Mysore
23
broken clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಬೆಟ್ಟಹಳ್ಳಿ ಗ್ರಾಮದ ಜನರಲ್ಲಿದ್ದ ಆತಂಕ ದೂರ

ಕಲುಷಿತ ನೀರು ಸೇವಿಸಿ ಓರ್ವ ಸಾವು ಪ್ರಕರಣ; ಗ್ರಾಪಂ, ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ

ಸಾಲಿಗ್ರಾಮ: ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ 10 ದಿನಗಳ ಹಿಂದೆ ಕಂಡು ಬಂದ ವಾಂತಿಭೇದಿ ಪ್ರಕರಣದ ಬಗ್ಗೆ ‘ಆಂದೋಲನ’ ದಿನಪತ್ರಿಕೆಯಲ್ಲಿ ನಿರಂತರವಾಗಿ ವರದಿಗಳನ್ನು ಪ್ರಕಟಿಸಿದ್ದರಿಂದ ಎಚ್ಚೆತ್ತ ಶೀಗವಾಳು ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಗ್ರಾಮದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ಮೂಲಕ ಗ್ರಾಮದ ಜನರಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಿವೆ.

ಗ್ರಾಮ ಪಂಚಾಯಿತಿಯು ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಅನ್ನು ಸ್ವಚ್ಛ ಮಾಡಿ, ನೀರು ಸರಬರಾಜು ಆಗುವ ಸ್ಥಳಗಳಲ್ಲಿರುವ ವಾಲ್ ಗಳು ಹಾಗೂ ಗ್ರಾಮದ ವಿವಿಧ ಭಾಗಗಳಲ್ಲಿ ನೀರು ಸೋರಿಕೆಯಾಗುತ್ತಿದ್ದ ಸ್ಥಳಗಳನ್ನು ಸರಿಪಡಿಸಿ, ಸ್ವಚ್ಛತಾ ಕಾರ್ಯವನ್ನು ಮಾಡಿ, ನೀರಿನ ಟ್ಯಾಂಕ್ ಮೂಲಕ ಸರಬರಾಜಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ.

ಬೆಟ್ಟಹಳ್ಳಿ ಗ್ರಾಮದಲ್ಲಿ ಕಂಡುಬಂದಿದ್ದ ಈ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆದು ಈ ಕೇಂದ್ರದಲ್ಲಿ ವೈದ್ಯರುಗಳಾದ ಡಾ. ಶಿವಕುಮಾರ್, ಡಾ. ಮಧುಸೂದನ್, ಡಾ. ಸಚಿನ್, ಡಾ. ರವಿಚಂದ್ರನ್, ಡಾ. ಕಲ್ಲೇಶ್, ಸಮುದಾಯ ಆರೋಗ್ಯ ಅಽಕಾರಿ ಗಳಾದ ಪಲ್ಲವಿ, ಪೂಜಾ, ಶ್ವೇತಾ ಭಗವಾನ್, ರಂಗ ಸ್ವಾಮಿ, ಶ್ರೀನಿವಾಸ, ಸಚಿನ್, ಕೈಲಾಶ್, ಮಂಜುಳಾ ಸೇರಿದಂತೆ ಆರೋಗ್ಯ ಇಲಾಖೆಯ ಹಲವು ಸಿಬ್ಬಂದಿ ಹಗಲು-ರಾತ್ರಿ ಕಾರ್ಯನಿರ್ವಹಿಸುವ ಮೂಲಕ ಗ್ರಾಮದ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಶ್ರಮಿಸುವ ಮೂಲಕ ಗ್ರಾಮದಲ್ಲಿ ಹೆಚ್ಚು ಉಲ್ಬಣ ಗೊಳ್ಳದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈಗ ಗ್ರಾಮದಲ್ಲಿ ಪ್ರಕರಣಗಳು ಕಂಡು ಬರುವುದು ನಿಂತಿರುವ ಕಾರಣ ತಾತ್ಕಾಲಿಕವಾಗಿ ತೆರೆದಿದ್ದ ಆರೋಗ್ಯ ಕೇಂದ್ರವನ್ನು ಮುಚ್ಚಲಾಗಿದ್ದು, ಗ್ರಾಮದಲ್ಲಿರುವ ಆಯುಷ್ಮಾನ್ ಆರೋಗ್ಯ ಮಂದಿರ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಾಲಿಗ್ರಾಮ, ಮೇಲೂರು ಮತ್ತು ಮುಂಡೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿನ ಆಶಾ ಕಾರ್ಯಕರ್ತರು, ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಧುಮಾಲತಿ, ಸಹಾಯಕಿ ಭಾರತಿ, ಆಶಾ ಕಾರ್ಯಕರ್ತೆ ಪಾರ್ವತಿ ಅವರುಗಳೊಂದಿಗೆ ಗ್ರಾಮದಲ್ಲಿನ ಪ್ರತಿಯೊಂದು ಮನೆಗೂ ಭೇಟಿ ನೀಡಿ ಗ್ರಾಮದ ಸರ್ವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಜನರಿಗೆ ಯಾವುದಾದರೂ ತೊಂದರೆ ಇರುವುದು ಕಂಡುಬಂದಲ್ಲಿ ಅವರಿಗೆ ತುರ್ತಾಗಿ ಚಿಕಿತ್ಸೆಗಳನ್ನು ಕೊಡಿಸುವ ಕೆಲಸ ಮಾಡುವುದರ ಜೊತೆಗೆ ಗ್ರಾಮದ ಪ್ರತಿಯೊಂದು ಮನೆಗೂ ಒಆರ್‌ಎಸ್ ಪ್ಯಾಕೆಟ್, ವಿವಿಧ ಆಂಟಿ ಬಯಾಟಿಕ್ ಮಾತ್ರೆಗಳನ್ನು ನೀಡಿ ಆರೋಗ್ಯ ಹಾಗೂ ಕುಡಿಯುವ ನೀರಿನ ಬಗ್ಗೆ ಮಾಹಿತಿ ನೀಡಿ, ಕರುಳುಬೇನೆ, ಕಾಲರಾ, ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಟೈಫಾಯ್ಡ್, ಅರಿಶಿನ ಕಾಮಾಲೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ಬಗ್ಗೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಮಾಹಿತಿಯುಳ್ಳ ಕರಪತ್ರಗಳನ್ನು ಗ್ರಾಮದೆಲ್ಲೆಡೆ ಹಂಚಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ನಟರಾಜ್, ಪಿಡಿಒ ಶ್ರೀಧರ್, ತಾ. ಪಂ. ಇಒ ಕುಲದೀಪ್, ತಹಸಿಲ್ದಾರ್ ಎಸ್. ಎನ್. ನರಗುಂದ, ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಇಇ ರಂಜಿತ್ ಅವರುಗಳ ನೇತೃತ್ವದಲ್ಲಿ ತುರ್ತು ಕ್ರಮಗಳನ್ನು ಮುಂಜಾಗ್ರತೆಯಾಗಿ ವಹಿಸಿ ನಿರಂತರವಾಗಿ ಗ್ರಾಮದಲ್ಲಿ ಕಾರ್ಯನಿರ್ವಹಣೆ ಮಾಡುವ ಮೂಲಕ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಪ್ರಕರಣವನ್ನು ತಡೆಗಟ್ಟಿ ಜನರ ಆರೋಗ್ಯ ಕಾಪಾಡುವ ಕೆಲಸ ಮಾಡಲಾಗಿದೆ. ಶಾಸಕ ಡಿ. ರವಿಶಂಕರ್, ಮಾಜಿ ಸಚಿವ ಸಾ. ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ. ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ. ಎಂ. ಗಾಯತ್ರಿ, ಡಿಎಚ್‌ಒ ಕುಮಾರಸ್ವಾಮಿ ಅವರುಗಳು ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಈಗಾಗಲೇ ಅಽಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ಹೀಗಾಗಿ ವಾಂತಿ ಭೇದಿ ಪ್ರಕರಣವು ನಿಯಂತ್ರಣಕ್ಕೆ ಬಂದಿದ್ದು ಗ್ರಾಮದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಬೆಟ್ಟಹಳ್ಳಿ ಗ್ರಾಮದಲ್ಲಿ ಕಂಡುಬಂದಿದ್ದ ವಾಂತಿ ಭೇದಿ ಪ್ರಕರಣ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
– ಡಾ. ನಟರಾಜ್, ಟಿಎಚ್‌ಒ

 

 

Tags: