ಕೆ.ಬಿ.ರಮೇಶನಾಯಕ
ಸಹಕಾರ ಕ್ಷೇತ್ರಕ್ಕೆ ಧುಮುಕಲು ಸಜ್ಜಾಗಿರುವ ಶಾಸಕ ಅನಿಲ್ ಚಿಕ್ಕಮಾದು
ಬೆಂಬಲಿಗರಿಗೆ ನಾಮನಿರ್ದೇಶಿತ ಸದಸ್ಯ ಸ್ಥಾನಕೊಡಿಸಲು ಮಾಜಿ ಶಾಸಕರ ಯತ್ನ
ಮೈಸೂರು: ಗ್ರಾಮೀಣ ಪ್ರದೇಶದ ಸಹಸ್ರಾರು ರೈತರಿಗೆ ಆರ್ಥಿಕವಾಗಿ ಬೆನ್ನಿಗೆ ನಿಂತಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಚುನಾವಣೆಗೆ ಅಧಿಸೂಚನೆ ಹೊರಡಿಸಲು ದಿನಗಣನೆ ಶುರುವಾಗಿದ್ದರೆ, ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯತ್ತ ರಾಜಕಾರಣಿಗಳ ಕಣ್ಣು ಬಿದ್ದಿದೆ.
ಕಳೆದ ಐದು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿರುವ ಜಿ.ಟಿ.ದೇವೇಗೌಡರ ಪುತ್ರ ಶಾಸಕ ಜಿ.ಡಿ.ಹರೀಶ್ ಗೌಡ ನಾಗಾಲೋಟವನ್ನು ತಡೆಯಲು ಕೆಲವರು ಆಂತರಿಕವಾಗಿ ಎದುರಾಳಿಗಳನ್ನು ಒಂದುಗೂಡಿಸುವ ಕೆಲಸ ಮಾಡಿದರೆ, ಹೊಸ ಮುಖಗಳು ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಜ್ಜಾಗಿವೆ. ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಬಳಿಕ ಯಾರ್ಯಾರು ಸ್ಪರ್ಧಿಸುತ್ತಾರೆ ಎಂಬುದು ಅಧಿಕೃತವಾಗಿ ಬಹಿರಂಗವಾಗಲಿದೆ.
ಸಹಕಾರ ಕ್ಷೇತ್ರದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ಗಳು ಅತ್ಯಂತ ಪ್ರಮುಖ ಪಾತ್ರವಹಿಸಿಕೊಂಡು ಬಂದಿವೆ. ಸಹಕಾರ ಕ್ಷೇತ್ರದ ಮೂಲಕವೇ ಅನೇಕ ರಾಜಕಾರಣಿಗಳು ಶಾಸಕರು, ಸಚಿವರಾಗಿ ತಮ್ಮ ಹಿಡಿತವನ್ನು ಸಾಧಿಸಿದ್ದಾರೆ. ಇದರಲ್ಲಿ ಮೈಸೂರು ಪ್ರಾಂತ್ಯದ ಜಿ.ಟಿ.ದೇವೇಗೌಡರು ತಮ್ಮ ಪ್ರಾಬಲ್ಯವನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಅದೇ ರೀತಿ ಜಿ.ಡಿ.ಹರೀಶ್‌ಗೌಡ ಅವರು ಕಳೆದ ಬಾರಿ ಹುಣಸೂರು ತಾಲ್ಲೂಕಿನಿಂದ ಆಯ್ಕೆಯಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸುವ ಜತೆಗೆ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿ ಗಮನ ಸೆಳೆದಿದ್ದರು.
ಎಂಸಿಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯನ್ನು ಜೂನ್ ೧೫ರೊಳಗೆ ನಡೆಸಬೇಕಿರುವ ಕಾರಣ ಯಾವುದೇ ಕ್ಷಣದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಈಗಾಗಲೇ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಚುನಾವಣಾ ಪ್ರಕ್ರಿಯೆ ಸಿದ್ಧತೆ ಆರಂಭಿಸಿದ್ದಾರೆ.
ಇದಲ್ಲದೆ ಮತದಾನದ ಹಕ್ಕನ್ನು ಹೊಂದುವುದಕ್ಕೆ ಡೆಲಿಗೇಷನ್(ಪ್ರತಿನಿಧಿ) ಆಯ್ಕೆ ಮಾಡಿ ಬ್ಯಾಂಕ್ ಮತದಾರರ ಪಟ್ಟಿಗೆ ಕಳುಹಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಿಂದ ಪ್ರತಿನಿಧೀಯನ್ನು ಆಯ್ಕೆ ಮಾಡು ವುದಕ್ಕಾಗಿಯೇ ದೊಡ್ಡಮಟ್ಟದಲ್ಲಿ ಲಾಬಿ ನಡೆದಿದೆ. ತಮ್ಮ ಪರವಾಗಿ ಮತಚಲಾಯಿಸುವಂತಹ ವ್ಯಕ್ತಿಗಳನ್ನೇ ಗಮನಿಸಿ ಆಯ್ಕೆ ಮಾಡಿರುವುದು ಕೂಡ ಚುನಾವಣೆ ಹೊತ್ತಲ್ಲಿ ಪರಿಣಾಮ ಬೀರುವುದಕ್ಕೆ ಸಾಧ್ಯವಾಗಿದೆ.
ಅನಿಲ್ ಚಿಕ್ಕಮಾದು ಪ್ರವೇಶ: ಸಹಕಾರ ಕ್ಷೇತ್ರದಿಂದ ದೂರ ಉಳಿದಿದ್ದ ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಈ ಬಾರಿ ಚುನಾವಣೆಗೆ ಸ್ಪರ್ದಿಸಲು ಸಜ್ಜಾಗಿದ್ದಾರೆ. ಈಗಾಗಲೇ ಎಚ್.ಡಿ.ಕೋಟೆ ತಾಲ್ಲೂಕಿನ ನಾಗನಹಳ್ಳಿ ಪ್ರಾಥಮಿಕ ಸಹಕಾರ ಪತ್ತಿನ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಣಕ್ಕಿಳಿಯಲು ಡೆಲಿ ಗೇಷನ್ ಅರ್ಹತೆಯನ್ನು ಗಳಿಸಿದ್ದಾರೆ. ಸಹಕಾರ ಕ್ಷೇತ್ರದ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರು ಆತ್ಮೀಯರಾಗಿರುವ ಕಾರಣ ಮುಂದಿನ ದಿನಗಳಲ್ಲಿ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳನ್ನು ಗಳಿಸಲು ನೆರ ವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಅಖಾಡಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಬೆಂಬಲಿಗರಿಗೆ ಸ್ಥಾನಕೊಡಿಸಲು ಕಸರತ್ತು: ಹುಣಸೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಡಿ.ಹರೀಶ್ ಗೌಡರ ಗುಂಪನ್ನು ಸೋಲಿಸಲು ವಿಫಲವಾದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಚುನಾವಣೆಯ ಬಳಿಕ ತಮ್ಮ ಆಪ್ತರಿಗೆ ನಾಮನಿರ್ದೇಶಿತ ಸದಸ್ಯ ಸ್ಥಾನವನ್ನು ಕೊಡಿಸಲು ಮುಂದಾಗಿದ್ದಾರೆ. ಹುಣಸೂರು ತಾಲ್ಲೂಕಿನ ಪಿಎಸಿಸಿ ಬ್ಯಾಂಕ್‌ಗಳಲ್ಲಿ ತಮ್ಮ ಹಿಡಿತ ಸಾಽಸಲು ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ ತಮ್ಮವರನ್ನು ಕೂರಿಸಬೇಕೆಂಬ ಚಿಂತನೆಯಲ್ಲಿ ಇರುವ ಎಚ್.ಪಿ. ಮಂಜುನಾಥ್, ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ ಯಲ್ಲೂ ಬೆಂಬಲಿಗರನ್ನು ಕಣಕ್ಕಿಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹನೂರು ಕ್ಷೇತ್ರದ ಮಾಜಿ ಶಾಸಕ ಆರ್. ನರೇಂದ್ರ ಅವರು ಪುನರಾಯ್ಕೆಗಾಗಿ ಸ್ಪರ್ಧಿಸುತ್ತಿದ್ದರೆ, ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವುದು ಮತ್ತಷ್ಟು ರಂಗು ಪಡೆಯಲಿದೆ.
ಈಗಾಗಲೇ ಪುಟ್ಟರಂಗಶೆಟ್ಟಿ ಅವರ ಪುತ್ರಿ ಮೈಮುಲ್ ನಿರ್ದೇಶಕರಾಗಿದ್ದಾರೆ. ಉಳಿದಂತೆ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಜಿಪಂ ಮಾಜಿ ಸದಸ್ಯ ಬಿ.ಎನ್.ಸದಾನಂದ, ಎಸ್.ಎಂ.ಕೆಂಪಣ್ಣ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಅವರು ಕೂಡ ಈ ಬಾರಿ ತಮ್ಮ ಬಣವನ್ನು ಗೆಲ್ಲಿಸಿಕೊಳ್ಳಲು ಸದ್ದಿಲ್ಲದೆ ತಯಾರಿ ಮಾಡುತ್ತಿದ್ದು, ಯಾರ‍್ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮೌನಕ್ಕೆ ಶರಣಾದ ಜಿಟಿಡಿ: ಇತ್ತೀಚಿನ ದಿನಗಳಲ್ಲಿ ಮೌನಕ್ಕೆ ಶರಣಾಗಿರುವ ಶಾಸಕ ಜಿ.ಟಿ.ದೇವೇಗೌಡರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಮ್ಮ ಪುತ್ರ ಜಿ.ಡಿ.ಹರೀಶ್‌ಗೌಡರಿಗೆ ಅನುಕೂಲವಾಗುವ ರೀತಿಯಲ್ಲಿ ಒಳಗೊಳಗೆ ರಣತಂತ್ರ ಹೆಣೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯತೆ ಹೊಂದಿರುವ ಕಾರಣ ಚುನಾವಣೆಯಿಂದ ದೂರ ಉಳಿಯಬಹುದು ಎನ್ನಲಾಗುತ್ತಿದೆ.