ಮಳೆಗಾಲದಲ್ಲಿ ಮರದ ಕೊಂಬೆಗಳು, ವಿದ್ಯುತ್ ತಂತಿಗಳು ಕೆಳಗೆ ಬೀಳುವುದು, ಅದರಿಂದ ಜನರು ಅಪಾಯಕ್ಕೆ ಸಿಲುಕುವ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಿದೆ. ಮೈಸೂರಿನ ರಾಮಾನುಜ ರಸ್ತೆಯ ೭ನೇ ಕ್ರಾಸ್‌ನಲ್ಲಿ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಇರುವ ವಿದ್ಯುತ್ ಕಂಬದ ತಂತಿಗಳಿಗೆ ಮರದ ಕೊಂಬೆಗಳು ತಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಆಕಸ್ಮಿಕವಾಗಿ ಮರವನ್ನು ಮುಟ್ಟಿದರೆ ಅಪಾಯ ಕಟ್ಟಿಟ್ಟಬುತ್ತಿ. ಮರದ ಕೆಳಗೆ ಸ್ಥಳೀಯರು ಜಾನುವಾರುಗಳನ್ನು ಕಟ್ಟುತ್ತಾರೆ. ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಇದ್ದು, ಹೆಚ್ಚಿನ ಅನಾಹುತ ಆಗುವುದಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಮರದ ಕೊಂಬೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
– ಎಚ್.ರುದ್ರಸ್ವಾಮಿ, ಅಗ್ರಹಾರ, ಮೈಸೂರು





