ನಿರ್ವಹಣೆ ಇಲ್ಲದೆ ಕಲುಷಿತ ನೀರು ಪೂರೈಕೆ ಆರೋಪ; ಸಾಂಕ್ರಾಮಿಕ ಕಾಯಿಲೆ ಭೀತಿ
ಗುಂಡ್ಲುಪೇಟೆ: ತಾಲ್ಲೂಕಿನ ಕುರುಬರಹುಂಡಿ ಬಳಿ ಇರುವ ನೀರಿನ ಘಟಕದಿಂದ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಈ ಘಟಕದಲ್ಲಿ ಕಳೆದ ಒಂದು ವರ್ಷದಿಂದ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಘಟಕದಿಂದ ಕೆಸರು ಮಿಶ್ರಿತ ನೀರು ಪೂರೈಕೆಯಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಕೆಲವು ದಿನಗಳಿಂದ ಕೆಂಪು ಮತ್ತು ಬೂದು ಮಿಶ್ರಿತ ನೀರು ಪೂರೈಕೆಯಾಗುತ್ತಿದ್ದು ಈ ನೀರನ್ನು ಜನರು ನೇರವಾಗಿ ಕುಡಿಯಲು, ಅಡುಗೆ ಮಾಡಲು ಬಳಸುತ್ತಿರುವುದರಿಂದ ಜನರಿಗೆ ವಾಂತಿ, ಭೇದಿ ಕಾಣಿಸಿಕೊಳ್ಳುವ ಲಕ್ಷಣಗಳಿವೆ. ಇದು ಸಾಂಕ್ರಾಮಿಕ ರೋಗಕ್ಕೂ ತಿರುಗುವ ಸಾಧ್ಯತೆ ಇದೆ. ಆದ್ದರಿಂದ ಬಹುಗ್ರಾಮ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿದೆ. ಆದರೆ, ಶುದ್ಧ ನೀರು ಪೂರೈಕೆಯಾಗದೆ ಜನರ ಆರೋಗ್ಯ ಹದಗೆಟ್ಟರೆ ಯಾರು ಹೊಣೆ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನು ಓದಿ: ಟಿಎಪಿಸಿಎಂಎಸ್ ಸದಸ್ಯರಿಗೆ ಮತಹಕ್ಕು ಕಳೆದುಕೊಳ್ಳುವ ಭೀತಿ
ಇದರ ಜೊತೆಗೆ ಪ್ರತಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಆಯಾ ಪಿಡಿಒಗಳು ಭೇಟಿ ನೀಡಿ ನೀರಿನ ಟ್ಯಾಂಕ್ ಪರಿಶೀಲಿಸಿ ತಿಂಗಳಿಗೊಮ್ಮೆಯಾದರೂ ಸ್ವಚ್ಛತೆ ಮಾಡಿಸಬೇಕು. ಅಲ್ಲದೆ ಈ ಬಗ್ಗೆ ಇಒ ಮಟ್ಟದಲ್ಲಿ ತಾಲ್ಲೂಕಿನ ನೀರುಗಂಟಿಗಳ ಸಭೆ ಕರೆದು ಟ್ಯಾಂಕ್‌ಗಳ ಶುಚಿತ್ವಕ್ಕೆ ಸೂಚಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
” ಗುರುವಾರವೇ ಇಂಜಿನಿಯರ್ರನ್ನು ಕಳಿಸಿ ಪರಿಶೀಲಿಸಲಾಗುವುದು. ಅಲ್ಲಿ ಬೈಪಾಸ್ ಲಿಂಕ್ ನೀಡಿರುವುದರಿಂದ ಮಣ್ಣು ಸೇರಿಕೊಂಡಿರಬಹುದು. ಕೂಡಲೇ ಪೂರೈಕೆ ಸ್ಥಗಿತಗೊಳಿಸಿ, ಶುದ್ಧ ನೀರು ಬರುವಂತೆ ಕ್ರಮ ವಹಿಸಲಾಗುವುದು.”
-ಸಹನ, ಎಇಇ, ಬಹುಗ್ರಾಮ
” ಕುಡಿಯುವ ನೀರಿನ ಯೊಜನೆ ಮತ್ತು ನೈರ್ಮಲ್ಯ ಇಲಾಖೆ ನೀರು ಕೆಂಪು ಮತ್ತು ಬೂದು ಬಣ್ಣ ಮಿಶ್ರಿತವಾಗಿ ಬರುತ್ತಿದ್ದು ಗ್ರಾಮೀಣ ಜನರ ಮನೆಯಲ್ಲಿ ಕುಡಿಯಲು, ಅಡುಗೆಗೆ ಆ ನೀರನ್ನೇ ಬಳಸುವುದರಿಂದ ಆರೋಗ್ಯ ಸಮಸ್ಯೆ ಎದುರಾಗುವ ಆತಂಕವಿದೆ. ಕುರುಬರ ಹುಂಡಿ ಬಳಿ ದೊಡ್ಡ ನೀರಿನ ಘಟಕದ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.”
-ಮಹೇಶ್, ಸ್ಥಳೀಯರು
-ಮಹೇಂದ್ರ ಹಸಗೂಲಿ





