ಗೌರಿ-ಗಣೇಶ ಖರೀದಿಸಿದ ಜನರು; ಹೂವು-ಹಣ್ಣು ಖರೀದಿಯೂ ಜೋರು
ಮೈಸೂರು: ಗೌರಿ-ಗಣೇಶ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲು ಸಾಂಸ್ಕೃತಿಕ ನಗರಿಯ ಜನತೆ ಸಜ್ಜಾಗಿದ್ದು, ಹಬ್ಬಕ್ಕೆ ಅಗತ್ಯವಿರುವ ಗಣೇಶನ ವಿಗ್ರಹ, ಹೂವು-ಹಣ್ಣು, ಬಾಳೆಕಂದು, ಗರಿಕೆ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯಿತು.
ಒಂದೆಡೆ ಅಗತ್ಯ ವಸ್ತುಗಳ ಖರೀದಿ ಜೋರಾದರೆ, ಇತ್ತ ನಗರದ ಹಲವು ಬಡಾವಣೆಗಳು, ರಸ್ತೆ ಬದಿಗಳಲ್ಲಿ ಗೌರಿ-ಗಣೇಶನ ಮೂರ್ತಿಗಳಿಂದ ತುಂಬಿದ್ದವು. 100 ರೂ. ಬೆಲೆಯ ಪುಟ್ಟ ಗಣಪನಿಂದ ಹಿಡಿದು 300 ಸಾವಿರ ರೂ.ನ ಗಣಪನವರೆಗೂ ನಾನಾ ಬೆಲೆಯ ಮೂರ್ತಿಗಳು ಮಾರಾಟವಾದವು.
ಅಯೋಧ್ಯೆ ರಾಮ, ಸೌಮ್ಯ ಸ್ವಭಾವದ ಶಿವಲಿಂಗ ಗಣಪ, ರಾಜಸ್ತಾನಿ ಗಣಪ, ತಾಂಡವ ನೃತ್ಯದ ಕಾಲಭೈರವ ಗಣಪ, ಬೆಣ್ಣೆ ಗಣಪ, ಒಡಿಶಾ ಶೈಲಿಯ ಗಣಪ, ಮುಂಬೈನಲ್ಲಿ ಜನಪ್ರಿಯವಾಗಿರುವ ‘ಲಾಲ್‌ಬಾಗ್ ರಾಜ”.. ಹೀಗೆ ಬಗೆ ಬಗೆಯ ನಾಲ್ವಾರು ಅಡಿಗಳ ಎತ್ತರದವರೆಗಿನ ಗಣೇಶನ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಗೌರಿ ಹಬ್ಬಕ್ಕಾಗಿ ಗಜಗೌರಿ, ಮಂಗಳಗೌರಿ, ಮಡಿಗೌರಿ, ಮೈಸೂರು ಗೌರಿ, ಬೆಂಗಳೂರು ಗೌರಿ ಮೂರ್ತಿಗಳು ರಾರಾಜಿಸಿದವು. ಪರಿಸರ ಸ್ನೇಹಿ, ಜೇಡಿಮಣ್ಣಿನ ಗಣೇಶನನ್ನು ಗ್ರಾಹಕರು ಖರೀದಿಸಿದರು.
ಹೂ, ಹಣ್ಣು ಖರೀದಿ…
ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿತು. ಹೂವು- ಹಣ್ಣು, ಬಾಳೆಕಂದು, ಗರಿಕೆ ಮಾರಾಟ ಭರ್ಜರಿಯಾಗಿಯೇ ನಡೆಯಿತು. ಬಾಗಿನ, ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಇದರೊಂದಿಗೆ ಬಾಳೆಕಂದು, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಜನರು ವಿಶೇಷವಾಗಿ ಖರೀದಿಸುತ್ತಿದ್ದರು. ಕೆಲ ದಿನಗಳ ಹಿಂದಷ್ಟೆ ಕಡಿಮೆ ಇದ್ದ ಅಗತ್ಯ ವಸ್ತುಗಳ ಬೆಲೆಗಳು ಹಬ್ಬದ ಹಿನ್ನೆಲೆಯಲ್ಲಿ ಏರಿಕೆಯಾಗಿದ್ದವು. ಏಲಕ್ಕಿ ಬಾಳೆ ಕೆಜಿಗೆ 100 ರೂ.ನಿಂದ 120 ರೂ.ಗೆ ಮಾರಾಟವಾಯಿತು. ಸೇಬು, ಮೂಸಂಬಿ, ದಾಳಿಂಬೆ, ಕಿತ್ತಳೆ, ಪೈನಾಪಲ್, ದ್ರಾಕ್ಷಿ ಸೀತಾಫಲ ಮೊದಲಾದ ಹಣ್ಣುಗಳ ಬೆಲೆ ಕನಿಷ್ಠ 30ರಿಂದ 40 ರೂ.ವರೆಗೆ ಹೆಚ್ಚಾಗಿದೆ. ಸೇವಂತಿಗೆ ಮಾರಿಗೆ 100 ರೂ.ನಿಂದ 120 ರೂ.ವರೆಗೆ ಮಾರಾಟವಾದರೆ ಮಲ್ಲಿಗೆ, ಮರಲೆ, ಸುಗಂಧ ರಾಜ, ಕಾಕಡ, ಕನಕಾಂಬರ, ಗುಲಾಬಿ ಹೂ, ಚೆಂಡು ಹೂ, ಮೂರು ರೀತಿಯ ಬಣ್ಣದ ಗಣಗಲೆ ಹೂ ಸೇರಿದಂತೆ ಎಲ್ಲ ಹೂಗಳ ದರವೂ ಕೊಂಚ ಏರಿಕೆಯಾಗಿತ್ತು.
ಬಾಗಿನ ಸಾಮಗ್ರಿಗೆ ಡಿಮ್ಯಾಂಡ್…
ಸಾಮಾನ್ಯವಾಗಿ ಗೌರಿ ಹಬ್ಬಕ್ಕೆ ಅಣ್ಣ-ತಂಗಿಗೆ ಬಾಗಿನ ಕೊಡುವುದು ಸಂಪ್ರದಾಯ. ಅಲ್ಲದೆ, ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಬಾಗಿನ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಬಾಗಿನ ಸಾಮಗ್ರಿಗೆ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಗರಿಕೆ, ಬಿಲ್ವಪತ್ರೆ, ಬಾಳೆಕಂದು, ಬಾಗಿನ ನೀಡಲು ಬೇಕಾದ ಮೊರ, ಬಾಗಿನದ ಸಾಮಗ್ರಿಗಳು, ಬಳೆ ಸೇರಿದಂತೆ ಗೌರಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯೂ ಜೋರಾಗಿ ನಡೆಯಿತು.
ಬಟ್ಟೆ ಖರೀದಿ ಜೋರು…
ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದ್ದು, ಪ್ರಭಾ, ಒಲಂಪಿಯಾ ಚಿತ್ರ ಮಂದಿರದ ಬಳಿ, ಸಯ್ಯಾಜಿರಾವ್ ರಾವ್ ರಸ್ತೆ, ಗಾಂಧಿ ವೃತ್ತ, ಅಗ್ರಹಾರ, ದೇವರಾಜ ಅರಸು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ನಂಜುಮಳಿಗೆ, ಧನ್ವಂತ್ರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ಗಾಂಧಿ ವೃತ್ತ, ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯಿತು.
ಹಣ್ಣುಗಳ ದರ ಪ್ರತಿ ಕೆಜಿಗೆ (ರೂಪಾಯಿಗಳಲ್ಲಿ): ಸೇಬು 200, ದಾಳಿಂಬೆ 200, ಸೀತಾಫಲ 120, ಮರಸೇಬು 100, ಕಿತ್ತಲೆ 120, ಮೊಸಂಬಿ 80, ಏಲಕ್ಕಿ ಬಾಳೆ 130, ದ್ರಾಕಿ 200.
ಹೂವುಗಳ ದರ ಪ್ರತಿ ಕೆಜಿಗೆ (ರೂಪಾಯಿಗಳಲ್ಲಿ): ಸೇವಂತಿಗೆ 300, ಮಲ್ಲಿಗೆ 1500, ಮರಲೆ 100, ಸುಗಂಧ ರಾಜ 400, ಕಾಕಡ 1,000, ಕನಕಾಂಬರ 2,500, ಗುಲಾಬಿ ಹೂ 400.