Mysore
22
overcast clouds

Social Media

ಗುರುವಾರ, 16 ಜುಲೈ 2026
Light
Dark

ಮಮ ಡೇಟಾ: ಆಧಾರ್ ಕುರಿತ ಆತಂಕಗಳು

ಡಿಜಿಟಲ್ ಗುರುತಿನ ವ್ಯವಸ್ಥೆಯಾಗಿ ಹುಟ್ಟಿಕೊಂಡ ಆಧಾರ್, ಡಿಜಿಟಲ್ ಆಡಳಿತಕ್ಕೆ ಚುಕ್ಕಾಣಿಯಾಗತೊಡಗಿದ್ದು, ಜನರಲ್ಲಿ ತಮ್ಮ ಖಾಸಗಿತನದ ಸುರಕ್ಷತೆಯ ಬಗ್ಗೆ ಆತಂಕಗಳನ್ನು ನಿಧಾನಕ್ಕೆ ಹುಟ್ಟುಹಾಕತೊಡಗಿತು. ದೇಶ ಡಿಜಿಟಲ್ ಕಣ್ಗಾವಲು ವ್ಯವಸ್ಥೆಯ ಕಡೆ ಸಾಗುತ್ತಿದೆ ಎಂಬ ಸಂಶಯ ದಿನೇ ದಿನೇ ಹೆಚ್ಚತೊಡಗಿತು. ಈ ಸಂಶಯಕ್ಕೆ ಪೂರಕವಾದ ಬೆಳವಣಿಗೆಗಳೂ ಕಾಣಿಸಿಕೊಳ್ಳತೊಡಗಿದವು.

ಆಧಾರ್ ಒಂದು ಕೇಂದ್ರೀಕೃತ ಡೇಟಾಬೇಸ್ ಆಗಿರುವುದರಿಂದ, ಅಲ್ಲಿರುವ ಬಯೊಮೆಟ್ರಿಕ್ ಮತ್ತು ಡೆಮೊಗ್ರಾಫಿಕ್ ಡೇಟಾಗಳು ಪ್ರಭುತ್ವಕ್ಕೆ ಸಾಮಾಜಿಕ ನಿಯಂತ್ರಣ ಪರಿಕರವಾಗಿ ಒದಗಬಹುದು; ಈ ಡೇಟಾಬೇಸ್‌ಗಳನ್ನು ಬೇರೆ ಆಡಳಿತಾತ್ಮಕ ಪರಿಕರಗಳ ಜೊತೆ ಲಿಂಕ್ ಮಾಡಿದಾಗ, ಅದು ಪ್ರೊಫೈಲಿಂಗ್, ಕಣ್ಗಾವಲು, ತಾರತಮ್ಯ ಮತ್ತಿತರ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು; ಆಧಾರ್ ಕಾರ್ಡಿನಲ್ಲಿ ಆಗಿರಬಹುದಾದ ತಪ್ಪುಗಳ ತಿದ್ದುಪಡಿಗೆ ಹಲವಾರು ಅಡ್ಡಿತಡೆಗಳಿದ್ದು, ಸೂಕ್ತ ದೂರು ನಿರ್ವಹಣಾ ವ್ಯವಸ್ಥೆ ಇಲ್ಲ; ಆಧಾರ್ ಇಲ್ಲದವರಿಗೆ ಸಾಮಾಜಿಕ ಲಾಭಗಳನ್ನು ನಿರಾಕರಿಸಲು ಸದ್ಯದ ವ್ಯವಸ್ಥೆಯಲ್ಲಿ ಅವಕಾಶ ಇದೆ; ಆಧಾರ್ ಆಧಾರದ ತೀರ್ಮಾನಗಳಿಗೆ ಪಾರ್ಲಿಮೆಂಟರಿ ಮೇಲ್ವಿಚಾರಣೆ ಇಲ್ಲ… ಎಂಬೆಲ್ಲ ದೂರುಗಳು ಈಗಲೂ ಇವೆ.

UIDA ಸ್ಥಾಪನೆ ಆಗಿದ್ದದ್ದೇ ಒಂದು ಕಾರ್ಯಾಂಗದ ಆದೇಶದ ಮೂಲಕ. ಆರಂಭದಲ್ಲಿ ಅದಕ್ಕೆ ಶಾಸನಾತ್ಮಕ ಬೆಂಬಲ ಇರಲಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ (ಆಗ ಅವರ ಪ್ರಾಯ ೮೬) ಅವರು ಆಧಾರ್ ವ್ಯವಸ್ಥೆಗೆ ಕಾನೂನಿನ ಮಾನ್ಯತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದರು. ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಮತ್ತು ಸರ್ಕಾರಿ ಸೇವೆಗಳನ್ನು ಪಡೆಯಲು ಆಧಾರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವುದು ಸಂವಿಧಾನಬಾಹಿರ ಎಂಬುದು ಅವರ ಅರ್ಜಿಯ ಸಾರಾಂಶ ಆಗಿತ್ತು.

೨೦೧೨ ಅಕ್ಟೋಬರ್‌ನಲ್ಲಿ ಈ ಅರ್ಜಿ ಸುಪ್ರೀಂ ಕೋರ್ಟ್‌ನ ಎದುರು ವಿಚಾರಣೆಗೆ ಬಂದಿತು. ಅಷ್ಟರಲ್ಲಿ ಇನ್ನೂ ಹಲವು ಅರ್ಜಿಗಳು (ಆ ಉಳಿದ ಅರ್ಜಿದಾರರು: ಸೆಂಟರ್ ಫಾರ್ ಸಿವಿಲ್ ಸೊಸೈಟಿ; ಎಸ್.ಜಿ.ಒಂಬತ್ಕೆರೆ; ಮ್ಯಾಥ್ಯೂ ಥಾಮಸ್; ರಾಘವ್ ತನ್‌ಖಾ; ಕಲ್ಯಾಣಿ ಮೆನನ್ ಸೇನ್; ರಾಮ್ ಪ್ರಸಾದ್ ಮಿಷಾಲ್; ಶಾಂತಾ ಸಿನ್ಹಾ) ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದವು. ಈ ಎಲ್ಲ ಅರ್ಜಿಗಳನ್ನೂ ಒಟ್ಟು ಸೇರಿಸಿ ೨೦೧೫ರಲ್ಲಿ ಮೂವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠವು ವಿಚಾರಣೆ ನಡೆಸಿ, ಪ್ರಕರಣವನ್ನು ಐವರು ಸದಸ್ಯರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತು. ಸಂವಿಧಾನ ಪೀಠವು ಈ ಅರ್ಜಿಗಳ ಮಹತ್ವವನ್ನು ಮನಗಂಡಿತು ಮತ್ತು ಈ ಹಿಂದೆ ಸುಪ್ರೀಂ ಕೋಟ್ನ ವಿವಿಧ ಸಣ್ಣ ಗಾತ್ರದ ಪೀಠಗಳಿಂದ ಬಂದ ವೈರುಧ್ಯಗಳಿರುವ ತೀರ್ಪುಗಳನ್ನು ಪರಿಗಣಿಸಿತು. ಆ ಹಿನ್ನೆಲೆಯಲ್ಲಿ, “ಸಂವಿಧಾನದ ಭಾಗ ಐಐಐರ ಅಡಿಯಲ್ಲಿ ಖಾಸಗಿತನದ ಹಕ್ಕು ಪ್ರಜೆಯ ಮೂಲಭೂತಹಕ್ಕೇ?” ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಲುವಾಗಿ, ೨೦೧೭ರ ಜುಲೈ ೧೮ರಂದು ಒಂಬತ್ತು ಸದಸ್ಯರಪೀಠವೊಂದನ್ನು ಸುಪ್ರೀಂ ಕೋರ್ಟ್ ರೂಪಿಸಿತು. ನ್ಯಾಯಮೂರ್ತಿಗಳಾದ ಜಸ್ಟೀಸ್ ಡಿ.ವೈ.ಚಂದ್ರಚೂಡ್ (ಮುಖ್ಯ ನ್ಯಾಯಮೂರ್ತಿ), ಜಸ್ಟೀಸ್ ಅಬ್ದುಲ್ ನಜೀರ್, ಜಸ್ಟೀಸ್ ರೋಹಿಂಗ್ಟನ್ ನಾರಿಮನ್, ಜಸ್ಟೀಸ್ ಎಸ್.ಕೆ.ಕೌಲ್, ಜಸ್ಟೀಸ್ ಜೆ.ಎಸ್.ಖೇಹರ್, ಜಸ್ಟೀಸ್ ಎಸ್.ಎ.ಬೋಬ್ಡೆ, ಜಸ್ಟೀಸ್ ಜಸ್ತಿ ಚಲಮೇಶ್ವರ್, ಜಸ್ಟೀಸ್ ಅಭಯ್ ಸಪ್ರೆ ಮತ್ತು ಜಸ್ಟೀಸ್ ಎ.ಕೆ.ಸಿಕ್ರಿ ಅವರನ್ನೊಳಗೊಂಡ ಸಂವಿಧಾನ ಪೀಠವು ಈ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

೨೦೧೭ರ ಆಗಸ್ಟ್ ೨೪ರಂದು ತನ್ನ ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, “ಸಂವಿಧಾನದ ಆರ್ಟಿಕಲ್ ೨೪ರಲ್ಲಿ ಹೇಳಲಾಗಿರುವ ಬದುಕುವ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದಲ್ಲಿ ಮತ್ತು ಸಂವಿಧಾನದ ಭಾಗ ಐಐಐರಲ್ಲಿ ಖಚಿತಪಡಿಸಲಾಗಿರುವ ಸ್ವಾತಂತ್ರ್ಯಗಳಲ್ಲಿ, ಖಾಸಗಿತನದ ಹಕ್ಕು ಅಂತರ್ಗತವಾಗಿ ಸಂರಕ್ಷಿತವಾಗಿದೆ” ಎಂದು ಸ್ಪಷ್ಟಪಡಿಸಿತು. ಜೊತೆಗೇ, “ಡೇಟಾ ಸಂರಕ್ಷಣೆಗೆ ನಿಯಮಗಳನ್ನು ರೂಪಿಸುವ ಕೆಲಸವು ಸಂಕೀರ್ಣವಾದ ಪ್ರಕ್ರಿಯೆ ಆಗಿದ್ದು, ಪ್ರಜೆಯ ಖಾಸಗಿತನದ ರಕ್ಷಣೆಗೆ ಏನು ಅವಶ್ಯಕತೆ ಇದೆಯೋ ಅದನ್ನು ಮತ್ತು ಡೇಟಾ ಸಂರಕ್ಷಣೆ ಇದ್ದರೆ ಒಳಿತು ಅನ್ನಿಸುವ ಇತರ ಮೌಲ್ಯಗಳು ಹಾಗೂ ಸರ್ಕಾರದ ನ್ಯಾಯಬದ್ಧ ಕಾಳಜಿಗಳನ್ನು ಸಂತುಲನದಲ್ಲಿ ಪರಿಗಣಿಸಿಕೊಂಡು, ಸರ್ಕಾರವು ಎಚ್ಚರಿಕೆಯಿಂದ ಡೇಟಾ ಸಂರಕ್ಷಣೆಗೆ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯನ್ನು ನಡೆಸಬೇಕು” ಎಂದು ಸೂಚಿಸಿತು.

ಈ ತೀರ್ಪು ಬರುವ ಒಂದು ತಿಂಗಳ ಮೊದಲು, ಅಂದರೆ ಜುಲೈ ೩೧, ೨೦೧೭ರಂದು, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY ) ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಬಿ.ಎನ್. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ, ಡೇಟಾ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಗುರುತಿಸುವಂತೆ ಮತ್ತು ಅವುಗಳನ್ನು ನಿರ್ವಹಿಸಲು ಸೂಕ್ತ ವಿಧಾನಗಳನ್ನು ಶಿಫಾರಸ್ಸು ಮಾಡುವಂತೆ ಕೋರಿತಲ್ಲದೇ ಡೇಟಾ ಸಂರಕ್ಷಣೆಗೆ ಕರಡು ಮಸೂದೆಯನ್ನೂ ಸಿದ್ಧಪಡಿಸುವಂತೆ ನಿರ್ದೇಶಿಸಿತು. ಅಲ್ಲಿಯ ತನಕ ಡೇಟಾ ರಕ್ಷಣೆಯೂ ಸೇರಿದಂತೆ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಇದ್ದ ಏಕೈಕ ಕಾಯಿದೆಯಾದ ಮಾಹಿತಿ ತಂತ್ರಜ್ಞಾನ ಕಾಯಿದೆ -೨೦೦೦ (Information Technology Act ೨೦೦೦)ದಿಂದ ಡೇಟಾ ಸಂರಕ್ಷಣೆಯನ್ನು ಪ್ರತ್ಯೇಕಿಸುವ ಉದ್ದೇಶವೂ ಭಾರತ ಸರ್ಕಾರಕ್ಕೆ ಇತ್ತು. ಜಸ್ಟೀಸ್ ಬಿ.ಎನ್.ಕೃಷ್ಣ ಸಮಿತಿಯು (Jhå)ಗೆ ಜುಲೈ ೨೭, ೨೦೧೮ರಂದು ತನ್ನ ವರದಿಯನ್ನು ಕರಡು ಕಾನೂನಿನೊಂದಿಗೆ ಸಲ್ಲಿಸಿತು.

೨೦೧೯ರ ಡಿಸೆಂಬರ್ ೧೧ರಂದು ಈ ಕರಡು ಮಸೂದೆಯನ್ನು ಲೋಕಸಭೆಯಲ್ಲಿ ಅಂದಿನ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಮಂಡಿಸಿದ ಬಳಿಕ, ಅದನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಯಿತು. ಸಂಸದ ಪಿ.ಪಿ.ಚೌಧರಿ ಅಧ್ಯಕ್ಷತೆಯ ಈ ಸಮಿತಿಯು ೭೮ ಸಭೆಗಳನ್ನು ನಡೆಸಿದ ಬಳಿಕ, ೨೦೨೧ರ ಡಿಸೆಂಬರ್ ೦೮ರಂದು ತನ್ನ ವರದಿಯನ್ನು ಸಂಸತ್ತಿನ ಪಟಲದಲ್ಲಿ ಮಂಡಿಸಿತು. ಈ ಸಮಿತಿಯು ವೈಯಕ್ತಿಕ ಡೇಟಾಗಳ ಜೊತೆ ವೈಯಕ್ತಿಕವಲ್ಲದ ಸ್ವರೂಪದ ಡೇಟಾಗಳನ್ನೂ ಇದೇ ಕಾಯಿದೆಯ ಮಡಿಲಿಗೆ ಸೇರಿಸುವ ಶಿಫಾರಸ್ಸು ಮಾಡಿದ್ದಲ್ಲದೇ, “ವೈಯಕ್ತಿಕ ಡೇಟಾ” ಎಂದಿದ್ದದ್ದನ್ನು ಕೇವಲ “ಡೇಟಾ” ಎಂದು ಬದಲಾಯಿಸಿತು. ಇದು ಉದ್ದೇಶಿತ ಕಾಯಿದೆಯನ್ನು ಕಲಸುಮೇಲೋಗರಗೊಳಿಸಿತು. ಜಂಟಿ ಸಂಸದೀಯ ಸಮಿತಿಯು ತನ್ನ ಈ ತೀರ್ಮಾನಕ್ಕೆ ಕಾರಣಗಳನ್ನು ಕೊಡುತ್ತಾ, “ಈ ಮಸೂದೆಯು ವೈವಿಧ್ಯಮಯ ಡೇಟಾಗಳ ಜೊತೆ ವಿವಿಧ ಭದ್ರತಾ ಮಟ್ಟಗಳಲ್ಲಿ ಮುಖಾಮುಖಿ ಆಗಬೇಕಾಗುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ಬೃಹತ್ ಪ್ರಮಾಣದ ಡೇಟಾಗಳನ್ನು ಸಂಗ್ರಹಿಸುವಾಗ ಮತ್ತು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸುವಾಗ ಯಾವುದು ವೈಯಕ್ತಿಕ ಮತ್ತು ಯಾವುದು ವೈಯಕ್ತಿಕ ಅಲ್ಲದ ಡೇಟಾ ಎಂಬುದನ್ನು ವರ್ಗೀಕರಿಸುವುದು ಕಷ್ಟ. ಹಾಗಾಗಿ, ಖಾಸಗಿತನವೇ ಕಳವಳದ ಸಂಗತಿ ಆಗಿದ್ದರೆ, ವೈಯಕ್ತಿಕವಲ್ಲದ ಡೇಟಾಗಳನ್ನೂ ಇದೇ ಮಸೂದೆಯ ಜೊತೆ ಪರಿಗಣಿಸಬೇಕಾಗುತ್ತದೆ” ಎಂಬುದು ನಮ್ಮ ಸಮಿತಿಯ ಅಭಿಪ್ರಾಯ ಎಂದು ಹೇಳಿತು.

” ಬುಕ್‌ಬ್ರಹ್ಮ ಈ ಪುಸ್ತಕವನ್ನು ಪ್ರಕಟಿಸಿದ್ದು, ೧೮ ಅಧ್ಯಾಯಗಳ ಈ ಪುಸ್ತಕಕ್ಕೆ ಪತ್ರಕರ್ತ ಎನ್.ಎ.ಎಂ ಇಸ್ಮಾಯಿಲ್ ಮುನ್ನುಡಿ ಬರೆದಿದ್ದಾರೆ;ಕುಮಾರ್ ಎಸ್.ಬೆನ್ನುಡಿ ಬರೆದಿದ್ದಾರೆ. ೨೨೪ ಪುಟಗಳ ಈ ಪುಸ್ತಕದ ಬೆಲೆ ೩೦೦ ರೂ.ಗಳು. ಆಸಕ್ತರು ನವಕರ್ನಾಟಕದ ಆನ್ ಲೈನ್ ಮಳಿಗೆಯನ್ನು ಸಂಪರ್ಕಿಸಬಹುದು.”

” ಲೇಖಕ ರಾಜಾರಾಂ ತಲ್ಲೂರು ಅವರ ಹೊಸ ಪುಸ್ತಕ “ಮಮ ಡೇಟಾ”ದ ಒಂದು ಪುಟ್ಟ ಆಯ್ದ ಭಾಗ ಇದು. ಭಾರತ ಸರ್ಕಾರ ಜಾರಿಗೆ ತಂದಿರುವ ಆ ಕಾಯಿದೆಯ ಹಿನ್ನೆಲೆ, ಮುನ್ನೆಲೆ, ವಿಶ್ಲೇಷಣೆ, ಕಾಯಿದೆ ಹಾಗೂ ಅದರ ನಿಯಮಗಳ ಕನ್ನಡ ಅನುವಾದ ಮಾತ್ರವಲ್ಲದೇ ಈ ಕಾನೂನು ಪಾಲನೆಗೆ ಡೇಟಾ ಮೂಲವ್ಯಕ್ತಿಗಳಾಗಿ ನಾಗರಿಕರು ಏನುಮಾಡಬೇಕು, ಡೇಟಾ ದಾಸ್ತಾನುಗಾರರಾಗಿ ವ್ಯವಹಾರಸ್ಥರು ಏನು ಮಾಡಬೇಕೆಂಬ ಬಗ್ಗೆ ವಿವರಗಳು ಈ ಪುಸ್ತಕದಲ್ಲಿವೆ.”

 

 

Tags:
error: Content is protected !!