Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ಸವಾಲು ಎದುರಿಸಿ ಅಭಿವೃದ್ಧಿಯತ್ತ ಸಾಗಲು ಎಂಸಿಸಿ ಸಜು

ಕೆ.ಬಿ.ರಮೇಶನಾಯಕ

ಗ್ರೇಟರ್ ಮೈಸೂರು ರಚನೆಯ ಬೆನ್ನ ಹಿಂದೆಯೇ ಅನೇಕ ಸವಾಲುಗಳು

ರಿಂಗ್ ರಸ್ತೆಯ ಹೊರಗಿನ ಭೂಮಿಗೆ ಚಿನ್ನದ ಬೆಲೆಯ ಅವಕಾಶ

ಚಾಮುಂಡಿಬೆಟ್ಟ ಸೇರಿದಂತೆ ಹತ್ತಾರು ಪ್ರದೇಶಗಳು ಪಾಲಿಕೆ ವ್ಯಾಪ್ತಿಗೆ

ಖಾಸಗಿ ಬಡಾವಣೆಗಳಲ್ಲಿ ನೀಗುವ ಮೂಲಸೌಕರ್ಯದ ಕೊರತೆ 

ಮೈಸೂರು: ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ವರ್ಷಾಂತ್ಯಕ್ಕೆ ಗ್ರೇಟರ್ ಮೈಸೂರು ಎಂದಾಗಲಿದ್ದು, ಮುಂದಿನ ದಿನಗಳಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ಎದುರಿಸಿ ಅಭಿವೃದ್ಧಿಯತ್ತ ಸಾಗಲು ಮೈಸೂರು ನಗರಪಾಲಿಕೆಯು ಸಜ್ಜಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಗ್ರೇಟರ್ ಮೈಸೂರು ರಚನೆಗೆ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಮೈಸೂರು ನಗರ ಮತ್ತು ಹೊರಗೆ ಹಲವಾರು ಬದಲಾವಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಖಾಸಗಿ ಬಡಾವಣೆಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದವರು ಎದುರಿಸುತ್ತಿರುವ ಮೂಲಸೌಕರ್ಯದ ಕೊರತೆ ನಿವಾರಣೆಯಾಗಲಿದೆ. ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯಾಪ್ತಿಯಲ್ಲಿರುವ ಚಾಮುಂಡಿಬೆಟ್ಟ ಮುಂದೆ ನಗರಾಭಿವೃದ್ಧಿ ಇಲಾಖೆ ಅಧೀನಕ್ಕೆ ಬರಲಿದೆ.

ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆಯಲ್ಲಿ ಈಗಾಗಲೇ ಆಡಳಿತಾಧಿಕಾರಿಗಳು ಇರುವ ಕಾರಣ ನಗರಪಾಲಿಕೆಗೆ ಸೇರ್ಪಡೆಗೊಳ್ಳಲು ಒಪ್ಪಿಗೆ ಸಿಕ್ಕಿದ್ದರೆ, ಎಂಟು ಗ್ರಾಪಂಗಳಲ್ಲೂ ಒಂದು ಸಾಲಿನ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಇದರಿಂದಾಗಿ ಗ್ರೇಟರ್ ಮೈಸೂರು ರಚನೆಗೆ ಸಿದ್ಧವಾಗಿರುವ ಕಡತಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತು ರಾಜ್ಯ ಪತ್ರದಲ್ಲಿ ಪ್ರಕಟವಾದರೆ ಇವೆಲ್ಲವೂ ಪಾಲಿಕೆ ಅಧೀನಕ್ಕೆ ಒಳಪಡಲಿವೆ. ನಂತರ, ಪಟ್ಟಣ ಪಂಚಾಯಿತಿ, ನಗರಸಭೆ, ಗ್ರಾಪಂಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ.

ಗ್ರೇಟರ್ ಮೈಸೂರು ವ್ಯಾಪ್ತಿಗೆ ಯಾವ ಪ್ರದೇಶಗಳು: ನಗರಪಾಲಿಕೆ ಸರಹದ್ದಿಗೆ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ, ಬೋಗಾದಿ ಪಟ್ಟಣ ಪಂಚಾಯಿತಿ, ಸಿದ್ದಲಿಂಗಪುರ, ಚಾಮುಂಡಿಬೆಟ್ಟ, ನಾಗನಹಳ್ಳಿ, ನಾಗವಾಲ, ಧನಗಳ್ಳಿ, ಬೀರಿಹುಂಡಿ, ಆಲನಹಳ್ಳಿ ಗ್ರಾಪಂಗಳು ಸೇರಿವೆ. ಸಚಿವ ಸಂಪುಟ ಸಭೆಯ ಹೊತ್ತಿಗೆ ಮತ್ತಷ್ಟು ಪ್ರದೇಶಗಳನ್ನು ಸೇರಿಸಿಕೊಂಡು ವಿಸ್ತೃತವಾದ ಪ್ರಸ್ತಾವನೆಯನ್ನು ಮಂಡಿಸಲಾಗುತ್ತದೆ.

ಗ್ರೇಟರ್ ಮೈಸೂರು ರಚನೆಯಾಗುತ್ತಿದ್ದಂತೆ ಹಲವಾರು ಮೂಲಭೂತ ಸಮಸ್ಯೆಗಳು ಎದುರಾಗಬಹುದು. ಈಗಾಗಲೇ ಅಧಿಕಾರಿಗಳು ಇದನ್ನು ಪಟ್ಟಿ ಮಾಡಿದ್ದಾರೆ. ಇದೀಗ ನಗರಪಾಲಿಕೆ ಘನತ್ಯಾಜ್ಯ ನಿರ್ವಹಣೆ ಘಟಕಗಳಲ್ಲಿ ಹೂಟಗಳ್ಳಿ, ಶ್ರೀರಾಂಪುರ, ಬೋಗಾದಿ, ರಮ್ಮನಹಳ್ಳಿ, ಚಾಮುಂಡಿಬೆಟ್ಟ, ಆಲನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಕೆಲಸ ಮಾಡುತ್ತಿದ್ದು, ಈ ಕೆಲಸ ಸುಲಭವಾಗಿ ಸಾಗಲು ಮತ್ತಷ್ಟು ಸಿಬ್ಬಂದಿ, ಯಂತ್ರೋಪಕರಣಗಳ ಅಗತ್ಯವಿದೆ.

ನಗರದ ಹೊರವರ್ತುಲ ರಸ್ತೆಯ ೪೨.೧ ಕಿಮೀ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ ಗಳನ್ನು ಪಾಲಿಕೆಯಿಂದ ನಿರ್ವಹಿಸುತ್ತಿದ್ದು, ಮುಂದೆ ಹೊರಗಿನ ಪ್ರದೇಶಗಳ ಬೀದಿದೀಪ ನಿರ್ವಹಣೆ ಹೊಣೆ ಹೊರಬೇಕಿದೆ. ಈಗ ಇರುವ ಎಸ್‌ಟಿಪಿ ಘಟಕಗಳೊಂದಿಗೆ ಮತ್ತಷ್ಟು ಹೆಚ್ಚಿಸಬೇಕಾಗಿದೆ. ಅಲ್ಲದೆ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ದಿನದ ೨೪ ಗಂಟೆ ನೀರು ತಲುಪಿಸುವ ಹಳೆಯ ಉಂಡುವಾಡಿ ಯೋಜನೆ ಕಾರ್ಯಗತಗೊಳಿಸುವುದು ತುರ್ತಾಗಿ ಆಗಬೇಕಿದೆ ಎಂಬ ಬೇಡಿಕೆ ಇಡಲಾಗಿದೆ.

೧ ಸಾವಿರ ಚ.ಕಿ.ಮೀ. ವಿಸ್ತೀರ್ಣ ವ್ಯಾಪ್ತಿ:  ಮುಂದಿನ ದಿನಗಳಲ್ಲಿ ಹೊಸ ಸಿಡಿಪಿ ರಚನೆ ಮಾಡುವ ಜತೆಗೆ ನಗರ ವ್ಯಾಪ್ತಿಯನ್ನು ೫೦೦ ಚ.ಕಿ.ಮೀಯಿಂದ ಸಾವಿರ ಚ.ಕಿ.ಮೀ.ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈಗಿನ ಎಂಡಿಎ ವ್ಯಾಪ್ತಿಯು ಕಡಕೊಳ ಮಾರ್ಗದ ಜಯಪುರ, ಹುಣಸೂರು ರಸ್ತೆಯ ಬಿಳಿಕೆರೆ, ತಿ.ನರಸೀಪುರ ರಸ್ತೆಯ ಮೇಗಳಾಪುರ, ಶ್ರೀರಂಗಪಟ್ಟಣ, ಬನ್ನೂರು ಮಾರ್ಗದವರೆಗೂ ಚಾಚಿಕೊಂಡಿದೆ. ಮುಂದೆ ಈ ಪ್ರದೇಶವನ್ನು ದಾಟಿ ನಂಜನಗೂಡು, ಹುಣಸೂರು, ವರುಣ ಮೊದಲಾದ ಪ್ರದೇಶಗಳನ್ನು ದಾಟುವುದರಿಂದ ಖಾಸಗಿ ಬಡಾವಣೆಗಳ ರಚನೆ ಸಾಧ್ಯತೆ ಹೆಚ್ಚಾಗಲಿದೆ.

ಪಾಲಿಕೆಗೆ ಸದ್ಯಕ್ಕಿಲ್ಲ ಚುನಾವಣೆ:  ಗ್ರೇಟರ್ ಮೈಸೂರು ರಚನೆ ಪರಿಣಾಮವಾಗಿ ಸದ್ಯಕ್ಕೆ ಪಾಲಿಕೆ ಚುನಾವಣೆ ನಡೆಯುವುದು ಕಷ್ಟಕರವಾಗಿದೆ. ಈಗಾಗಲೇ ಪಪಂ, ನಗರಸಭೆ, ನಗರಪಾಲಿಕೆಗೆ ಆಡಳಿತಾಽಕಾರಿಗಳನೇಮಕವಾಗಿದೆ. ಡಿಸೆಂಬರ್ ಅಂತ್ಯಕ್ಕೆ ಗ್ರಾಪಂ ಸದಸ್ಯರ ಅವಧಿ ಮುಗಿಯುವ ಕಾರಣ ಅಲ್ಲಿಗೂ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಹಾಗಾಗಿ, ಗ್ರೇಟರ್ ಮೈಸೂರು ರಚನೆಯಾಗಿ ಗಡಿಗುರುತು, ಕ್ಷೇತ್ರ ರಚನೆ, ವಿಂಗಡಣೆ ಸೇರಿದಂತೆ ಅನೇಕಾರು ಪ್ರಕ್ರಿಯೆಗಳು ನಡೆಯುವುದು ಒಂದೆರಡು ವರ್ಷಗಳ ಸಮಯ ಬೇಕಿರುವ ಕಾರಣ ಚುನಾವಣೆಯಲ್ಲಿ ಸ್ಪಽಸುವ ಕುರಿತು ಒಲವು ತೋರಿದ್ದವರಿಗೆ ನಿರಾಶೆ ಮೂಡಿಸಿದೆ.

Tags:
error: Content is protected !!