ಎಂ.ಯೋಗಾನಂದ
ಹುಣಸೂರು ತಾಲ್ಲೂಕು ಆಡಳಿತದಿಂದ ಅಗತ್ಯ ಸಿದ್ಧತೆ; ಮಳೆ ಹಾನಿ ಪ್ರದೇಶಗಳ ಮೇಲೆ ನಿಗಾ
ಹುಣಸೂರು: ತಾಲ್ಲೂಕಿನಲ್ಲಿ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ತಾಲ್ಲೂಕು ಆಡಳಿತ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ತಾಲ್ಲೂಕು ಅಧಿಕಾರಿಗಳು ಹಾಗೂ ತಾಪಂ ಇಒ ಅವರು ಮಳೆಯಿಂದಾಗಿ ರೈತರ ಬೆಳೆ ನಾಶವಾದರೆ ಸೂಕ್ತ ಪರಿಹಾರಕ್ಕೆ ಮತ್ತು ಜೀವ ಹಾನಿಯಾಗದಂತೆ ತಡೆಯಲು ಸಿದ್ಧತೆ ನಡೆಸಿದ್ದಾರೆ.
ಭಾರೀ ಮಳೆ ಯಿಂದಾಗಿ ಜೀವ ಹಾನಿ ಹಾಗೂ ಫಸಲು ನಷ್ಟವಾದರೆ ತಕ್ಷಣ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಿ ವರದಿ ಸಲ್ಲಿಸಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವುದರಿಂದ ಕಂದಾಯ, ಸೆಸ್ಕ್, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಆರೋಗ್ಯ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಅಲ್ಲದೆ ಮಳೆ ಸಂದರ್ಭದಲ್ಲಿ ಸಿಡಿಲು ಬಡಿತದಿಂದ ತಪ್ಪಿಸಿಕೊಳ್ಳುವ ಕುರಿತು, ಟಿಸಿಗಳ ಬಳಿ ಜಾನುವಾರುಗಳನ್ನು ಕಟ್ಟದಿರುವ ಕುರಿತು, ಮುರಿದು ಬಿದ್ದ ವಿದ್ಯುತ್ ತಂತಿಗಳನ್ನು ಸ್ಪರ್ಶಿಸಬಾರದು ಎಂದು ಜಾಗೃತಿ ಮೂಡಿಸಲಾಗುತ್ತಿದೆ.ಮಳೆಯ ಹಿನ್ನೆಲೆಯಲ್ಲಿ ಸೆಸ್ಕ್ ಸಿಬ್ಬಂದಿ ವಿದ್ಯುತ್ ಮಾರ್ಗಗಳನ್ನು ಪರಿಶೀಲಿಸಬೇಕು. ಶಿಥಿಲ ಗೊಂಡಿರುವ ವಿದ್ಯುತ್ ಕಂಬಗಳು, ಕೆಟ್ಟಿರುವ ಟಿಸಿಗಳನ್ನು ತಕ್ಷಣ ಬದಲಿಸಬೇಕು. ವಿದ್ಯುತ್ ತಂತಿಗಳಿಗೆ ತಾಗುವ ರೆಂಬೆ- ಕೊಂಬೆಗಳನ್ನು ಕಡಿಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
” ಇತ್ತೀಚೆಗೆ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಎಲ್ಲ ಗ್ರಾಪಂ ಪಿಡಿಒಗಳ ಜತೆ ಚರ್ಚಿಸಿ, ಸ್ಥಳೀಯ ಅಧಿಕಾರಿಗಳಾದ ಆರ್‌ಐ ಹಾಗೂ ವಿಎಗಳನ್ನು ಸಂಪರ್ಕದಲ್ಲಿರಿಸಿಕೊಂಡು ಪಂಚಾಯಿತಿ ಮಟ್ಟದಲ್ಲಿಯೇ ಸಣ್ಣ ಪುಟ್ಟ ಸಮಸ್ಯೆಗಳಾದರೆ ಬಗೆಹರಿಸಲು ತಿಳಿಸಿದ್ದೇವೆ. ಹೆಚ್ಚಿನ ಸಮಸ್ಯೆಗಳಾದರೆ ಅಕ್ಕ-ಪಕ್ಕದ ಶಾಲೆಗಳನ್ನು ಬಳಸಿಕೊಂಡು ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.”
-ಹೊಂಗಯ್ಯ, ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ
” ಈಗಾಗಲೇ ಹೂಳು ತುಂಬಿಕೊಂಡಿರುವ ಚರಂಡಿಗಳನ್ನು ಗುರುತಿಸಿ, ಸ್ವಚ್ಛಗೊಳಿಸಿ, ಹೂಳೆತ್ತುವ ಕೆಲಸ ನಡೆಯುತ್ತಿದೆ. ಮಂಜುನಾಥ ಬಡಾವಣೆಯಲ್ಲಿ ೩.೫೦ ಕೋಟಿ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಪ್ರವಾಹ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಿಂದ ೪೧ ಲಕ್ಷ ರೂ. ಹಣ ಬಂದಿದೆ. ಅತಿ ಹೆಚ್ಚು ಮಳೆಯಾದಾಗ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗುತ್ತದೆ. ಅಂತಹ ಮನೆಗಳನ್ನು ಗುರುತಿಸಿ ಜನರನ್ನು ಸ್ಥಳಾಂತರಿಸುತ್ತೇವೆ.”
-ಮಾನಸ, ಪೌರಾಯುಕ್ತರು, ನಗರಸಭೆ
” ಮಳೆಯ ಹಿನ್ನೆಲೆಯಲ್ಲಿ ಕಲುಷಿತ ನೀರು ನಿಂತಿರುವ ಜಾಗದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಆಶಾ ಕಾರ್ಯಕರ್ತೆಯರು ಹಾಗೂ ಹೆಲ್ತ್ ಇನ್‌ಸ್ಪೆಕ್ಟರ್‌ಗಳನ್ನು ಪ್ರತಿ ಹಳ್ಳಿಗೂ ಕಳುಹಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ವಹಿಸಬೇಕಾದ ಎಚ್ಚರಿಕೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.”
-ಡಾ.ಕೀರ್ತಿಕುಮಾರ್, ಟಿಎಚ್‌ಒ




