Mysore
25
overcast clouds
Light
Dark

ಮೂರು ವರ್ಷ ಕಳೆದರೂ ಸ್ಥಳೀಯ ಸಂಸ್ಥೆಗಳಿಗೆ ಸಿಗದ ಮುಕ್ತಿ

ಮೈಸೂರು: ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆಯೊಂದಿಗೆ ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಜಾರಿಗೆ ತಂದ ಆಶಯ ಇಂದು ನುಚ್ಚು ನೂರಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮುಂದಾಗದ ಕಾರಣ ಚುನಾಯಿತ ಜನಪ್ರತಿನಿಧಿಗಳಿಲ್ಲದೇ ಆಡಳಿತಾಧಿಕಾರಿಗಳೇ ಮೂರು ವರ್ಷಗಳ ಕಾಲ ಆಡಳಿತ ಪೂರೈಸಿದ್ದಾರೆ.

• ಜಿಪಂ, ತಾಪಂ ಮೀಸಲಾತಿ ನಿಗದಿಗೆ ಮೀನ ಮೇಷ ಎಣಿಸುತ್ತಿರುವ ಸರ್ಕಾರ
• ಆಡಳಿತಾಧಿಕಾರಿಗಳ ಆಡಳಿತದಲ್ಲೇ ನಡೆಯುತ್ತಿರುವ ಎಪಿಎಂಸಿ
• ರಾಜಕೀಯ ಕಾರಣಕ್ಕಾಗಿ ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆಗೂ ಕೊಕ್

ಹಲವು ಕಾರಣಗಳಿಂದಾಗಿ ಚುನಾವಣೆಯನ್ನು ಮುಂದೂಡುತ್ತಲೇ ಬಂದ ಪರಿಣಾಮವಾಗಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಐದು ವರ್ಷಗಳ ಅವಧಿಯು ಮುಗಿದ ಬಳಿಕ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಮೇ 8ಕ್ಕೆ ಬರೋಬ್ಬರಿ ಮೂರು ವರ್ಷಗಳಾಗಿದ್ದು, ಸುದೀರ್ಘ ಕಾಲದಲ್ಲಿ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಿರುವುದು ದಾಖಲಾಗಿದೆ. ಈವರೆಗೆ ಅತೀ ಹೆಚ್ಚು ಆರು ತಿಂಗಳೊಳಗೆ ಚುನಾವಣೆ ನಡೆಸಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗುತ್ತಲೇ ಬಂದಿತ್ತಾದರೂ ಮೊದಲ ಬಾರಿಗೆ ನಿರಂತರವಾಗಿ ಮುಂದೂಡುತ್ತಲೇ ಬಂದಿರುವುದರಿಂದ ಜಿಪಂ, ತಾಪಂ ಪ್ರವೇಶ ಮಾಡಬೇಕೆಂದು ಕನಸು ಹೊತ್ತವರಲ್ಲೂ ನಿರಾಶೆ ಉಂಟಾಗಿದೆ.

ನಾನಾ ಕಾರಣಗಳಿಗಾಗಿ ಮೂರು ವರ್ಷಗಳಿಂದ ವಿಳಂಬ: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಪಂ, ತಾಪಂ ಸದಸ್ಯರ ಐದು ವರ್ಷಗಳ ಅವಧಿ ಮುಗಿದ ಬಳಿಕ ಚುನಾವಣೆ ನಡೆಸಬೇಕಿದ್ದ ಹಿಂದಿನ ಬಿಜೆಪಿ ಸರ್ಕಾರ ಕ್ಷೇತ್ರಗಳ ಮರುವಿಂಗಡಣೆ ಮತ್ತು ಸ್ಥಾನಗಳಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಕಾರಣಕ್ಕಾಗಿ ಕರ್ನಾಟಕ ಪಂಚಾಯತ್ ರಾಜ್ ಸೀಮಾನಿರ್ಣಯ ಆಯೋಗವನ್ನು ರಚನೆಮಾಡಿತು. ರಾಜ್ಯ ಚುನಾವಣಾ ಆಯೋಗಕ್ಕೆ ಇದ್ದ ಕ್ಷೇತ್ರಗಳ ಮೀಸಲಾತಿ ನಿಗದಿಯ ಅಧಿಕಾರವನ್ನು ವಾಪಸ್ ಪಡೆದುಕೊಂಡ ಸರ್ಕಾರ ಆಯೋಗಕ್ಕೆ ನೀಡಿತ್ತು. ಇದರಿಂದಾಗಿ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ ಮೊರೆ ಹೋಗಿದ್ದರಿಂದಾಗಿ ವಿಳಂಬವಾಗಿತ್ತು. ನಂತರ, ರಾಜ್ಯ ಸರ್ಕಾರ ಕ್ಷೇತ್ರಗಳ ಪುನರ್ ವಿಂಗಡಣೆ, ಮೀಸಲಾತಿ ನಿಗದಿಪಡಿಸುವ ಹೊಣೆಯನ್ನು ಆಯೋಗಕ್ಕೆ ನೀಡಿ ಅಧಿಸೂಚನೆ ಹೊರಡಿಸಿದ್ದರಿಂದ ಆಯೋಗ ಸುಮ್ಮನಾಗಬೇಕಾಯಿತು.

ನಂತರ, ಸಕಾಲಕ್ಕೆ ಚುನಾವಣೆ ನಡೆಸಲು ಮೀಸಲಾತಿ ಪ್ರಕಟಿಸಬೇಕೆಂದು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರಿಂದಾಗಿ ಸರ್ಕಾರ ಮೂರು ತಿಂಗಳ ಕಾಲಾವಕಾಶ ಪಡೆದುಕೊಂಡಿತ್ತು. ಆದರೆ, ಈ ಹೊತ್ತಿಗೆ ರಾಜ್ಯ ವಿಧಾನಸಭೆ ಚುನಾವಣೆ ಬಂದಿದ್ದರಿಂದ ನೆನಗುದಿಗೆ ಬಿದ್ದಿತು. ನಂತರ, 2023ರಲ್ಲಿ ಚುನಾವಣೆ ನಡೆದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ನಡೆಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಸರ್ಕಾರ ಕ್ಷೇತ್ರಗಳ ಗಡಿ ನಿಗದಿಪಡಿಸಿ ಸ್ಥಾನಗಳನ್ನು ಹಂಚಿಕೆ ಮಾಡಲು ಆರು ತಿಂಗಳ ಸಮಯ ತೆಗೆದುಕೊಂಡಿತ್ತು. ಬಳಿಕ ಆಯಾಯ ಜಿಲ್ಲೆಗಳ ಸದಸ್ಯ ಸ್ಥಾನಗಳಿಗೆ ತಕ್ಕಂತೆ ಮೀಸಲಾತಿ ಹಂಚಿಕೆ ಮಾಡಿತೇ ಹೊರತು ಮೀಸಲಾತಿ ಪ್ರಕಟಿಸಿಲ್ಲ. ಹೀಗಾಗಿ, ಚುನಾವಣಾ ಆಯೋಗವು ಮತ್ತೆ ಮೀಸಲಾತಿ ನಿಗದಿಪಡಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎನ್ನುವಂತೆ ಮತ್ತೆ ಅರ್ಜಿ ಸಲ್ಲಿಸಿದ್ದರಿಂದ ಮೂರು ತಿಂಗಳುಗಳ ಸಮಯ ತೆಗೆದುಕೊಂಡಿತ್ತಾದರೂ ಈವರೆಗೆ ಅಂದರೆ ಆರು ತಿಂಗಳುಗಳು ಕಳೆದರೂ ಕೂಡ ಮೀಸಲಾತಿ ಪ್ರಕಟಿಸಿಲ್ಲ.

ಹೀಗಾಗಿ, ಮತ್ತೆ ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಕದ ತಟ್ಟಲು ಸಜ್ಜಾಗುತ್ತಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಮೇ 8ರಂದು ಜಿಪಂಗೆ ರಾಜ್ಯಮಟ್ಟದ ಹಿರಿಯ ಐಎಎಸ್ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ, ತಾಪಂಗಳಿಗೆ ಕೆಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಿ 2024ಕ್ಕೆ ಮೂರು ವರ್ಷಗಳು ಕಳೆದಿವೆ. ಈಗ ಮತ್ತೆ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ರಾಜ್ಯ ಸರ್ಕಾರ ಯಾವಾಗ ಚುನಾವಣೆನಡೆಸಲಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಎಪಿಎಂಸಿಗೂ ಇಲ್ಲ ಚುನಾವಣೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೆಶಕರ ಅವಧಿ ಮುಗಿದು ಎರಡು ವರ್ಷಗಳು ಕಳೆದರೂ ಚುನಾವಣೆ ನಡೆಸಿಲ್ಲ. 2021ರ ಫೆಬ್ರವರಿ 21ರಿಂದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಆಡಳಿತ ನಡೆಯುತ್ತಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಇನ್ನಿತರೆ ವಿಚಾರಗಳಿಂದ ಸದ್ದು ಮಾಡಿದ್ದರೂ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸುವ ಗೋಜಿಗೆ ಸರ್ಕಾರ ಕೈ ಹಾಕಿಲ್ಲ. ಇದರಿಂದಾಗಿ ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಹಾವಳಿಯೇ ತುಸು ಜಾಸ್ತಿ ಯಾಗುವಂತಾಗಿದೆ.

ರಾಜಕೀಯ ಕಾರಣಕ್ಕಾಗಿ ಬ್ರೇಕ್: ಕಳೆದ ನವೆಂಬರ್ 17ರಂದು ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಸಿಡಿಸಿಸಿ ಬ್ಯಾಂಕ್) ಅವಧಿ ಮುಗಿದ ಮೇಲೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿತ್ತಾದರೂ ರಾಜಕೀಯ ಪ್ರಭಾವದಿಂದ ಮುಂದೂಡಲಾಗಿದೆ. ಸಹಕಾರಿ ಧುರೀಣ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಆಂತರಿಕ ಕದನದಿಂದ ಈ ಚುನಾವಣೆಯ ಮೇಲೂ ಗ್ರಹಣ ಹಿಡಿದಿದೆ. ಪ್ರಾಬಲ್ಯದಿಂದ ಎಂಸಿಡಿಸಿಸಿ ಬ್ಯಾಂಕ್ ಆಡಳಿತವನ್ನು ಬಿಡಿಸಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹಲವರು ಪ್ರಯತ್ನ ನಡೆಸುತ್ತಿದ್ದು, ಇದರಿಂದಾಗಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಮುಂದೂಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಮೇಲೆ ಮತ್ತೆ ಸದ್ದು ಮಾಡುವುದು ಗ್ಯಾರಂಟಿಯಾಗಿದೆ.

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಆಯೋಗ ಸದಾ ಸಿದ್ಧವಿದೆ. ಸರ್ಕಾರ ಮೀಸಲಾತಿ ನಿಗದಿಪಡಿಸಬೇಕಿದೆ. ಹೈಕೋರ್ಟ್‌ನಲ್ಲಿ ಮೂರು ತಿಂಗಳ ಸಮಯ ತೆಗೆದುಕೊಂಡಿತ್ತಾದರೂ ನಂತರ ಮತ್ತೆ ಸಮಯ ಕೇಳಿತು. ಆಗಿಂದಾಗ್ಗೆ ಸಮಯ ಪಡೆಯುತ್ತಲೇ ಬಂದಿರುವುದರಿಂದ ನಾವು ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಮೀಸಲಾತಿ ನಿಗದಿಪಡಿಸುವ ವಿಚಾರದಲ್ಲಿ ಮತ್ತೆ ನ್ಯಾಯಾಲಯದ ಗಮನಕ್ಕೆ ತರಲು ಮುಂದಾಗಿದ್ದೇವೆ.
ಡಾ.ಬಿ.ಬಸವರಾಜು, ಆಯುಕ್ತರು, ರಾಜ್ಯ ಚುನಾವಣಾ ಆಯೋಗ

ರಾಜ್ಯ ಸರ್ಕಾರ ತಕ್ಷಣವೇ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಂತೆ ಚುನಾವಣೆ ನಡೆಸಲು ಮುಂದಾಗಬೇಕು. ಸ್ಥಳೀಯ ಸಂಸ್ಥೆಗಳಿಗೆ ಬರುವ ಅನುದಾನ ಹಂಚಿಕೆಯು ನಮ್ಮಿಂದ ಕೈ ತಪ್ಪುತ್ತದೆ ಎನ್ನುವ ಕಾರಣಕ್ಕಾಗಿ ಒಳಗೊಳಗೆ ವಿರೋಧ ಮಾಡಿ ನಿಧಾನ ಮಾಡಲಾಗುತ್ತಿದೆ. ಮೂರು ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ.

ಕೆರೆಹಳ್ಳಿ ನವೀನ್, ರಾಜ್ಯಾಧ್ಯಕ್ಷ, ಜಿಪಂ ಸದಸ್ಯರ ಒಕ್ಕೂಟ