ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ
ನವೀನ್ ಡಿಸೋಜ
ಮಡಿಕೇರಿ: ಈ ಬಾರಿಯ ದೀರ್ಘಕಾಲದ ಮಳೆ ಮತ್ತು ನಿರಂತರ ಹವಾಮಾನ ಏರುಪೇರಿನಿಂದಾಗಿ ಕಾಫಿ ಮಾತ್ರವಲ್ಲದೆ ಕೊಡಗು ಜಿಲ್ಲೆಯ ಮತ್ತೊಂದು ಪ್ರಮುಖ ತೋಟಗಾರಿಕಾ ಬೆಳೆಯಾದ ಕಾಳುಮೆಣಸಿಗೂ ಸಮಸ್ಯೆಯಾಗಿದೆ. ಉತ್ತರ ಕೊಡಗು ಭಾಗದಲ್ಲಿ ಬೆಳೆ ನಷ್ಟ ಸಂಭವಿಸಿದ್ದು, ಒಟ್ಟಾರೆ ಉತ್ಪಾದನೆಯ ಅಂದಾಜು ಶೇ.೩೦ರಷ್ಟು ಉತ್ಪಾದನೆ ಕುಸಿದಿದೆ ಎಂದು ಅಂದಾಜಿಸಲಾಗಿದೆ.
ವಿರಾಜಪೇಟೆ, ಪಾಲಿಬೆಟ್ಟ ದಕ್ಷಿಣ ಭಾಗದಲ್ಲಿ ಕಾಳುಮೆಣಸು ಬೆಳೆಗೆ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿಲ್ಲ. ಆದರೆ, ಉತ್ತರದ ಸೋಮವಾರಪೇಟೆ, ಶನಿವಾರಸಂತೆ, ಶಾಂತಹಳ್ಳಿ, ಸೂರ್ಲಬ್ಬಿ, ಸುಂಟಿಕೊಪ್ಪ ಮುಂತಾದ ಭಾಗಗಳು ಹೆಚ್ಚು ಕಾಳುಮೆಣಸು ಬೆಳೆಯುವ ಪ್ರದೇಶಗಳಾಗಿದ್ದು, ಪ್ರತಿಕೂಲ ಹವಾಮಾನದಿಂದ ಈ ಭಾಗದ ಬೆಳೆಗಾರರಿಗೆ ನಷ್ಟ ಉಂಟಾಗಿದೆ.
ಮೇ ತಿಂಗಳಿನಿಂದಲೇ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಕೆಲವೆಡೆ ಕಾಳುಮೆಣಸಿನ ಇಡೀ ಬಳ್ಳಿ ಕೊಳೆರೋಗಕ್ಕೆ ತುತ್ತಾಗಿ ನಾಶವಾಗಿದ್ದರೇ ಕೆಲವೆಡೆ ಮೆಣಸಿನ ಚಿಗುರು ಗೊನೆ ಕೊಳೆತು ಉದುರುತ್ತಿದೆ. ಈ ಬಾರಿಯ ಇಳುವರಿ ಕುಸಿಯಲು ಇದು ಕೂಡ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಕಾಳುಮೆಣಸು ಉತ್ಪಾದನೆಯಲ್ಲಿ ಶೇ. ೩೦ರಷ್ಟು ಕುಂಠಿತವಾಗಿದೆ ಎಂದು ಐಸಿಎಆರ್‌ನ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ. ಎಸ್. ಜೆ ಅಂಕೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ:-ಹವಾಮಾನ ಏರುಪೇರಿನಿಂದಾಗಿ ಕಾಳುಮೆಣಸಿಗೂ ಕಂಟಕ
ಜಿಲ್ಲೆಯ ಎಲ್ಲೆಡೆ ಕಾಫಿ ತೋಟಗಳಲ್ಲಿ ಕಾಳುಮೆಣಸು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಒಟ್ಟು ೫೯ ಸಾವಿರದ ೯೬೨ ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸಿನ ಬೆಳೆಯಿದೆ. ಈ ಪೈಕಿ ವಾರ್ಷಿಕವಾಗಿ ಸರಾಸರಿ ೨೪,೬೨೪ ಮೆಟ್ರಿಕ್‌ಟನ್ ಮೆಣಸಿನ ಉತ್ಪಾದನೆ ಮಾಡಲಾಗುತ್ತಿದೆ. ಈ ಬಾರಿ ಶೇ. ೭೦ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ತಡವಾಗಿ ಮರ ಸವರುವಿಕೆ (ನೆರಳು ತೆಗೆಯುವುದು) ಮಾಡಿದವರಿಗೆ ಹೆಚ್ಚು ನಷ್ಟ ಸಂಭವಿಸಿದೆ. ಕೆಲವೆಡೆ ಬಳ್ಳಿಯೇ ಸಂಪೂರ್ಣವಾಗಿ ನಾಶವಾಗಿದ್ದು, ಹೊಸದಾಗಿ ನಾಟಿ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಡಾ. ಅಂಕೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಫಿ ತೋಟಗಳಲ್ಲಿ ನೆರಳು ತೆಗೆಯುವ ಸಮಯ ಕಾಳು ಮೆಣಸು ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿಯೇ ನೆರಳು ತೆಗೆದು ನೀರಾವರಿ ವ್ಯವಸ್ಥೆ ಮಾಡಿಕೊಂಡವರಿಗೆ ಈ ಬಾರಿ ದೊಡ್ಡ ಮಟ್ಟದ ನಷ್ಟ ಸಂಭವಿಸಿಲ್ಲ. ಆದರೆ ಏಪ್ರಿಲ್ ತಿಂಗಳಲ್ಲಿ ನೆರಳು ತೆಗೆದು ಬಿಸಿಲಿಗಾಗಿ ಕಾದವರಿಗೆ ಮೇ ತಿಂಗಳಲ್ಲಿ ಬಿಸಿಲಿಲ್ಲದಾದ ಪರಿಣಾಮ ಹೆಚ್ಚು ಸಮಸ್ಯೆ ಉಂಟಾಗಿದೆ.
ಕಾಯಿಕಟ್ಟುವ ಮೊದಲೇ ಮೆಣಸಿನ ದಾರಗಳು ಉದುರಿಹೋಗಿದ್ದು, ಈಗ ಮತ್ತೆ ಹೊಸ ದಾರಗಳು ಕಾಣಿಸಿಕೊಂಡಿವೆ. ಇಂತಹ ಕಡೆ ಈ ಸಾಲಿನಲ್ಲಿ ಬೆಳೆ ಇಲ್ಲವಾಗಿದೆ. ಹೀಗಾಗಿ ಕೆಲವು ಬೆಳೆಗಾರರು ಗಿಡಗಳನ್ನು ಸಂಪೂರ್ಣವಾಗಿ ತೆಗೆದು ಅಲ್ಪಾವಽಯ ತಳಿಗಳನ್ನು ಬೆಳೆಯುವ ಚಿಂತನೆಯಲ್ಲಿದ್ದಾರೆ.




