ಭಾರತದಲ್ಲಿ ಇಂಗ್ಲಿಷ್ ಮಾತನಾಡುವವರು ನಾಚಿಕೆಪಡುವ ದಿನ ದೂರವಿಲ್ಲ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾಗಿ ಮಾಧ್ಯಮದಲ್ಲಿ ವರದಿಯಾಗಿದೆ. ಅವರು ಇಂಗ್ಲಿಷ್ ಮಾತನಾಡುವವರು ಎನ್ನುವ ಬದಲಿಗೆ ಪ್ರಾದೇಶಿಕ ಭಾಷೆ ಮಾತನಾಡು ವವರು ಎಂದು ಹೇಳಿದ್ದರೆ ಅವರ ಹೇಳಿಕೆ ಅರ್ಥಪೂರ್ಣವಾಗುತ್ತಿತು. ಅವರ ಹೇಳಿಕೆ ಅವರು ಭಾಷೆಗಳ ವಿಷಯದಲ್ಲಿ ದೇಶದಲ್ಲಿನ ವಾಸ್ತವವನ್ನು ಅರಿತಿಲ್ಲ ಎನ್ನುವುದನ್ನು ತೋರಿಸುತ್ತದೆ. ಇಂಗ್ಲಿಷ್ ವಸಾಹತುಶಾಹಿ ಮತ್ತು ಗುಲಾಮಗಿರಿಯ ಭಾಷೆ ಎಂದು ಎಷ್ಟೇ ಬೊಬ್ಬೆ ಹೊಡೆಯಲಿ, ಅದು ಭಾರತದಲ್ಲಿ ಮತ್ತು ಭಾರತೀಯರಲ್ಲಿ ಆಳವಾಗಿ ಬೇರೂರಿದೆ.
ಕೋಟ್ಯಂತರ ಜನರಿಗೆ ದೇಶದ ಹೊರಗೆ ಮತ್ತು ಒಳಗೆ ಬದುಕು ಕಲ್ಪಿಸಿಕೊಳ್ಳಲು ಅವಕಾಶ ನೀಡಿದೆ. ಈ ದೇಶದಿಂದ ಇಂಗ್ಲಿಷ್ ಭಾಷೆಯನ್ನು ಓಡಿಸುವುದು ಕ್ರಿಕೆಟ್‌ನ್ನು ದೇಶದಿಂದ ಓಡಿಸುವಷ್ಟೇ ಅಸಾಧ್ಯದ ಮಾತು. ೧೯೪೭ರಲ್ಲಿ ಇಂಗ್ಲಿಷ್ ಮತ್ತು ಆಂಗ್ಲರ ವಿರುದ್ಧ ಆಕ್ರೋಶ ಉತ್ತುಂಗದಲ್ಲಿದ್ದಾಗ ಇಂಗ್ಲಿಷ್ ನ್ನು ಓದ್ದೋಡಿಸುವ ಅವಕಾಶವಿತ್ತು. ಆ ಅವಕಾಶ ಮತ್ತೆ ಬರುವುದು ಕೇವಲ ಕನಸು.
-ರಮಾನಂದ ಶರ್ಮಾ, ಬೆಂಗಳೂರು





