ರಂದು ವರದಿಯಾಗಿದೆ. ಇದು ಕರ್ನಾಟಕದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ರಸ್ತೆಯಾಗಿದ್ದು, ಭಾರೀ ವಾಹನಗಳ ಸಂಚಾರದಿಂದ ಹದಗೆಟ್ಟಿತ್ತು.

ಕೊಳ್ಳೇಗಾಲ ಭಾಗದಿಂದ ಸೇಲಂ ಮತ್ತು ಈರೋಡ್ ಕಡೆಗೆ ಹೋಗಲು ಕ್ರಮವಾಗಿ ಮಹದೇಶ್ವರಬೆಟ್ಟ ಮತ್ತು ಅಂದಿಯೂರು ಮಾರ್ಗಗಳಿವೆ. ಇವೆರಡು ಮಾರ್ಗಗಳೂ ಬೆಟ್ಟಗುಡ್ಡಗಳಿಂದ ಕೂಡಿದ್ದು, ಭಾರೀ ವಾಹನಗಳ ಸಂಚಾರ ಕಷ್ಟಕರ ಮಾತ್ರವಲ್ಲದೆ , ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ಪರ್ಯಾಯವಾಗಿ ಗರಿಕೆಕಂಡಿಯಿಂದ ಪಾಲಾರ್ ವರೆಗೆ ಹೊಸದಾಗಿ ರಸ್ತೆಯನ್ನು ನಿರ್ಮಿಸಿದರೆ, ಒಂದು ಗಂಟೆಯಷ್ಟು ಪ್ರಯಾಣದ ಅವಧಿಯನ್ನು ಉಳಿಸಬಹುದಾಗಿದೆ.

ಗರಿಕೆಕಂಡಿಯಿಂದ ಪಾಲಾರ್‌ವರೆಗೆ ಸುಮಾರು 25 ಕಿ.ಮೀ. ದೂರವಿದ್ದು, ಈ ಪ್ರದೇಶ ಯಾವುದೇ ಬೆಟ್ಟಗುಡ್ಡಗಳಿಲ್ಲದೆ ಸಮತಟ್ಟಾಗಿದೆ. ಉಭಯ ರಾಜ್ಯಗಳ ಗಡಿಯನ್ನು ನಿರ್ಣಯಿಸುವ ಪಾಲಾರ್ ನದಿ ಇದೇ ಮಾರ್ಗವಾಗಿ ಹರಿಯುತ್ತಿದ್ದು, ನದಿಯ ಎಡ ಭಾಗದಲ್ಲಿ ಈಗಾಗಲೇ ಮಣ್ಣಿನ ರಸ್ತೆ ಇದೆ.

ಇದು 1970ರ ದಶಕದಲ್ಲಿ ಆಮ್ಜಾನ್ ಎಂಬ ಗುತ್ತಿಗೆದಾರರು ಇಲ್ಲಿನ ಅರಣ್ಯ ಪ್ರದೇಶದಿಂದ ಬಿದಿರುಗಳನ್ನು ಸಾಗಿಸಲು ನಿರ್ಮಿಸಿದ ರಸ್ತೆಯಾಗಿದೆ. 1925ರಲ್ಲಿ ಮೆಟ್ಟೂರು ಅಣೆಕಟ್ಟೆ ನಿರ್ಮಿಸುವಾಗ, ಶಿವನಸಮುದ್ರದಿಂದ ಇದೇ ಮಾರ್ಗವಾಗಿ ಕಂಬಗಳನ್ನು ಹಾಕಿ ಮೆಟ್ಟೂರಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿತ್ತು. ಅಲ್ಲದೆ ಸಾರಿಗೆ ಸೌಲಭ್ಯಗಳು ಇಲ್ಲದಿದ್ದ ದಿನಗಳಲ್ಲಿ ಮಾರ್ಟಳ್ಳಿ ಭಾಗದಿಂದ ಮೆಟ್ಟೂರು, ಕೊಳತ್ತೂರು ಕಡೆಗೆ ಕಾಲ್ನಡಿಗೆ ಮತ್ತು ಎತ್ತಿನಗಾಡಿಗಳಲ್ಲಿ ಜನರು ಈ ಮಾರ್ಗವಾಗಿ ಸಂಚರಿಸುತ್ತಿದ್ದರು.

ಈ ಹಳೆಯ ಮಾರ್ಗವನ್ನು ಅಭಿವೃದ್ಧಿಪಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ, ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುವುದಲ್ಲದೆ, ಅಂತರರಾಜ್ಯ ವ್ಯಾಪಾರ ವೃದ್ಧಿಗೂ ಸಹಕಾರಿಯಾಗಲಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನ ಹರಿಸುವಂತಾಗಲಿ.

– ಡಾ. ಐ. ಸೇಸುನಾಥನ್, ಮಾರ್ಟಳ್ಳಿ, ಹನೂರು ತಾಲ್ಲೂಕು

Tags:
error: Content is protected !!