Mysore
17
few clouds

Social Media

ಮಂಗಳವಾರ, 13 ಜನವರಿ 2026
Light
Dark

ಹೂಡಿಕೆದಾರರ ಪಾಲಿಗೆ ಸ್ವರ್ಗವಾದ ಮೈಸೂರು

ಕೆ.ಬಿ.ರಮೇಶನಾಯಕ

ಉದ್ಯಮಗಳ ಸ್ಥಾಪನೆಗೆ, ಉದ್ಯೋಗಕ್ಕೆ ವಿಪುಲ ಅವಕಾಶ

ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳು

ಅರಸರ ಆಡಳಿತದಲ್ಲಿ ಆರಂಭವಾದ ರೇಷ್ಮೆ, ಶ್ರೀಗಂಧದೆಣ್ಣೆ ಕಾರ್ಖಾನೆ

ಮೈಸೂರು: ದುಡಿಯುವ ಜನರಿಗೆ ಉದ್ಯೋಗ ನೀಡಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪ್ರಾರಂಭವಾದ ಕೈಗಾರಿಕೆಗಳು ಶತಮಾನೋತ್ಸವ ಕಂಡರೂ ಹೊಸತನ ಅಳವಡಿಸಿಕೊಳ್ಳದೆ ಇದ್ದರೂ, ಬದಲಾದ ಕಾಲಕ್ಕೆ ತಕ್ಕಂತೆ ಮೈಸೂರು ಹೂಡಿಕೆದಾರರ ಸ್ವರ್ಗವಾಗಿ ಹೆಬ್ಬಾಳು ಮತ್ತುತಾಂಡ್ಯ ಹೂಡಿಕೆ ವಲಯಗಳಾಗಿ ರೂಪುಗೊಂಡಿದ್ದರಿಂದ ಕೈಗಾರಿಕೆಗಳ ಸ್ಥಾಪನೆ, ಸಹಸ್ರಾರು ಮಂದಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ.

ಮೈಸೂರಿಗರ ಮನೆಮಾತಾಗಿದ್ದ ಜಾವಾ ಫ್ಯಾಕ್ಟರಿ, ಕೆ.ಆರ್.ಮಿಲ್ ಮರೆಯಾದರೂ, ಮೈಸೂರು ಇಂದು ಐಟಿ-ಬಿಟಿ ಕ್ಷೇತ್ರಗಳಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನವನ್ನು ಹೊಂದುವ ಮೂಲಕ ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿದೆ.

ಕೈಗಾರಿಕೆಗಳ ಸ್ಥಾಪನೆಗೆ ಅತ್ಯಂತ ಸೂಕ್ತ ಎನ್ನಿಸಿರುವ ಮೈಸೂರು ಹೊರವಲಯದಲ್ಲಿ ಅಗತ್ಯ ಭೂಮಿ ಸಿಗುವ ಜತೆಗೆ ಕಬಿನಿ, ಕೆಆರ್‌ಎಸ್ ಜಲಾಶಯಗಳಿರುವುದರಿಂದ ನಿರಾತಂಕವಾಗಿ ಸಾವಿರಾರು ಜನರಿಗೆ ಉದ್ಯೋಗ ಲಭಿಸುತ್ತಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೧೨ರಲ್ಲಿ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ (ಕೆಎಸ್‌ಐಸಿ), ೧೯೧೬ರಲ್ಲಿ ಗಂಧದ ಎಣ್ಣೆ ಮತ್ತು ಸಾಬೂನು ಕಾರ್ಖಾನೆ, ೧೯೩೭ರಲ್ಲಿ ಅರಗು ಮತ್ತು ಬಣ್ಣದ ಕಾರ್ಖಾನೆಗಳನ್ನು ಸ್ಥಾಪಿಸಿದ್ದು, ಸಾವಿರಾರು ಜನರಿಗೆ ಉದ್ಯೋಗದಾಯಕವಾಗಿವೆ. ಆದರೆ, ಕೆ.ಆರ್.ಮಿಲ್ ಮುಚ್ಚಿ ಹೋಗಿದೆ. ಮೈಸೂರು ನಗರದಲ್ಲಿ ಇನೋಸಿಸ್, ವಿಪ್ರೊ ಸ್ಥಾಪನೆಯಾದ ಮೇಲೆ ಮೈಸೂರು ಕರ್ನಾಟಕದ ಪ್ರಮುಖ ಐಟಿ ಕೇಂದ್ರಗಳಲ್ಲಿ ಒಂದಾಗಿರುವ ಜತೆಗೆ, ಸಾಫ್ಟ್ ವೇರ್  ರಫ್ತುಗಳಿಗಾಗಿ ಮೈಸೂರು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ.

ಇನ್ಛೋಸಿಸ್, ಲಾರ್ಸೆನ್ ಅಂಡ್ ಟ್ಯುಬ್ರೊ (ಎಲ್ ಅಂಡ್ ಟಿ), ವಿಪ್ರೊ ಟೆಕ್ನಾಲಜಿಸ್ ಸೇರಿದಂತೆ ಮೈಸೂರಿನಲ್ಲಿ ಸುಮಾರು ೫೦ ಐಟಿ ಕಂಪೆನಿಗಳಿವೆ. ಮೈಸೂರು ನಗರದ ಹೊರವಲಯದಲ್ಲಿ ಹೆಬ್ಬಾಳು ಹಾಗೂ ತಾಂಡ್ಯವನ್ನು ಹೂಡಿಕೆ ವಲಯಗಳನ್ನಾಗಿ ಗುರುತಿಸಲಾಗಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಮೈಸೂರು ಮತ್ತು ಇದರ ಸುತ್ತಲೂ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಿದೆ. ಬೆಳಗೊಳ, ಬೆಳವಾಡಿ, ಹೆಬ್ಬಾಳು, ಯಾದವಗಿರಿ, (ಎಲೆಕ್ಟ್ರಾನಿಕ್ ನಗರ), ಕೂರ್ಗಳ್ಳಿ ಮತ್ತು ಹೂಟಗಳ್ಳಿ, ನಂಜನಗೂಡು, ತಾಂಡ್ಯ, ಅಡಕನಹಳ್ಳಿ, ಕೋಚನಹಳ್ಳಿ, ಕಲ್ಲಹಳ್ಳಿ ಕೈಗಾರಿಕಾ ಪ್ರದೇಶಗಳನ್ನು ಹೊಂದಿದೆ.

ಭಾರತ್ ಅರ್ಥ್ ಮೂವರ‍್ಸ್ ಲಿಮಿಟೆಡ್, ಕಿರ್ಲೋಸ್ಕರ್, ವಿಕ್ರಾಂತ್ ಟೈರ್, ಜೇ ಬೇರಿಂಗ್ಸ್, ಆಟೋಮೋಟಿವ್ ಎಕ್ಸೆಲ್, ಎಟಿ ಅಂಡ್ ಎಸ್, ನೆಸ್ಲೆ, ರೀಡ್ ಅಂಡ್ ಟೇಲರ್, ಟಿವಿಎಸ್ ಕಂಪೆನಿ, ಬಣ್ಣಾರಿ ಅಮ್ಮನ್ ಸಕ್ಕರೆ ಫ್ಯಾಕ್ಟರಿ, ಸೌತ್ ಇಂಡಿಯಾ ಪೇಪರ್ ಮಿಲ್ಸ್, ಎಬಿಬಿ ಮುಂತಾದ ಪ್ರಮುಖ ಕೈಗಾರಿಕೆಗಳನ್ನು ಹೊಂದಿದ್ದರೆ, ಇನ್ಛೋಸಿಸ್, ವಿಪ್ರೊ, ಎಲ್ ಅಂಡ್ ಟಿ, ಎಸ್‌ಪಿಐ ಮುಂತಾದ ತಂತ್ರಜ್ಞಾನ ತರಬೇತಿ ಕೇಂದ್ರಗಳು ಮೈಸೂರು ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿವೆ.

ಮೈಸೂರಿನಲ್ಲಿ ಇನೋಸಿಸ್, ವಿಪ್ರೋ ನಂತರದಲ್ಲಿ ಈಗ ತಾಂಡ್ಯ, ಕೋಚನಹಳ್ಳಿ, ಅಡಕನಹಳ್ಳಿ ಕೈಗಾರಿಕಾ ಪ್ರದೇಶಗಳು ಬೃಹದಾಕಾರವಾಗಿ ಬೆಳೆಯುವ ನಿಟ್ಟಿನಲ್ಲಿ ಸಾಗಿವೆ. ರಾಜ್ಯ ಸರ್ಕಾರವು ನಂಜನಗೂಡುತಾಲ್ಲೂಕಿನಲ್ಲಿ ಅಗತ್ಯವಿರುವ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ನೀಡಲು ಮುಂದಾಗಿರುವ ಕಾರಣ ತಾಂಡ್ಯ, ಅಡಕನಹಳ್ಳಿ ಕೈಗಾರಿಕಾ ಪ್ರದೇಶಗಳು ಈಗ ಏಷಿಯನ್ ಪೇಂಟ್ಸ್ ಸೇರಿದಂತೆ ಅನೇಕ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇದಲ್ಲದೆ ಕೋಚನಹಳ್ಳಿ ಬಳಿ ಅನೇಕ ಕೈಗಾರಿಕೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಮೀಸಲಿಟ್ಟಿದೆ.

ಬೇಡಿಕೆಗೆ ತಕ್ಕಂತೆ ಭೂಮಿ: ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಒದಗಿಸಿಕೊಡುವ ಕೆಲಸ ಮಾಡಿಕೊಂಡು ಬಂದಿದೆ. ಮೈಸೂರು ಹೊರವಲಯದ ಶ್ರೀರಂಗಪಟ್ಟಣ ಹಸಿರು ಪ್ರದೇಶವಾಗಿರುವುದರಿಂದ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಕಷ್ಟು ವಿರೋಧ, ತಕರಾರು ಇರುವ ಕಾರಣಕ್ಕಾಗಿ ಈಗ ನಂಜನಗೂಡು ತಾಲ್ಲೂಕಿನ ಕಡೆಗೆ ಹೆಚ್ಚು ಗಮನ ಹರಿಸಲಾಗಿದೆ.

ಕೂರ್ಗಳ್ಳಿ, ಬೆಳವಾಡಿ ಭಾಗದಲ್ಲೂ ಭೂಮಿ ಸಿಗುತ್ತಿಲ್ಲ . ಹಾಗಾಗಿಯೇ ವರುಣ ಮತ್ತು ನಂಜನಗೂಡು ಕ್ಷೇತ್ರದ ಭಾಗದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿತರಿಸುವ ಕೆಲಸ ಮಾಡುತ್ತಿದೆ. ಮೈಸೂರು-ನಂಜನಗೂಡು ಮಾರ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದ ಬಳಿಕ ಈ ಪ್ರದೇಶಗಳಲ್ಲಿ ಕೈಗಾರಿಕೆಗಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿವೆ. ಮೈಸೂರು ಜಿಲ್ಲೆಯಲ್ಲಿ ೧ಲಕ್ಷದ ೩೦,೬೦೦ ಸೂಕ್ಷ್ಮ ಮತ್ತು ಸಣ್ಣ, ೬೨ ಮಧ್ಯಮ ಕೈಗಾರಿಕೆಗಳು ಹಾಗೂ ೨೧ ಬೃಹತ್ ಕೈಗಾರಿಕೆಗಳು ಇವೆ. ಇದರಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಂದ ಕನಿಷ್ಠ ನೂರು ಕಾರ್ಮಿಕರು ಇದ್ದರೆ, ದೊಡ್ಡ ದೊಡ್ಡ ಕೈಗಾರಿಕೆಗಳು ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿವೆ. ಜಿಲ್ಲೆಯಲ್ಲಿ ೭ ಲಕ್ಷದ ೧೩ ಸಾವಿರ ಕಾರ್ಮಿಕರು ಅಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ದಾಖಲೆಗಳಿವೆ.

‘ಕೈಗಾರಿಕೆ ಅಭಿವೃದ್ಧಿ ಕನವರಿಕೆ’ ಸರಣಿಯಲ್ಲಿ ಮೈಸೂರು ಕೈಗಾರಿಕೆಗಳು, ಉದ್ಯಮಿಗಳು ಹೂಡಿಕೆ ಮಾಡುವುದಕ್ಕೆ ಪೂರಕವಾಗಿದೆ. ಇದರ ಜೊತೆಗೆ ಕೈಗಾರಿಕೆಗಳು ಮತ್ತು ಕೈಗಾರಿಕಾ ಪ್ರದೇಶಗಳು ಎದುರಿಸುತ್ತಿರುವ ಸಮಸ್ಯೆಗಳು, ಉದ್ಯಮಗಳು ಮತ್ತು ಸ್ವಯಂಉದ್ಯೋಗ ಕೈಗೊಳ್ಳುವಸಂಬಂಧಿತ ಯೋಜನೆಗಳ ಬಗ್ಗೆ ಲೇಖನಗಳು ಪ್ರಕಟವಾಗಲಿವೆ.

* ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿದರೂ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡಿಲ್ಲವೆಂಬ ಆರೋಪವು ಭೂಮಿ ಕೊಟ್ಟ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

* ಕಾಲಕಾಲಕ್ಕೆ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಮೀನಮೇಷ ಎಣಿಸುವ ಕಾರಣ ನೌಕರರು ಸಂಘಟನೆಗಳ ಮೂಲಕ ಪ್ರತಿಭಟನೆ ಹಾದಿ ಹಿಡಿಯುವುದು ಸಾಮಾನ್ಯವಾಗಿದೆ.

* ಭೂಮಿ ಸ್ವಾಧಿನಪಡಿಸಿಕೊಳ್ಳುವ ಕೆಐಎಡಿಬಿ ಇಂದಿನ ಮಾರುಕಟ್ಟೆ ದರಕ್ಕೆ ಕಾರ್ಖಾನೆಗಳಿಂದ ಪರಿಹಾರ ಕೊಡಿಸಲು ಕ್ರಮಕೈಗೊಳ್ಳದ ಕಾರಣ ಅನೇಕರು ಪರಿಹಾರದ ಮೊತ್ತ ಸಾಕಾಗುವುದಿಲ್ಲವೆಂದು ನ್ಯಾಯಾಲಯದ ಮೊರೆ ಹೋಗಲು ಆಸ್ಪದವಾಗಿದೆ.

* ಕೆಐಎಡಿಬಿ ವತಿಯಿಂದ ಫಲವತ್ತಾದ ಭೂಮಿ ಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸುವಾಗ ರೈತರು ವಿರೋಧಿಸುವ ಕಾರಣ ಉದ್ದೇಶಿತ ಉದ್ಯಮ ಸ್ಥಾಪನೆಯ ಮಾಲೀಕರು ಅನ್ಯಕಡೆಗೆ ಮುಖ ಮಾಡುವಂತಾಗಿದೆ.

Tags:
error: Content is protected !!