Mysore
33
clear sky

Social Media

ಸೋಮವಾರ, 04 ಮೇ 2026
Light
Dark

ಸಿಎಂ ತವರಲ್ಲಿ ಬೇಸಿಗೆ ಕಾಲದಲ್ಲೂ ಕ್ಷೀರ ಕ್ರಾಂತಿ

ಕೆ.ಬಿ.ರಮೇಶನಾಯಕ

ಪ್ರತಿನಿತ್ಯ ೯.೨೭ ಲಕ್ಷ ಲೀಟರ್ ಹಾಲು ಉತ್ಪಾದನೆ

ಪ್ರಸಕ್ತ ಸಾಲಿನಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ 

ಮೈಸೂರು: ಹೈನುಗಾರಿಕೆಯನ್ನು ನಂಬಿರುವ ಸಾವಿರಾರು ರೈತರಿಗೆ, ಹಸುಗಳನ್ನು ಸಾಕುವವರಿಗೆ ದೊರೆಯುತ್ತಿರುವ ಉತ್ತಮ ಸೌಲಭ್ಯಗಳ ಪರಿಣಾಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲೂ ಹಾಲು ಉತ್ಪಾದನೆಯಲ್ಲಿ ದಾಖಲೆ ನಿರ್ಮಾಣವಾಗಿದ್ದು, ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿ ಆಗಿದೆ.

ಕಳೆದ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಏಪ್ರಿಲ್ ತಿಂಗಳಲ್ಲಿ ಕೆಲವೊಂದು ದಿನ ೧೦ ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹವಾಗಿರುವುದು ಗಮನಾರ್ಹವಾಗಿದೆ. ಇದೇ ಪರಿಸ್ಥಿತಿ ಚಳಿಗಾಲದಲ್ಲೂ ಮುಂದುವರಿದರೆ ೧೨ ರಿಂದ ೧೩ ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ತಲುಪಬಹುದು ಎಂದು ಹೇಳಲಾಗಿದೆ.

ಜಿಲ್ಲೆಯಲ್ಲಿ ಹಲವಾರು ರೈತರು ಹಸುಗಳನ್ನು ಸಾಕಣೆ ಮಾಡುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ರೈತರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿರುವ ಪರಿಣಾಮ ಸಾಕಷ್ಟು ರೈತರು ಹೈನುಗಾರಿಕೆಯತ್ತ ಒಲವು ತೋರಿಸಲು ಪ್ರಾರಂಭಿಸಿದ್ದಾರೆ.

ದಾಖಲೆ ನಿರ್ಮಾಣ: ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ ೬.೯೦ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗಿತ್ತು. ೨೦೨೫-೨೬ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ ೯.೨೭ ಲಕ್ಷ ಲೀಟರ್ ದಾಖಲೆಯ ಪ್ರಮಾಣದ ಹಾಲು ಉತ್ಪಾದನೆಯಾಗಿದೆ. ಹಿಂದಿನ ಸಾಲಿಗೆ ಹೋಲಿಕೆ ಮಾಡಿದರೆ ೨.೩೭ಲಕ್ಷ ಲೀಟರ್‌ನಷ್ಟು ಹೆಚ್ಚುವರಿ ಹಾಲು ಉತ್ಪಾದನೆಯಾಗಿದೆ. ೨೦೨೬-೨೭ನೇ ಸಾಲಿನಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಹೊಂದಲಾಗಿದೆ.

ಹೆಚ್ಚಳಕ್ಕೆ ಕಾರಣವೇನು?: ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಹಲವಾರು ಕಾರಣಗಳು ಇವೆ. ಜಾನುವಾರುಗಳ ರೋಗಗಳನ್ನು ತಡೆಗಟ್ಟಲು ಇಲಾಖಾ ಅಧಿಕಾರಿ, ಸಿಬ್ಬಂದಿಗಳು ರೈತರ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡುತ್ತಿದ್ದು, ಇದರ ಪರಿಣಾಮ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಯಿಲೆಯ ಪ್ರಮಾಣ ಇಳಿಮುಖವಾಗಿ ಉತ್ತಮ ಪ್ರಮಾಣದಲ್ಲಿ ಹಾಲು ನೀಡುತ್ತಿವೆ. ಜಂತುನಾಶಕ ತಡೆಯಲು ಖನಿಜ ಮಿಶ್ರಣಗಳನ್ನು ನಿಯಮಿತವಾಗಿ ವಿತರಣೆ ಮಾಡಲಾಗುತ್ತಿದೆ.

ರೈತರಿಗೆ ಉಚಿತವಾಗಿ ಮೇವಿನ ಕಿರುಪೊಟ್ಟಣಗಳ ವಿತರಣೆ ಮಾಡಲಾಗುತ್ತಿದೆ. ಶೇ.೫೦ ಸಬ್ಸಿಡಿ ದರದಲ್ಲಿ ಮೇವು ಕತ್ತರಿಸು ಯಂತ್ರ ಹಾಗೂ ರಬ್ಬರ್ ನೆಲಹಾಸುಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತರ ಮನೆ ಬಾಗಿಲಿಗೇ ಪಶುವೈದ್ಯಕೀಯ ಸೇವೆ ಒದಗಿಸಲು ೧೦ ಸಂಚಾರ ಪಶುಚಿಕಿತ್ಸಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉತ್ತಮ ಕೃತಕಗರ್ಭಧಾರಣೆ ಮುಖಾಂತರ ಹೆಚ್ಚು ಇಳುವರಿ ನೀಡುವ ಉತ್ತಮ ರಾಸುಗಳ ಕರುಗಳ ಜನನವಾಗುತ್ತಿದೆ. ಮತ್ತಷ್ಟು ಸೇವೆ ಒದಗಿಸುವ ಉದ್ದೇಶದಿಂದ ಜಿಲ್ಲೆಗೆ ೩೧ ನೂತನ ಪಶುವೈದ್ಯಕೀಯ ಇಲಾಖೆಯ ಕಟ್ಟಡ, ೯ ಪ್ರಯೋಗಾಲಯಗಳು, ೩ ಪಾಲಿಕ್ಲಿನಿಕ್, ೧ ತರಬೇತಿ ಕೇಂದ್ರ, ಹೆಚ್ಚುವರಿಯಾಗಿ ೧೭ ಪಶುವೈದ್ಯ ಸಂಸ್ಥೆಗಳು ಮಂಜೂರಾಗಿವೆ. ಹೊಸದಾಗಿ ಗುತ್ತಿಗೆ ಆಧಾರದಲ್ಲಿ ೧೨ ಪಶುವೈದ್ಯರು ಮತ್ತು ೧೭೫ ಡಿ ದರ್ಜೆ ನೌಕರರ ನೇಮಕಾತಿ ಮಾಡಿ ಅವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮೇವಿಗಿಲ್ಲ ಕೊರತೆ: ಬೇಸಿಗೆ ಸಂದರ್ಭದಲ್ಲಿ ಮೇವಿನ ಕೊರತೆ ಕಂಡು ಬಂದರೆ ಹಾಲಿನ ಉತ್ಪಾದನೆಯ ಪ್ರಮಾಣ ತೀವ್ರವಾಗಿ ಇಳಿಮುಖವಾಗುತ್ತದೆ. ಈ ರೀತಿಯ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಅಗತ್ಯ ಕ್ರಮ ವಹಿಸಿದೆ.

ಈ ಬಾರಿ ಬೇಸಿಗೆಗೆ ಅಗತ್ಯವಾದಷ್ಟು ಮೇವು ದಾಸ್ತಾನು ಇದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹೋದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಿದ್ಧತೆ ಕೈಗೊಂಡಿದೆ. ರೈತರು ಸಾಕಷ್ಟು ಪ್ರಮಾಣದಲ್ಲಿ ಭತ್ತ, ರಾಗಿ ಹುಲ್ಲು, ಜೋಳದ ಕಡ್ಡಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಇದರ ಜತೆಗೆ ರೈತರಿಗೆ ಈ ಹಿಂದೆ ನೀಡಿದ್ದ ಮೇವಿನ ಸಸಿಗಳನ್ನು ರೈತರು ತಮ್ಮ ಹೊಲದ ಬದುಗಳಲ್ಲಿ ಬೆಳೆಸಿದ್ದು, ಈ ಸಸಿಗಳು ಮರಗಳಾಗಿ ಬೆಳೆದು ನಿಂತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ಮೇವು ಸಹ ಜಾನುವಾರುಗಳಿಗೆ ದೊರೆಯುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೈತರಿಗೆ ಇಲಾಖೆಯಿಂದ ಮೇವಿನ ೧,೫೦೦ ಮಿನಿ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ತೊಟ್ಟಿಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ನೀರು ಒದಗಿಸುವ ಕಾರ್ಯ ನಡೆಯುತ್ತಿದೆ.

” ರೈತರಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಹಲವಾರು ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರ ಪರಿಣಾಮ ರೈತರು ಜಾನುವಾರುಗಳ ಸಾಕಾಣೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಕಳೆದ ಸಾಲಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರತಿನಿತ್ಯ ಸರಾಸರಿ ೯.೨೭ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಹಾಲು ಉತ್ಪಾದನೆಯಾಗುವ ನಿರೀಕ್ಷೆ ಹೊಂದಿದ್ದೇವೆ.”

-ಸಿ. ನಾಗರಾಜು, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ 

” ಕಳೆದ ವರ್ಷಕ್ಕೆ ಹೋಲಿಸಿದರೆ ೧.೭೦ ಸಾವಿರ ಲೀಟರ್ ಹಾಲು ಸಂಗ್ರಹ ಜಾಸ್ತಿಯಾಗುತ್ತಿದೆ. ಇಂದಿನ ಹಾಲು ಸಂಗ್ರಹದ ಪ್ರಮಾಣ ನೋಡಿದರೆ ೯.೭೨ ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ. ಮೈಮುಲ್‌ನಿಂದ ರೈತರಿಗೆ ಬೇಕಾಗುವ ಮೇವು, ಬೀಜ ಪೂರೈಸಲಾಗುತ್ತಿದೆ. ಸರ್ಕಾರದ ಪ್ರೋತ್ಸಾಹಧನವನ್ನೂ ವಿಳಂಬವಿಲ್ಲದೆ ನೀಡಲಾಗುತ್ತಿದೆ. ಹಾಲು ಸಂಗ್ರಹಣೆಯ ಜತೆಗೆ, ಮಾರಾಟದ ಪ್ರಮಾಣದಲ್ಲೂ ಹೆಚ್ಚಾಗಿದೆ.”

-ಕೆ.ಎನ್.ಸುರೇಶ್ ನಾಯ್ಕ, ವ್ಯವಸ್ಥಾಪಕ ನಿರ್ದೇಶಕರು, ಮೈಮುಲ್

 

 

Tags:
error: Content is protected !!