ಫೆ. ೧೮ರಂದು ವೈದ್ಯಕೀಯ ಶಿಕ್ಷಣ ಸಚಿವರಿಂದ ಸೇವೆಗೆ ಸಮರ್ಪಣೆ
ಪ್ರಸಾದ್ ಲಕ್ಕೂರು
ಚಾಮರಾಜನಗರ: ನಗರದ ಹೊರವಲಯದ ಯಡ ಬೆಟ್ಟದ ತಪ್ಪಲಿನಲ್ಲಿರುವ ಚಾಮರಾಜನಗರ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಬೋಧನಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಶೀಘ್ರ ಲಭ್ಯವಾಗಲಿದೆ.
ಫೆ. ೧೮ರಂದು ನಗರದಲ್ಲಿ ನಡೆಯುವ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರಿಂದ ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುತ್ತದೆ.
ಬೋಧನಾ ಆಸ್ಪತ್ರೆಯಲ್ಲಿ ಈಗಾಗಲೇ ಎಂ. ಆರ್. ಐ. ಸ್ಕ್ಯಾನಿಂಗ್ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು, ಸಿವಿಲ್ ಕೆಲಸಗಳನ್ನು ಸಹ ಮುಗಿಸಲಾಗಿದೆ. ಪ್ರಾಯೋಗಿಕ ಕಾರ್ಯ ನಡೆಸಿ ರೋಗಿಗಳ ಸೇವೆಗೆ ಸಜ್ಜುಗೊಳಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ೪ ಕೋಟಿ ರೂ. ವೆಚ್ಚದಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಘಟಕ ವನ್ನು ಸಿಮ್ಸ್ ಬೋಧನಾ ಆಸ್ಪತ್ರೆಯಲ್ಲಿ ಸ್ಥಾಪಿಸುವ ಟೆಂಡರ್ ಅನ್ನು ಯುನೈಟೆಡ್ ಇಮೆಜಸ್ ಸಂಸ್ಥೆಗೆ ನೀಡಿದ್ದರು. ಸಂಸ್ಥೆ ಈಗಾಗಲೇ ಯಂತ್ರೋಪಕರಣಗಳನ್ನು ಜೋಡಿಸಿದ್ದು ಸಂಬಂಧಪಟ್ಟ ಇಂಜಿನಿಯರ್ ಎಲ್ಲವನ್ನೂ ಪರಿಶೀಲಿಸಿ ಹೋಗಿದ್ದಾರೆ.
೧. ೫ ಟೆಸ್ಲಾ ಸಾಮರ್ಥ್ಯದ ಅತ್ಯಾಧುನಿಕ ಸ್ಕ್ಯಾನಿಂಗ್ ಯಂತ್ರೋಪಕರಣ ಅಳವಡಿಸಲಾಗಿದೆ. ಅಪಘಾತಕ್ಕೆ ಒಳಗಾಗಿ ತಲೆಗೆ ಪೆಟ್ಟು ಬಿದ್ದು ಮೆದುಳಿಗೆ ತೊಂದರೆಯಾ ಗಿದ್ದರೆ ಮತ್ತು ಬೆನ್ನು ಉರಿಗೆ ಪೆಟ್ಟಾಗಿದ್ದರೆ ಎಂಆರ್‌ಐ ಸ್ಕ್ಯಾನಿಂಗ್ ಮಾಡಿ ನಿಖರ ಕಾರಣ ಕಂಡುಹಿಡಿದು ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ಸಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜಿನ ೭೦೦ ಹಾಸಿಗೆಗಳ ಹುದೊಡ್ಡ ಈ ಬೋಧನಾ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಸಿಟಿ ಸ್ಕ್ಯಾನ್, ಅಟ್ಟ್ರಾ ಸೌಂಡ್ ಸ್ಕ್ಯಾನ್, ಎಕ್ಸ್‌ರೇ ಘಟಕಗಳನ್ನು ತೆರೆಯಲಾಗಿದೆ. ಎಂಆರ್‌ಐ ಸ್ಕ್ಯಾನಿಂಗ್ ಪ್ರಾರಂಭಿಸುವುದು ಮಾತ್ರ ಬಾಕಿಯಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಅಪಘಾತಗಳಾಗಿ ತಲೆಗೆ ಬಲವಾಗಿ ಪೆಟ್ಟಾದವರನ್ನು, ಪಾರ್ಶ್ವವಾಯುಗೆ ತುತ್ತಾದವ ರನ್ನು, ಬೆನ್ನು ಉರಿ ಸಮಸ್ಯೆಗೆ ಒಳಗಾದವರನ್ನು ಎಂಆರ್‌ಐ ಸ್ಕ್ಯಾನ್ ಮಾಡಿಸಿಕೊಂಡು ಬರುವಂತೆ ಮೈಸೂರಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿಂದ ಸ್ಕ್ಯಾನಿಂಗ್ ವರದಿ ಬಂದ ಬಳಿಕ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಜಿಲ್ಲಾ ಮಟ್ಟದ ಬಹುದೊಡ್ಡ ಬೋಧನಾ ಆಸ್ಪತ್ರೆಯಲ್ಲಿ ಪ್ರಮುಖವಾದ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ವಿರಲಿಲ್ಲ. ಇದನ್ನು ಆರಂಭಿಸಬೇಕೆಂಬ ಸಾರ್ವಜನಿಕರ ಕೂಗು ಬೋಧನಾ ಆಸ್ಪತ್ರೆ ಪ್ರಾರಂಭವಾದಗಿನಿಂದಲೂ ಇತ್ತು.
ಪಕ್ಕದ ಕೊಡಗು ಜಿಲ್ಲೆಯಲ್ಲಿ ಈ ಸೌಲಭ್ಯ ಲಭ್ಯವಾಗುತ್ತಿದೆ. ಇಷ್ಟೊತ್ತಿಗಾಗಲೇ ಈ ಸೌಲಭ್ಯ ಸಿಮ್ಸ್ ಆಸ್ಪತ್ರೆಯಲ್ಲಿ ಲಭಿಸಬೇಕಿತ್ತು ತಾಂತ್ರಿಕ, ಆಡಳಿತಾತ್ಮಕ ಕಾರಣಗಳು, ಅನುದಾನ ಬಿಡುಗಡೆ ವಿಳಂಬವಾದ ಕಾರಣ ಮುಂದೂಡಿಕೆ ಆಗಿತ್ತು.
ಎಸ್ಸಿ, ಎಸ್ಟಿ, ಎಬಿಆರ್‌ಕೆ ಕಾರ್ಡುದಾರರಿಗೆ ಉಚಿತ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿರುವ ರೋಗಿ ಮತ್ತು ಪರಿಶಿಷ್ಟ ಜಾತಿ, ಪ. ಪಂಗಡಗಳ ರೋಗಿಗಳಿಗೆ ಎಂಆರ್‌ಐ ಸ್ಕ್ಯಾನ್ ಉಚಿತವಾಗಿರುತ್ತದೆ. ಉಳಿದವರು ಸರ್ಕಾರ ನಿಗದಿ ಮಾಡಿರುವ ಸೇವಾ ಶುಲ್ಕವನ್ನು ಪಾವತಿಸಿ ಸೇವೆ ಪಡೆದುಕೊಳ್ಳಬಹುದು. ಎಂಆರ್‌ಐ ಸ್ಕ್ಯಾನಿಂಗ್ ಕಡು ಬಡವರು, ಮಧ್ಯಮ ವರ್ಗದ ಜನರಿಗೆ ದುಬಾರಿಯಾ ಗಿದೆ. ಅಲ್ಲದೆ ಮೈಸೂರಿನ ಆಸ್ಪತ್ರೆಗಳಿಗೆ ತೆರಳಿ ಮಾಡಿಸಿ ಕೊಂಡು ಬರುವುದು ಮತ್ತಷ್ಟು ಆರ್ಥಿಕ ಹೊರೆಯಾಗಿತ್ತು.