Mysore
22
moderate rain

Social Media

ಶುಕ್ರವಾರ, 23 ಅಕ್ಟೋಬರ್ 2026
Light
Dark

‘ಪ್ರಶಾಂತ’ ನನ್ನ ಅಚ್ಚುಮೆಚ್ಚಿನ ಆನೆ

ಚಿರಂಜೀವಿ ಸಿ. ಹುಲ್ಲಹಳ್ಳಿ

ಅಂಬಾರಿ ಹೊತ್ತು ಯಶಸ್ವಿಯಾಗಿದ್ದಕ್ಕೆ ಮಾವುತ ಚಿನ್ನಪ್ಪ ಭಾವುಕ

ಮೈಸೂರು: ‘ಪ್ರಶಾಂತ’ ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವನು. ಕಳೆದ ೧೮ ವರ್ಷಗಳಿಂದ ದಸರಾ ಜಂಬೂಸವಾರಿಯಲ್ಲಿ ಸಾಲಾನೆಯಾಗಿ ಪಾಲ್ಗೊಳ್ಳುತ್ತಿದ್ದ ಪ್ರಶಾಂತನನ್ನು ಈ ಬಾರಿ ಅಂಬಾರಿ ಆನೆಯಾಗಿ ಮಹತ್ತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾನೆ ಎಂದು ಮಾವುತ ಚಿನ್ನಪ್ಪ ಭಾವುಕರಾಗಿ ನುಡಿದರು.

ಅರಮನೆಯಿಂದ ಬನ್ನಿಮಂಟಪದವರೆಗೆ ಪ್ರಶಾಂತನನ್ನು ಯಾವ ರೀತಿ ಮುನ್ನಡೆಸಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದರು.

ಜಂಬೂಸವಾರಿ ಯಶಸ್ವಿಯಾಗಿ ನಡೆಸಿದ ಬಳಿಕ ಗುರುವಾರ ಸ್ವಸ್ಥಾನಗಳಿಗೆ ಮರಳುವ ಮುನ್ನ ‘ಆಂದೋಲನ’ ದಿನಪತ್ರಿಕೆಯ ನಡೆಸಿದ ಸಂದರ್ಶನದಲ್ಲಿ ಪ್ರೀತಿಯಿಂದ ಮಾತನಾಡಿದ ಚಿನ್ನಪ್ಪ, ಪ್ರಶಾಂತನ ಸಾಮರ್ಥ್ಯದ ಜೊತೆಗೆ ತಮ್ಮ ಜವಾಬ್ದಾರಿಯ ಕುರಿತು ಮಾತುಗಳನ್ನಾಡಿದರು.

ಆಂದೋಲನ: ಅಂಬಾರಿ ಹೊರುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಿದ್ರಿ?

ಚಿನ್ನಪ್ಪ: ಪ್ರಶಾಂತ ಅಂಬಾರಿ ಹೊತ್ತು ಸಾಗುವಾಗ ನನಗೆ ಭಯ ಆಗಲಿಲ್ಲ. ಆದರೆ, ಅಂಬಾರಿ ಹೊರುವ ಜವಾಬ್ದಾರಿ ಸಾಮಾನ್ಯವಾದುದಲ್ಲ. ಲಕ್ಷಾಂತರ ಜನರು ನೋಡುತ್ತಿರುತ್ತಾರೆ. ಎಲ್ಲರ ಗಮನ ಆನೆಯ ಮೇಲಿರುತ್ತದೆ. ಪ್ರಶಾಂತ ಯಾವುದೇ ತೊಂದರೆಯಿಲ್ಲದೆ ಶಾಂತವಾಗಿ ಸಾಗಬೇಕು ಎಂಬುದಷ್ಟೇ ನನ್ನ ಆಸೆಯಾಗಿತ್ತು.

ಆಂದೋಲನ: ಪ್ರಶಾಂತನಿಗೆ ಅಂಬಾರಿ ಕಟ್ಟಿದಾಗ ಹೇಗಿದ್ದ?

ಚಿನ್ನಪ್ಪ: ಪ್ರಶಾಂತ ತಾಲೀಮಿನಲ್ಲಿ ಮರದ ಅಂಬಾರಿ ಹೊತ್ತು ಸಾಗಿದ್ದ. ಆದರೆ, ಚಿನ್ನದ ಅಂಬಾರಿ ಕಟ್ಟಿದ ಬಳಿಕ ನನಗೂ ಆತಂಕ, ಸಂತೋಷ, ತಳಮಳ ಎಲ್ಲವೂ ಆಯಿತು. ಆದರೆ, ಅಂಬಾರಿ ಇಟ್ಟ ಬಳಿಕ ಪ್ರಶಾಂತ ಶಾಂತವಾಗಿದ್ದು, ನನ್ನ ಆತಂಕ ದೂರ ಮಾಡಿದ. ಎಲ್ಲಿಯೂ ಅಂಜದೆ, ಅಳುಕದೆ ಹೆಜ್ಜೆ ಹಾಕಿದ.

ಆಂದೋಲನ: ಜಂಬೂಸವಾರಿಗೂ ಮುನ್ನ ಹರಕೆ ಕಟ್ಟಿಕೊಂಡಿದ್ರಾ?

ಚಿನ್ನಪ್ಪ: ಈ ಬಾರಿ ಅಂಬಾರಿ ಹೊರಲು ಸಿದ್ಧವಾಗುವ ಮುನ್ನ ಮತ್ತಿಗೋಡು ಹಾಗೂ ನಾಗರಹೊಳೆ ಶಿಬಿರಗಳಲ್ಲಿ ಪೂಜೆ ಸಲ್ಲಿಸಿದ್ದೆವು. ಬಳ್ಳೆಯ ಮಾಸ್ತಮ್ಮ ದೇವಸ್ಥಾನದಲ್ಲಿಯೂ ಪೂಜೆ ಮಾಡಿಸಿದ್ದೆವು. ಅಡವಿ ದೇವಿಗೆ ಪೂಜೆ ಸಲ್ಲಿಸಿ, ನಮ್ಮ ಆನೆಗಳು ದಸರಾ ಕಾರ್ಯವನ್ನು ಯಾವುದೇ ತೊಂದರೆಯಿಲ್ಲದೆ ಉತ್ತಮವಾಗಿ ನಿರ್ವಹಿಸಬೇಕು ಎಂದು ಪ್ರಾರ್ಥಿಸಿದ್ದೆವು. ಜಂಬೂಸವಾರಿಯ ಹಿಂದಿನ ರಾತ್ರಿ ಅದರೊಂದಿಗೆ ಮಾತನಾಡಿದ್ದು, ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದು, ಮರುದಿನ ಅದು ಶಾಂತವಾಗಿ ಸಾಗಿದ್ದು -ಇವೆಲ್ಲವೂ ನನಗೆ ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತವೆ. ಜನರು ಪ್ರಶಾಂತನ ಹೆಸರನ್ನು ಕೂಗಿ ಜೈಕಾರ ಹಾಕಿದ್ದು, ನಮ್ಮನ್ನೂ ಗುರುತಿಸಿದ್ದು ಮರೆಯಲಾಗದು.

ಆಂದೋಲನ: ಪ್ರಶಾಂತನ ನೈಜ ವರ್ತನೆ ಹೇಗೆ?

ಚಿನ್ನಪ್ಪ: ನಮ್ಮ ಇಷ್ಟದಂತೆ ಆನೆಯನ್ನು ಬೆಳೆಸಿಲ್ಲ, ಅದರ ಇಷ್ಟಕ್ಕೆ ತಕ್ಕಂತೆ ಪ್ರೀತಿಯಿಂದ ಬೆಳೆಸಿದ್ದೇವೆ. ಹೀಗಾಗಿ ನಾವು ಹೇಳಿದ ಮಾತನ್ನು ಕೇಳುತ್ತಾನೆ. ಪ್ರಶಾಂತ ನಮ್ಮ ಕುಟುಂಬದ ಸದಸ್ಯನಂತೆಯೇ ಆಗಿದ್ದಾನೆ.

ಆಂದೋಲನ: ಪ್ರಶಾಂತನ ದಿನಚರಿ ಹೇಗಿರುತ್ತದೆ?

ಚಿನ್ನಪ್ಪ: ಬೆಳಿಗ್ಗೆ ಎಂಟು ಗಂಟೆಯೊಳಗೆ ಪ್ರಶಾಂತ ಶಿಬಿರಕ್ಕೆ ಬರುತ್ತಾನೆ. ಅದಕ್ಕೆ ಮೈತೊಳೆದು, ಆಹಾರ ನೀಡಿ ಮತ್ತೆ ಶಿಬಿರಕ್ಕೆ ಕರೆತರುತ್ತೇನೆ. ಶಿಬಿರಕ್ಕೆ ಬರುವ ಜನರು ಅದನ್ನು ನೋಡಿ ತೆರಳಿದ ಬಳಿಕ ಕಾಡಿಗೆ ಬಿಡುತ್ತೇನೆ. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮತ್ತೆ ಕರೆದುಕೊಂಡು ಬಂದು ಆಹಾರ ನೀಡುತ್ತೇನೆ. ನಂತರ ಕಾಡಿಗೆ ಬಿಡುತ್ತೇವೆ. ಇದೇ ಪ್ರಶಾಂತನೊಂದಿಗಿನ ನನ್ನ ದಿನಚರಿ. ನಾನು ಮನೆಯಲ್ಲಿ ಇಲ್ಲದಿದ್ದರೂ ನನ್ನ ಮಕ್ಕಳು ಪ್ರಶಾಂತನಿಗೆ ಆಹಾರ ನೀಡುತ್ತಾರೆ. ಅವರು ಕಾಡಿಗೆ ಹೋಗುವಂತೆ ಸೂಚಿಸಿದರೆ ಅದು ತಕ್ಷಣವೇ ಹೊರಡುತ್ತದೆ. ಕೆಲವೊಮ್ಮೆ ಪ್ರಶಾಂತನನ್ನು ಹುಡುಕಿಕೊಂಡು ಕಾಡಿನೊಳಗೆ ಹೋದಾಗ, ಅದಾಗಲೇ ಮನೆ ಅಥವಾ ಶಿಬಿರದ ಬಳಿ ಬಂದು ನಿಂತಿರುತ್ತದೆ. ಆಗ ಅರಣ್ಯಇಲಾಖೆ ಸಿಬ್ಬಂದಿ ನನಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಪ್ರಶಾಂತ ನನಗೆ ಬಹಳ ಅಚ್ಚುಮೆಚ್ಚಿನ ಆನೆ.

 

 

Tags:
error: Content is protected !!