ಪ್ರಶಾಂತ್ ಎಸ್.
ಮೈಸೂರು: ಚಿಲ್ಲರೆ ವಿಷಯಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ನಡೆಯುವ ಜಗಳಕ್ಕೆ ಕಡಿವಾಣ ಹಾಕಲು ರಾಜ್ಯ ರಸ್ತೆ ಸಾರಿಗೆ ನಿಗಮ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೆ ತಂದಿದ್ದರೂ ಯುಪಿಐ ಪಾವತಿಗೆ ನೆಟ್‌ವರ್ಕ್ ಸಮಸ್ಯೆ ಎದುರಾಗು ತ್ತಿದ್ದು, ಪ್ರಯಾಣಿಕ- ನಿರ್ವಾಹಕರಿಗೆ ಹೊಸ ರೀತಿಯ ತಲೆ ಬಿಸಿ ಶುರುವಾಗಿದೆ.
ಸಮಸ್ಯೆ ಹೇಗೆ?: ಕ್ಯೂ ಆರ್ ಕೋಡ್ ವ್ಯವಸ್ಥೆ ಜಾರಿ ಸಲುವಾಗಿ ಕೆಎಸ್‌ಆರ್‌ಟಿಸಿ ಹಿಂದೆ ಇದ್ದ ಕೀ ಪ್ಯಾಡ್ ಎಲೆಕ್ಟ್ರಾನಿಕ್ ಟಿಕೆಟ್ಮೆಷಿನ್ ಅನ್ನು ಹಿಂಪಡೆದು ಟಚ್ ಸ್ಕ್ರೀನ್ ಎಲೆಕ್ಟ್ರಾನಿಕ್ ಟಿಕೆಟ್ ಮೆಷಿನ್ ನೀಡಿದೆ. ಇದಕ್ಕೆ ಹೊಂದಿಕೊಳ್ಳಲು ನಿರ್ವಾಹಕರು ಹೆಣಗುತ್ತಿದ್ದು, ನಿಲ್ದಾಣ ಬಿಟ್ಟು ಬಸ್ ಒಂದೆರಡು ಕಿ. ಮೀ. ಮುಂದೆ ಬರುತ್ತಿದ್ದಂತೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಯುಪಿಐನಿಂದ ಹಣ ಪಾವತಿಯಾಗುವುದಿಲ್ಲ. ಹೀಗಾಗಿ ಹಣ ಪಾವತಿಯಾಗದೆ ಟಿಕೆಟ್ ಬರುವುದಿಲ್ಲ. ಇದರಿಂದಾಗಿ ಒಂದೆರಡು ನಿಮಿಷ ತೆಗೆದುಕೊಳ್ಳುತ್ತಿದ್ದು, ಅಷ್ಟರಲ್ಲಿ ನಿಗದಿತ ಸ್ಟೇಜ್ ಬರುವ ತರಾತುರಿಯಲ್ಲಿ ನಿರ್ವಾಹಕರು ಹೈರಾಣಾಗುತ್ತಿದ್ದಾರೆ.
೩ರಿಂದ ೪ ನಿಮಿಷ ಬೇಕು: ಒಂದು ಯುಪಿಐ ಪೇಮೆಂಟ್ ಆಗಲು ಕನಿಷ್ಠ ೩ರಿಂದ ೪ ನಿಮಿಷ ತೆಗೆದುಕೊಳ್ಳುತ್ತಿದೆ. ಹೆದ್ದಾರಿಗಳಲ್ಲೇ ಈ ರೀತಿ ಸಮಸ್ಯೆಯಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಯುಪಿಐ ಪೇಮೆಂಟ್ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ಯುಪಿಐ ಮುಖಾಂತರ ಟಿಕೆಟ್ ಪಡೆಯಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕಂಡಕ್ಟರ್ ಧಾವಂತವಿದ್ದರೆ, ಇನ್ನೊಂದು ಕಡೆ ಪೇಮೆಂಟ್ ಆಗುವುದು ತಡವಾಗುತ್ತಿದೆ. ಜತೆಗೆ ಕೆಲ ನಿರ್ವಾಹಕರು ಚಿಲ್ಲರೆ ಹಣದ ಆಸೆಗಾಗಿ ನೆಟ್‌ವರ್ಕ್ ಚೆನ್ನಾಗಿದ್ದರೂ ಯುಪಿಐ ಟಿಕೆಟ್ ನೀಡಲು ಮುಂದಾಗುವುದಿಲ್ಲ ಎಂಬ ಆರೋಪವಿದೆ. ನೆಟ್‌ವರ್ಕ್ ಸಮಸ್ಯೆಯ ಈ ಪೀಕಲಾಟದಿಂದಾಗಿ ಪ್ರಯಾಣಿಕರು ಯುಪಿಐ ಪಾವತಿ ವ್ಯವಸ್ಥೆಗೆ ರೋಸಿ ಹೋಗಿದ್ದು, ಹಿಂದಿನಂತೆಯೇ ಹಣ ನೀಡಿ ಟಿಕೆಟ್ ಖರೀದಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ.
” ವೇಗದೂತ ಹಾಗೂ ತಡೆರಹಿತ ಬಸ್‌ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಸಮಸ್ಯೆಯಾಗುತ್ತಿಲ್ಲ. ಸಾಮಾನ್ಯ ಬಸ್‌ಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ಸಮಸ್ಯೆ ಆಗಿರಬಹುದು. ನನ್ನ ಗಮನಕ್ಕೆ ಬಂದಿಲ್ಲ. ಯುಪಿಐಗೆ ಪರ್ಯಾಯವಾಗಿ ಹಣ ನೀಡಿ ಟಿಕೆಟ್ ಖರೀದಿಸಬಹುದು.”
-ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ
” ಯುಪಿಐ ಪೇಮೆಂಟ್ ಮೊದಲು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇತ್ತೀಚೆಗೆ ಸಮಸ್ಯೆಯಾಗುತ್ತಿದೆ. ಒಂದು ಟಿಕೆಟ್‌ಗಾಗಿ ಎರಡೆರಡು ಬಾರಿ ಹಣ ವರ್ಗಾವಣೆಯಾದ ಉದಾಹರಣೆಗಳಿವೆ.”
-ಕಲೆ ಪ್ರಕಾಶ್, ಪ್ರಯಾಣಿಕ





