Mysore
22
overcast clouds
Light
Dark

ಮೈಸೂರು ಆಕಾಶವಾಣಿ: ಮೂರು ತಲೆಮಾರುಗಳ ಅಶರೀರವಾಣಿ

ಬಾನುಲಿ ಕೇಂದ್ರದ ಸಂಸ್ಥಾಪಕರ ಮನೆತನದ ಮೂರು ತಲೆಮಾರುಗಳೊಂದಿಗೆ ‘ಆಂದೋಲನ’ ಮುಖಾಮುಖಿ

• ನಿರೂಪಣೆ: ರವಿಚಂದ್ರ ಚಿಕ್ಕೆಂಪಿಹುಂಡಿ
ಆಂದೋಲನ: ಆಕಾಶವಾಣಿ ಎಂದರೆ ಮೈಸೂರಿಗ ರೆಲ್ಲರಿಗೂ ಹೆಮ್ಮೆ. ಮೊಟ್ಟಮೊದಲ ಬಾರಿಗೆ ಮೈಸೂರಿನಲ್ಲಿ ಬಾನುಲಿ ಕೇಂದ್ರ ಪ್ರಾರಂಭವಾಗಿದ್ದು, ನಿಮ್ಮ ತಂದೆ ಡಾ.ಎಂ.ವಿ.ಗೋಪಾಲಸ್ವಾಮಿ ಅವರಿಗೆ ಈ ಐಡಿಯಾ ಹೇಗೆ ಬಂತು, ಆ ಸಂದರ್ಭವನ್ನು ನೀವು ನೋಡಿ, ಕೇಳಿ ತಿಳಿದಂತೆ ಮರೆಯದ ನೆನಪುಗಳು ಏನು?

ಉಷಾಶರ್ಮ: ಆಕಾಶವಾಣಿಯನು ನಮ್ಮ ತಂದೆ ಪ್ರಾರಂಭ ಮಾಡಿದಾಗ ನಾನಿನ್ನು ಹುಟ್ಟೇ ಇರಲಿಲ್ಲ . ನಾನು ದೊಡ್ಡವಳಾಗ್ತಾ ಅದರ ಬಗ್ಗೆ ನಮ್ಮ ತಂದೆ-ತಾಯಿಯವರಿಂದ ಕೇಳಿ ತಿಳಿದುಕೊಂಡಿದ್ದು. ನಮ್ಮ ತಂದೆಯವರು ಸದಾ ವಿಭಿನ್ನವಾಗಿ ಯೋಚಿ ಸುತ್ತಾ, ಏನಾದರೊಂದು ಎಕ್ಸ್‌ ಪಿರಿಮೆಂಟ್ ಮಾಡುತ್ತಲೇ ಇರುತ್ತಿದ್ದರು. ಅವರು ಮೈಸೂರಿನಲ್ಲಿ ಪದವಿ ಪಡೆದಿದ್ದರೂ ಸಂಶೋಧನಾ ಗುಣದ ಅವರ ಓದಿನ ಹಸಿವು ತಣಿದಿರಲಿಲ್ಲ. ಹಾಗಾಗಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಮತ್ತೆ ಸೈಕಾಲಜಿ ವಿಷಯದಲ್ಲಿ ಪದವಿ ಪಡೆದರು. ಜೊತೆಗೆ ಅಲ್ಲಿಯೇ ಪಿಎಚ್.ಡಿ. ಪದವಿಯನ್ನೂ ಪಡೆದರು. ಅಲ್ಲಿಂದ ವಾಪಸ್‌ ಮೈಸೂರಿಗೆ ಬಂದು ಮಹಾರಾಜ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಸೈಕಾಲಜಿ ವಿಭಾಗವನ್ನು
ಆರಂಭಿಸಿದವರು ಇವರೆ.

ಅವರು ಇಂಗ್ಲೆಂಡಿನಲ್ಲಿ ಇದ್ದ ಸಂದರ್ಭದಲ್ಲಿ ಅಲ್ಲಿ ರೇಡಿಯೋ ಪ್ರಸಾರವಾಗುತ್ತಿದ್ದದ್ದು ಅವರ ಕಿವಿಗೆ ಬಿತ್ತಂತೆ. ಆಗ ಇದೇ ರೀತಿ ರೇಡಿಯೋ ಕೇಂದ್ರವನ್ನು ಮೈಸೂರಿನಲ್ಲಿ ಸ್ಥಾಪಿಸಿದರೆ ಹೇಗೆ ಎಂದು ಚಿಂತಿಸಿದವರೆ ತಡ ಮಾಡದೆ ಅಲ್ಲಿ ಒಂದು ಟ್ರಾನ್ಸ್‌ ಮೀಟರ್‌ ಖರೀದಿಸಿ ಮೈಸೂರಿಗೆ ತಂದರಂತೆ. ಆವಾಗ ಅವರು ವಿಠಲ ವಿಹಾರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದಿದ್ದು. ಅಲ್ಲಿಯೇ ಬಾನುಲಿ ಕೇಂದ್ರವನ್ನು ಸ್ಥಾಪಿಸಿದರು.

ಆರಂಭದಲ್ಲಿ ಒಳ್ಳೆ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಕೊಡಿಸುತ್ತಿದ್ದರು. ಆವಾಗ ಕಲಾವಿದರಿಗೆ ಕೊಡಲು ನಮ್ಮ ತಂದೆ ಬಳಿ ಅಷ್ಟು ಹಣ ಇರುತ್ತಿರಲಿಲ್ಲ. ಹಾಗಾಗಿ ಅವರಿಗೆ ಫಲ ತಾಂಬೂಲವನ್ನಷ್ಟೇ ಕೊಟ್ಟು ಕಳುಹಿಸುತ್ತಿದ್ದರು. ಕಲಾವಿದರೂ ಅಷ್ಟೇ ಸಂತೋಷದಿಂದ ಅದನ್ನು ಸ್ವೀಕರಿಸಿ ತೆರಳುತ್ತಿದ್ದರು.

ಕಾಲಾನಂತರ ಖರ್ಚು ಜಾಸ್ತಿಯಾಗತೊಡಗಿ ಕೇಂದ್ರವನ್ನು ನಿರ್ವಹಣೆ ಮಾಡುವುದು ನಮ್ಮ ತಂದೆಯವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ಕೇಂದ್ರದ ನಿರ್ವಹಣೆಯನ್ನು 1942ರಲ್ಲಿ ಮೈಸೂರು ಸಂಸ್ಥಾನ ಮಹಾರಾಜರಾದ ಜಯಚಾಮರಾಜ ಒಡೆಯರ್ ವಹಿಸಿಕೊಂಡರು. ನಂತರ ಮೈಸೂರು ಪುರಸಭೆ ವಹಿಸಿಕೊಂಡಿತು. ತದನಂತರ ಅದು ಸರ್ಕಾರದ ಸುಪರ್ದಿಗೆ ಹೋಯಿತು.

ಭಾರತಿ ಘನಶ್ಯಾಮ್: ನಮ್ಮ ತಾತ ಇಂಗ್ಲೆಂಡ್‌ನಲ್ಲಿ ಬಿಬಿಸಿ ನ್ಯೂಸ್ ಕೇಳೋರಂತೆ. ಆಗ ಅವರು ಯೋಚಿಸಿದರಂತೆ ನಮ್ಮ ದೇಶದಲ್ಲಿ ಇಂತಹವುಗಳು ಯಾಕಿಲ್ಲ? ನಮ್ಮ ದೇಶದ ಜನಗಳಿಗೂ ಇಂತಹವುಗಳು ಸಿಗಬೇಕು ಎಂದುಕೊಳ್ಳುತ್ತಿದ್ದ ರಂತೆ. ಅವರ ಆ ಚಿಂತನೆ ಮೈಸೂರಿನಲ್ಲಿ ಬಾನುಲಿ ಕೇಂದ್ರ ತೆರೆಯುವಂತೆ ಮಾಡಿತು.

ಆಂದೋಲನ: ಪ್ರಾರಂಭದಲ್ಲಿ ಮನೆಯಲ್ಲೇ ಬಾನುಲಿ ಕೇಂದ್ರವನ್ನು ನಡೆಸುತ್ತಿದ್ದರು ಅಂತ ಹೇಳೀರಿ. ಅಂದರೆ ಕಾರ್ಯಕ್ರಮ ನಡೆಸಿಕೊಡಲು ಬಹಳಷ್ಟು ಕಲಾವಿದರು, ಸಾಹಿತ್ಯ ದಿಗ್ಗಜರು ಮನೆಗೆ ಬರುತ್ತಿದ್ದರಲ್ಲವೆ, ಅವರನ್ನು ನಿಮ್ಮ ತಾಯಿ ಹೇಗೆ ನಿಭಾಯಿಸುತ್ತಿದ್ದರು?

ಉಷಾ ಶರ್ಮ: ನಮ್ಮ ತಾಯಿ ತುಂಬಾ ಸಹಕಾರ ಕೊಡ್ತಾ ಇದ್ದರು. ತಂದೆಯವರಂತೆ ಈ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಮನಸ್ಸು ತಾಯಿಯವರಿಗೂ ಇತ್ತು. ಹಾಗಾಗಿ ಕಾರ್ಯಕ್ರಮ ನಡೆಸಿಕೊಡಲು ಬಂದ ಕಲಾವಿದರಿಗೆ ಊಟ, ತಿಂಡಿ, ಕಾಫಿ, ಟೀ ಕೊಟ್ಟು ಉತ್ತೇಜನ ನೀಡುತ್ತಿದ್ದರು. ಅವರಿಗೆ ನಮ್ಮ ತಂದೆಯ ಕೆಲಸದ ಬಗ್ಗೆ ಹೆಮ್ಮೆ ಇತ್ತು. ಈ ವಿಷಯದಲ್ಲಿ ಎಂದೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ.

ಭಾರತಿ ಘನಶ್ಯಾಮ್: ನಮ್ಮ ಅಜ್ಜಿ ಅತಿ ದೊಡ್ಡ ಮಾನವೀಯ ಗುಣವುಳ್ಳವರಾಗಿದ್ದರು. ಅವರು ನಮ್ಮ ತಾತನ ಬಾನುಲಿ ಕೇಂದ್ರ ಕೆಲಸದಿಂದ ಬೇಸರಪಟ್ಟು ಕೊಳ್ಳುತ್ತಿದ್ದರು ಎಂದು ಕನಸು ಮನಸ್ಸಿನಲ್ಲೂ ಯೋಚಿಸಲು ಸಾಧ್ಯವಿಲ್ಲ. ಅವರ ವ್ಯಕ್ತಿತ್ವ ಬೇರೆಯೇ ತರವಾದುದು. ಆಂದೋಲನ: ಗೋಪಾಲಸ್ವಾಮಿಯವರು ಪ್ರೊಫೆಸರ್, ಬಾನುಲಿ ಕೇಂದ್ರ ಸ್ಥಾಪಿಸಿದವರು ಎಂಬುದರ ಹೊರತಾಗಿ ತಂದೆಯಾಗಿ ಅವರೊಂದಿಗಿನ ನೆನಪುಗಳು ನಿಮ್ಮಲ್ಲಿ ಹೇಗಿವೆ?

ಉಷಾ ಶರ್ಮಾ: ನಾವು ಐದು ಮಂದಿ ಮಕ್ಕಳಲ್ಲಿ ನಾಲ್ಕು ಜನ ಗಂಡು ಮಕ್ಕಳು, ನಾನು ನಾಲ್ಕನೆಯವಳು. ನನಗೆ ಅವರು ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಹೆಣ್ಣು ಮಗಳು ಅಂತ ಯಾವುದೇ ನಿರ್ಬಂಧ ವಿಧಿಸುತ್ತಿರಲಿಲ್ಲ. ನನಗೆ ಒಂದು ಘಟನೆ ನೆನಪಿಗೆ ಬರುತ್ತದೆ. ನಾನಾಗ 12 ವರ್ಷದವಳು, 8ನೇ ತರಗತಿಯಲ್ಲಿ ಓದುತ್ತಿದ್ದೆ. ಆವಾಗ ಶಾಲೆಯಿಂದ ಸಿಮ್ಲಾದಲ್ಲಿ ಒಂದು ರೆಡ್‌ಕ್ರಾಸ್ ಕ್ಯಾಂಪ್ ಆಯೋಜಿಸಿದ್ದರು. ಆವಾಗಲೇ ಸಿಮ್ಮಾ ಕ್ಯಾಂಪ್‌ಗೆ ಕಳಿಸಿಕೊಡಲು ಒಪ್ಪಿದ್ದರು. ಅಷ್ಟೇ ಅಲ್ಲದೆ ಅಲ್ಲಿನ ಸೌಂದರ್ಯವನ್ನು ನೀನು ಸೆರೆ ಹಿಡಿದು ತರಬೇಕು’ ಎಂದು ಆವಾಗ ಚಾಲ್ತಿಯಲ್ಲಿದ್ದ ‘ಬೌನಿ ಕ್ರಷ್ಟ ಅನ್ನೋ ರೀಲ್ ಕ್ಯಾಮೆರಾ ಒಂದನ್ನು ಕೊಡಿಸಿದ್ದರು. ಕ್ಯಾಮೆರಾ ಜೊತೆಗೆ 6 ರೀಲ್‌ಗಳನ್ನು ಕೊಡಿಸಿ ಅದರಲ್ಲಿ ಒಂದು ರೀಲನ್ನು ತೆಗೆದು ಅದನ್ನು ನನ್ನ ಕೈಯಲ್ಲೇ ಲೋಡ್ ಮಾಡಿಸಿ, ಫೋಟೋ ಸೆರೆ ಹಿಡಿಯುವುದನ್ನು ಕಲಿಸಿ ಕ್ಯಾಮೆರಾ ಕೈಗಿತ್ತರು. ನಾನು ಸಿಮ್ಲಾಗೆ ಹೋದ ನಂತರ ನಾನು ಸೆರೆ ಹಿಡಿದಿದ್ದ ಫೋಟೋಗಳನ್ನು ಪ್ರಿಂಟ್ ಹಾಕಿಸಿ ಕ್ಯಾಂಪ್‌ಗೆ ಕಳಿಸಿದ್ದರು. ಅಷ್ಟೇ ಅಲ್ಲದೆ ಆ ಫೋಟೋಗಳ ಹಿಂದೆ ಸರಿ ತಪ್ಪುಗಳನ್ನು ಬರೆದು ಅದನ್ನು ತಿದ್ದಿಕೊಳ್ಳುವ ಬಗ್ಗೆ ತಿಳಿಸಿದ್ದರು. ಆ ಮಟ್ಟದಲ್ಲಿ ಅವರು ನಮ್ಮನ್ನು ಎಜುಕೇಟ್ ಮಾಡ್ತಾ ಇದ್ದರು. ಅವರು ಬೇರೆ ವಿಷಯದಲ್ಲಿ ಹೇಗೆ ಉತ್ತೇಜನ ನೀಡುತ್ತಿದ್ದರೋ ಹಾಗೆಯೇ ಪಠ್ಯ ಹಾಗೂ ಆಟೋಟಗಳಿಗೂ ಪ್ರಾಮುಖ್ಯತೆ ನೀಡುತ್ತಿದ್ದರು. ನಾವು ಓದಿನ ಜೊತೆಗೆ ಪ್ರತಿದಿನ ಆಟ ಆಡಲೇಬೇಕಿತ್ತು. ಶಾಲೆ ಮುಗಿಸಿಕೊಂಡು ಮನೆಗೆ ಬಂದ್‌ ಮೇಲೆ ‘ಕ್ಲಾಸ್ ಮುಗಿತಾ, ಈಗ ಟಿಫನ್ ತಿಂದಿಟ್ಟು 2 ಗಂಟೆ ಆಚೆಗೆ ಹೋಗಿ ಆಟ ಆಡಿ’ ಎಂದು ಹೊರೆಗೆ ಕಳೋರು. ಆಟ ಮುಗಿಸಿ ಸರಿಯಾಗಿ 7 ಗಂಟೆಗೆ ಪುಸ್ತಕ ಹಿಡ್ಕೊಂಡು ಕೂತಿದ್ದೇಕು. ಅವರು ತುಂಬಾ ಕಡಿಮೆ ಮಾತನಾಡುತ್ತಿದ್ದರು. ಅವರ ಮಾತನ್ನ ನಾವು ತಪ್ಪದೇ ಪಾಲಿಸುತ್ತಿದ್ವಿ.

ಆಂದೋಲನ: ನಿಮಗೆ ನಿಮ್ಮ ತಾತನ ನೆನಪುಗಳು ಹೇಗಿವೆ?

ಭಾರತಿ ಘನಶ್ಯಾಮ್: ನಮ್ಮ ತಾತ ತೀರಿಕೊಂಡಾಗ ನನಗೆ ಎರಡು ವರ್ಷ. ಅವರೊಂದಿಗೆ ಕಳೆದ ನನಗಿರುವ ಒಂದೇ ನೆನಪೆಂದರೆ ನಾನು ಯಾವಾಗಲೂ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದುದು. ಇನ್ನುಳಿದಂತೆ ಅವರ ಬಗ್ಗೆ ಕೇಳಿ ತಿಳಿದದ್ದೇ ಹೆಚ್ಚು. ಆದರೆ ನಮ್ಮ ತಾತ ಎಂದರೆ ನನಗೆ ಒಂಥರ ಹುಚ್ಚು. ಅವರ ಬಗ್ಗೆ ಹೆಚ್ಚು ವಿಷಯ ತಿಳ್ಕೊಬೇಕು ಎಂದು ಆಸೆ.

ನಮ್ಮ ತಾತನ ಕುರಿತು ಖ್ಯಾತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಅವರು ಪುಸ್ತಕವೊಂದರಲ್ಲಿ ಬರೆದಿದ್ದಾರೆ. ನಮ್ಮ ತಾತನಿಗೆ ಎರಿಮೆಂಟ್ ಮಾಡೋದು ಅಂದ್ರೆ ತುಂಬಾ ಇಷ್ಟ ಅಂತೆ ಕೋತಿಗಳ ನಡವಳಿಕೆ ಸ್ಟಡಿ ಮಾಡಲು ಮನೆಯಲ್ಲಿ ಕೋತಿಗಳನ್ನು ಸಾಕಿಕೊಂಡಿದ್ದರಂತೆ. ಇದಕ್ಕೆ ಅಕ್ಕಪಕ್ಕದ ಮನೆಯವರು ಈ ಕೋತಿಗಳು ನಮ್ಮ ಮನೆ ಬಳಿ ಬಂದು ಗಲಾಟೆ ಮಾಡ್ತವೆ ಅಂತ ಕಂಪ್ಲೇಂಟ್ ಮಾಡ್ತಾ ಇದ್ರಂತೆ. ಅದಕ್ಕೆ ನಮ್ಮ ತಂದೆ ಒಂದು ದಿನ ಆ ಕೋತಿಗಳನ್ನ ಕಕ್ಕೊಂಡು ಹೋಗಿ ಚಾಮುಂಡಿಬೆಟ್ಟದಲ್ಲಿ ಬಿಟ್ಟು ಬಂದಿದ್ದಾರೆ. ಆದರೆ ಅವರು ವಾಪಸ್ ಮನೆಗೆ ಬರೋ ಅಷ್ಟೊತ್ತಿಗೆ ಆ ಕೋತಿಗಳು ಅವರಿಗಿಂತ ಮೊದ್ಲು ಮನೆಗೆ ಬಂದು ಕೂತಿದ್ದಂತೆ. ಇದನ್ನು ನೋಡಿ ಅಕ್ಕಪಕ್ಕದ ಮನೆಯವರು ಮತ್ತೆ ರೇಗಾಡಲು ಶುರು ಮಾಡಿದರಂತೆ. ಆಗ ನಮ್ಮ ತಾತ ‘ನೋಡಿ ನಾನು ಅವುಗಳ ಕೋತಿಗಳ) ಜೊತೆ ಮಾತಾಡಿ ನೊಡಿದ್ದಾಯ್ತು. ಆದ್ರೂ ಅವು ನನ್ನ ಮಾತು ಕೇಳಿಲ್ಲ. ನೀವು ಮಾತಾಡಿ ನೋಡಿ ಅವು ನಿಮ್ಮ ಮಾತು ಕೇಳ್ತಾವಾ ಅಂತ’ ಎಂದು ಹೇಳಿದರಂತೆ.

ಆಂದೋಲನ: ಗೋಪಾಲಸ್ವಾಮಿ ಅವರ ಮರಿಮಗಳಾದ ನೀವು ಆರ್‌ಜೆ (ರೇಡಿಯೋ ಜಾಕಿ) ಆಗಿದ್ದಿರಿ. ಅದಕ್ಕೆ ನಿಮಗೆ ಸ್ಫೂರ್ತಿ ಏನು? ನೀವು ಮೊದಲನೇ ಕಾರ್ಯಕ್ರಮ ನಡೆಸಿಕೊಟ್ಟಾಗ ಆದ ಅನುಭವವೇನು?

ಪವಿತ್ರ ಘನಶ್ಯಾಮ್: ನನಗಾಗ ಆರೇಳು ವರ್ಷ. ಯಾವಾಗ ಮೈಸೂರಿಗೆ ಬಂದರೂ ಆಕಾಶವಾಣಿ ಹಾಗೂ ವಿಠಲ ವಿಹಾರಕ್ಕೆ ಹೋಗ್ತಾ ಇದ್ದೆ. ಆಗ ಸ್ಟುಡಿಯೋನ ನೋಡಿದರೆ ಒಂದು ಚಿಕ್ಕ ಕೋಣೆಯಲ್ಲಿ ಕೂತ್ಕಂಡು ಏನೆಲ್ಲ ವಿಚಾರಗಳನ್ನು ಹೊರ ಜಗತ್ತಿಗೆ ಹಂಚಬಹುದು ಎಂಬುದು ನನ್ನನ್ನು ಆಶ್ಚರ್ಯಚಕಿತಳನ್ನಾಗಿ ಮಾಡಿತು. ಇದು ನನಗೆ ಸ್ಫೂರ್ತಿ ನೀಡಿತು. ನಂತರ ನನ್ನಲ್ಲಿ ಆರ್‌ಜೆ ಆಗಲೇಬೇಕೆಂಬ ಹುಚ್ಚು, ಹಠ ಹೆಚ್ಚಾಯಿತು. ಅದರಂತೆ ಮುಂದುವರಿದ ದಿನಗಳಲ್ಲಿ ನಾನು ಖಾಸಗಿ ರೇಡಿಯೋ ಸಂಸ್ಥೆಯೊಂದರಲ್ಲಿ ಆರ್‌ಜೆ ಆಗಿ ಕಾರ್ಯ ನಿರ್ವಹಿಸಿದೆ. ನಂತರ ಅನಿಮಲ್ ವೆಲ್ತ್‌ ಕುರಿತು ಸಮುದಾಯ ರೇಡಿಯೋ ಕೇಂದ್ರ ಆರಂಭಿಸಿದೆ. ಇದೆಲ್ಲದಕ್ಕೂ ಸ್ಫೂರ್ತಿ ನಮ್ಮ ಮುತ್ತಾತ ಸ್ಥಾಪಿಸಿದ ಆಕಾಶವಾಣಿ. ಅವರ ಕುಟುಂಬದವರಾಗಿ ರೇಡಿಯೋ ಮಾಧ್ಯಮವನ್ನು ಮುನ್ನಡೆಸಬೇಕು ಎಂಬುದು ನನ್ನೊಳಗೆ ಹುಟ್ಟಲು ನಮ್ಮ ಮುತ್ತಾತನೇ ಸ್ಫೂರ್ತಿ.

ಆಂದೋಲನ: ನಿಮ್ಮ ಕುಂಟುಂಬದಲ್ಲಿ ಯಾರಿಗೂ ಗೊತ್ತಿಲ್ಲದ ಒಂದು ಘಟನೆ, ನೆನಪು?

ಭಾರತಿ ಘನಶ್ಯಾಮ್: ನಾನು ಚಿಕ್ಕವಳಿದ್ದಾಗ ನಮ್ಮ ತಾತನ ಬಗ್ಗೆ ಬಹಳ ಕೊಚ್ಚಿಕೊಳ್ಳುತ್ತಿದ್ದೆ ಆಕಾಶವಾಣಿ ನೋಡಿದಾಗಲೆಲ್ಲ ‘ನಮ್ ತಾತಮಾಡಿದ್ದು ನಮ್ ತಾತಮಾಡಿದ್ದು’ ಎಂದ್ದೇಳುತ್ತಿದ್ದೆ ಇದನ್ನು ಕೇಳಿ ಕೇಳಿ ನನ್ನಸ್ನೇಹಿತೆಗೆ ರೇಗೋಗಿ ನಿಮ್ಮ ತಾತ ಒಂದು ವೈರಸ್ ತರ ಕಣೆ ಅಂದ್ದಿಟ್ಟು, ಆಗ ನನಗೆ ಒಂಥರಾ ಶಾಕ್ ಆಯ್ತು. ಆಮೇಲೆ ಯೋಚಿಸಿದೆ. ಅದನ್ನು ಒಳ್ಳೆಯ ಅರ್ಥದಲ್ಲಿ ತೆಗೆದುಕೊಂಡರೆ ಆಕಾಶವಾಣಿ ಎಂಬುದು ಇಂದು ಎಲ್ಲ ಕಡೆ ವ್ಯಾಪಿಸಿದೆ. ಆಕಾಶವಾಣಿ ಎಂದರೆ ಗೊತ್ತಿಲ್ಲದಿರುವವರೇ ಇಲ್ಲ. ಹಾಗಾಗಿ ಇಂದು ಒಂದು ಒಳ್ಳೆಯ ವೈರಸ್ ಅಲ್ಲದೆ ಮತ್ತೇನು ಎಂದು ಯೋಚಿಸಿದೆ.