Mysore
20
clear sky

Social Media

ಶನಿವಾರ, 24 ಜನವರಿ 2026
Light
Dark

೪ ದಶಕಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ಕುಟುಂಬ ಮಗ್ನ

ಕೆ.ಆರ್.ನಗರದ ಸುಭಾಷ್, ರಮೇಶ್ ಸಹೋದರರಿಂದ ಕುಲಕಸುಬು ಮುಂದುವರಿಕೆ 

ಕೆ.ಆರ್.ನಗರ: ಕುಂಬಾರಿಕೆಯನ್ನು ಕುಲಕಸುಬಾಗಿ ನಂಬಿರುವ  ಕುಟುಂಬವೊಂದುನಾಲ್ಕು ದಶಕಗಳಿಂದ ಗಣೇಶ ಮೂರ್ತಿ ತಯಾರಿಸುವುದರಲ್ಲಿ ತೊಡಗಿರುವ ಅಪರೂಪದ ಸಂಗತಿಗೆ ಪಟ್ಟಣದ ಆಂಜನೇಯನ ಬಡಾವಣೆ ಸಾಕ್ಷಿಯಾಗಿದೆ.

ಆಂಜನೇಯ ಬಡಾವಣೆಯಲ್ಲಿ ವಾಸವಾಗಿದ್ದ ದಿವಂಗತ ಪುಟ್ಟರಾಜು ಅವರ ಪುತ್ರರಾದಸುಭಾಷ್ ಮತ್ತು ರಮೇಶ್ ಸಹೋದರರು  ಕುಟುಂಬದ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ವರ್ಷಪೂರ್ತಿ ಇದೇ ಕಾಯಕದಲ್ಲಿ ತೊಡಗುವ ಇವರು  ಅರ್ಧ ಅಡಿಯಿಂದ ೧೨ ಅಡಿ ಎತ್ತರದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ವರ್ಷದಲ್ಲಿ ೧೦ ಸಾವಿರಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ತಯಾರಿಸುವ ಇವರಿಗೆ ಪತ್ನಿ, ಮಕ್ಕಳು ಸಾಥ್ ನೀಡುತ್ತಾರೆ.

ಈವರೆಗೂ ೩ ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ತಯಾರಿಸಿ ದಾಖಲೆ ಮಾಡಿದ್ದಾರೆ. ಅದೂಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳೇ ಎನ್ನುವುದು ಮತ್ತೊಂದು ವಿಶೇಷತೆ.

೪೫ ವರ್ಷಗಳಿಂದ ನಿರಂತರವಾಗಿ ಗಣೇಶಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಈ ರೀತಿಯ ಏಳೆಂಟು ಕುಟುಂಬಗಳು ಕೆ.ಆರ್.  ನಗರ ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ನೆಲೆಸಿರುವುದು ಗಮನಾರ್ಹ.

ಕುಂಬಾರಿಕೆಯನ್ನೇ ಮೂಲ ಕಸುಬಾಗಿಸಿಕೊಂಡಿರುವ ಈ ಕುಟುಂಬಗಳು ಗಣೇಶ ಮೂರ್ತಿ ತಯಾರಿಕೆಯಲ್ಲಿ ಸಿದ್ಧಹಸ್ತರು. ಸರ್ಕಾರದ ಮಾರ್ಗಸೂಚಿಯಂತೆ ಕೇವಲ ಜೇಡಿ ಮಣ್ಣಿನಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ೫೦ ರೂ.ಗಳಿಂದ ೩೫ ಸಾವಿರ ರೂ. ವರೆಗೆ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಇದರೊಟ್ಟಗೆ ವಿಶೇಷವಾಗಿ ಗೌರಮ್ಮನ ಮೂರ್ತಿಗಳನ್ನೂ ಕೂಡ ತಯಾರಿಸುತ್ತಾರೆ. ಕುಂಬಾರಿಕೆಯನ್ನೇ ಕಾಯಕ ಮಾಡಿಕೊಂಡಿರುವ ಇಂತಹ ಕುಟುಂಬಗಳನ್ನು ಸರ್ಕಾರ ಗುರುತಿಸಿ ನೆರವು ನೀಡಬೇಕಿದೆ. ಜೊತೆಗೆ ಸರ್ಕಾರದಿಂದ ಯಾವುದೇ ಪ್ರಶಸ್ತಿ ನೀಡಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

” ನಾವು ವೃತ್ತಿಯಲ್ಲಿ ಕುಂಬಾರರು. ಗಣೇಶ ಹಬ್ಬದ ಸಮಯದಲ್ಲಿ ಮೂರ್ತಿಗಳನ್ನು ತಯಾರಿಸುತ್ತೇವೆ.  ೫೦ ರೂ.ಗಳಿಂದ ಹಿಡಿದು ೨೫ ಸಾವಿರ ರೂ.ವರೆಗಿನ ಗಣೇಶ ಮೂರ್ತಿಗಳು ನಮ್ಮಲ್ಲಿವೆ. ೬ ಅಡಿಯಿಂದ ಹಿಡಿದು ೧೨ ಅಡಿಗಳವರೆಗಿನ ವಿವಿಧ ರೂಪಗಳ ಗಣೇಶ ಮೂರ್ತಿಗಳು ಸಿಗುತ್ತವೆ. ಕೊರೊನಾ ನಂತರ ವ್ಯಾಪಾರ ಕುಸಿದಿದೆ. ಗೌರಿ-ಗಣೇಶ ಹಬ್ಬದ ಸಮಯದಲ್ಲಿ ವ್ಯಾಪಾರ ಸಾಧಾರಣವಾಗಿದೆ.”

 -ಸುಭಾಷ್, ಗಣಪತಿ ಮೂರ್ತಿ ತಯಾರಕರು

” ಈ ಕುಟುಂಬ ಕುಲ ಕಸುಬನ್ನೇ ಜೀವನವನ್ನಾಗಿ ಮಾಡಿಕೊಂಡಿದೆ.  ಕಾಯಕ ಸಮಾಜಗಳನ್ನು ಉಳಿಸುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಸರ್ಕಾರ ಇಂತಹ ಕುಟುಂಬಗಳಿಗೆಸೌಲಭ್ಯಗಳನ್ನು ಒದಗಿಸಿಲ್ಲ. ಇದರಿಂದಾಗಿ ಗುಡಿ ಕೈಗಾರಿಕೆ ಕಣ್ಮರೆಯಾಗುತ್ತಿದೆ.  ಸರ್ಕಾರ ಮತ್ತು ತಾಲ್ಲೂಕು ಆಡಳಿತ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿಲ್ಲ.”

-ಕೆ.ಉಮೇಶ್, ಪುರಸಭಾ ಸದಸ್ಯರು

Tags:
error: Content is protected !!