ಕೆ.ಬಿ.ರಮೇಶನಾಯಕ
ಮುಡಾ ಅಧಿಕಾರಿಗಳ ಕೈ ಕಟ್ಟಿ ಹಾಕಿರುವ ತನಿಖಾ ಸಂಸ್ಥೆಗಳು
ಕಾಗದದಲ್ಲೇ ಉಳಿದ ಕಳೆದ ಬಜೆಟ್ ಘೋಷಿತ ಯೋಜನೆಗಳು
ಸರ್ಕಾರದ ನಿರ್ದೇಶನಕ್ಕಾಗಿ ಕಾದಿರುವ ಮುಡಾ ಅಧ್ಯಕ್ಷರು, ಆಯುಕ್ತರು
ಮೈಸೂರು: ೫೦:೫೦ ನಿವೇಶನಗಳ ಹಂಚಿಕೆ ಮತ್ತಿತರ ಅಕ್ರಮಗಳ ಕುರಿತು ಮೂರು ತನಿಖಾ ಸಂಸ್ಥೆಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿರುವ ಪರಿಣಾಮವಾಗಿ ಮುಡಾ ಅಧಿಕಾರಿಗಳು ಯಾವುದೇ ಆಡಳಿತಾತ್ಮಕವಾದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತನಿಖಾ ಸುಳಿಯಲ್ಲಿ ಸಿಲುಕಿರುವ ಮುಡಾದಲ್ಲಿ ಕಳೆದ ಆಯವ್ಯಯದಲ್ಲಿ ಘೋಷಣೆ ಮಾಡಿದ್ದ ವಿಶೇಷ ಯೋಜನೆಗಳು ಮುಳುಗಡೆಯಾದಂತಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಜೆಟ್ ಮಂಡಿಸಿದ ಮೇಲೆ ಏಪ್ರಿಲ್ ೧ರಿಂದ ಕಾರ್ಯರೂಪಕ್ಕೆ ತರುವಂತಹ ಕೆಲಸ ಮಾಡಿದರೆ, ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರವು ೨೦೨೪-೨೫ನೇ ಸಾಲಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪ್ರಕಟಿಸಿದ್ದ ಯೋಜನೆಗಳಲ್ಲಿ ಒಂದೇ ಒಂದು ಕೂಡ ಅನುಷ್ಠಾನವಾಗದೆ ಬರೀ ಕಾಗದದಲ್ಲಿ ಉಳಿದು ಕೊಂಡಿದೆ. ಹೀಗಾಗಿ, ಮುಂದಿನ ತಿಂಗಳು ಮಂಡಿಸುವ ಆಯವ್ಯಯದಲ್ಲೂ ಅದೇ ಯೋಜನೆಗಳನ್ನೇ ಮತ್ತೊಂದು ರೂಪದಲ್ಲಿ ಪುನರಾವರ್ತನೆಯಾಗುವುದು ಗ್ಯಾರಂಟಿಯಾಗಿದೆ.
ಮುಡಾ ಅಧ್ಯಕ್ಷರಾಗಿದ್ದ ಕೆ.ಮರೀಗೌಡ ಅವರ ಅಧ್ಯಕ್ಷತೆಯಲ್ಲಿ ೨೦೨೪-೨೫ನೇ ಸಾಲಿನ ಆಯವ್ಯಯವನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಮುಡಾ ರೂಪಿಸಿದ್ದ ಯೋಜನೆಗಳಿಗೆ ಸರ್ಕಾರದಿಂದ ಅನುಮತಿ ಪಡೆಯಲು ಡಿಪಿಆರ್ ತಯಾರಿಸುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಕೆಸರೆಯ ಜಮೀನಿಗೆ ವಿಜಯನಗರ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡಿದ ವಿಚಾರ ಬಹಿರಂಗವಾಗಿ ರಾಜ ಕೀಯ ಜಟಾಪಟಿಗೆ ಕಾರಣವಾಗಿತ್ತು.
ಇದರಿಂದಾಗಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ. ಎನ್.ದೇಸಾಯಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚನೆ ಮಾಡುವ ಜತೆಗೆ ಪ್ರಾಧಿಕಾರದಲ್ಲಿ ಯಾವುದೇ ನಿರ್ಧಾರ, ತೀರ್ಮಾನ ಮಾಡದಂತೆ ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರಿಂದ, ಲೋಕಾಯುಕ್ತ ತನಿಖೆಗೆ ಆದೇಶ ನೀಡಲಾಯಿತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ರಮ ಹಣದ ವ್ಯವಹಾರ ನಡೆದಿದೆ ಎನ್ನುವು ದನ್ನು ಮುಂದಿಟ್ಟು ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡರು.
ಹೀಗಾಗಿ, ಮುಡಾ ಏಕಕಾಲದಲ್ಲಿ ಮೂರು ಸಂಸ್ಥೆಗಳಿಂದ ತನಿಖೆ ಎದುರಿಸುವಂತಾಯಿತು. ಆ ಸಂಸ್ಥೆಗಳು ಕೇಳುತ್ತಿದ್ದ ದಾಖಲೆಗಳನ್ನು ಜೆರಾಕ್ಸ್ ಮಾಡಿ ಒದಗಿಸುವುದಕ್ಕಷ್ಟೇ ಮುಡಾ ಅಽಕಾರಿಗಳು ಸೀಮಿತವಾಗಬೇಕಾಯಿತು. ಈ ಎಲ್ಲ ಬೆಳವಣಿಗೆಗಳೂ ಒಂದು ಹಂತಕ್ಕೆ ಬಂದು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸುವ ವೇಳೆಗೆ ಅಂದರೆ ಈಗ ಏಳು ತಿಂಗಳುಗಳಾಗಿವೆ. ಮುಡಾ ಬಜೆಟ್ ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಸಾಧ್ಯವಾಗಿಲ್ಲ.
ಕಾಗದದಲ್ಲೇ ಉಳಿದ ಯೋಜನೆಗಳು: ಮುಡಾ ೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ಗುಂಪು ವಸತಿ ಯೋಜನೆ ಪ್ರಕಟಿಸಿತ್ತು. ವಿಜಯನಗರ ನಾಲ್ಕನೇ ಹಂತದ ಎರಡನೇ ಘಟ್ಟದಲ್ಲಿ ೫೬೦ ಮನೆಗಳನ್ನು ೧೨ ಅಂತಸ್ತುಗಳ ಬಹುಮಹಡಿ ಕಟ್ಟಡವನ್ನು ೨೫೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ೪೦ ಕೋಟಿ ರೂ. ಕಾಯ್ದಿರಿಸಲಾಗಿತ್ತು.
ಮೈಸೂರಿಗೆ ಮತ್ತೊಂದು ಹೊರಪರಿಧಿ ರಸ್ತೆ ನಿರ್ಮಾಣಕ್ಕೆ ಬೇಕಾದ ಡಿಪಿಆರ್ ತಯಾರಿಕೆಗೆ ಹತ್ತು ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಈ ತನಕ ಯಾವುದೇ ಏಜೆನ್ಸಿಯನ್ನೂ ನಿಗದಿಪಡಿಸಲು ಸಾಧ್ಯವಾಗಿಲ್ಲ. ಪೆರಿ-ರಲ್ ರಿಂಗ್ ರಸ್ತೆ ಅಕ್ಕಪಕ್ಕದಲ್ಲಿ ವಾಣಿಜ್ಯ ಕ್ಲಸ್ಟರ್‌ಗಳನ್ನು ಪ್ರಸ್ತಾಪಿಸಿದ್ದರಿಂದ ಡಿಪಿಆರ್ ಮುಖ್ಯ ವಾಗಿತ್ತಾದರೂ ಈತನಕ ಅಂತಿಮವಾಗಿಲ್ಲ.
ಸರ್ಕಾರದ ನಿರ್ದೇಶನಕ್ಕಾಗಿ ಕಾದಿರುವ ಆಯುಕ್ತರು: ಮುಡಾಕ್ಕೆ ಅಂಟಿರುವ ಕಳಂಕವನ್ನು ದೂರ ಮಾಡಲು ಆಡಳಿತಾತ್ಮಕವಾಗಿ ಬದಲಾವಣೆ, ಸುಧಾರಣೆಗೆ ಯತ್ನಿಸಿರುವ ಆಯುಕ್ತ ಎ.ಎನ್.ರಘುನಂದನ್ ಸರ್ಕಾ ರದ ನಿರ್ದೇಶಕ್ಕಾಗಿ ಕಾದಿದ್ದಾರೆ. ಜಿಲ್ಲಾಧಿಕಾರಿಗಳೇ ಮುಡಾ ಅಧ್ಯಕ್ಷರಾಗಿದ್ದರೂ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕಿರುವ ಕಾರಣ ಸುಮ್ಮನಿದ್ದಾರೆ.
ಜಂಕ್ಷನ್ ಗ್ರೇಡ್ ಸೆಪರೇಟರ್; ಸಿದ್ಧವಾಗದ ಡಿಪಿಆರ್:
ಮೈಸೂರಿನ ರಿಂಗ್ ರಸ್ತೆ ಮುಖ್ಯ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ವಿಜಯನಗರ ನಾಲ್ಕನೇ ಹಂತ, ಬೋಗಾದಿ ರಸ್ತೆ, ಜೆ.ಪಿ.ನಗರದ ಕುಪ್ಪಲೂರು ರಸ್ತೆ ಜಂಕ್ಷನ್‌ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣಕ್ಕೆ ಉದ್ದೇಶಿಸಿ ೪೦ ಕೋಟಿ ರೂ. ಕಾಯ್ದಿರಿಸಲಾಗಿತ್ತು. ಆದರೆ, ಈ ಯೋಜನೆ ಕಾರ್ಯಗತಕ್ಕೆ ಪೂರಕವಾಗಿ ಡಿಪಿಆರ್ ಸಿದ್ಧವಾಗಿಲ್ಲ.
ಸಾಮಾನ್ಯ ಕೆಲಸಗಳನ್ನಷ್ಟೆ ಮಾಡುತ್ತಿರುವ ಮುಡಾ:
ಈಗಾಗಲೇ ಖಾತೆ ಮಾಡಿಕೊಡುವುದನ್ನು ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗಿದೆ. ಹಾಗಾಗಿ ಆಯುಕ್ತರು, ಜನಸಾಮಾನ್ಯರ ದಿನನಿತ್ಯದ ಕೆಲ ಕೆಲಸಗಳನ್ನು ಮಾತ್ರ ಮಾಡುತ್ತಿದ್ದಾರೆ. ಪ್ರಾಽಕಾರದಲ್ಲಿ ಆಗಿರುವ ನಿರ್ಣಯಗಳನ್ನಷ್ಟೇ ಮಾಡಿ ಉಳಿದಂತೆ ಯಾವುದೇ ರೀತಿಯ ಕಡತಗಳಿಗೆ ಸಹಿ ಹಾಕದೆ ಸರ್ಕಾರದ ಸೂಚನೆಯನ್ನು ಮಾತ್ರವೇ ಪಾಲಿಸುತ್ತಿದ್ದಾರೆ.





