Mysore
20
scattered clouds

Social Media

ಭಾನುವಾರ, 10 ನವೆಂಬರ್ 2024
Light
Dark

ಮುಡಾ: ಸರ್ಜರಿಗೆ ಮುಂದಾದ ಸಿಎಂ

ಆಡಳಿತಾಧಿಕಾರಿಯಾಗಿ ಶೀಘ್ರದಲ್ಲೇ ಖಡಕ್‌ ಐಎಎಸ್‌ ಅಧಿಕಾರಿ ನೇಮಕ?
ಕೆ.ಬಿ.ರಮೇಶನಾಯಕ
ಮೈಸೂರು: ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲು ಕಾರಣವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣದಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೊನೆಗೂ ಮುಡಾಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದಾರೆ.

ಹಲವು ವರ್ಷಗಳಿಂದ ಮುಡಾದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಕಾನೂನುಬಾಹಿ ರವಾದ ಚಟುವಟಿಕೆಗಳನ್ನು ರಾಜಕಾರಣಿ ಗಳು ಮತ್ತು ಆಪ್ತರು ಪ್ರಭಾವ ಬಳಸಿ ಕೊಂಡು ಪಡೆದಿರುವ ನಿವೇಶನಗಳನ್ನು ಗುರುತು ಮಾಡಿ ತನಿಖೆ ನಡೆಸುವ ಮೂಲಕ ರಾಜಕೀಯ ಎದುರಾಳಿಗಳಿಗೆ ಕಾನೂನಾತ್ಮಕವಾಗಿಯೇ ಬಿಸಿಮುಟ್ಟಿಸಲು ನಿರ್ಧಾರ ಮಾಡಿದ್ದಾರೆ.

ಮೇಜರ್ ಸರ್ಜರಿಗೆ ರಣತಂತ್ರವನ್ನು ಸದ್ದಿಲ್ಲದೆ ರೂಪಿಸಿರುವ ಸಿದ್ದರಾಮಯ್ಯ ಅವರು, ಕೆ.ಮರೀಗೌಡ ಅವರಿಂದ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಹಿರಿಯ ಐಎಎಸ್ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಮುಡಾ ಆಯುಕ್ತರು, ಕಾರ್ಯದರ್ಶಿ, ನಗರ ಯೋಜಕ ಸದಸ್ಯರು, ವಿಶೇಷ ಭೂಸ್ವಾಧೀನಾಧಿಕಾರಿಗಳ ಹುದ್ದೆಗೆ ಹೊಸಬರನ್ನು ನೇಮಿಸಿರುವ ಸರ್ಕಾರವು ಆಡಳಿತಾಧಿಕಾರಿ ಸ್ಥಾನಕ್ಕೆ ಹಿರಿಯ ಖಡಕ್ ಅಧಿಕಾರಿಯನ್ನು ತಂದು ಕೂರಿಸಲು ಮೂವರ ಹೆಸರುಗಳನ್ನು ಪಟ್ಟಿ ಮಾಡಿದೆ ಎಂದು ಹೇಳಲಾಗಿದೆ.

ಒಂದುವೇಳೆ ಮುಡಾ ಆಡಳಿತಾಧಿಕಾರಿ ನೇಮಕಗೊಂಡರೆ ಹಳೆಯ ಅಕ್ರಮಗಳು ಹೊರಬರುವ ಸಾಧ್ಯತೆಗಳಿವೆ. ಬಡಾವಣೆಗಳನ್ನು ರಚಿಸಿ ನಗರದ ಬಡವರು, ಮಧ್ಯಮ ವರ್ಗದ ಜನರಿಗೆ ನಿವೇಶನ ಹಂಚಿಕೆ ಮಾಡಬೇಕಾದ ಮುಡಾ, ತನ್ನ ಕೆಲಸವನ್ನು ಮರೆತು ಖಾಸಗಿ ಬಡಾವಣೆಗಳ ರಚನೆಗೆ ಅನುಮತಿ ಕೊಡುವುದಕ್ಕಷ್ಟೇ ಸೀಮಿತವಾಗಿತ್ತು ಎಂಬ ಆರೋಪಗಳಿವೆ.

ಸರ್ಕಾರದಿಂದ ದೊರೆಯುವ ಮತ್ತು ಬಡಾವಣೆಗಳಿಂದ ಸಂಗಹವಾಗುವ ಆದಾಯದಿಂದ ಒಂದಿಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಬಿಟ್ಟರೆ ದಶಕದಿಂದ ಹೊಸದಾಗಿ ಒಂದೇ ಒಂದು ನಿವೇಶವನ್ನೂ ಹಂಚಿಕೆ ಒಂದೇ ಒಂದು ನಿವೇಶವನ್ನೂ ಹಂಚಿಕೆ ಮಾಡಿರಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಕೆಸರೆಯಲ್ಲಿ ಮುಡಾ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಬದಲಾಗಿ ವಿಜಯನಗರ ಬಡಾವಣೆಯಲ್ಲಿ 14 ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು.

ಈ ವಿಚಾರ ಹೊರಗೆ ಬರುತ್ತಿದ್ದಂತೆ ದೊಡ್ಡ ವಿವಾದಕ್ಕೆ ಕಾರಣವಾಯಿತು. ಆರಂಭದಲ್ಲಿ ನಿವೇಶನಗಳನ್ನು ವಾಪಸ್ ನೀಡಿ ತನಿಖೆಗೆ ಆದೇಶ ನೀಡಬೇಕೆಂಬ ಕೂಗಿಗೆ ಒಪ್ಪದ ಸಿಎಂ, ಪ್ರತಿಪಕ್ಷಗಳ ಒತ್ತಡದಿಂದ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚನೆ ಮಾಡಿದ್ದರು. ನಂತರ, ಈ ವಿವಾದ ತೀವ್ರ ಸ್ವರೂಪ ಪಡೆದು ರಾಜ್ಯಪಾಲರ ಅಂಗಳಕ್ಕೆ ತಲುಪಿ, ಪ್ರಾಸಿಕ್ಯೂಷನ್‌ಗೆ ಒಪ್ಪಿಗೆ ಸಿಕ್ಕಿತ್ತು.

ಹಾಗಾಗಿ ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅವರು, ತಾವೇನೂ ತಪ್ಪು ಮಾಡಿಲ್ಲವೆಂದು ಬಲವಾಗಿ ಸಮರ್ಥಿಸಿಕೊಳ್ಳುತ್ತಲೇ ಎದುರಾಳಿಗಳ ಅಕ್ರಮಗಳನ್ನು ತಮ್ಮ ಬೆಂಬಲಿಗ ಸಚಿವರ ಮೂಲಕ ಹೊರ ಹಾಕುವ ಕೆಲಸಕ್ಕೆ ಕೈ ಹಾಕಿದ್ದರು. ಇದೀಗ ಮುಡಾ ಸರ್ಜರಿಗೆ ಮುಂದಾಗುವ ಮೂಲಕ ರಾಜಕೀಯ ಎದುರಾಳಿಗಳಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ.

ರಾಜೀನಾಮೆ ನೀಡಲು ಮರೀಗೌಡಗೆ ಸೂಚನೆ?
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ 14 ನಿವೇಶನಗಳನ್ನು ಹಿಂತಿರುಗಿಸಲು ನಿರ್ಧರಿಸಿ ಮುಡಾಕ್ಕೆ ಪತ್ರ ಬರೆದರು. ಕೂಡಲೇ ಮುಡಾ ನಿವೇಶನಗಳ ಖಾತೆಯನ್ನು ರದ್ದುಪಡಿಸಿ, ವಶಕ್ಕೆ ಪಡೆದುಕೊಂಡಿತ್ತು. ಮುಡಾದಿಂದ ನಿವೇಶನ ಅಕ್ರಮ ಹಂಚಿಕೆ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಕಾರಣ ಎನ್ನಲಾದ ಕೆ. ಮರೀಗೌಡ ಅವರಿಗೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Tags: