ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕಗಳ ಆಯ್ಕೆ ಸಮಿತಿಯು 2024ನೇ ಸಾಲಿಗೆ ಒಂದೇ ಒಂದು ಚುಟುಕು ಸಾಹಿತ್ಯದ ಪುಸ್ತಕವನ್ನೂ ಆಯ್ಕೆ ಮಾಡದಿರುವುದು ಚುಟುಕು ಸಾಹಿತಿಗಳಿಗೆ ಬೇಸರ ಮೂಡಿಸಿದೆ.
ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ಪೋಷಣೆಗಳನ್ನು ನೀಡುವ ಜತೆಗೆ ಆಸಕ್ತಿ ಅಭಿಮಾನಿಗಳನ್ನೂ ಹೊಂದಿದೆ. ಆದರೆ ಪುಸ್ತಕಗಳ ಆಯ್ಕೆ ಸಮಿತಿಯವರು ಚುಟುಕು ಸಾಹಿತ್ಯದ ಪುಸ್ತಕಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಮಲತಾಯಿ ಧೋರಣೆ ತೋರಿರುವುದು ಸರಿಯಲ್ಲ. 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಚುಟುಕು ರತ್ನ ಸಿಪಿಕೆಯವರು ಚುಟುಕು ಸಾಹಿತ್ಯ ಮನುಕುಲದ ಅಧಿಕಾವ್ಯ ಎಂದು ವರ್ಣಿಸಿ ಗ್ರಂಥ ರಚಿಸಿದ್ದಾರೆ.
ದೇಜಗೌ, ಚನ್ನವೀರ ಕಣವಿ, ಚಿದಾನಂದ ಗೌಡ, ನ್ಯಾಯಮೂರ್ತಿ ಜಿನದತ್ತ ದೇಸಾಯಿ, ಡಾ.ಅರವಿಂದ ಮಾಲಗತ್ತಿ, ಪ್ರೊ.ದೊಡ್ಡ ರಂಗೇಗೌಡ ಮುಂತಾದ ಸಾಹಿತಿಗಳು ಚುಟುಕು ಸಾಹಿತ್ಯದ ಮೂಲಕವೇ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಆದ್ದರಿಂದ ಗ್ರಂಥಾಲಯ ಇಲಾಖೆಯ ಪುಸ್ತಕಗಳ ಆಯ್ಕೆ ಸಮಿತಿಯವರು ಕೂಡಲೇ ಈ ಲೋಪವನ್ನು ಸರಿಪಡಿಸಿಕೊಂಡು ಚುಟುಕು ಸಾಹಿತ್ಯದ ಪುಸ್ತಕಗಳನ್ನೂ ಆಯ್ಕೆ ಮಾಡಬೇಕಿದೆ.
-ಅಹಲ್ಯಾ.ಸಿ.ನಾ.ಚಂದ್ರ, ಜನತಾ ನಗರ, ಮೈಸೂರು.