Mysore
24
overcast clouds

Social Media

ಶುಕ್ರವಾರ, 17 ಜುಲೈ 2026
Light
Dark

ಪುಟ್ಟರಂಗಶೆಟ್ಟಿ, ಎಆರ್‌ಕೆ: ಯಾರಿಗೆ ಮಂತ್ರಿ ಭಾಗ್ಯ?  

ರಾಜೇಶ್ ಬೆಂಡರವಾಡಿ

ಯಾರೂ ಹೆಚ್ಚು, ಯಾರೂ ಕಮ್ಮಿ ಇಲ್ಲ ಎಂಬಂತೆ ಚಾ.ನಗರದ ಈ ಇಬ್ಬರ ಹೆಸರು ಹೈಕಮಾಂಡ್ ಅಂಗಳದಲ್ಲಿ

ಚಾಮರಾಜನಗರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗಿದ್ದು, ಚಾಮರಾಜನಗರ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಈ ಇಬ್ಬರಲ್ಲಿ ಯಾರಿಗೆ ಜಿಲ್ಲೆಯ ಕೋಟಾದಡಿ ಮಂತ್ರಿ ಭಾಗ್ಯ ದೊರೆಯಲಿದೆ ಎಂಬುದನ್ನು ಸ್ಥಳೀಯ ಜನತೆ ಎದುರು ನೋಡುತ್ತಿದ್ದಾರೆ.

ಕಾಂಗ್ರೆಸ್-ಜಾ.ದಳ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಸಿ.ಪುಟ್ಟರಂಗಶೆಟ್ಟಿ ಅವರು, ಸತತವಾಗಿ ನಾಲ್ಕು ಬಾರಿ ಶಾಸಕರಾಗಿರುವ ಹಿರಿತನವನ್ನು ಹೊಂದಿದ್ದಾರೆ. ತಮ್ಮ ಇಡೀ ರಾಜಕೀಯ ಜೀವನವನ್ನು ಕಾಂಗ್ರೆಸ್‌ನಲ್ಲಿಯೇ ಕಳೆದಿರುವ ಪಕ್ಷದ ನಿಷ್ಠಾವಂತರೆನಿಸಿಕೊಂಡಿದ್ದಾರೆ. ಹಿಂದುಳಿದ ಉಪ್ಪಾರ ಸಮುದಾಯದಿಂದ ಆಯ್ಕೆ ಆಗಿರುವ ರಾಜ್ಯದ ಏಕಮಾತ್ರ ಶಾಸಕ ಕೂಡ ಅವರಾಗಿದ್ದಾರೆ.

ಇನ್ನು, ಎ.ಆರ್.ಕೃಷ್ಣಮೂರ್ತಿ ಅವರು ಪ್ರಸ್ತುತ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮತ್ತು ಅದಕ್ಕೂ ಹಿಂದೆ ವಿಸರ್ಜಿತ ಸಂತೇಮರಹಳ್ಳಿ ಮೀಸಲು ಕ್ಷೇತ್ರದಿಂದ ಒಟ್ಟು ಮೂರು ಬಾರಿ ಶಾಸಕರಾಗಿದ್ದಾರೆ. ೧೯೯೪ರಲ್ಲೇ ಪ್ರಥಮ ಬಾರಿಗೆ ಶಾಸಕರಾಗಿ ಕೆಲಸ ಮಾಡಿರುವ ಅನುಭವವಿದೆ. ೨೦೨೩ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದು, ಈ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಹೆಚ್ಚು ಮತಗಳಿಂದ ಆರಿಸಿ ಬಂದಿರುವವರ ಪೈಕಿ ಕೃಷ್ಣಮೂರ್ತಿ ಅವರೂ ಕೂಡ ಒಬ್ಬರು ಎಂಬ ಹೆಗ್ಗಳಿಕೆ ಇದೆ. ದಲಿತ ನಾಯಕ, ಮಾಜಿ ರಾಜ್ಯಪಾಲರಾದ ದಿವಂಗತ ಬಿ.ರಾಚಯ್ಯ ಅವರ ಪುತ್ರ ಎಂಬ ರಾಜಕೀಯ ಹಿನ್ನೆಲೆ ಕೂಡ ಕೃಷ್ಣಮೂರ್ತಿ ಅವರಿಗೆ ಇದೆ.

ಒಟ್ಟಾರೆಯಾಗಿ ನೋಡಿದರೆ, ಪುಟ್ಟರಂಗಶೆಟ್ಟಿ ಮತ್ತು ಕೃಷ್ಣಮೂರ್ತಿ ಅವರುಗಳ ಹೆಸರು ಯಾರೂ ಹೆಚ್ಚು, ಯಾರೂ ಕಮ್ಮಿ ಇಲ್ಲ ಎಂಬಂತೆ ಹೈಕಮಾಂಡ್ ಅಂಗಳದಲ್ಲಿ ಸಚಿವ ಸ್ಥಾನಕ್ಕೆ ಚಾಲ್ತಿಯಲ್ಲಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಈ ಇಬ್ಬರ ಒಡನಾಟವೂ ಇದೆ. ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ ಅವರೊಂದಿಗಿನ ಬಾಂಧವ್ಯವೂ ಸ್ವಲ್ಪ ಹೆಚ್ಚು ಕಡಿಮೆ ಇಬ್ಬರಿಗೂ ಚೆನ್ನಾಗಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಂಪರ್ಕದಲ್ಲಿಯೂ ಕೃಷ್ಣಮೂರ್ತಿ ಇದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತಾನು ಈಗಾಗಲೇ ತರಿಸಿಕೊಂಡಿರುವ ವರದಿಯ ಆಧಾರದ ಮೇಲೆ ಸಚಿವ ಸ್ಥಾನ ನೀಡಬಹುದು.

ಹಾಲಿ -ಮಾಜಿ ಸಿಎಂಗಳ ಸಲಹೆಯಂತೆ ಸಚಿವ ಸ್ಥಾನ ಹಂಚಿಕೆ ಮಾಡಬಹುದು. ಎಐಸಿಸಿ ಅಧ್ಯಕ್ಷರು ಹೇಳಿದಂತೆ ಆಗಲೂಬಹುದು. ಬಲ್ಲ ಮೂಲಗಳ ಪ್ರಕಾರ, ಚಾಮರಾಜನಗರ ಜಿಲ್ಲೆಯ ಪ್ರಾತಿನಿಧ್ಯದ ವಿಚಾರ ಬಂದಾಗಯಾರನ್ನು ಸಚಿವರನ್ನಾಗಿ ಮಾಡಬೇಕು ಎಂದು ಸಿದ್ದರಾಮಯ್ಯ ಅವರನ್ನೇ ಕೇಳುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯ ಈ ಇಬ್ಬರೂ ರಾಜಕೀಯವಾಗಿ ಅವರಿಗೆ ಬೇಕಾದವರಾದ್ದರಿಂದ ಅವರೇನಾದರೂ ಮೌನವಾಗಿ ಬಿಟ್ಟರೆ ಆಗ ಬೇರೆಯವರು ನಿರ್ಧಾರ ಮಾಡುತ್ತಾರೆ ಎಂದೂ ಹೇಳಲಾಗುತ್ತಿದೆ.

 ಸ್ಪಷ್ಟ ಉತ್ತರ ಶೀಘ್ರದಲ್ಲಿಯೇ ದೊರಕಲಿದೆ: ಇದು ಚುನಾವಣಾ ವರ್ಷ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮಾತ್ರವಲ್ಲದೆ, ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮತ್ತು ಎ.ಆರ್.ಕೃಷ್ಣಮೂರ್ತಿ ಈ ಇಬ್ಬರಲ್ಲಿ ಪಕ್ಷಕ್ಕೆ ಮತ ತರಬಲ್ಲವರನ್ನು, ಕಾರ್ಯಕ್ಷಮತೆ-ದಕ್ಷತೆ ಇರುವವರನ್ನು ಆಂತರಿಕ ವರದಿಯ ಅನ್ವಯ ಪರಿಗಣಿಸಲೂಬಹುದು ಎಂದು ಹೇಳಲಾಗುತ್ತಿದೆ. ಬಹಳ ಮುಖ್ಯವಾಗಿ, ಸಚಿವ ಸಂಪುಟ ವಿಸ್ತರಣೆ ವೇಳೆ ಮೈಸೂರಿನಿಂದ ಯಾರು ಸಂಪುಟಕ್ಕೆ ಸೇರುತ್ತಾರೆ, ಯಾರು ಹೊರಗೆ ಇರುತ್ತಾರೆ ಎನ್ನುವುದರ ಮೇಲೆಯೂ ಚಾಮರಾಜನಗರ ಜಿಲ್ಲೆಯ ಮಂತ್ರಿಗಿರಿ ಆಯ್ಕೆ ನಿರ್ಧಾರ ಆಗುತ್ತದೆ. ಸ್ಪಷ್ಟ ಉತ್ತರ ಶೀಘ್ರದಲ್ಲಿಯೇ ದೊರೆಯಲಿದೆ.

 

 

Tags:
error: Content is protected !!