Mysore
26
broken clouds

Social Media

ಸೋಮವಾರ, 26 ಜನವರಿ 2026
Light
Dark

ಫ್ಲೀಸ್. . ಬಸ್ ನಿಲ್ಲಿಸಿ ಸಾರ್. . !

  • ಶಿವಪುರ, ನಾಚನಹಳ್ಳಿಪಾಳ್ಯ, ರೈಲ್ವೆ ವರ್ಕ್‌ಶಾಪ್‌ ನಿಲುಗಡೆ ತಾಣದಲ್ಲಿ ನಿಲ್ಲದ ಬಸ್‌ಗಳು
  • ಕೈ ಸಂಜ್ಞೆಗೂ ಕ್ಯಾರೇ ಎನ್ನದ ಡ್ರೈವರ್‌ಗಳು; ಮಹಿಳೆಯರು, ವಯೋವೃದ್ಧರು, ಕಾರ್ಮಿಕರಿಗೆ ಪರದಾಟ

ಪ್ರಶಾಂತ್ ಎಸ್.

ಮೈಸೂರು : ನಗರದ ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ವರ್ಕ್‌ಶಾಪ್, ಶಿವಪುರ ಕೆಎಸ್‌ ಆರ್‌ಟಿಸಿ ನಿಯಮಿತ ನಿಲುಗಡೆ ತಾಣಗಳಲ್ಲಿ ಸರ್ಕಾರಿ ನೌಕರರು, ಕಾರ್ಮಿಕರು, ಪ್ರತಿನಿತ್ಯ ಮೈಸೂರಿನಿಂದ ತಮ್ಮ ಉದ್ಯೋಗದ ಸ್ಥಳಗಳಾದ ಸರಗೂರು, ಅಂತರಸಂತೆ, ಎನ್.ಬೇಗೂರು, ಬೀಚನಹಳ್ಳಿ ಭಾಗಕ್ಕೆ ಹೋಗಲು ಕೆಎಸ್‌ಆರ್‌ಟಿಸಿ ಬಸ್‌ಗಳಿಗಾಗಿ ಕಾಯುತ್ತಿದ್ದರೂ ಈ ಬಸ್‌ಗಳನ್ನು ನಿಲ್ಲಿಸದೇ ಹೋಗುವುದರಿಂದ ಪ್ರಯಾಣಿಕರು ಪರದಾಡಬೇಕಾಗಿದೆ.

 

ಹಲವು ತಿಂಗಳಿನಿಂದ ಕಾಡುತ್ತಿರುವ ಸಮಸ್ಯೆ 

ದಿನನಿತ್ಯ ಎಚ್‌. ಡಿ. ಕೋಟೆ ಬಸ್‌ಘಟಕದಿಂದ 30 ಬಸ್‌ಗಳು ಹಾಗೂ ಮೈಸೂರು ಘಟಕದಿಂದ 20 ಬಸ್‌ಗಳು ಸೇರಿ ಒಟ್ಟಾರೆಯಾಗಿ 50 ಬಸ್‌ಗಳು ಸಂಚರಿಸುತ್ತಿದ್ದು, ಬಹಳ ದಿನಗಳಿಂದ ಸಮಸ್ಯೆಯೊಂದು ತಲೆಎತ್ತಿದೆ. ಅದೆಂದರೆ, ಬೆಳಿಗ್ಗೆ 10 ಗಂಟೆ ಬಳಿಕ ಸಕಾಲಕ್ಕೆ ಬಸ್‌ ಸಿಗದೆ ಬಹಳ ಹೊತ್ತು ಕಾಯುವಂತಾಗಿದೆ. ಅದರಲ್ಲೂ ವಯೋವೃದ್ದರು, ಮಹಿಳೆಯರು ಗ್ರಾಮಾಂತರ ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ.

ಬಸ್ ನಿಲ್ಲಿಸದ ಚಾಲಕರು
ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ನಿಲುಗಡೆ ತಾಣಗಳಲ್ಲಿ ಈ ಬಸ್‌ಗಳು ನಿಲ್ಲುವುದಿಲ್ಲ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿಗೆ ಕರೆ ಮಾಡಿ ಮನವಿ ಮಾಡಿದರೂ ಇದುವರೆಗೂ ಯಾವ ಸ್ಪಂದನೆಯೂ ಸಿಗುತ್ತಿಲ್ಲ ಎಂದು ದೂರುತ್ತಾರೆ ಸಾಕಷ್ಟು ಪ್ರಯಾಣಿಕರು.

ಈ ಬಸ್ ನಿಲುಗಡೆ ತಾಣವು ಅಸ್ತಿತ್ವಕ್ಕೆ ಬಂದು ಹಲವು ವರ್ಷಗಳೇ ಕಳೆದಿವೆ. ಆದರೂ ಇಲ್ಲಿ ಬಸ್‌ಗಳು ನಿಲ್ಲುತ್ತಿಲ್ಲ. ಊರುಗಳಿಗೆ ತೆರಳಲು ಇಲ್ಲಿಗೆ ಬರುವ ಮಹಿಳೆಯರು, ವಯೋವೃದ್ಧರು ಕೈ ತೋರಿಸಿ ನಿಲ್ಲಿಸುವಂತೆ ಕೋರಿದರೂ ಕಾಣದಂತೆ ಹಾಗೆಯೇ ಹೋಗಿಬಿಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.

 

  • ಕೋಟ್…

ಪ್ರತಿನಿತ್ಯ ಕೆಲಸಕ್ಕೆ ಹೋಗಲು ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಬಂದು ನಿಲ್ಲುತ್ತೇವೆ. ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಬೆರಳಣಿಕೆಯಷ್ಟು ಬಸ್‌ಗಳು ಮಾತ್ರ ಓಡಾಡುತ್ತಿದ್ದು, ಶಿವಪುರ ನಿಲ್ದಾಣದಲ್ಲಿ ಕೈ ತೋರಿಸಿದರೂ ಚಾಲಕರು ಬಸ್‌ ನಿಲ್ಲಿಸದೇ ಮತ್ತಷ್ಟು ವೇಗವಾಗಿ ಹೋಗುತ್ತಾರೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. -ರತ್ನಮ್ಮ, ಪ್ರಯಾಣಿಕರು

ಶಿವಪುರ, ರೈಲ್ವೆ ವರ್ಕ್‌ಶಾಪ್, ನಾಚನ ಹಳ್ಳಿ ಪಾಳ್ಯ ನಿಲ್ದಾಣಗಳಲ್ಲಿ ಬೆಳಿಗ್ಗೆ 10 ಗಂಟೆ ಬಳಿಕ ಬಸ್ ನಿಲ್ಲಿಸುವುದಿಲ್ಲ ಎಂಬ ವಿಷಯ ಇದೀಗ ಗೊತ್ತಾಗಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು. ಸಾರ್ವಜನಿಕರು ಪತ್ರದ ಮೂಲಕ ಮನವಿ ಮಾಡಿದರೆ, ಸಮಸ್ಯೆ ಬಗೆಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು. -ಶ್ರೀನಿವಾಸ್, ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

 

 

Tags:
error: Content is protected !!