ಕೆ.ಬಿ.ರಮೇಶನಾಯಕ
ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ
ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿಬಿ) ಅಧ್ಯಕ್ಷ ಸ್ಥಾನದ ಚುನಾವಣೆಗೆ ಯಾವುದೇ ಕ್ಷಣದಲ್ಲಿ ದಿನಾಂಕ ನಿಗದಿಯಾಗುವ ಸಾಧ್ಯತೆ ಇದ್ದು, ಈ ಸ್ಥಾನಕ್ಕಾಗಿ ಹಲವು ಆಕಾಂಕ್ಷಿಗಳು ಸದ್ದಿಲ್ಲದೆ ಕಸರತ್ತು ಆರಂಭಿಸಿದ್ದಾರೆ.
ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಬಹುಮತ ಹೊಂದಿರುವುದರಿಂದ ಈ ಬಾರಿ ಅಧ್ಯಕ್ಷ ಗಾದಿ ಹಿಡಿಯಲು ತೀವ್ರ ಪೈಪೋಟಿ ಶುರುವಾಗಿದೆ. ಇದರಿಂದಾಗಿ ಮುಂದೆ ಚುನಾವಣೆ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ. ಆಡಳಿತ ಮಂಡಳಿಯ ೧೩ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ನ್ಯಾಯಾಲಯದಲ್ಲಿ ಮೆಟ್ಟಿಲೇರಿದ್ದ ನಾಲ್ಕು ಕ್ಷೇತ್ರಗಳ ಫಲಿತಾಂಶವೂ ಇದೀಗ ಪ್ರಕಟವಾಗಿರುವುದರಿಂದ ಇತ್ಯರ್ಥವಾಗಿರುವುದರಿಂದಯಾವುದೇ ಕ್ಷಣದಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ.
ಈಗಾಗಲೇ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸುವ ಕುರಿತಾಗಿ ಚುನಾವಣಾಧಿಕಾರಿಗಳು ಸಹಕಾರ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಚುನಾವಣೆಗೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮೇಲುಗೈ: ಎಂಸಿಡಿ ಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ೧೩ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ೧೦ ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದ್ದಾರೆ. ಉಳಿದ ಮೂರು ಸ್ಥಾನಗಳಲ್ಲಿ ಜಾ.ದಳ- ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತರಾಗಿ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಅನಿಲ್ ಚಿಕ್ಕಮಾದು, ಎಂಎಸ್‌ಐಎಲ್ ಅಧ್ಯಕ್ಷರೂ ಆದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಆರ್.ನರೇಂದ್ರ, ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳ ಅಧ್ಯಕ್ಷ ಎಸ್.ಚಂದ್ರಶೇಖರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎಂ.ಕೆಂಚಪ್ಪ, ಶಾಸಕ ತನ್ವೀರ್ ಸೇಠ್ ಆಪ್ತ ಜಿ.ಎನ್.ಮಂಜುನಾಥ್, ವೈ.ಎನ್.ಜಯರಾಮು, ಇ.ಪಿ.ಲೋಕೇಶ್ ಆಯ್ಕೆಯಾಗಿದ್ದಾರೆ.
ಜಾ.ದಳ-ಬಿಜೆಪಿ ಬೆಂಬಲಿತರಾಗಿ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ, ಮೈಮುಲ್ ನಿರ್ದೇಶಕ ಬಿ.ಎನ್.ಸದಾನಂದ, ತಿ.ನರಸೀಪುರದ ಟಿ.ಪಿ.ಬೋರೇಗೌಡ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರು ಹತ್ತು ಸ್ಥಾನಗಳನ್ನು ಗೆದ್ದಿರುವ ಕಾರಣ ಸರ್ಕಾರದ ನಾಮನಿರ್ದೇಶಿತರ ಬಲ ಇಲ್ಲದಿದ್ದರೂ ಅಧಿಕಾರ ಹಿಡಿಯಲಿದ್ದಾರೆ.
ಸದ್ದಿಲ್ಲದೆ ಪೈಪೋಟಿ: ಸಹಕಾರ ಸಂಸ್ಥೆಗಳ ಮಾತೃಸಂಸ್ಥೆಯಾಗಿರುವ ಹಾಗೂ ಲಕ್ಷಾಂತರ ರೈತರ ಪಾಲಿಗೆ ನೆರವಾಗುವ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷಗಾದಿಯನ್ನು ಅಲಂಕರಿಸಲು ಅನೇಕರು ಸದ್ದಿಲ್ಲದೆ ಪೈಪೋಟಿ ಶುರು ಮಾಡಿದ್ದಾರೆ. ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರು ತಮ್ಮ ತಂದೆಯನ್ನು ಅಧ್ಯಕ್ಷ ಗಾದಿಯಲ್ಲಿ ಕೂರಿಸಲು ಮುಖ್ಯಮಂತ್ರಿ ಅವರ ಜೊತೆಗೆ ಈಗಾಗಲೇ ಒಂದು ಸುತ್ತು ಚರ್ಚೆ ನಡೆಸಿದ್ದಾರೆ.ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿಯು ಈತನಕ ಹಿಂದುಳಿದ ವರ್ಗಕ್ಕೆ ದಕ್ಕಿಲ್ಲದ ವಿಚಾರವನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಎಸ್.ಚಂದ್ರಶೇಖರ್ ಸಹಕಾರಕ್ಷೇತ್ರದಲ್ಲಿ ತಮಗಿರುವ ಅನುಭವದ ಜೊತೆಗೆ, ಮುಂದಿನ ದಿನಗಳಲ್ಲಿ ಬ್ಯಾಂಕಿನ ವ್ಯಾವಹಾರದಲ್ಲಿ ಬದಲಾವಣೆಗಳನ್ನು ತರಲು ತಮಗೆ ಅವಕಾಶ ಮಾಡಿಕೊಡುವಂತೆ ಪ್ರಸ್ತಾಪಿಸಿದ್ದಾರೆ. ಇವರಿಗೆ ಶಾಸಕರಾದ ಕೆ.ಹರೀಶ್ ಗೌಡ, ತನ್ವೀರ್‌ಸೇಠ್ ಬೆಂಬಲವಿದೆ ಎನ್ನಲಾಗಿದೆ.
” ಚಾಮರಾಜನಗರ ಜಿಲ್ಲೆಯಲ್ಲಿ ಆರ್.ನರೇಂದ್ರ ಅವರ ನಂತರ ಅವಕಾಶ ದೊರೆಯದ ಕಾರಣ ಚಾಮರಾಜನಗರ ಜಿಲ್ಲೆಗೆ ಪ್ರಾತಿನಿಧ್ಯ ನೀಡುವ ಮೂಲಕ ಎಚ್.ಎಂ.ಗಣೇಶ್ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಒಂದು ಗುಂಪು ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೇರಲು ಸಜ್ಜಾಗಿದೆ. ಆದರೆ, ಹನೂರು ಕ್ಷೇತ್ರದ ಚುನಾವಣೆಯಲ್ಲಿ ಪರಾಭವಗೊಂಡಿರುವ ಆರ್.ನರೇಂದ್ರ ಕೂಡ ಮತ್ತೊಮ್ಮೆ ತಮಗೆ ಅವಕಾಶ ನೀಡುವಂತೆ ಮನವಿ ಮಾಡಲು ಅಣಿಯಾಗಿದ್ದಾರೆ.”
ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದತ್ತ ಅನಿಲ್ ಚಿತ್ತ:
ಸಹಕಾರ ಕ್ಷೇತ್ರಕ್ಕೆ ಹೊಸದಾಗಿ ಕಾಲಿಟ್ಟಿರುವ ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಗಾದಿಯತ್ತ ಚಿತ್ತಹರಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಅವರು ಪ್ರಾಬಲ್ಯ ಹೊಂದಿದ್ದಂತೆ ಮೈಸೂರು ಪ್ರಾಂತ್ಯದಲ್ಲೂ ಹಿಡಿತ ಸಾಧಿಸಲು ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಗಾದಿಯನ್ನು ಅಲಂಕರಿಸುವುದಕ್ಕೆ ಅವರು ಒಲವು ತೋರಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆಯ ಬಳಿಕ ಅಪೆಕ್ಸ್ ಬ್ಯಾಂಕ್‌ಗೆ ಪ್ರತಿನಿಧಿ ಆಯ್ಕೆಯಾಗುವಾಗ ತಮ್ಮ ಹೆಸರನ್ನು ಸೂಚಿಸುವಂತೆ ವರಿಷ್ಠರ ಗಮನಕ್ಕೆ ತರಲಿದ್ದು, ಒಂದು ವೇಳೆ ಉಪಾಧ್ಯಕ್ಷ ಗಾದಿ ಸಿಕ್ಕರೆ ಜಿ.ಡಿ.ಹರೀಶ್ ಗೌಡರ ನಂತರದಲ್ಲಿ ಮೈಸೂರು ಭಾಗದಿಂದ ಅನಿಲ್ ಚಿಕ್ಕಮಾದು ಅವರ ಹೆಸರು ಸೇರ್ಪಡೆಯಾಗಲಿದೆ.





