ಮೈಸೂರು ದಟ್ಟಗಳ್ಳಿಯ ನಂದಿ ವೃತ್ತದಿಂದ ಗಂಟೆ ಬಸಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ದಿನನಿತ್ಯ ಓಡಾಡುವವರಿಗೆ ತುಂಬಾ ತೊಂದರೆಯಾಗುತ್ತಿದೆ. ರಾತ್ರಿಯಾಗುತ್ತಿದ್ದಂತೆ ಇಡೀ ರಸ್ತೆಯನ್ನು ಕತ್ತಲೆ ಆವರಿಸುತ್ತದೆ. ಈ ರಸ್ತೆಯಲ್ಲಿ ಗಿಡಗಂಟಿಗಳು ಅಧಿಕವಾಗಿರುವುದರಿಂದ ಹಾವುಗಳು ಸೇರಿದಂತೆ ಇನ್ನಿತರೆ ವಿಷ ಜಂತುಗಳು ಆಗಾಗ್ಗೆ ರಸ್ತೆಯ ಮೇಲೆ ಹರಿದಾಡುತ್ತವೆ.
ಹೀಗಾಗಿ, ಇಲ್ಲಿನ ವಾಯುವಿಹಾರಿಗಳು, ಮಹಿಳೆಯರು, ಮಕ್ಕಳು ರಾತ್ರಿ ವೇಳೆ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ಬಿ.ಗಣೇಶ, ಕೆ.ಜಿ.ಕೊಪ್ಪಲು,ಮೈಸೂರು





