ವಿಶ್ವಸ್ಥ ಮಂಡಳಿಯಿಂದ ಆರಂಭವಾದ ಪ್ರಾಧಿಕಾರಕ್ಕೆ ಹೊಸ ರೂಪ
ಕೆ. ಬಿ. ರಮೇಶನಾಯಕ
ಮೈಸೂರು: ಮೈಸೂರಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರವನ್ನು ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ’ವಾಗಿ ಮೇಲ್ದರ್ಜೆಗೆ ಏರಿಸಿ ಇತ್ತೀಚೆಗೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಮುಡಾ ತನ್ನ ಕಾರ್ಯವ್ಯಾಪ್ತಿಯನ್ನು ಬದಲಿಸಿಕೊಂಡಿದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ-೧೯೮೭ ಕಲಂನಡಿ ಕಾರ್ಯ ನಿರ್ವ ಹಿಸುತ್ತಿದ್ದ ಮುಡಾ, ಎಂಡಿಎ ಆಗಿ ಪರಿವರ್ತನೆ ಗೊಂಡಿರುವ ಕಾರಣ ಹೊಸ ಕಾಯ್ದೆ, ನಿಯಮ ಗಳೊಂದಿಗೆ ತನ್ನ ಹೆಜ್ಜೆ ಇಡಲು ಅಣಿಯಾಗಿದೆ.
ಬಿಡಿಎ ಮಾದರಿಯಲ್ಲಿ ಎಂಡಿಎ ರಚನೆ ಮಾಡಿ ರುವ ಕಾರಣ ಇಂದಿನ ಕಾಲಕ್ಕೆ ತಕ್ಕಂತೆ ಹೊಸದಾದ ನಿಯಮಗಳು, ಕಲಂ, ಕಾಯಿದೆಗಳನ್ನು ಪ್ರತ್ಯೇಕ ವಾಗಿ ರೂಪಿಸಿ ಕಳುಹಿಸಲಾಗುತ್ತಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ ಮೇಲೆ ತಾನಾಗಿಯೇ ಹೊಸ ಕಾಯ್ದೆಗಳ ಮೂಲಕ ಕೆಲಸ ಕಾರ್ಯಗಳು ನಡೆಯಲು ಆರಂಭವಾಗಲಿವೆ.
ತಾಲ್ಲೂಕುಗಳು, ಹಳ್ಳಿಗಳ ಅಭಿವೃದ್ಧಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಿಡಿಪಿ ಪ್ರಕಾರ ಮಾತ್ರ ಅಂದರೆ ಸೀಮಿತವಾಗಿ ಕಾರ್ಯ ನಿರ್ವಹಿಸಬೇಕಿತ್ತು. ಆದರೆ, ಈ ಮೈಸೂರು ವ್ಯಾಪ್ತಿಯನ್ನು ಮೀರಿ ಅಭಿವೃದ್ಧಿ ಕೆಲಸ ಮಾಡ ಬಹುದು. ನಂಜನಗೂಡು, ಶ್ರೀರಂಗಪಟ್ಟಣ ಜತೆಗೆ ಇತರ ಪಟ್ಟಣ, ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲು ಅವಕಾಶವಿದೆ. ಸರ್ಕಾರದಿಂದ ನೇರವಾಗಿ ಅನುದಾನ ಬರುವುದರಿಂದ ತಾಲ್ಲೂಕು ಕೇಂದ್ರಗಳ ಜತೆಗೆ ಅದರ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೂ ಒಳ್ಳೆಯ ಅವಕಾಶ ಒದಗಿದೆ.
ಆಕ್ಟ್‌ಗೆ ಎದುರು ನೋಡುತ್ತಿರುವ ಅಧಿಕಾರಿ ವರ್ಗ: ಬಿಡಿಎ ಮಾದರಿಯಲ್ಲಿ ರೂಪಿಸಿರುವ ಎಂಡಿಎನಲ್ಲಿ ರೂಪಿಸಿರುವ ಆಕ್ಟ್‌ಗಳ ಅಧಿಸೂಚನೆ ಹೊರಬಿದ್ದ ಮೇಲೆ ಮತ್ತಷ್ಟು ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಅಧ್ಯಕ್ಷರನ್ನು ಸರ್ಕಾರ ನೇಮಕ ಮಾಡಬಹುದಾಗಿದ್ದು, ಆಯುಕ್ತರ ಹುದ್ದೆಗೆ ಐಎಎಸ್ ಅಥವಾ ಹಿರಿಯ ಕೆಎಎಸ್ ಅಧಿಕಾರಿ ಎನ್ನುವುದನ್ನು ಸೇರಿಸಲಾಗಿದ್ದರೆ, ಉಪ ವಿಭಾಗಾಧಿಕಾರಿ ಸಮಾನವಾದ ಹುದ್ದೆಯನ್ನು ಕಾರ್ಯದರ್ಶಿ ಸ್ಥಾನಕ್ಕೆ ನಿಯೋಜಿಸಲಾಗುತ್ತಿತ್ತು. ಈಗ ಸೂಪರ್ ಸ್ಕೇಲ್ ಕೆಎಎಸ್ ಅಧಿಕಾರಿ ನಿಯೋಜಿಸಬೇಕಿದ್ದರೆ, ನಗರ ಯೋಜಕ ಸದಸ್ಯರ ಜತೆಗೆ ಹೆಚ್ಚುವರಿ ಜಂಟಿ ನಿರ್ದೇಶಕರ ಹುದ್ದೆ ಸೃಜಿಸ ಲಾಗಿದೆ. ಎಸ್‌ಇ ಬದಲಿಗೆ ಮುಖ್ಯ ಇಂಜಿನಿಯರ್ ವೃಂದದ ಅಽಕಾರಿಯನ್ನಾಗಿ ಪದನಾಮಗೊಳಿಸ ಲಾಗಿದೆ. ಹೀಗಾಗಿ, ಕಾರ್ಯದರ್ಶಿ, ಆಯುಕ್ತರ ಹಂತದಲ್ಲಿ ಒಂದಿಷ್ಟು ನಿರ್ಧಾರ ಕೈಗೊಳ್ಳುವುದಕ್ಕೆ ಅವಕಾಶ ನೀಡಿರುವುದರಿಂದ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಸಮಯ ಕಾಯ ಬೇಕಿಲ್ಲ ಎನ್ನುವುದು ಗಮನಾರ್ಹವಾಗಿದೆ.
ವಸತಿ ಸಮುಚ್ಚಯ ನಿರ್ಮಾಣವಿಲ್ಲ: ನಗರ ಮತ್ತು ಹೊರಗೆ ಕರ್ನಾಟಕ ಗೃಹ ಮಂಡಳಿ ಯವರು ನಿರ್ಮಿಸುತ್ತಿದ್ದ ವಸತಿ ಸಮುಚ್ಚಯ ಕಟ್ಟಡಗಳ ನಿರ್ಮಾಣಕ್ಕೆ ಬ್ರೇಕ್ ಬಿದ್ದಿದೆ. ಹಳೆಯ ಯೋಜನೆಗಳು ಪೂರ್ಣವಾದ ಮೇಲೆ ಹೊಸ ಯೋಜನೆಗಳನ್ನು ಆರಂಭಿಸುವಂತಿಲ್ಲ. ಅದೇ ರೀತಿ ಖಾಸಗಿ ಗೃಹ ನಿರ್ಮಾಣದಾರರು ನಕ್ಷೆ ಅನುಮೋದನೆ ಪಡೆಯುವುದು ಸೇರಿದಂತೆ ಇನ್ನಿತರ ವಿಚಾರಕ್ಕೆ ಅನುಮೋದನೆ ಪಡೆಯಬೇಕಿದೆ.
ಬಡಾವಣೆಗಳಿಗೂ ಸೌಲಭ್ಯ: ಮುಡಾದಿಂದ ರಚನೆಯಾಗಿರುವ ಬಡಾವಣೆಗಳಿಂದ ೩೯,೨೪೪ ನಿವೇಶನಗಳನ್ನು ಹಂಚಿಕೆ ಮಾಡಿರುವ ಜತೆಗೆ ಮೂಲಸೌಕರ್ಯ ಒದಗಿಸಲಾಗಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್, ಒಳ ಚರಂಡಿ ಕಲ್ಪಿಸಿದ್ದು, ಪ್ರಮುಖವಾಗಿ ಶಾಂತವೇರಿ ಗೋಪಾಲಗೌಡನಗರ, ಸರ್ದಾರ್ ವಲ್ಲಭ ಭಾಯ್ ಪಟೇಲ್ ನಗರ, ವಸಂತನಗರ, ವಿಜಯನಗರ ಒಂದನೇ ಹಂತ, ಎರಡು, ಮೂರು ಮತ್ತು ನಾಲ್ಕನೇ ಹಂತಗಳು, ದಟ್ಟಗಳ್ಳಿ ಸೇರಿದಂತೆ ಪ್ರತಿಷ್ಠಿತ ಬಡಾವಣೆಗಳಿಗೆ ಮೂಲ ಸೌಕರ್ಯ ಇದೆ. ದಟ್ಟಗಳ್ಳಿ, ಆರ್. ಟಿ. ನಗರಕ್ಕೆ ಕಬಿನಿ ಎರಡನೇ ಹಂತದ ಯೋಜನೆ ಪೂರ್ಣಗೊಂಡ ಮೇಲೆ ಸಮರ್ಪಕವಾಗಿ ನೀರು ದೊರೆಯಲಿದೆ. ಖಾಸಗಿ ಬಡಾವಣೆಗಳನ್ನು ಈಗ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ನಿರ್ವಹಣೆಗಾಗಿ ವರ್ಹಿಸಲಾಗುತ್ತಿದ್ದು, ಈ ತನಕ ೯೦೦ ಖಾಸಗಿ ಬಡಾವಣೆಗಳನ್ನು ಹಸ್ತಾಂತರಿಸಲಾಗಿದೆ. ಉಳಿದಿರುವ ೪೫೦ಕ್ಕೂ ಹೆಚ್ಚು ಬಡಾವಣೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲ ಬಡಾವಣೆಗಳಿಗೂ ಮೂಲಸೌಕರ್ಯದ ಕೊರತೆ ನೀಗಿಸಲು ಬೇಕಾದ ಅನುದಾನವನ್ನು ಅಭಿವೃದ್ಧಿ ನಿಧಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
೧೨೧ ವರ್ಷಗಳ ಇತಿಹಾಸ: ಮೈಸೂರು ನಗರವು ವ್ಯವಸ್ಥಿತವಾಗಿ ರೂಪುಗೊಳ್ಳಬೇಕೆಂಬ ಕಾರಣಕ್ಕಾಗಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೦೪ರಲ್ಲಿ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯನ್ನು ರಚಿಸಲಾಗಿತ್ತು. ಸುಮಾರು ೮೪ ವರ್ಷಗಳ ಕಾಲ ಸಿಐಟಿಬಿ ಆಗಿ ಕಾರ್ಯ ನಿರ್ವಹಿಸಿದ ಬಳಿಕ ೧೯೮೮ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಽಕಾರ ವಾಗಿ ರೂಪುಗೊಂಡಿತ್ತು.
ಸುಮಾರು ೪೭ ವರ್ಷಗಳ ಕಾಲ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿ ನಿಯಮ -೧೯೮೭ ಕಲಂ ಅಡಿ ಕಾರ್ಯ ನಿರ್ವಹಿಸುತ್ತಿದ್ದ ಮುಡಾ, ಈಗ ಎಂಡಿಎ ಆಗಿ ರೂಪಾಂತರಗೊಂಡು ಸ್ವತಂತ್ರ ಸಂಸ್ಥೆಯಾಗಿದೆ.





