Mysore
19
overcast clouds
Light
Dark

“ಮನೆ ಮನೆಗೆ ರಂಗಾಯಣ ತಲುಪಿಸುವ ಆಶಯ”

ಆಂದೋಲನ’ ನಡೆಸಿದ ಸಂದರ್ಶನದಲ್ಲಿ ಸತೀಶ್ ತಿಪಟೂರು ಇಂಗಿತ

ಚಂದು ಸಿ.ಎನ್
ಮೈಸೂರು: ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮಗಳ ನಡುವೆ ರಂಗಭೂಮಿಯನ್ನು ಉಳಿಸಿ, ಬೆಳೆಸುವುದು ಸವಾಲಿನ ಕೆಲಸ. ಇದಕ್ಕೆ ಹೊಸ ನುಡಿಗಟ್ಟು ಬೇಕಿದೆ. ಬಿ.ವಿ.ಕಾರಂತರು ಕಟ್ಟಿದ ಈ ರಂಗಾಯಣದಲ್ಲಿ ಯುಗಕ್ಕೆ ಬೇಕಾದಂತಹ ಪ್ರಯೋಗಗಳನ್ನು ಸಿದ್ಧಪಡಿಸಬೇಕಿದೆ. ಮನೆ ಮನೆಗೆ ರಂಗಾಯಣವನ್ನು ತಲುಪಿಸುವ ಆಶಯ ಇದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಅಭಿಪ್ರಾಯಪಟ್ಟಿದ್ದಾರೆ. ‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಅವರು ರಂಗಾಯಣದ ಬಗ್ಗೆ ತಮ್ಮದೇ ಆದ ಚಿಂತನೆಗಳು, ಮುಂಗಾಣ್ಣೆಯನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ರಂಗಾಯಣ ನಿರ್ದೇಶಕರಾಗಿ ನೇಮಕವಾಗಿದ್ದೀರಿ. ಈ ಬಗ್ಗೆ ನಿಮ್ಮ ಅನಿಸಿಕೆ?
ಸತೀಶ್ ತಿಪಟೂರು: ರಂಗಾಯಣ ನಿರ್ದೇಶಕ ಸ್ಥಾನವನ್ನು ಹುದ್ದೆಯೆಂದು ನಾನು ಭಾವಿಸಿಲ್ಲ. ಇದೊಂದು ಸಾಮಾಜಿಕ ಜವಾಬ್ದಾರಿ ಎಂದು ಭಾವಿಸಿದ್ದೇನೆ.

• ಆಂದೋಲನ: ರಂಗಭೂಮಿ ಬಗ್ಗೆ ನಿಮಗೆ ಆಸಕ್ತಿ ಬೆಳೆದಿದ್ದು ಹೇಗೆ?

ಸತೀಶ್‌ ತಿಪಟೂರು: ತುಮಕೂರು ಜಿಲ್ಲೆಯ ತಿಪಟೂರು ನನ್ನೂರು. ರಂಗಭೂಮಿಯಲ್ಲಿ ನಾನು 25-30ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದೇನೆ. ತಿಪಟೂರಿನಲ್ಲಿ ಭೂಮಿ ಎಂಬ ರಂಗಶಾಲೆ ತೆರೆದು ರಂಗಭೂಮಿಗೆ ಕಾಣಿಕೆ ನೀಡಿದ್ದೇನೆ. ನನ್ನ ಮನೆ ಇದ್ದಿದ್ದೇ ರಂಗಾಯಣದ ಎದುರು. ನಾಟಕಗಳನ್ನು ನೋಡಿಕೊಂಡೇ ಬೆಳೆದವನು ನಾನು, ವರ್ಷಕ್ಕೆ 50 ರಿಂದ 60 ನಾಟಕಗಳನ್ನು ನೋಡುತ್ತಿದ್ದೆ. ನಮ್ಮದು ಕಲಾವಿದರ ಕುಟುಂಬ, ಅಜ್ಜಿ, ತಾಯಿ ಕೂಡ ಕಲೆಯ ಬಗ್ಗೆ ಆಸಕ್ತಿ ಹೊಂದಿದವರು. ನನ್ನ ಇಬ್ಬರು ಸಹೋದರಿಯರೂ ನೃತ್ಯ ತರಬೇತಿ ಪಡೆಯುತ್ತಿದ್ದರು. ಹೀಗಾಗಿ ಮನೆಯಿಂದಲೇ ರಂಗಭೂಮಿಯ ಆಸಕ್ತಿ ಬೆಳೆದು ಬಂದಿದೆ.

ಆಂದೋಲನ: ಮೈಸೂರು ರಂಗಾಯಣಕ್ಕೆ ತನ್ನದೇ ಆದ ವರ್ಚಸ್ಸು ಇದೆ. ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹೊಸ ಯೋಜನೆಗಳು; ಯೋಚನೆಗಳು ಇವೆಯೇ?

ಸತೀಶ್ ತಿಪಟೂರು: ಹೌದು. ಮೈಸೂರು ರಂಗಾಯಣಕ್ಕೆ ತನ್ನದೇ ಆದ ಇತಿಹಾಸ ಇದೆ. ರಂಗಾಯಣಕ್ಕೆ ಬಿ.ವಿ ಕಾರಂತರ ನಂತರ ಹಲವಾರು ನಿರ್ದೇಶಕರು ಬಂದು ಅವರವರ ಕಾಲಕ್ಕೆ ಬೇಕಾದ್ದನ್ನು ನಿರ್ಮಿಸಿ ಹೋಗಿದ್ದಾರೆ. ಇದೀಗ, ರಂಗಭೂಮಿಗೆ ಚಾಲೇಂಜ್ ಇರುವ ಕಾಲ. ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮಗಳ ಪೈಪೋಟಿ ನಡುವೆ, ರಂಗಭೂಮಿಯನ್ನು ಉಳಿಸಿ ಬೆಳೆಸುವುದಕ್ಕೆ ಹೊಸ ನುಡಿಗಟ್ಟನ್ನು ಕಟ್ಟಬೇಕಿದೆ. ಕಲಾವಿದರು ಉಳಿದರೆ ರಂಗಭೂಮಿ ಉಳಿಯುತ್ತದೆ. ಇದನ್ನೇ ಮಾಡುತ್ತೇನೆ.

ಆಂದೋಲನ: ರಂಗತಜ್ಞ ಬಿ.ವಿ.ಕಾರಂತರ ಕನಸಿನ ಕೂಸು ರಂಗಾಯಣ. ಕಾರಂತರ ಕನಸುಗಳನ್ನು ಇಲ್ಲಿನ ರಂಗಪ್ರಯೋಗಗಳಲ್ಲಿ ಸಾಕಾರಗೊಳಿಸುವುದು ಸವಾಲು ಅನಿಸುತ್ತದೆಯೇ?

ಸತೀಶ್ ತಿಪಟೂರು: ಬಿ.ವಿ ಕಾರಂತರು ಒಂದು ಕಾಲದಲ್ಲಿ ಬಹು ದೊಡ್ಡ ರಂಗಭೂಮಿ ಕಟ್ಟಿದ್ದಾರೆ. ಈ ಯುಗ ರಂಗಭೂಮಿಯಿಂದ ಏನನ್ನೋ ಡಿಮ್ಯಾಂಡ್ ಮಾಡುತ್ತಿದೆ. ಅದನ್ನು ಅರಿತು ತಕ್ಕ ರಂಗ ಪ್ರಯೋಗಗಳನ್ನು ಸಿದ್ಧಪಡಿಸಬೇಕಿದೆ. ಕಾಲಕ್ಕೆ ತಕ್ಕಂತೆ ರಂಗ ಭಾಷೆ ರೂಪಿಸಬೇಕು. ರಂಗಭೂಮಿ ನಿರಂತರ ನಡೆ. ರಂಗಭೂಮಿ ಎಲ್ಲ ಕಾಲಕ್ಕೂ ತನಗೆ ಬೇಕಾದುದನ್ನು ತಾನೇ ರೂಪಿಸಿಕೊಳ್ಳುತ್ತದೆ. ನಾವು ಅದರ ಒಳಗೆ ತೊಡಗಿಸಿ ಕೊಳ್ಳುತ್ತೇವೆ. ಜೊತೆಗೆ ಅದನ್ನು ಗ್ರಹಿಸುವ ಶಕ್ತಿ ನಮಗೆ ಬೇಕಷ್ಟೆ.

• ಆಂದೋಲನ: ರಂಗಾಯಣಕ್ಕೆ ಹೊಸತನ ನೀಡುವ ನಿಟ್ಟಿನಲ್ಲಿ ನಾಟಕಗಳ ಪ್ರದರ್ಶನಕ್ಕೆ ಆದ್ಯತೆ ಸಿಗಲಿದೆಯೇ?

ಸತೀಶ್‌ ತಿಪಟೂರು: ನಾಟಕವೇ ರಂಗಾ ಯಣಕ್ಕೆ ಪ್ರಮುಖವಾದದು. ಪ್ರಸ್ತುತವಾದ ಹೊಸ ವಿಷಯ ಇಟ್ಟುಕೊಂಡು ನಾಟಕಗಳನ್ನು ರಂಗ ವೇದಿಕೆ ಮೇಲೆ ತರಬೇಕು. ಮನೆಮನೆಗೆ ರಂಗಾಯಣ ವನ್ನು ತಲುಪಿಸುವುದು ನನ್ನ ಆಶಯ. ರಂಗಭೂಮಿ ಕೇವಲ ಮನರಂಜನೆ ಯಲ್ಲ. ಅದೊಂದು ಪ್ರಜ್ಞೆಯನ್ನು ವಿಸ್ತರಿಸುವ ಸಶಕ್ತ ಮಾಧ್ಯಮವನ್ನಾಗಿ ರೂಪಿಸಬೇಕು.

• ಆಂದೋಲನ: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಎಲ್ಲರನ್ನೂ ಒಳಗೊಳ್ಳುವ ಉತ್ಸವವನ್ನಾಗಿ ಮಾಡುವ ಚಿಂತನೆ ಇದೆಯೇ?

ಸತೀಶ್‌ ತಿಪಟೂರು: ಖಂಡಿತ. ನಮ್ಮ ಆಲೋಚನೆಯೇ ಬಹುತ್ವ. ಬಹುತ್ವ ಮತ್ತು ಬಹುಜನರನ್ನು ಒಳಗೊಳ್ಳದ ರಂಗಭೂಮಿ ಅರ್ಥಪೂರ್ಣವಾಗಿಲ್ಲ ಎಂದರ್ಥ. ರಂಗಭೂಮಿ ಎಲ್ಲರನ್ನೂ ಒಳಗೊಳ್ಳಬೇಕು. ಖಂಡಿತ ವಾಗಿಯೂ ಎಲ್ಲರನ್ನೂ ಒಳಗೊಳ್ಳುವ ರಂಗಭೂಮಿಯನ್ನು ಕಟ್ಟುತ್ತೇವೆ. ರಂಗಭೂಮಿಯೇ ಸಹೃದತೆಯ ಸಮೂಹ.

ಆಂದೋಲನ: ರಂಗಾಯಣಕ್ಕೆ ಯುವ ಕಲಾವಿದರ ಅವಶ್ಯಕತೆ ಇದೆ ಅನಿಸುವುದಿಲ್ಲವೇ?

ಸತೀಶ್ ತಿಪಟೂರು: ಯುವ ಕಲಾವಿದರು ಬೇಕು. ಮೊನ್ನೆಯಷ್ಟೆ 16 ಜನ ಯುವಕರನ್ನ ತೆಗೆದುಕೊಂಡಿದ್ದೇವೆ. ರಂಗಾಯಣದ ಹಿರಿಯರು ಆ ಹೊಸ ಯುವಕರಿಗೆ ತಮ್ಮ ಅನುಭವಗಳನ್ನು ಹೇಳಿಕೊಡುತ್ತಿದ್ದಾರೆ. ಯುವಕರನ್ನು ಕಟ್ಟುವುದು ರಂಗಭೂಮಿಯ ಆದ್ಯತೆ. ಯುವ ಸಮುದಾಯಕ್ಕೆ ರಂಗಾಯಣದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ.
ಈಗ ಬಂದಿರುವ ಯುವ ಕಲಾವಿದರೆಲ್ಲ ಬೇರೆ ಬೇರೆ ವಿಷಯದಲ್ಲಿ ಪದವಿ ಪಡೆದವರು. ಅವರನ್ನು ನೋಡಿದಾಗ ಅವರು, ಏನನ್ನೋ ಕಳೆದುಕೊಳ್ಳುತ್ತಿದ್ದಾರೆ. ಅದನ್ನು ಕಂಡುಕೊಳ್ಳಲು ಇಲ್ಲಿಗೆ ಬಂದಿದ್ದಾರೆ ಅನಿಸುತ್ತದೆ.

ಆಂದೋಲನ: ವೃತ್ತಿಪರ ಅಥವಾ ಹವ್ಯಾಸಿ ಕಲಾವಿದರನ್ನು ರಂಗಾಯಣ ಯಾವ ರೀತಿಯಲ್ಲಿ ಒಳಗೊಳ್ಳಲಿದೆ?
ಸತೀಶ್‌ ತಿಪಟೂರು: ಹವ್ಯಾಸಿ ರಂಗಭೂಮಿಯು ರಂಗಭೂಮಿಯನ್ನು ಸಶಕ್ತಗೊಳಿಸುವ ಕೆಲಸ ಮಾಡುತ್ತಿದೆ. ರಂಗಭೂಮಿಯನ್ನು ಕಟ್ಟಿರುವುದೇ ಹವ್ಯಾಸಿ ತಂಡಗಳು ಎಂದರೆ ಉತ್ಪ್ರೇಕ್ಷೆಯಾಗದು.

• ಆಂದೋಲನ: ಮೈಸೂರಿನ ರಂಗಾಸಕ್ತರ ಚಿಂತನೆಗಳು, ನಿರೀಕ್ಷೆಗಳನ್ನು ಅರಿಯುವ ಪ್ರಯತ್ನ ಮಾಡಿದ್ದೀರಾ?

ಸತೀಶ್‌ ತಿಪಟೂರು: ಈಗಷ್ಟೆ ಬಂದಿದ್ದೇನೆ. ಖಂಡಿತವಾಗಿಯೂ ಇಲ್ಲಿನ ರಂಗಾಸಕ್ತರನ್ನು ಭೇಟಿ ಮಾಡಿ ಅವರ ಜೊತೆ ಸಮಾಲೋಚನೆ ನಡೆಸುತ್ತೇನೆ. ಅವರ ಸಲಹೆ ಪಡೆದು ರಂಗಾಯಣವನ್ನು ಉನ್ನತೀಕರಿಸುವ ಪ್ರಯತ್ನ ಮಾಡುತ್ತೇನೆ.

ಆಂದೋಲನ: ರಂಗಾಯಣದ ನಿರ್ದೇಶಕರು, ಕಲಾವಿದರ ನಡುವೆ ಸಂಬಂಧ ಹೇಗಿರಬೇಕು ಅಂತ ಆಶಿಸುತ್ತೀರಾ?
ಸತೀಶ್ ತಿಪಟೂರು: ವಿದ್ಯಾರ್ಥಿಗಳು, ಕಲಾವಿದರು, ನಿರ್ದೇಶಕರು ಎಲ್ಲರೂ ರಂಗಕರ್ಮಿ ಗಳೇ. ನಾವೆಲ್ಲ ಒಂದೇ ರಂಗಕಾಯಕ ಮಾಡುತ್ತಿದ್ದೇವೆ. ನಾಟಕದಲ್ಲಿ ಬೇರೆ ಬೇರೆ ಪಾತ್ರ ಮಾಡಿದಂತೆ, ಇಲ್ಲಿ ನಮ್ಮ ನಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರೆ ಅಷ್ಟೇ ಸಾಕು. ಸಂಬಂಧದ ಒಳಗೆ ಸಹೃದಯತೆ ಇದೆ.