Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

‘ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಕ್ರಮಕೈಗೊಳ್ಳಬೇಕು’

ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ

ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ ನೀರನ್ನು ಹರಿಸಲಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಗುತ್ತಲು ಕೆರೆ ಹಾಗೂ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಗುತ್ತಲು ಕೆರೆಗೆ ತ್ಯಾಜ್ಯ ನೀರು ಹರಿಸಲಾಗುತ್ತಿರುವ ಬಗ್ಗೆ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಗುತ್ತಲು ಕೆರೆಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಉನ್ನತೀಕರಣಕ್ಕಾಗಿ ೩೦ ಕೋಟಿ ರೂ. ಟೆಂಡರ್ ಕರೆದು, ಮಾರ್ಚ್‌ನಲ್ಲಿ ಗುತ್ತಿಗೆದಾರರಿಗೆ ಕೆಲಸ ಆರಂಭಿಸಲು ಆದೇಶ ನೀಡಲಾಗಿದ್ದರೂ ಕೆಲಸ ಆರಂಭ ತಡವಾಗಿರುವುದರಿಂದ ಕೆಲಸ ಯಾವ ಹಂತಗಳಲ್ಲಿ ತಡವಾಗಿದೆ ಎಂಬುದರ ಬಗ್ಗೆ ಪರಿಶೀಲಿಸಿದರು.

ಪರಿಶೀಲನೆ ಸಮಯದಲ್ಲಿ ಗುತ್ತಲು ಕೆರೆಗೆ ಹಾಲಹಳ್ಳಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಒಳಚರಂಡಿ ಕೊಳವೆ ಮಾರ್ಗವನ್ನು ನೇರವಾಗಿ ತೆರೆದು ಚರಂಡಿಗೆ ಸಂಪರ್ಕ ಕಲ್ಪಿಸಿದ್ದು, ಇದರಿಂದ ತ್ಯಾಜ್ಯ ನೀರು ಕೆರೆಗೆ ಹರಿಯುತ್ತಿದೆ. ಪ್ರತಿಬಂಧಕ ಮತ್ತು ವಿಭಾಗದ ಮೂಲಕ ಹತ್ತಿರದ ಮ್ಯಾನ್‌ಹೋಲ್‌ಗಳಿಂದ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ರೊಚ್ಚು ನೀರನ್ನು ಪಂಪ್ ಮಾಡಿ ಸಂಸ್ಕರಿಸಬೇಕು ಎಂದು ಈಗಾಗಲೇ ಅನುಮೋದನೆಗೊಂಡು ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ನೀಡಿರುವ ಟೆಂಡರ್‌ದಾರರಿಗೆ, ಕೆಯುಐಡಿಎಫ್‌ಸಿ ಹಾಗೂ ನಗರಸಭೆ ಅದಿಕಾರಿಗಳಿಗೆ ಸೂಚಿಸಿದರು.

ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಲ್ಲಿ ಅಳವಡಿಸಿರುವ ಎಸ್.ಟಿ.ಪಿ.ಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿದ ನೀರನ್ನು ಮಂಡಳಿಯು ನಿಗದಿಪಡಿಸಿರುವ ಮಾನಕಗಳಿಗೆ ಅನುಗುಣವಾಗಿ ಸಂಸ್ಕರಣೆ ಮಾಡಿ ಸಮೀಪದಲ್ಲಿರುವ ವ್ಯವಸಾಯ ಭೂಮಿಗೆ ಹಾಗೂ ತೋಟಗಾರಿಕೆಗೆ ಉಪಯೋಗಿಸಲು ಸೂಕ್ತ ಕ್ರಮವಹಿಸಬೇಕು. ಈ ವಿಚಾರದಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ ಕೆಲಸದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಕರೆಯಬೇಕು ಎಂದು ಸೂಚನೆ ನೀಡಿದರು. ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ: ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿನ ಕಾಳೇನಹಳ್ಳಿ ಗ್ರಾಮದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತರಾದ ಯು.ಪಿ.ಪಂಪಾಶ್ರೀ ಅವರಿಗೆ ಸೂಚಿಸಿದರು.

ಡಿ.ಪಿ.ಆರ್. ರೀತ್ಯಾ ಗುತ್ತಿಗೆದಾರರಿಂದ ಶೇ.೪೨ರಷ್ಟು ಸಂಸ್ಕರಣೆ ಮಾಡಿರುವ ತ್ಯಾಜ್ಯವನ್ನು ಹೊರತುಪಡಿಸಿ ಉಳಿದ ಪಾರಂಪರಿಕ ತ್ಯಾಜ್ಯವನ್ನು ನಿಗದಿತ ಅವಧಿಯಲ್ಲಿ ತುರ್ತಾಗಿ ವಿಲೇವಾರಿ ಮಾಡಬೇಕು. ಪಾರಂಪರಿಕ ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ಉತ್ಪತ್ತಿಯಾಗುವ ನಿರುಪಯುಕ್ತ ತ್ಯಾಜ್ಯವನ್ನು ಈ ಸ್ಯಾನಿಟರಿ ಲ್ಯಾಂಡ್ ಫಿಲ್‌ಗಳಲ್ಲಿ ಸಂಗ್ರಹಿಸಿ ಭರ್ತಿ ಮಾಡಲಾಗುವ ಬಗ್ಗೆ ಕ್ರಮವಹಿಸಬೇಕು ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಬೀದಿ ನಾಯಿಗಳ ಹಾವಳಿ ತಪ್ಪಿಸುವ ಸಂಬಂಧ ಸ್ಥಳೀಯ ನಿವಾಸಿಗಳು, ಆರ್ ಡಬ್ಲ್ಯುಎಗಳು ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿಗೆ ಜನನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕಅಭಿಯಂತರ ಪ್ರತಾಪ್, ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

” ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುವಾಗ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸಿ, ನಂತರ ನೆಲ ಭರ್ತಿ ಜಾಗದಲ್ಲಿ ಸೂಕ್ತ ಕ್ರಮವಹಿಸಿ ವಿಲೇವಾರಿ ಮಾಡಬೇಕು. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇರುವ ಬೋರ್ ವೆಲ್‌ಗಳ ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡಿಸಲು ಹಾಗೂ ಈ ಜಾಗದಲ್ಲಿ ತರಕಾರಿ ಗಿಡಗಳು, ಹಣ್ಣಿನ ಗಿಡಗಳನ್ನು ಹಾಗೂ ಹಸುವಿಗೆ ಹಾಕುವ ಹುಲ್ಲನ್ನು ಬೆಳೆಸಲಾಗಿದ್ದು, ಇದರಿಂದ ಹಣ್ಣು ಮತ್ತು ತರಕಾರಿಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪರೀಕ್ಷೆ ಮಾಡಿಸಲು ಕ್ರಮವಹಿಸಬೇಕು.”

-ಡಾ.ಕುಮಾರ, ಜಿಲ್ಲಾಧಿಕಾರಿ

Tags:
error: Content is protected !!