- ವಿವಿಧ ಕಾರಣಗಳಿಂದ ಕೊಡಗಿನತ್ತ ಮುಖ ಮಾಡಿದ ಪ್ರವಾಸಿಗರು
- ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಏರಿಕೆ
ಮಡಿಕೇರಿ: ಪೆಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ, ಶಾಲಾ ಮಕ್ಕಳಿಗೆ ರಜೆ ಇರುವ ಕಾರಣಗಳಿಂದ ಕೊಡಗು ಜಿಲ್ಲೆಯತ್ತ ಪ್ರವಾಸಿಗರು ಮುಖ ಮಾಡುತ್ತಿದ್ದು, ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಪೆಹಲ್ಗಾಮ್ ಉಗ್ರರದಾಳಿ, ಭಾರತದ ಆಪರೇಷನ್ ಸಿಂಧೂರ ಪ್ರತಿದಾಳಿ, ಸರಣಿ ಬ್ಲಾಕ್‌ಔಟ್‌ಗಳು ಉತ್ತರ ಭಾರತದ ಇತರೆ ರಾಜ್ಯಗಳ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿವೆ.
ಗೋವಾ, ಮಂಗಳೂರು, ಪಾಂಡಿಚೇರಿ, ಕನ್ಯಾಕುಮಾರಿಯಂತಹ ಕಡಲ ತೀರದಲ್ಲಿ ಬಿಸಿಲು ಹೆಚ್ಚಿರುವುದರಿಂದ ತಂಪಾಗಿರುವ ಪಶ್ಚಿಮ ಘಟ್ಟ ಪ್ರದೇಶಗಳನ್ನೇ ಪ್ರವಾಸಿಗರು ಆಯ್ದುಕೊಳ್ಳುತ್ತಿರುವುದು ವಿಶೇಷ. ಅದರಲ್ಲಿಯೂ ಕರ್ನಾಟಕದ ಮಲೆನಾಡು ಜಿಲ್ಲೆಗಳಲ್ಲಿ ಪ್ರಾಕೃತಿಕ ಪ್ರವಾಸಿತಾಣಗಳತ್ತ ಪ್ರವಾಸಿಗರು ಒಲವು ತೋರುತ್ತಿದ್ದು, ಅತಿಥಿ ಸತ್ಕಾರಕ್ಕೆ ಹೆಸರಾಗಿರುವ ಕೊಡಗು ಈ ತಾಣಗಳ ಪೈಕಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ದಕ್ಷಿಣ ಭಾತರದ ಪಶ್ಚಿಮ ಘಟ್ಟ ಸಾಲುಗಳಲ್ಲಿನ ಬಹುತೇಕ ಜಿಲ್ಲೆಗಳಲ್ಲಿಯೂ ಅಕರ್ಷಕ ಪ್ರಕೃತಿ ತಾಣಗಳಿವೆ. ಆದರೆ ಹೆಚ್ಚು ಪ್ರವಾಸಿಗರು ಕೊಡಗನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ತಂಪಾದ ವಾತಾವರಣ. ಪೂರ್ವ ಮುಂಗಾರು ಉತ್ತಮವಾಗಿ ಆಗುತ್ತಿರುವುದರಿಂದ ಈಗ ಕೊಡಗಿನಲ್ಲಿ ತಂಪಾದ ವಾತಾವರಣ ಕಂಡುಬರುತ್ತಿದೆ.
ಮತ್ತೊಂದೆಡೆ ಹೋಂ ಸ್ಟೇಗಳಲ್ಲಿ ಈ ಹಿಂದೆ ಇದ್ದ ಸಮಸ್ಯೆಗಳು ಬಹುತೇಕ ದೂರಾಗಿದ್ದು, ಅನಽಕೃತ ಹೋಂ ಸ್ಟೇಗಳು ಕಡಿಮೆಯಾಗಿವೆ. ಒಂದಷ್ಟು ಅನಽಕೃತ ಹೋಂ ಸ್ಟೇಗಳಿದ್ದರೂ ಬಹುತೇಕ ಮಾಲೀಕರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಶಿಸ್ತುಬದ್ಧವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಇದರಿಂದ ಟೂರಿಸಂ ಪ್ಲಾಟ್ ಫಾರಂಗಳಲ್ಲಿ ಕೊಡಗು ಪ್ರವಾಸಕ್ಕೆ ಆದ್ಯತೆ ನೀಡಲಾಗುತ್ತದೆ. ಜಿಲ್ಲೆಯಲ್ಲಿರುವ ಹೆಚ್ಚಿನ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ಉತ್ತಮ ರೇಟಿಂಗ್ ಮತ್ತು ರಿವ್ಯೂಗಳೊಂದಿಗೆ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುತ್ತಿವೆ.
೨೦೨೪ ಏಪ್ರಿಲ್‌ನಿಂದ ಮೇ ೨ನೇ ವಾರದವರೆಗೆ ಒಟ್ಟಾರೆ ೧೧. ೬೫ ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು. ಈ ಬಾರಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದವರ ಸಂಖ್ಯೆಯೇ ೧೧. ೯೫ ಲಕ್ಷದಷ್ಟಿದ್ದು, ರೆಸಾರ್ಟ್‌ಗಳಲ್ಲಿದ್ದವರು, ಹೋಂ ಸ್ಟೇಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಅಂದಾಜು ೨. ೫ ಲಕ್ಷ ಪ್ರವಾಸಿಗರು ಹೆಚ್ಚುವರಿಯಾಗಿ ಭೇಟಿ ನೀಡಿದ್ದಾರೆ. ೧೫ ದಿನಗಳಲ್ಲಿಯೇ ಪ್ರವಾಸಿಗರ ಭೇಟಿಯಲ್ಲಿ ೧. ೫ಲಕ್ಷ ಹೆಚ್ಚಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.
ಟ್ರಾವಲ್ ಏಜೆಂಟ್‌ಗಳು ಮತ್ತು ಆನ್‌ಲೈನ್ ಬುಕ್ಕಿಂಗ್ ಆಪ್‌ಗಳ ಮೂಲಕ ತಿಂಗಳ ಮೊದಲೇ ಬುಕ್ ಮಾಡಿದ್ದ ಉತ್ತರದ ಪ್ರವಾಸ ರದ್ದಾಗಿದೆ. ಆದರೆ ಬಹುತೇಕ ಟ್ರಾವಲ್ ಏಜೆಂಟ್‌ಗಳು ರದ್ದಾದ ಪ್ರವಾಸದ ಬುಕ್ಕಿಂಗ್ ಹಣ ಹಿಂದಿರುಗಿಸುವ ಬದಲು ಅವರಿಗೆ ದಕ್ಷಿಣದ ಆಯ್ಕೆ ನೀಡುತ್ತಿದ್ದಾರೆ. ಹೀಗಾಗಿ ಯೋಜಿತ ಪ್ರವಾಸವನ್ನು ರದ್ದುಗೊಳಿಸುವ ಬದಲು ಪ್ರವಾಸಿಗರು ಉತ್ತರದ ಬದಲು ದಕ್ಷಿಣವನ್ನು ಆಯ್ಕೆ ಮಾಡಿಕೊಂಡು ಇತ್ತ ಬರುತ್ತಿದ್ದಾರೆ. ಇದರಿಂದ ದಕ್ಷಿಣ ಭಾರತದ ಬಹುತೇಕ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಹರಿವು ಹೆಚ್ಚಳವಾಗಿದೆ.





