ಹರಿಯಾಣ ವಿಧಾನಸಭಾ ಚುನಾವಣೆಯ ಸಲುವಾಗಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳಂತೆಯೇ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರೂ. , ಗ್ಯಾಸ್ ಸಿಲಿಂಡರ್‌ಗಳ ದರ ೫೦೦ ರೂ. ಗಳಿಗೆ ಇಳಿಕೆ, ವೃದ್ಧರಿಗೆ ಮಾಸಿಕ ೬,೦೦೦ ರೂ. ಪಿಂಚಣಿ ನೀಡುವುದಾಗಿ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಬಿಜೆಪಿಯೂ ಮಹಿಳೆಯರಿಗೆ ಮಾಸಿಕ ೨,೧೦೦ ರೂ. ಹಾಗೂ ಗ್ಯಾಸ್ ಸಿಲಿಂಡರ್ ದರವನ್ನು ೫೦೦ ರೂ. ಗಳಿಗೆ ಇಳಿಸುವುದಾಗಿ ಭರವಸೆ ನೀಡಿದೆ.
ಕರ್ನಾಟಕದ ವಿಧಾನಸಭಾ ಚುನಾವಣೆ ವೇಳೆ ಪ್ರಚಾರಕ್ಕೆಂದು ಬಂದಿದ್ದ ಪ್ರಧಾನಿ ಮೋದಿಯವರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡಿದ್ದರು. ಆದರೆ ಈಗ ಕಾಂಗ್ರೆಸ್ ಮಾದರಿಯಲ್ಲಿಯೇ ಬಿಜೆಪಿಯೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದ್ದು, ಈ ಯೋಜನೆಗಳನ್ನು ಮೋದಿ ಹೊಗಳಿಕೊಂಡಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡಿದ್ದ ಬಿಜೆಪಿ ಈಗ ಚುನಾವಣೆಯನ್ನು ಗೆಲ್ಲಲು ಅನಿವಾರ್ಯವಾಗಿ ತಾನೂ ಗ್ಯಾರಂಟಿ ಯೋಜನೆಗಳ ಮೊರೆ ಹೋಗಿದೆ. ಯಾವುದೇ ರಾಜಕೀಯ ಪಕ್ಷವಾದರೂ ತಾನು ಅಽಕಾರಕ್ಕೆ ಬರುವ ಉದ್ದೇಶ ಹೊಂದಿರುತ್ತದೆಯೇ ವಿನಾ ಸೇವೆಯನ್ನಲ್ಲ ಎಂಬುದು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸುವ ಸಲುವಾಗಿ ಸರ್ಕಾರಗಳು ಆಸ್ತಿ ತೆರಿಗೆ, ನೋಂದಣಿ ಶುಲ್ಕ, ಅಬಕಾರಿ ತೆರಿಗೆ, ವಾಣಿಜ್ಯ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ತಮ್ಮ ಮೇಲಿನ ಹೊರೆಯನ್ನು ಜನರ ಮೇಲೆ ಹೊರಿಸುತ್ತವೆ. ರಾಜಕೀಯ ಪಕ್ಷಗಳ ಈ ನಡವಳಿಕೆಯನ್ನು ನೋಡಿದಾಗ ‘ಉಪದೇಶ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬ ನಾಣ್ಣುಡಿ ನೆನಪಾಗುತ್ತದೆ.
-ಮುಳ್ಳೂರು ಪ್ರಕಾಶ್, ದಟ್ಟಗಳ್ಳಿ, ಮೈಸೂರು