ಅರ್ಹರು ಮತ ಹಕ್ಕು ಕಳೆದುಕೊಳ್ಳುವ ಆತಂಕ; ಚುನಾವಣಾ ಆಯೋಗಕ್ಕೆ ‘ಜಾಗೃತ ಕರ್ನಾಟಕ’ ಸಮಯೋಚಿತ ಪ್ರಶ್ನೆ
ಕರ್ನಾಟಕದಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿರುವ ಲಕ್ಷಾಂತರ ಅರ್ಹ ಮತದಾರರಿಗೆ ಅಗತ್ಯವಿರುವ ಸ್ಪಷ್ಟೀಕರಣಗಳನ್ನು ಲಿಖಿತವಾಗಿ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ‘ಜಾಗೃತ ಕರ್ನಾಟಕ’ ಸಂಘಟನೆಯು ಆಗ್ರಹಿಸಿದೆ. ಅದರ ಪೂರ್ಣಪಾಠ ಇಲ್ಲಿದೆ.
ಕಳೆದ ಹದಿನೈದು ದಿನಗಳಿಂದ ನಾವು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಸ್ಪಷ್ಟೀಕರಣ ಕೋರಿ ಲಿಖಿತವಾಗಿ ತಮಗೆ ಐದು ಪತ್ರಗಳನ್ನು ಕೊಟ್ಟಿದ್ದೇವೆ. ಆದರೆ ಒಂದಕ್ಕೂ ಸ್ಪಷ್ಟೀಕರಣ ಬಂದಿಲ್ಲ. ತಳಮಟ್ಟದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಹೊಮ್ಮಿದ್ದ ಆ ಪತ್ರಗಳಲ್ಲಿ ಕೆಲವಕ್ಕೆ ತಮ್ಮ ಸಂಸ್ಥೆಯಲ್ಲಿ ಮೌಖಿಕವಾಗಿ ನೀಡಿದ ಸಮಜಾಯಿಷಿಗಳು ಸಮಾಧಾನಕರವಾಗಿರಲಿಲ್ಲ. ಅಷ್ಟೇ ಅಲ್ಲದೇ, ಈ ಯಾವ ಸಮಜಾಯಿಷಿಗಳೂ ತಳಮಟ್ಟದಲ್ಲಿ ಬಿಎಲ್‌ಓಗಳಿಗೆ ತಲುಪಿಲ್ಲದೇ ಇರುವುದರಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳು ಹಾಗೆಯೇ ಮುಂದುವರೆದಿವೆ. ಲಿಖಿತ ಸಮಜಾಯಿಷಿಯನ್ನು ನಾವು ಕೋರಿದಾಗಲೂ ನಿಮ್ಮಿಂದ ಉತ್ತರ ಬಂದಿಲ್ಲ.
೧) ಕೆಲವೆಡೆ ೨೦೦೨ರ ಮತಪಟ್ಟಿಯಲ್ಲಿ ಇಡೀ ಬೂತ್‌ಗಳೇ ವೆಬ್ ಸೈಟ್‌ನಲ್ಲಿ ಇಲ್ಲ. ಅದರ ವಿವರವನ್ನು ನಾವು ಕೊಟ್ಟಿದ್ದೇವೆ. ಆ ಸಂಬಂಧ ನಿಮ್ಮಿಂದ ಯಾವ ಸ್ಪಷ್ಟೀಕರಣವೂ ಇದುವರೆಗೆ ಬಂದಿಲ್ಲ. ಯಲಹಂಕ ಮತ್ತು ವರ್ತೂರು ಎರಡೇ ಕ್ಷೇತ್ರಗಳಲ್ಲಿ ಅಂತಹ ೧೦೦ ಬೂತ್‌ಗಳ ಪಟ್ಟಿಯಿದೆ. ಇಂತಹವು ಇನ್ನೂ ಎಷ್ಟೋ ಕ್ಷೇತ್ರಗಳಲ್ಲಿಇರಬಹುದು. ಇದು ಚುನಾವಣಾ ಆಯೋಗದಿಂದ ಆಗಿರುವ ಸಮಸ್ಯೆ. ಇದಕ್ಕೆ ಜನರಿಗೆ ತೊಂದರೆ ಕೊಡದೇ ಯಾವ ರೀತಿಯ ಪರಿಹಾರ ಒದಗಿಸುತ್ತೀರಿ?
೨) ಮುದ್ರಿತ ಹಳೆಯ ಮತದಾರರ ಪಟ್ಟಿಯಲ್ಲಿ ಹೆಸರು ಇರುತ್ತದೆ. ಆದರೆ, ವೆಬ್‌ಸೈಟ್‌ನಲ್ಲಿ ೨೦೦೨ರ ಮತದಾರರ ಪಟ್ಟಿಯಲ್ಲಿ ಆ ಹೆಸರು ಸಿಗುವುದಿಲ್ಲ. ಬಿಎಲ್‌ಓಗೂ ಅವರ ಹೆಸರು ಸಿಗುತ್ತಿಲ್ಲ. ಇದು ಮತದಾರರ ತಪ್ಪಲ್ಲ. ಚುನಾವಣಾ ಆಯೋಗದ ತಾಂತ್ರಿಕ ಸಮಸ್ಯೆ. ಇಂಥವರು ಏನು ಮಾಡಬೇಕು?
೩) ದೇವದಾಸಿಯರ ಮಕ್ಕಳು ಹಲವೆಡೆ ತಂದೆಯ ಹೆಸರನ್ನು ಹೊಂದಿರುವುದಿಲ್ಲ. ೨೦೦೨ರ ನಂತರ ಮತದಾರರಾಗಲು ಅರ್ಹತೆ ಪಡೆದುಕೊಂಡವರು, ಎನ್ಯುಮರೇಷನ್ ಫಾರಂನಲ್ಲಿ ತಂದೆಯ ಹೆಸರು ಹೇಗೆ ಬರೆಯಬೇಕು? ಇದರ ಬಗ್ಗೆ ತಮ್ಮ ಕಚೇರಿಯಲ್ಲಿ ಕೇಳಿದರೆ ಘೆಅ ಎಂದು ಬರೆಯಲು ಹೇಳಿದರು. ಆದರೆ, ಘೆಅ ಎಂದು ಬರೆಯಬಹುದೆಂದು ಯಾವ ಬಿಎಲ್‌ಓಗೂ ಗೊತ್ತಿಲ್ಲ. ಅವರು ಹೆಸರು ರಿಜಿಸ್ಟರ್ ಮಾಡಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಅಂತಹ ಮತದಾರರು ಏನು ಮಾಡಬೇಕು?
೪) ೨೦೦೨ರ ಮತಪಟ್ಟಿಯಲ್ಲಿ ತಮ್ಮ ಸ್ವಂತ ವಿವರ ಇಲ್ಲದವರು, ಬಲಗಡೆ ಇರುವ ಕಾಲಂನಲ್ಲಿ ತುಂಬಬೇಕಾದಾಗ, ಸಂಬಂಧಿಯ ವಿವರವನ್ನಷ್ಟೇ ತುಂಬಬೇಕು ಎಂದು ತಮ್ಮ ಕಚೇರಿಯಲ್ಲಿ ಹೇಳಿದರು. ಹಾಸನ ಜಿಲ್ಲಾಧಿಕಾರಿಗಳು ಈ ಸಂಬಂಧ ರೆಕಾರ್ಡ್ ಮಾಡಿರುವ ವಿಡಿಯೋದಲ್ಲೂ ಅದನ್ನೇ ಹೇಳಿದ್ದಾರೆ. ಆ ಸಂಬಂಧಿಯ ಜೊತೆಗೆ ಇರುವ ‘ಸಂಬಂಧ’ವನ್ನು ೨೦೦೨ರ ಮತಪಟ್ಟಿಯಲ್ಲಿ ಇರುವಂತೆಯೇ ತುಂಬಬೇಕು ಎಂದು ಇವರೆಲ್ಲರೂ ಹೇಳಿದರು. ಆದರೆ, ೨೦೦೨ರಲ್ಲಿ ತಾಯಿ ಮಾತ್ರ ಇದ್ದಾಗ, ತಾಯಿಯ ಸಂಬಂಧಿಯ ಹೆಸರು ಆಕೆಯ ಗಂಡನದ್ದು ಇರುತ್ತದೆ. ಆದರೆ, ಆನ್‌ಲೈನ್‌ನಲ್ಲಿ ತುಂಬಿದಾಗ ‘ಗಂಡ’ ಎನ್ನುವ ಸಂಬಂಧದ option ನನ್ನೇ ತೋರಿಸುವುದಿಲ್ಲ ಎಂಬುದನ್ನು ನಾವು ವಿವರಿಸಿದ್ದೆವು. ಇದುವರೆಗೂ ಅದರ ಬಗ್ಗೆ ಸ್ಪಷ್ಟೀಕರಣ ಸಿಕ್ಕಿಲ್ಲ.
೫) ಇತ್ತೀಚಿನ ಚುನಾವಣಾ ಗುರುತಿನ ಚೀಟಿಯೂ ಇದೆ; ೨೦೨೪ರಲ್ಲಿ ವೋಟನ್ನೂ ಹಾಕಿದ್ದಾರೆ. ಆದರೆ, ಅವರ ಎನ್ಯುಮರೇಷನ್ ಫಾರಂ ಬಂದಿಲ್ಲ. ಅದೇ ಮನೆಯಲ್ಲಿ ಉಳಿದವರದ್ದು ಬಂದಿರುತ್ತದೆ. ಇವರಿಗೆ ಹೊಸದಾಗಿ ಫಾರಂ ನಂ.೬ ತುಂಬಿ ಎಂದು ಸುಲಭವಾಗಿ ಹೇಳಲಾಗುತ್ತಿದೆ. ಆದರೆ, ಚುನಾವಣಾ ಆಯೋಗದ ತಪ್ಪಿಗೆ ಮತದಾರರೇಕೆ ಹೆಚ್ಚಿನ ಕೆಲಸ ಮಾಡಬೇಕು?
೬) ಮತಪಟ್ಟಿಯಲ್ಲಿ ಕ್ರಮ ಸಂಖ್ಯೆ ಒಂದಿರುತ್ತದೆ. ಆದರೆ, ವೆಬ್ ಸೈಟ್‌ನಲ್ಲಿ ಮ್ಯಾಪಿಂಗ್ ಮಾಡಲು ಹೊರಟಾಗ ಅಲ್ಲಿ ಕ್ರಮಸಂಖ್ಯೆ ಇನ್ನೊಂದಿರುತ್ತದೆ. ನಿರ್ದಿಷ್ಟ ಉದಾಹರಣೆಗಳು ನಮ್ಮ ಬಳಿಯಿವೆ. ಇಂತಹ ಪ್ರಕರಣಗಳಲ್ಲಿ ಏನು ಮಾಡಬೇಕು?
೭) ತಂದೆ-ತಾಯಿಯಿಂದ ದೂರ ಇರುವ ಎಷ್ಟೋ ಸಮುದಾಯಗಳಿವೆ. ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತೆಯರು, ಅಂತರ್ಜಾತಿ ವಿವಾಹವಾದವರು… ಇಂಥವರು ೧೯೮೭ರ ನಂತರ ಹುಟ್ಟಿದ್ದರೆ, ಅವರ ಹೆಸರು ಇಲ್ಲವಾದಾಗ, ಅವರವರ ತಂದೆ-ತಾಯಿಯ ದಾಖಲೆಯನ್ನು ಅವರು ತರಲು ಸಾಧ್ಯವಿಲ್ಲ. ಅವರೇನು ಮಾಡಬೇಕು?
೮) ಅಲೆಮಾರಿ ಸಮುದಾಯಗಳಿಗೆ ಸೇರಿದ ಲಕ್ಷಾಂತರ ಜನರಿದ್ದಾರೆ. ಅವರಲ್ಲಿ ಹೆಚ್ಚಿನವರು ೨೦೦೨ರ ದಾಖಲೆಗಳನ್ನು ಹೊಂದಿಲ್ಲ. ಈಗ ಹೊಂದಿಸಬೇಕೆಂದರೂ ಸಾಧ್ಯವಿಲ್ಲ. ಒಂದು ವೇಳೆ ಸರ್ಕಾರದಿಂದ ಸಿಗುವ ಹೊಸ ದಾಖಲೆ ಪಿಆರ್‌ಸಿ ಕೊಟ್ಟರೂ, ಅವರ ಮೃತ ತಂದೆ-ತಾಯಿಗಳ ದಾಖಲೆ (೧೯೮೭ರ ನಂತರ ಹುಟ್ಟಿರುವವರು) ಒದಗಿಸುವುದು ಹೇಗೆ ಸಾಧ್ಯ? ಅವರೇನು ಮಾಡಬೇಕು?
೯) ಹೆಸರು ಬದಲಿಸಿಕೊಂಡವರು, ಮದುವೆಯಾದ ನಂತರ ಸರ್‌ನೇಮ್ ಬದಲಾದ ಮಹಿಳೆಯರ ಹೆಸರುಗಳು ಹೊಂದಿಕೆ ಯಾಗುವುದಿಲ್ಲ. ಈ ದೇಶದ ಪರಂಪರೆಯ ಭಾಗವೇ ಆಗಿಬಿಟ್ಟಿರುವ ಈ ವಿದ್ಯಮಾನದ ಕುರಿತು ಇದುವರೆಗೂ ಒಂದೇ ಒಂದು ಸ್ಪಷ್ಟನೆ ಚುನಾವಣಾ ಆಯೋಗದಿಂದ ಬಂದಿಲ್ಲ. ಇದಕ್ಕೇನು ಸ್ಪಷ್ಟನೆ?
೧೦) ಅನಾಥಾಶ್ರಮದಲ್ಲಿದ್ದು ಮದುವೆಯಾದವರು ಅಥವಾ ಸ್ವತಂತ್ರವಾಗಿ ಜೀವನ ಮಾಡುತ್ತಿರುವವರ ಹೆಸರು ೨೦೦೨ರ ನಂತರ ಸೇರಿಕೊಂಡಿದ್ದರೆ, ಅವರು ಯಾರ ಜೊತೆ ಮ್ಯಾಪ್ ಮಾಡಿಕೊಳ್ಳಬೇಕು? ಅಂಥವರು ಅನಾಥಾಶ್ರಮದ ವಾರ್ಡ್‌ನಿಂದ ಸರ್ಟಿಫಿಕೇಟ್ ಪಡೆದು ಮ್ಯಾಪ್ ಮಾಡಬಹುದೆಂದು ನಿಮ್ಮ ಕಚೇರಿಯಲ್ಲಿ ಹೇಳುತ್ತಾರೆ. ಇದು ಬಿಎಲ್‌ಓ, ಇಆರ್‌ಓಗಳಿಗೂ ಗೊತ್ತಿಲ್ಲ. ಇದು ನಿಜಕ್ಕೂ ಅಧಿಕೃತವೇ?
೧೧) ರಾಜ್ಯ ಸರ್ಕಾರವು ಇತ್ತೀಚೆಗೆ ಶಾಶ್ವತ ನಿವಾಸಿ ದೃಢೀಕರಣ ಪತ್ರ ಕೊಡಲು ಅಭಿಯಾನ ನಡೆಸಲು ಸೂಚಿಸಿದೆ. ಆದರೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ಕರಡು ಮತದಾರರ ಪಟ್ಟಿ ಬಂದಾಗ ನಿಯಮಗಳ ಪ್ರಕಾರ ಈ ದಾಖಲೆ ಊರ್ಜಿತವೇ ಎಂಬುದನ್ನು ನೋಡಿ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ. ಈಗಲೇ ನಿಮ್ಮ ನಿಲುವು ಸ್ಪಷ್ಟಪಡಿಸಲು ಸಮಸ್ಯೆ ಏನು? ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಲಕ್ಷಗಟ್ಟಲೆ ಜನರು ತಹಸಿಲ್ದಾರ್ ಕಚೇರಿಗೆ ಹೋದರೆ ಆಗುವ ಸಮಸ್ಯೆಗಳಿಗೆ ಯಾರು ಹೊಣೆ? ಜನರು ಏಕೆ ಅಂತಹ ಸಂಕಷ್ಟಗಳಿಗೆ ಗುರಿಯಾಗಬೇಕು? ಹೇಗೂ ರಾಜ್ಯ ಸರ್ಕಾರವು ಪಿಆರ್‌ಸಿ ಕುರಿತಂತೆ ಅಽಕೃತ ಆದೇಶ ಹೊರಡಿಸಿರುವಾಗ ಅದಕ್ಕೆ ಮಾನ್ಯತೆ ಇದೆ ಅಥವಾ ಇಲ್ಲ ಎಂದು ಹೇಳಿದರೆ ಎಲ್ಲರಿಗೂ ಒಳ್ಳೆಯದಲ್ಲವೇ?
೧೨) ಎಸ್‌ಐಆರ್‌ಗೆ ಪೂರ್ವಭಾವಿಯಾಗಿ ನಡೆದ ಮ್ಯಾಪಿಂಗ್ ಈಗ ಹೇಗೆ ಬಳಕೆಯಾಗುತ್ತದೆ? ಅದನ್ನೇ ಈಗ ಎಸ್ ಐಆರ್‌ನಲ್ಲಿ ತೆಗೆದುಕೊಂಡು ಬಿಡುವುದಾದಲ್ಲಿ ಎನ್ಯುಮರೇಷನ್ ಫಾರಂ ತುಂಬಿಸುತ್ತಿರುವುದೇಕೆ? ಏಕೆಂದರೆ ಹಲವಾರು ಕಡೆ ಬಿಎಲ್ ಓಗಳು ಅದನ್ನೇ ಮಾಡುತ್ತಿದ್ದಾರೆ. ಅಲ್ಲದೆ ಕೆಲವು ಬೂತುಗಳಲ್ಲಿ ಈಗಾಗಲೇ ಮ್ಯಾಪಿಂಗ್ ಆದ ಮತದಾರರಲ್ಲಿ ೩೦೦-೪೦೦ ಜನರನ್ನು ಶಿಫ್ಟೆಡ್ ಎಂದು ಬರೆದ ಉದಾಹರಣೆಗಳೂ ಇವೆ.
ಜಾಗೃತ ಕರ್ನಾಟಕದ ಒತ್ತಾಯ:
* ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ಅಮಾನತ್ತಿನಲ್ಲಿಟ್ಟು, ಎಲ್ಲಾ ಬಿಎಲ್‌ಓಗಳಿಗೆ ಸಂಪೂರ್ಣ ತರಬೇತಿಯನ್ನು ಇನ್ನೂ ಸಮರ್ಪಕವಾಗಿ ನೀಡಬೇಕು.
* ಎಸ್‌ಐಆರ್‌ನಲ್ಲಿನ ಎನ್ಯುಮರೇಷನ್ ಹಂತಕ್ಕೆ ಕನಿಷ್ಠ ೬ ತಿಂಗಳು ಸಮಯ ಇಟ್ಟುಕೊಳ್ಳಬೇಕು.
* ಕರ್ನಾಟಕದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂದರೆ ಏನೇನು ಎಂಬುದನ್ನು ಈಗಲೇ ಅಧಿಕೃತವಾಗಿ ತಿಳಿಸಬೇಕು.
* ASDD ಅಲ್ಲದೇ, ಈಗ others ಎಂದು ಹೇಳಿ ಡಿಲಿಟ್ ಮಾಡಲಾಗುವುದಾಗಿ ಹೇಳಲಾಗುತ್ತಿದೆ. ಈ others ಎಂದರೆ ಯಾರು?
* ಮೇಲಿನ ಎಲ್ಲಾ ಸಂಗತಿಗಳಿಗೆ ಲಿಖಿತ ಉತ್ತರವನ್ನು ಕೂಡಲೇ ಕೊಡಬೇಕು; ಅದನ್ನು ಚುನಾವಣಾ ಆಯೋಗದ ವೆಬ್‌ಸೈಟ್ನಲ್ಲೇ ಕೊಡಬೇಕು.
* ಜಾಗೃತ ಕರ್ನಾಟಕ ಮಾತ್ರವಲ್ಲದೇ, ವಿವಿಧ ಸಂಘಟನೆಗಳು, ಪಕ್ಷಗಳು, ಗುಂಪುಗಳು, ವ್ಯಕ್ತಿಗಳು ಚುನಾವಣಾ ಆಯೋಗದ ಗಮನಕ್ಕೆ ತಂದಿರುವ ಎಲ್ಲ ಪ್ರಶ್ನೆಗಳಿಗೂ ಲಿಖಿತ ಉತ್ತರವನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಕೊಡಬೇಕು ಎಂದು ಜಾಗೃತ ಕರ್ನಾಟಕ ಸಂಘಟನೆಯ ಮುತ್ತುರಾಜು, ಬಿ.ಸಿ.ಬಸವರಾಜು, ಆದಂ ಖಾನ್ ಒತ್ತಾಯಿಸಿದ್ದಾರೆ.
ಜಾಗೃತ ಕರ್ನಾಟಕ ಅನಿಸಿಕೆಗಳು:
೧ ಚುನಾವಣಾ ಆಯೋಗದ ತಪ್ಪಿನಿಂದ ಅಥವಾ ನಮ್ಮ ಸಮಾಜದ ರಚನೆಯೊಳಗಿನ ಕೆಲವು ಗುಣಗಳಿಂದ (ಮಹಿಳೆ ಯರು ಮದುವೆಯ ನಂತರ ಗಂಡನ ಮನೆಗೆ ಹೋಗಿ ನೆಲೆಸು ವುದು, ದೇವದಾಸಿ ಪದ್ಧತಿ, ಅಲೆಮಾರಿ ಸ್ಥಿತಿಯಲ್ಲಿರುವ ಸಮು ದಾಯಗಳು, ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯ ಕರ್ತೆಯರು, ಅನಾಥರು, ಪರಿತ್ಯಕ್ತರು, ವಲಸೆ ಕಾರ್ಮಿಕರು ಹೀಗೆ) ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದಲ್ಲವೇ?
೨ ಈ ನಿರ್ದಿಷ್ಟ ಸಮುದಾಯಗಳು ವಿಶೇಷ ಅನನುಕೂಲಗಳನ್ನು ಹೊಂದಿರುವುದು ನಿಜವಾಗಿರುವುದರಿಂದ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೂ ಚುನಾವಣಾ ಆಯೋಗದ ಕರ್ತವ್ಯವಲ್ಲವೇ? ಇಲ್ಲವಾದರೆ ‘ಪ್ರತಿಯೊಬ್ಬ ಅರ್ಹ ಮತದಾರರನ್ನೂ ಒಳಗೊಳ್ಳುವ’ ಘೋಷಣೆಗೆ ಏನು ಅರ್ಥ?
೩ ತಳಮಟ್ಟದಲ್ಲಿ ಬಿಎಲ್‌ಓಗಳಿಗೆ ಸರಿಯಾಗಿ ತರಬೇತಿ ಆಗಿಲ್ಲ, ಅಂಗನವಾಡಿ ನೌಕರರು ಈ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಂಡು ಜಾರಿ ಮಾಡುವುದು ಬಹಳ ಕಷ್ಟ ಎಂದಿದ್ದಾರೆ. ಇದನ್ನು ಚುನಾವಣಾ ಆಯೋಗವನ್ನು ಹೊರತುಪಡಿಸಿ, ತಳಮಟ್ಟದಲ್ಲಿ ಈ ಪ್ರಕ್ರಿಯೆ ಕಂಡಿರುವ ಎಲ್ಲರೂ ಒಪ್ಪುತ್ತಾರೆ.




