ಕೆ.ಬಿ.ರಮೇಶನಾಯಕ
ಎರಡು ವರ್ಷಗಳ ಅವಧಿ ಪೂರೈಸಿರುವ ಅಯೂಬ್ ಖಾನ್, ಡಾ.ಪುಷ್ಪ ಅಮರನಾಥ್
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ ಸಾಧ್ಯತೆ
ಮೈಸೂರು: ಮುಂದಿನ ದಿನಗಳಲ್ಲಿ ನಡೆಯಲಿರುವ ಸಾಲು ಸಾಲು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸಲು ಮುಖಂಡರು, ಕಾರ್ಯಕರ್ತರಲ್ಲಿ ಹುರುಪು ತುಂಬಲು ವಿವಿಧ ನಿಗಮ ಮಂಡಳಿಗಳು, ಪ್ರಾಧಿಕಾರದ ಅಧ್ಯಕ್ಷರನ್ನು ಬದಲಿಸಿ ಹೊಸಬರನ್ನು ನೇಮಿಸಲು ಪಟ್ಟಿ ತಯಾರಾಗುತ್ತಿದ್ದು, ಮೈಸೂರು ಭಾಗದ ಅನೇಕ ಮುಖಂಡರು ಕಣ್ಣಿಟ್ಟು ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ೪೦೦ಕ್ಕೂ ಹೆಚ್ಚು ಮಂದಿ ನಿರ್ದೇಶಕರನ್ನು ನೇಮಿಸಿರುವ ರಾಜ್ಯಸರ್ಕಾರ ಯಾವುದೇ ಸಂದರ್ಭದಲ್ಲಿ ಹಾಲಿ ಅಧ್ಯಕ್ಷರುಗಳನ್ನು ಬದಲಿಸಿ ಹೊಸಬರನ್ನು ನೇಮಕ ಮಾಡಿ ಆದೇಶ ಹೊರಡಿಸುವ ಸಾಧ್ಯತೆ ಇರುವ ಕಾರಣ ಮೈಸೂರಿನ ಅನೇಕರು ರಾಜಧಾನಿಯಲ್ಲಿ ಬಿಡಾರ ಹೂಡಿ ತಂತಮ್ಮ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ. ಹೀಗಾಗಿ, ಈ ಬಾರಿ ಯಾರಿಗೆ ಅವಕಾಶ ದೊರೆಯಲಿದೆ ಎನ್ನುವುದನ್ನು ಕಾತರ ದಿಂದ ಕಾದು ನೋಡುವಂತಾಗಿದೆ. ರಾಜ್ಯದಲ್ಲಿ ೨೦೨೩ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ೧೩೬ ಸ್ಥಾನಗಳನ್ನು ಗೆದ್ದು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅನೇಕರು ವಿವಿಧ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದರು.
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲದೆ ಡಿ.ಕೆ. ಶಿವಕುಮಾರ್, ಡಾ.ಎಚ್.ಸಿ.ಮಹದೇವಪ್ಪ ಆಪ್ತರು ಕೂಡ ಜಾತಿ,ಪಕ್ಷನಿಷ್ಠೆ ಹಾಗೂ ಅನುಯಾಯಿಯಾಗಿ ಬಂದಿರುವ ವಿಚಾರವನ್ನು ಮುಂದಿಟ್ಟುಕೊಂಡು ತಮಗೊಂದು ಅವಕಾಶ ಕೊಡುವಂತೆ ಕೋರಿಕೊಂಡಿದ್ದರು. ಅದರಂತೆ, ೨೦೨೪ರ ಜನವರಿ ತಿಂಗಳಲ್ಲಿ ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಕೆ. ಮರೀಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಅಯೂಬ್ ಖಾನ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧ್ದಿ ಪ್ರಾಧಿಕಾರ(ಕಾಡಾ) ಅಧ್ಯಕ್ಷರನ್ನಾಗಿ ಚಾಮರಾಜನಗರ ಜಿಲ್ಲೆಯ ಮರಿಸ್ವಾಮಿ ಅವರನ್ನು ನೇಮಕ ಮಾಡಲಾಗಿತ್ತು.
೨೦೨೫ರ ಅಕ್ಟೋಬರ್ ತಿಂಗಳಲ್ಲಿ ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷರನ್ನಾಗಿ ಎಚ್.ಡಿ.ಗಣೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಹಾಡ್ಯ ಎನ್. ರಂಗಸ್ವಾಮಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಎಂ.ರಾಮಪ್ಪ ಅವರನ್ನು ನೇಮಕ ಮಾಡಲಾಗಿತ್ತು. ಎರಡು ತಿಂಗಳ ಹಿಂದೆಯಷ್ಟೇ ನಾಗವಾಲ ಸಿ.ನರೇಂದ್ರ ಅವರನ್ನು ಕರ್ನಾಟಕ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಡಾದಲ್ಲಿ ನಡೆದ ಹಲವಾರು ವಿದ್ಯಮಾನಗಳಿಂದ ಕೆ.ಮರೀಗೌಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಈತನಕ ಯಾರನ್ನೂ ನೇಮಕ ಮಾಡಿಲ್ಲದ ಕಾರಣ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಡಾ ಅಧ್ಯಕ್ಷ ಮರಿಸ್ವಾಮಿ ಅವರ ಅವಧಿಯು ಎರಡು ವರ್ಷಗಳಿಗೂ ಹೆಚ್ಚು ಕಾಲ ಆಗಿರುವ ಕಾರಣ ಬದಲಿಸಿ ಹೊಸಬರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅನೇಕರು ಪೈಪೋಟಿ: ಎಂಡಿಎ ಅಧ್ಯಕ್ಷ ಸ್ಥಾನಕ್ಕೆ ಒಂದು ವೇಳೆ ಹೊಸಬರನ್ನು ನೇಮಕ ಮಾಡಿದರೆ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಕಳೆದ ಮೇ ತಿಂಗಳ ಹಿಂದೆಯಷ್ಟೇ ನೇಮಕಕ್ಕೆ ಹಿಂದಿನ ಸಿಎಂ ಸಿದ್ದರಾಮಯ್ಯ ಒಲವು ತೋರಿದ್ದರೂ ಸಾಧ್ಯವಾಗಿರಲಿಲ್ಲ. ಹಾಗಾಗಿ, ಎಂಡಿಎಗೆ ಅಧ್ಯಕ್ಷರನ್ನು ನೇಮಕ ಮಾಡುವ ಸನ್ನಿವೇಶ ಎದುರಾದರೆ ಮೂರ್ತಿ ಹೆಸರು ಮುಂಚೂಣಿಯಲ್ಲಿದೆ. ಕಾಡಾ ಅಧ್ಯಕ್ಷ ಸ್ಥಾನಕ್ಕೆ ಚಾಮರಾಜನಗರ ಜಿಲ್ಲೆಯವರನ್ನೇ ನೇಮಕ ಮಾಡುವ ಅವಕಾಶ ದಟ್ಟವಾಗಿದೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳ ಮೇಲೆ ಮಾಜಿ ಮಹಾಪೌರರಾದ ಮೋದಾಮಣಿ, ಬಿ.ಕೆ.ಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಈಶ್ವರ್ ಚಕ್ಕಡಿ, ಕೆಪಿಸಿಸಿ ಸಂಯೋಜಕ ಎನ್. ಭಾಸ್ಕರ್, ಶಾಸಕ ತನ್ವೀರ್ ಸೇಠ್ ಆಪ್ತ ಮಂಜುನಾಥ್ ಆಕಾಂಕ್ಷಿಗಳಾಗಿದ್ದರೆ, ಗ್ರಾಮಾಂತರ ಪ್ರದೇಶದಿಂದ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಜಿಪಂ ಮಾಜಿ ಸದಸ್ಯ ಕಡಕೊಳ ನಾರಾಯಣ, ಚಾಮುಂಡೇಶ್ವರಿ ಕ್ಷೇತ್ರದ ಕೃಷ್ಣಕುಮಾರ್ ಸಾಗರ್ ಸೇರಿದಂತೆ ಅನೇಕ ಮುಖಂಡರು ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಆಯಾಯ ಕ್ಷೇತ್ರದ ಶಾಸಕರು ಕೂಡ ತಮ್ಮ ಬೆಂಬಲಿಗರ ಪರವಾಗಿ ಸಿಎಂ,ಕೆಪಿಸಿಸಿ ಅಧ್ಯಕ್ಷರಿಗೂ ಶಿಫಾರಸ್ಸು ಮಾಡಿದ್ದು, ಈ ಹೆಸರುಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಹೇಳಲಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಎಸ್.ಅರುಣ್ ಕುಮಾರ್ ಅವರ ಅವಧಿ ಎರಡು ವರ್ಷಗಳು ಮುಗಿದಿದ್ದು, ಈ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.




