ಈ ಬಾರಿ ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.
ಕರುನಾಡಿನಲ್ಲಿಯೇ ರಾಜಕೀಯ, ಸಾಹಿತ್ಯ, ಕ್ರೀಡೆ, ಸಮಾಜಸೇವೆ ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದವರಿದ್ದಾರೆ. ಈ ಬಾರಿ ಮಹಿಳೆಯರಿಂದಲೇ ದಸರಾ ಉದ್ಘಾಟಿಸಬೇಕು ಎಂಬ ಆಲೋಚನೆ ಇದ್ದರೆ ನಮ್ಮ ರಾಜ್ಯದಲ್ಲಿಯೇ ಇರುವ ಮಹಿಳಾ ಸಾಧಕಿಯರಲ್ಲಿ ಒಬ್ಬರನ್ನು ಆಹ್ವಾನಿಸಬಹುದು. ಹಾಗೆ ಮಾಡದೆ ಒಂದು ಪಕ್ಷದ ಸರ್ವೋಚ್ಚ ನಾಯಕಿಯಾಗಿರುವ ಸೋನಿಯಾ ಗಾಂಧಿ ಅವರನ್ನು ದಸರಾ ಉದ್ಘಾಟಕರಾಗಿ ಆಹ್ವಾನಿಸಲು ಮುಖ್ಯಮಂತ್ರಿಗಳು ಚಿಂತನೆ ನಡೆಸಿರುವುದು ಸರಿಯಲ್ಲ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟ ವಿಚಾರವಾದರೂ ನಾಡಹಬ್ಬವಾಗಿರುವ ದಸರಾ ಉದ್ಘಾಟನೆಗೆ ನಮ್ಮ ರಾಜ್ಯದ ಸಾಧಕರೇ ಸೂಕ್ತ ಅನಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಈ ನಾಡಿನ ಸಾಧಕರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಆ ವಿಚಾರದಲ್ಲಿ ರಾಜಕಾರಣ ಸಲ್ಲದು.
– ಎಂ.ಪಿ. ದರ್ಶನ್ ಚಂದ್ರ, ಮುಕ್ಕಡಹಳ್ಳಿ, ಚಾಮರಾಜನಗರ ತಾ





