ಕೋವಿಡ್-೧೯ ಕೋಟ್ಯಂತರ ಜನರಿಗೆ ಸಂಕಷ್ಟ ತಂದೊಡ್ಡಿದ್ದರೆ, ಕೋವಿಡ್ ಲಾಕ್‌ಡೌನ್ ಹಲವರಿಗೆ ತಮ್ಮ ಇಷ್ಟಾರ್ಥ ಸಾಧಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಹೀಗೆ ಕೋವಿಡ್ ಲಾಕ್‌ಡೌನ್ ಬಳಿಕ ಬೈಕರ್ ಆಗುವ ತಮ್ಮ ಕನಸನ್ನು ನನಸು ಮಾಡಿಕೊಂಡವರು ಸದ್ಯ ಹೊಸದಿಲ್ಲಿ ಯಲ್ಲಿ ನೆಲೆಸಿರುವ ಮೈಸೂರಿನ ಪುತ್ರಿ ಪ್ರಿಯಾಂಕ ಮಂಜುನಾಥ್ ಮಾಸ್ತಿ.
ಮೈಸೂರಿನ ಜಯಲಕ್ಷ್ಮೀಪುರಂನವರಾದ ಪ್ರಿಯಾಂಕ ಅವರು ದೆಹಲಿಯಲ್ಲಿ ಕಾರ್ಯನಿರತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಹರೀಶ್ ಅವರನ್ನು ಮದುವೆಯಾಗಿ ದೆಹಲಿಯ ಗ್ರೇಟರ್ ಕೈಲಾಶ್‌ನಲ್ಲಿ ನೆಲೆಸಿದ್ದಾರೆ. ಇವರಿಗೆ ಬಾಲ್ಯ ದಿಂದಲೂ ಪ್ರಯಾಣವೆಂದರೆ ಅಚ್ಚು ಮೆಚ್ಚು. ಸದ್ಯ ಹತ್ತನೇ ತರಗತಿ ಓದುತ್ತಿರುವ ಮಗ ಅಭಯ್ ಹಾಗೂ ೮ನೇ ತರಗತಿ ಓದುತ್ತಿರುವ ಮಗಳು ಅಪೇಕ್ಷಾ ಅವರ ಅಪೇಕ್ಷೆಯ ಮೇರೆಗೆ ವಾರಾಂತ್ಯದಲ್ಲಿ ದಿಲ್ಲಿಯ ಬೈಕ್ ರೈಡಿಂಗ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದರು. ನಂತರ ಕುಟುಂಬ ನಿರ್ವಹಣೆಯ ಜತೆಗೆ ಸಮಯಾವಕಾಶ ಮಾಡಿಕೊಂಡು ಈಗ ಬೈಕ್ ರೈಡಿಂಗ್ ಗ್ರೂಪ್‌ನವರೊಂದಿಗೆ ೨ ತಿಂಗಳಿಗೊಮ್ಮೆ ೨-೩ ದಿನಗಳ ಕಾಲ ಬೈಕ್ ರೈಡ್ ಹೋಗಿಬರುತ್ತಿದ್ದಾರೆ.
ಪ್ರಿಯಾಂಕ ಅವರು ಮೊಟ್ಟಮೊದಲ ಬೈಕ್ ಟ್ರಿಪ್ ಮಾಡಿದ್ದು ೨,೦೦೦ ಕಿಮೀ ಗಿಂತಲೂ ಹೆಚ್ಚು ದೂರದ ದೆಹಲಿ-ಶ್ರೀನಗರ- ಲೇಹ್-ಮನಾಲಿ-ದೆಹಲಿ ರೋಡ್ ಟ್ರಿಪ್. ಅತ್ಯಂತ ಕಠಿಣ ಹವಾಮಾನ, ಹಿಮಾಲಯದ ಕ್ಲಿಷ್ಟಕರ ಭಯಾನಕ ರಸ್ತೆಗಳಲ್ಲಿ ಯಶಸ್ವಿಯಾಗಿ ಬೈಕ್ ರೈಡ್ ಮಾಡಿಕೊಂಡು ಬಂದ ದಿಟ್ಟ ಮಹಿಳೆ. ಇತ್ತೀಚೆಗೆ ವಾರಾಣಸಿ, ಅಯೋಧ್ಯೆಗೂ ಕೂಡ ಬೈಕ್‌ನಲ್ಲಿ ಹೋಗಿ ಬಂದಿದ್ದಾರೆ. ಬೈಕ್ ರೈಡ್ ನನ್ನ ಲೈಫಿನ ಪ್ರಿವಿಲೇಜ್, ಬೈಕ್ ರೈಡ್ ಹೋದಾಗ ಹೊಸ ಹೊಸ ಅನುಭವಗಳಾಗುತ್ತವೆ, ಮೆಡಿ ಟೇಷನ್ ಮಾಡಿದಂತಾಗುತ್ತದೆ ಎನ್ನುತ್ತಾರೆ ಪ್ರಿಯಾಂಕ.
ಬೈಕ್ ಸವಾರಿ ಕಲಿತ ಸಂಭ್ರಮ: ಮೂರನೇ ಕ್ಲಾಸಿನಲ್ಲಿ ಇರುವಾಗಲೇ ನನಗೆ ಗೇರ್ ಬೈಕ್ ಕಂಡರೆ ಇಷ್ಟ ಆಗ್ತಿತ್ತು. ಒಂದಿನ ಬೈಕ್ ಎಕ್ಸಲೆಟರ್ ಕೊಟ್ಟು ದೊಡ್ಡಪ್ಪನ ಹತ್ರ ಬೈಸಿಕೊಂಡಿದ್ದೆ. ಡಿಗ್ರಿ ಓದುವಾಗ ಮಾವನ ಬೈಕ್ ಓಡಿಸುವುದನ್ನು ಕಲಿತೆ. ೨೦೨೨ರಲ್ಲಿ ಮದುವೆ ಆದ ಮೇಲೆ ನನ್ನ ಪತಿ ಬೈಕ್ ಓಡಿಸುವಂತೆ ಪ್ರೋತ್ಸಾಹಿಸಿದ್ದಷ್ಟೇ ಅಲ್ಲ, ನನ್ನನ್ನು ಸಾಕಷ್ಟು ಮೋಟಿ ವೇಟ್ ಮಾಡಿದರು ಎನ್ನುತ್ತಾರೆ ಮೈಸೂರಿನ ಬೈಕ್ ರೈಡರ್ ನಾಗರಂಜಿತ. ಮದುವೆ ಆದ ಮೇಲೆ ನನಗೂ ಕಾರು ಕಲಿಸುವಂತೆ ಗಂಡನನ್ನು ಕೇಳಿದೆ, ಅವರು ಕಾರು ಓಡಿಸುವುದನ್ನು ಆಮೇಲೆ ಕಲಿಯುವಂತೆ, ಮೊದಲು ಬೈಕ್ ಓಡಿಸುವುದನ್ನು ಕಲಿ ಎಂದು ಹೇಳಿ ಪ್ರೋತ್ಸಾಹಿಸಿದರು. ಮುಂದೆ ಲಡಾಕ್‌ಗೆ ಬೈಕ್ ರೈಡ್ ಮಾಡಬೇಕೆಂಬ ಯೋಚನೆ ಇದೆ ಎನ್ನುತ್ತಾರೆ ಅವರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲು: ಮೂವರು ಮಹಿಳಾ ಬೈಕ್ ರೈಡರ್‌ಗಳ ಜತೆಗೆ ೨೦೨೩ರ ಡಿಸೆಂಬರ್ ೩ರಂದು ಬೆಳಿಗ್ಗೆ ೮.೩೦ಕ್ಕೆ ಅಸ್ಸಾಂನ ಗುವಾಹಟಿಯಿಂದ ಬೈಕ್ ರೈಡ್ ಹೊರಟ ಪ್ರಿಯಾಂಕ, ಬಹಲ್ಕುಪಾಂಗ್, ಬಂಮ್ಡಿಯಾ, ಸೇಲಪಾಸ್, ತವಾಂಗ್, ಬುಮ್ಲಾಪಾಲ್‌ವರೆಗೆ ತಲುಪಿ ಮೈನಸ್ ೫ ಡಿಗ್ರಿ ಉಷ್ಣಾಂಶದಲ್ಲಿ ತಮ್ಮ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ನಲ್ಲಿ ೧,೩೦೦ ಕಿ.ಮೀ.ನ್ನು ಡಿ.೯ರಂದು ಕ್ರಮಿಸಿ ಗುವಾಹಟಿಗೆ ಹಿಂತಿರುಗುವ ಮೂಲಕ, ಶೂನ್ಯ ಉಷ್ಣಾಂಶದಲ್ಲಿ ಅತಿ ದೂರ ಕ್ರಮಿಸಿದ ಮಹಿಳಾ ಬೈಕ್ ರೈಡರ್ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
‘ಸ್ಟ್ರಗಲ್ ಮಾಡಿ ಬೈಕ್ ಸವಾರಿ ಕಲಿತೆ’: ನನ್ಹತ್ರ ಈಗಲೂ ಬೈಕಿಲ್ಲ. ಸಾಲದ್ದಕ್ಕೆ ನಾನು ಸೈಕಲ್ ಓಡಿಸುವುದನ್ನೇ ಕಲಿತಿಲ್ಲ. ಆದರೂ ತುಂಬಾನೇ ಸ್ಟ್ರಗಲ್ ಮಾಡಿ ಬೈಕ್, ಕಾರು ಓಡಿಸುವುದನ್ನು ಕಲಿತಿದ್ದೇನೆ ಎನ್ನುತ್ತಾರೆ ಮೈಸೂರಿನ ವಿದ್ಯಾರಣ್ಯಪುರಂನ ಮಹಿಳಾ ಬೈಕ್ ರೈಡರ್ ಸೌಂದರಿ ಹರ್ಷ. ೨೦೨೦ರಲ್ಲಿ ಕೋವಿಡ್ ಸಮಯದಲ್ಲಿ ಬೈಕ್ ಸವಾರಿ ಕಲಿತೆ. ಆದರೆ ನನ್ಹತ್ರ ಸ್ವಂತ ಬೈಕ್ ಇಲ್ದಿರೋದ್ರಿಂದ -ಂಡ್ಸ್, ಬಾಡಿಗೆಗೆ, ಜಾವಾ ಶೋ ರೂಂಗಳಲ್ಲಿ ಬೈಕ್ ಪಡೆದು ಓಡಿಸು ತ್ತಿದ್ದೇನೆ. ಪತಿ ಮತ್ತು ಅತ್ತೆ ನನಗೆ ತುಂಬಾ ಸಪೋರ್ಟ್ ಮಾಡಿ, ಪ್ರೋತ್ಸಾಹಿಸುತ್ತಿದ್ದಾರೆ. ಫ್ಯಾಮಿಲಿಯನ್ನು ಬ್ಯಾಲೆನ್ಸ್ ಮಾಡಿಕೊಂಡು ಬೈಕ್ ರೈಡ್ ಮುಂದುವರಿಸಿದ್ದೇನೆ. ಈ ಐದು ವರ್ಷಗಳಲ್ಲಿ ಮೈಸೂರು ಸುತ್ತಮುತ್ತ, ಕಬಿನಿ, ಕೆಆರ್‌ಎಸ್ ಹಿನ್ನೀರಿನ ಪ್ರದೇಶಗಳು, ಕೊಳ್ಳೇಗಾಲಕ್ಕೆ ಬೈಕ್ ರೈಡ್ ಮಾಡಿದ್ದೇನೆ. ಮುಂದಿನ ಜೂನ್ ತಿಂಗಳ ಒಳಗೆ ಹೊಸ ಬೈಕ್ ಖರೀದಿಸಿ, ಸುತ್ತಾಡುವ ಆಸೆ ಇದೆ ಎನ್ನುತ್ತಾರೆ ಸೌಂದರಿ ಹರ್ಷ.
ಬೈಕ್‌ನಲ್ಲೇ ದಕ್ಷಿಣ ಭಾರತ ಪ್ರವಾಸ: ದ್ವಿತೀಯ ಪಿಯುಸಿ ಓದುತ್ತಿದ್ದಾಗ ಕೋಚಿಂಗ್‌ಗಾಗಿ ಮೂಡುಬಿದರೆಯ ದೊಡ್ಡಪ್ಪನ ಮನೆಗೆ ಹೋಗಿದ್ದೆ. ಅಲ್ಲಿನನ್ನ ಕಸಿನ್ ಬೈಕ್ ಕಲಿಯುತ್ತಿದ್ದುದನ್ನು ನೋಡಿ ನನಗೂ ಆಸಕ್ತಿ ಹುಟ್ಟಿತು. ಅವನಿಗೆ ಎಷ್ಟು ಬರುತ್ತೋ ಅಷ್ಟು ಹೇಳಿಕೊಟ್ಟ… ಹೀಗೆ ಶುರುವಾಯ್ತು ನನ್ನ ಬೈಕ್ ರೈಡಿಂಗ್ ಎನ್ನುತ್ತಾರೆ ವೃತ್ತಿಯಲ್ಲಿ ಡಯಟಿಷಿಯನ್ ಆಗಿರುವ ಡಾ.ಎನ್.ಅಕ್ಷತಾ.
ಮೈಸೂರಿನ ಬನ್ನಿಮಂಟಪದಲ್ಲಿ ನಮ್ಮ ಮನೆ, ಪಿಯುಸಿ ಮುಗಿದ ಮೇಲೆ ಪಕ್ಕದ ಮನೆಯವರಿಗೆ ಅಮ್ಮ ರಿಕ್ವೆಸ್ಟ್ ಮಾಡಿ ಅವರ ಹಳೆಯ ಸ್ಪ್ಲೆಂಡರ್ ಬೈಕ್‌ಅನ್ನು ಆಗಾಗ ಕೊಡಿಸ್ತಿದ್ರು. ಅದಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಓಡಿಸ್ತಿದ್ದೆ. ಇದೆಲ್ಲಾ ಆಗಿದ್ದು ೨೦೧೦ರಲ್ಲಿ. ಆಗ ಮನೆಯಲ್ಲಿ ಬೈಕ್ ಇರಲಿಲ್ಲ. -ಂಡ್‌ಗಳ ಜೊತೆ ನೆಂಟರ ಮನೆಗಳಿಗೆ ಹೋದಾಗ ಅವರ ಬೈಕ್ ಓಡಿಸುತ್ತಿದ್ದೆ. ೨೦೧೭ರಲ್ಲಿ ಮದುವೆ ಆದ ಮೇಲೆ ಗಂಡನ ರಾಯಲ್ ಎನ್‌ಫೀಲ್ಡ್ ರೆಗ್ಯುಲರ್ ಆಗಿ ಓಡಿಸಲು ಸಿಕ್ತು. ವಾರಾಂತ್ಯದ ದಿನಗಳಲ್ಲಿ ಮೈಸೂರು ಸುತ್ತಮುತ್ತ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಕಡೆಗಳಿಗೆ ಬೈಕ್ ರೈಡಿಂಗ್ ಹೋಗಿ ಬಂದಿದ್ದೇನೆ ಎಂಬುದು ಅಕ್ಷತಾ ಅವರ ಸಂತಸದ ಮಾತು.
‘ಬೈಕ್ ರೈಡಿಂಗ್ ಲೈಫ್ ಚೇಂಜಿಂಗ್’: ಬೈಕ್ ಓಡಿಸುವುದೆಂದರೆ ಲೈಫ್ ಚೇಂಜಿಂಗ್ ತರಹ ಇರುತ್ತೆ. ರೈಡ್ ಮಾಡ್ತಾ ಮಾಡ್ತಾ, ಬೈಕ್-ರೋಡ್ ಒಂದಾಗಿ ಬಿಡ್ತವೆ… ಎಂದು ಖುಷಿ ಹಂಚಿಕೊಳ್ಳುತ್ತಾರೆ ಜೆಎಸ್‌ಎಸ್ ಡೆಂಟಲ್ ಕಾಲೇಜಿನಲ್ಲಿ ದಂತ ವೈದ್ಯರಾಗಿರುವ ಬೈಕ್ ರೈಡರ್ ಶ್ರೀಲೇಖ ವೈಷ್ಣವಿ.
ಡೆಂಟಿಸ್ಟ್ ಆಗಿರುವ ನನ್ನ ಮಾವ ಕೂಡ ಬೈಕ್ ರೈಡರ್. ನಾನು ಬೈಕ್ ಓಡಿಸಲು ಅವರೇ ಸೂರ್ತಿ. ೨೦೨೦-೨೧ರಲ್ಲಿ ನನಗೆ ೧೮ ವರ್ಷ ತುಂಬಿದಾಗ ಬೈಕ್ ಓಡಿಸುವುದನ್ನು ಕಲಿತೆ. ಎರಡು ಬೈಕ್ ರೈಡಿಂಗ್ ಗ್ರೂಪ್‌ನಲ್ಲಿದ್ದು, ಅವರು ಆಗಾಗ ಕೈಗೊಳ್ಳುವ ಅಭಿಯಾನಗಳಲ್ಲಿ ಪಾಲ್ಗೊಳ್ಳುತ್ತೇನೆ. ಇತ್ತೀಚೆಗೆ ‘ಸೇವ್ ಬಂಡೀಪುರ’ ಅಭಿಯಾನದಲ್ಲಿ ಬೈಕ್ ರೈಡ್ ಮಾಡಿದ್ದೆ. ಇಷ್ಟೇ ಅಲ್ಲದೆ ಆಸಕ್ತಿ ತೋರುವ ಹೆಣ್ಣು ಮಕ್ಕಳಿಗೆ ಬೈಕ್ ರೈಡಿಂಗ್ ಕಲಿಸುತ್ತೇನೆ. ಈ ವರ್ಷದ -ಬ್ರವರಿಯಲ್ಲಿ ಬೈಕರ್‌ಗಳ ಪ್ಯಾರಡೈಸ್ ಎನಿಸಿರುವ ಕೊಲ್ಲಿ ಹಿಲ್ಸ್‌ನ ೭೦ ಹೇರ್‌ಪಿನ್ ತಿರುವುಗಳಲ್ಲಿ ಬೈಕ್ ರೈಡ್ ಮಾಡಿ ಬಂದದ್ದು ರೋಮಾಂಚನ ಉಂಟುಮಾಡಿದೆ. ಮುಂದೆ ಲಡಾಖ್‌ಗೆ ಬೈಕ್ ರೈಡ್ ಮಾಡುವ ಗುರಿ ಇದೆ ಎನ್ನುತ್ತಾರೆ ಶ್ರೀಲೇಖ ವೈಷ್ಣವಿ.
ಬೈಕ್ ತಗೊಂಡು ರಸ್ತೆಗಿಳಿದರೆ ದಿವ್ಯಾರಿಗೆ ಪ್ರೌಡ್‌ಪೀಲ್!: ಚಿಕ್ಕ ವಯಸ್ಸಿನಿಂದಲೂ ಬೈಕ್ ಓಡಿಸಬೇಕೆಂಬ ಆಸೆ ಇತ್ತು. ಆದರೆ, ನಮ್ಮ ತಂದೆ-ತಾಯಿ ನೀನಿನ್ನೂ ಚಿಕ್ಕವಳು ಇದೆಲ್ಲಾ ಯಾಕೆ ಎಂದು ಅವಕಾಶ ಕೊಡಲಿಲ್ಲ. ಕಾಲೇಜು ದಿನಗಳಲ್ಲೂ ಬೈಕ್ ಓಡಿಸಲು ಸಾಧ್ಯವಾಗಲೇ ಇಲ್ಲ. ಆದರೆ, ಬೈಕ್ ಓಡಿಸಬೇಕೆಂಬ ಆಸೆ ನನ್ನೊಳಗೆ ಹಾಗೆಯೇ ಇತ್ತು. ಈ ಮಧ್ಯೆ ಮದುವೆ ಆಯ್ತು, ಒಂದು ದಿನ ಅಚಾನಕ್ಕಾಗಿ ಪತಿ ರಾಜಗುರು ಬೈಕ್ ಓಡಿಸಬೇಕೆಂಬ ನನ್ನಾಸೆಗೆ ನೀರೆರೆದು ಪೋಷಿಸಿದರೆಂದು ಹೆಮ್ಮೆಯಿಂದ ಹೇಳುತ್ತಾರೆ ಬೈಕರ್ ದಿವ್ಯಾ ರಾಜಗುರು. ೨೦೨೦ರಲ್ಲಿ ಕೋವಿಡ್ ಲಾಕ್‌ಡೌನ್‌ಗೂ ಮುಂಚೆ ಒಂದು ದಿನ ಗಂಡ-ಹೆಂಡತಿ ರಾತ್ರಿ ಹೊರಗೆ ಹೋಗಿ ಗೋಕುಲಂನ ಮನೆಗೆ ವಾಪಸ್ಸಾಗುವಾಗ ಬೈಕ್ ಓಡಿಸ್ತೀಯಾ? ಟ್ರೈ ಮಾಡು ಎಂದು ಬೈಕ್ ಕೊಟ್ರು, ರಾತ್ರಿ ವೇಳೆ ಆಗಿದ್ದರಿಂದ ರಸ್ತೆ ಖಾಲಿ ಯಾಗಿತ್ತು. ಹೀಗಾಗಿ ಒಂದಷ್ಟು ದೂರ ಒಬ್ಬಳೇ ಹೋಗಿ ಬಂದಾಗ, ಚಿಕ್ಕಂದಿನಿಂದ ಬೈಕ್ ಓಡಿಸಬೇಕೆಂಬ ಆಸೆ ಈಡೇರಿದ ಖುಷಿ ಆಯ್ತು. ನಂತರದಲ್ಲಿ ಬೈಕ್ ಕಲಿಸಿಕೊಡಿ ಎಂದು ಕೇಳಿದಾಗೆಲ್ಲ ಗಂಡ ನೀನೇ ಕಲಿತುಕೊಳ್ಳಬೇಕು ಎಂದು ಬಯ್ಯುತ್ತಿದ್ದರು. ಹೀಗಾಗಿ ಪ್ರತಿದಿನ ಮುಂಜಾನೆ ೫ ಗಂಟೆಗೇ ಎದ್ದು ಬೈಕ್ ಓಡಿಸುವುದನ್ನು ಕಲಿಯತೊಡಗಿದೆ. ಕೋವಿಡ್ ಲಾಕ್‌ಡೌನ್ ಆಗಿದ್ದು ಬೈಕ್ ಕಲಿಯಲು ಅನುಕೂಲ ಆಯ್ತು. ಗಂಡನ ೧೧ ವರ್ಷದ ಹಳೆಯ ಬೈಕ್ ಯಮಹಾ ಎಸ್‌ಝಡ್ ಆರ್ ಅನ್ನು ಓಡಿಸಿ, ಓಡಿಸಿ ಕಲಿತುಕೊಂಡೆ. ಕಳೆದ ವರ್ಷ ಗಂಡ ಹೊಸ ಬೈಕ್ ಮೆಟೆರೊ ೩೫೦ ಕೊಡಿಸಿದ್ದಾರೆ. ಆದರೂ ನನಗೆ ಹಳೆಯ ಯಮಹಾ ಎಸ್‌ಝಡ್ ಆರ್ ಮೇಲೆ ತುಂಬಾ ಸೆಂಟಿಮೆಂಟ್ ಇದೆ. ಅದನ್ನು ಯಾರಿಗೂ ಕೊಡುವುದಿಲ್ಲ.
ಮದುವೆ ಆದ ಮೇಲೆ ಏನಕ್ಕೆ ಬೈಕ್ ಓಡಿಸೋದು ಕಲಿತುಕೊಂಡೆ? ಈಗ ಯಾಕೆ ಬೈಕ್ ಓಡಿಸ್ತೀಯಾ? ಇದೆಲ್ಲಾ ಬೇಕಾ? ಹೀಗೆ ಪ್ರಶ್ನೆ ಮಾಡುವವರು ಇದ್ದೇ ಇದ್ದಾರೆ. ಆದರೆ, ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ಸ್ವತಃ ನಾನೇ ಐದು ಜನ ಹೆಣ್ಣು ಮಕ್ಕಳಿಗೆ ಬೈಕ್ ಓಡಿಸುವುದನ್ನು ಕಲಿಸಿದ್ದೀನಿ. ಕಳೆದ ವರ್ಷ ಕೇರಳದ ಕೊಚ್ಚಿನ್ ಬಳಿ ಇರುವ ಮುಜಪಿಲಂಗಡ ಬೀಚ್‌ಗೆ ಮೈಸೂರಿ ನಿಂದ ೧೮೩ ಕಿಮೀ ದೂರ ಬೈಕ್ ಓಡಿಸಿಕೊಂಡು ಹೋಗಿ ಬಂದೆ. ಮನಸ್ಸಿಗೆ ಎಷ್ಟೇ ಬೇಜಾರಾಗಿದ್ದರೂ ಬೈಕ್ ಓಡಿಸಿದರೆ ನನಗೆ ಏನೋ ಒಂಥರಾ ನೆಮ್ಮದಿ, ಪ್ರೌಡ್‌ಫೀಲ್ ಆಗುತ್ತೆ. ಮುಂದೆ ಬೈಕ್‌ನಲ್ಲಿ ಲೇ ಲಡಾಖ್ ಹಾಗೂ ಶೋಲೋ ಟ್ರಿಪ್ ಗಳನ್ನು ಮಾಡಬೇಕೆಂಬ ಆಸೆ ಇದೆ. ಈ ವರ್ಷ ನನ್ನ ಈ ಆಸೆಗಳನ್ನು ಪೂರೈಸುತ್ತೇನೆ ಎನ್ನುತ್ತಾರೆ ದಿವ್ಯಾ.
– ಗಿರೀಶ್ ಹುಣಸೂರು





