Mysore
25
overcast clouds
Light
Dark

ಕಸದ ರಾಶಿಗೆ ನಲುಗಿದ ಮುಡಾ ಕಾಂಪ್ಲೆಕ್ಸ್

ಮೈಸೂರು: ಕಸಕಡ್ಡಿಗಳ ರಾಶಿ, ಮದ್ಯದ ಖಾಲಿ ಬಾಟಲುಗಳು, ಬಂದ್ ಆಗಿರುವ ಶೌಚಾಲಯ, ಗಬ್ಬು ನಾರುವ ಆವರಣ, ಪಾಳುಬಿದ್ದಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿ…

ಇದು ಮೈಸೂರಿನ ರಾಮ ಕೃಷ್ಣನಗರದಲ್ಲಿರುವ ಮುಡಾ ಕಾಂಪ್ಲೆಕ್ಸ್‌ನ ಚಿತ್ರಣ. ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತರೆ, ಸರ್ಕಾರದ ಆಸ್ತಿಯ ಸ್ಥಿತಿಗತಿ ಹೇಗಿರಬಹುದು ಎಂಬುದಕ್ಕೆ ಈ ಕಾಂಪ್ಲೆಕ್ಸ್ ಒಂದು ಉದಾಹರಣೆ. ವಾರಕ್ಕೆ ಒಮ್ಮೆಯಾ ದರೂ ಇಲ್ಲಿನ ಆವರಣವನ್ನು ಸ್ವಚ್ಛಗೊಳಿಸಬೇಕು ಎಂಬ ಕನಿಷ್ಠ ಪ್ರಜ್ಞೆ ಕೂಡ ಮುಡಾ ಅಧಿಕಾರಿಗಳಿಗೆ ಇಲ್ಲ ಎಂಬುದು ಇಲ್ಲಿ ಸಾಬೀತಾಗಿದೆ. ರಾಮಕೃಷ್ಣಗಗರದ ಆಂದೋಲನ ವೃತ್ತದ ಕಳೆದ 15 ವರ್ಷಗಳ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ವತಿಯಿಂದ ವಾಣಿಜ್ಯ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕೆಳ ಹಂತದಲ್ಲಿ 30 ಮಳಿಗೆಗಳಿವೆ. ಮೊದಲ ಅಂತಸ್ತಿನಲ್ಲಿ ಎರಡು ಸರ್ಕಾರಿ ಕಚೇರಿಗಳಿವೆ. ಮೂವತ್ತು ಮಳಿಗೆಗಳಿಗೆ ಇರುವುದು ಎರಡು ಶೌಚಾಲಯಗಳು ಮಾತ್ರ. ಅದು ಕೂಡ ಮಳಿಗೆದಾರರ ಬಳಕೆಗಾಗಿ, ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯಗಳೂ ಇಲ್ಲ. ಹೀಗಾಗಿ ಕಾಂಪ್ಲೆಕ್ಸ್‌ನ ಖಾಲಿ ಜಾಗದಲ್ಲಿಯೇ ಮೂತ್ರ ವಿಸರ್ಜನೆ ಮಾಮೂಲು.

ಇನ್ನು ಕಾಂಪ್ಲೆಕ್ಸ್‌ನಲ್ಲಿ ನೀರಿನ ಸಮಸ್ಯೆ ಕೂಡ ಆಗಾಗ್ಗೆ ಕಾಡುತ್ತಿರುತ್ತದೆ. ಸುಮಾರು 1 ಎಕರೆವಿಸ್ತೀರ್ಣದಲ್ಲಿರುವ ಕಾಂಪ್ಲೆಕ್ಸ್‌ನ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ ಸ್ವಾಗತಿಸುತ್ತದೆ. ಕೆಳ ಹಾಗೂ ಮೊದಲ ಅಂತಸ್ತುಗಳಲ್ಲಿ ಕಸಕಡ್ಡಿ, ಗಲೀಜು ವಾಸನೆಯಿಂದ ಮೂಗು ಮುಚ್ಚಿಕೊಳ್ಳುವುದು ಅನಿವಾರ್ಯವಾಗಿದೆ.

ಕುಡುಕರ ಹಾವಳಿ…
ಇನ್ನು ರಾತ್ರಿ ಆಯಿತೆಂದರೆ ಕಾಂಪ್ಲೆಕ್ಸ್‌ನ ಆವರಣದಲ್ಲಿ ಕುಡುಕರ ಹಾವಳಿ ವಿಪರೀತವಾಗಿರುತ್ತದೆ. ಆವರಣದ ಅನೇಕ ಕಡೆಗಳಲ್ಲಿ ಬಿಯರ್, ವಿಸ್ಕಿ, ಬ್ರಾಂದಿಯ ಖಾಲಿ ಬಾಟಲುಗಳು, ಆಹಾರ ತಿಂದು ಬಿಸಾಡಿದ ತ್ಯಾಜ್ಯಗಳು ಎಗ್ಗಿಲ್ಲದೆ ಕಾಣಸಿಗುತ್ತವೆ.

ಗೇಟ್‌ಗೆ ಬೀಗ ಇಲ್ಲ…
ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆದಾರರು ಪ್ರತಿದಿನ ಸಂಜೆ 7 ಗಂಟೆ ವೇಳೆಗೆ ತಮ್ಮ ವ್ಯವಹಾರವನ್ನು ಮುಗಿಸಿ ಮನೆಗೆ ತೆರಳುತ್ತಾರೆ. ನಂತರ ಈ ಕಟ್ಟಡದಲ್ಲಿ ಏನು ನಡೆದರೂ ಹೇಳುವವರು, ಕೇಳುವವರು ಯಾರೂ ಇಲ್ಲ. ಕನಿಷ್ಠ ಇಲ್ಲಿನ ಗೇಟ್‌ಗಳಿಗೆ ಬೀಗವನ್ನೂ ಹಾಕುವುದಿಲ್ಲ.

ನಗರ ಯೋಜನಾ ಶಾಖೆ ಸ್ಥಳಾಂತರ…
ಹಿಂದೆ ಈ ಕಾಂಪ್ಲೆಕ್ಸ್‌ನಲ್ಲಿ ಮುಡಾದ ನಗರ ಹಾಗೂ ಗ್ರಾಮಾಂತರ ಯೋಜನಾ ಶಾಖೆ ಕರ್ತವ್ಯ ನಿರ್ವಹಿಸುತ್ತಿತ್ತು. ಹಾಗಾಗಿ ಆಗಿಂದಾಗ್ಗೆ ಸ್ವಚ್ಛತಾ ಕೆಲಸಗಳು ನಡೆಯುತ್ತಿದ್ದು, ಕೆಲ ತಿಂಗಳ ಹಿಂದೆ ಕಚೇರಿ ಸ್ಥಳಾಂತರವಾಗಿದ್ದು, ಇಲ್ಲಿ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡಿದೆ.

ಕೋಟ್ಯಂತರ ರೂ. ಮೌಲ್ಯದ ಆಸ್ತಿ ವ್ಯರ್ಥ…
ಇಲ್ಲಿ ಕಟ್ಟಡವನ್ನು ಹೊರತುಪಡಿಸಿ ಕೋಟ್ಯಂತರ ರೂ. ಮೌಲ್ಯದ ಖಾಲಿ ಜಾಗವಿದೆ. ಈ ಜಾಗವೀಗ ಪಾಳು ಬಿದ್ದಿದೆ. ರಸ್ತೆಯಲ್ಲಿ ನಿಲ್ಲಬೇಕಾದ ಖಾಸಗಿ ವ್ಯಕ್ತಿಗಳ ಕಾರು ನಿಲ್ದಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಮತ್ತಷ್ಟು ಕೊಠಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದರೆ ಮುಡಾಗೆ ಪ್ರತಿ ತಿಂಗಳು ಆದಾಯ ಬರುತ್ತದೆ. ಈ ಬಗ್ಗೆ ಯಾರೂ ಗಮನ ಹರಿಸಿಲ್ಲ.

ಸುಣ್ಣ ಬಣ್ಣವಿಲ್ಲ…
ಕಟ್ಟಡ ನಿರ್ಮಾಣ ಮಾಡಿದಾಗ ಮಾತ್ರ ಕಟ್ಟಡಕ್ಕೆ ಸುಣ್ಣ, ಬಣ್ಣ ಮಾಡಿಸಲಾಗಿದೆ. ಮಳಿಗೆಗಳನ್ನು ಹರಾಜು ಹಾಕಿದ ನಂತರ ಕಾಂಪ್ಲೆಕ್ಸ್‌ನ ಉಸ್ತುವಾರಿ ಬಗ್ಗೆ ಮುಡಾ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಇಡೀ ಕಟ್ಟಡಕ್ಕೆ ಮಂಕು ಬಡಿದಂತೆ ಇದೆ.

ಸ್ವಚ್ಛ ನಗರಿ ಎಂಬ ಬಿರುದು ಮೈಸೂರಿಗಿದೆ. ಆದರೆ ಕೆಲ ಇಲಾಖೆಗಳು ಮಾತ್ರ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಅದರಲ್ಲಿ ರಾಮಕೃಷ್ಣನಗರದ ಮುಡಾ ಕಾಂಪ್ಲೆಕ್ಸ್ ಕೂಡ ಒಂದು. ಮುಡಾ ಸಿಬ್ಬಂದಿ ಸೂಕ್ತವಾಗಿ ನಿರ್ವಹಣೆ ಮಾಡುವುದಿಲ್ಲ. ಹೀಗಾಗಿ ಅಲ್ಲಿನ ಆವರಣ ಅಶುಚಿತ್ವದಿಂದ ಕೂಡಿದೆ. ನಮ್ಮ ಮನವಿ ಮೇರೆಗೆ ಸಾಕಷ್ಟು ಬಾರಿ ನಗರಪಾಲಿಕೆ ಸಿಬ್ಬಂದಿ ಅಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಆದರೆ,
ಕಾಂಪ್ಲೆಕ್ಸ್ ನಗರಪಾಲಿಕೆಗೆ ಹಸ್ತಾಂತರವಾಗಿಲ್ಲ. ಮುಡಾ ಅಧಿಕಾರಿಗಳು ತಕ್ಷಣವೇ ಕಾಂಪ್ಲೆಕ್ಸ್‌ ನ್ನು ನಗರಪಾಲಿಕೆಗೆ ಹಸ್ತಾಂತರ ಮಾಡಬೇಕು. ಇದರಿಂದಲಾದರೂ ಕಾಲಕಾಲಕ್ಕೆ ಸ್ವಚ್ಛತಾಕಾರ್ಯ ನಡೆಯುತ್ತದೆ.
-ಬಸವಣ್ಣ, ನಾಗರಿಕ ಕ್ಷೇಮಾಭಿವೃದ್ಧಿ ಸಂಘ, ರಾಮಕೃಷ್ಣನಗರ.

 

ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ…

ಈ ಮೊದಲು ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆಯಾದರೂ ಕಾಂಪ್ಲೆಕ್ಸ್‌ನ ಕಸವನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೀಗ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಕಟ್ಟಡದ ಸುತ್ತಮುತ್ತ ಗಿಡ ಗಂಟಿಗಳು ಬೆಳೆದು ನಿಂತಿವೆ. ಈ ಸಂಬಂಧ ಮುಡಾ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
-ಎಂ.ಕೆ.ಸುನಿಲ್, ಸ್ಥಳೀಯರು.

ಸ್ವಚ್ಛಗೊಳಿಸಲು ಕ್ರಮ
ಕಾಂಪ್ಲೆಕ್ಸ್‌ನಲ್ಲಿ ಇರುವ ಮಳಿಗೆಗಳನ್ನು ಹರಾಜು ಹಾಕಲಾಗಿದೆ. ಸ್ವಚ್ಛತೆಗೆ ಮಳಿಗೆದಾರರೂ ಸಹಕರಿಸಬೇಕು. ಕಟ್ಟಡದ ಸುತ್ತಮುತ್ತಲಿನ ಜಾಗ ಮುಡಾ ವ್ಯಾಪ್ತಿಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಕಾಂಪ್ಲೆಕ್ಸ್‌ನ ಆವರಣವನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು.
-ಶೇಖರ್, ಕಾರ್ಯದರ್ಶಿ, ಮುಡಾ