ಕೆ.ಬಿ.ಶಂಶುದ್ಧೀನ್
ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಮಳೆ; ರೈತರಲ್ಲಿ ಹೆಚ್ಚಿದ ಆತಂಕ
ಕುಶಾಲನಗರ: ಮುಂಗಾರು ಮಳೆ ಕೊರತೆಯಿಂದ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ.
ಈ ಬಾರಿ ಮಳೆಯ ಕೊರತೆ ಕಂಡು ಬಂದಿದ್ದು, ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಕೊಡಗಿಗೆ ಕಾಲಿಡುತ್ತಿದ್ದ ಮುಂಗಾರು, ಜೂನ್ ಅಂತ್ಯದ ವೇಳೆಗೆ ತನ್ನ ಪ್ರಭಾವ ತೋರಿಸುತ್ತಿತ್ತು. ಜುಲೈ ಮೊದಲ ವಾರದಲ್ಲೇ ಭಾಗಮಂಡಲ, ನಾಪೋಕ್ಲು, ಸಿದ್ದಾಪುರ ಭಾಗಗಳಲ್ಲಿ ಪ್ರವಾಹ ಉಕ್ಕುತ್ತಿತ್ತು.
ಜಿಲ್ಲೆಯ ಪ್ರಮುಖ ಜಲಾಗಾರವಾದ ಹಾರಂಗಿ ಅಣೆಕಟ್ಟೆ ಕೂಡ ಭರ್ತಿಯಾಗುತ್ತಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಕ್ಷೀಣವಾಗಿದೆ. ಮಳೆಗಾಲ ಶುರುವಾಗಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಜಿಲ್ಲೆಯಲ್ಲಿ ಉರಿ ಬಿಸಿಲು ಹೆಚ್ಚಾಗಿದ್ದು, ಮಳೆಗಾಲದಲ್ಲಿಯೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮ ಹಾರಂಗಿ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ.
ಪ್ರಸ್ತುತ ಹಾರಂಗಿ ಜಲಾಶಯದ ಒಳಹರಿವು ೨೩೭ ಕ್ಯೂಸೆಕ್ಸ್ ಮಾತ್ರ ಇದೆ. ಜಲಾಶಯದಿಂದ ೧೮೦ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯಕ್ಕೆ ೩,೦೨೭ ಕ್ಯೂಸೆಕ್ಸ್ ನೀರು ಹರಿದು ಬಂದಿತ್ತು, ೨,೦೪೧ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಒಳಹರಿವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಹಾರಂಗಿ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ ೮.೫ ಟಿಎಂಸಿ ಇದೆ. ಆದರೆ ಪ್ರಸ್ತುತ ಜಲಾಶಯದಲ್ಲಿ ಕೇವಲ ೩.೧ ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಮಳೆ ಕೊರತೆ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಭತ್ತನಾಟಿ ಹಾಗೂ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಮುಂಗಾರು ಮಳೆಯನ್ನು ಅವಲಂಬಿಸಿರುವ ರೈತರಿಗೆ ನಿರಾಸೆಯಾಗಿದೆ. ಹಾರಂಗಿ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ಸೋಮವಾರಪೇಟೆ, ಹಾಸನ ಹಾಗೂ ಮೈಸೂರು ಭಾಗದ ಗ್ರಾಮೀಣ ಪ್ರದೇಶಗಳಲ್ಲೂ ಚಿಂತೆ ಮೂಡಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾವೇರಿ ನದಿಯ ನೀರಿನ ಲಭ್ಯತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಒಂದೆಡೆ ಆಕಾಶದತ್ತ ಕಣ್ಣಿಟ್ಟು ಮಳೆಯ ನಿರೀಕ್ಷೆಯಲ್ಲಿರುವ ರೈತರು, ಮತ್ತೊಂದೆಡೆ ದಿನದಿಂದ ದಿನಕ್ಕೆ ಇಳಿಯುತ್ತಿರುವ ಜಲಾಶಯದ ನೀರಿನ ಮಟ್ಟ ರೈತರನ್ನು ಕಂಗಲಾಗುವಂತೆ ಮಾಡಿದೆ. ಹಾರಂಗಿ ಜಲಾಶಯದ ಒಡಲು ಮತ್ತೆ ಭರ್ತಿಯಾಗಬೇಕಾದರೆ ಮಳೆ ಅನಿವಾರ್ಯ. ಒಂದೆಡೆ ಮಳೆಯಕೊರತೆಯಾದರೆ, ಇನ್ನೊಂದೆಡೆ ಕಾಲುವೆ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಯನ್ನು ಚುರುಕು ಗೊಳಿಸುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ.
” ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಸದ್ಯಕ್ಕೆ ಜಾನುವಾರುಗಳಿಗೆ ಪ್ರತಿನಿತ್ಯ ೧೫೦ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ನಾಲೆಯ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ನಾಲೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.”
-ಮಹೇಶ್, ಕಾರ್ಯನಿರ್ವಾಹಕ ಅಭಿಯಂತರರು, ಹಾರಂಗಿ ಪುನರ್ವಸತಿ ವಿಭಾಗ
” ಕಳೆದ ವರ್ಷ ಮೇ ತಿಂಗಳಲ್ಲಿ ಮಳೆ ಪ್ರಾರಂಭವಾಗಿತ್ತು.ಆದರೆ ಈ ವರ್ಷ ಮಳೆ ಕಡಿಮೆಯಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಕೃಷಿ ಮಾಡಲು ಸಮಸ್ಯೆಯಾಗಲಿದೆ. ಈ ಬಾರಿ ಭತ್ತ ನಾಟಿ ಮಾಡಲು ಸಮಸ್ಯೆ ಎದುರಾಗಲಿದೆ. ಈ ವೇಳೆಗೆ ನೀರಿನ ಅವಶ್ಯವಿತ್ತು. ಮಳೆ ಬಾರದಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ.”
-ರವಿ, ರೈತರು, ಹುದುಗೂರು




