ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಜಿಲ್ಲೆಯ ವಿರಾಜಪೇಟೆಯ ಅಂಬೇಡ್ಕರ್ ಭವನದ ತಡೆಗೋಡೆ ಕಳಪೆ ಕಾಮಗಾರಿಯಿಂದ ಕುಸಿದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಏನೋ ಒಂದು ಕಾರಣ ಹೇಳಿ ನುಣುಚಿಕೊಳ್ಳುತ್ತಾರೆ.
ಸರ್ಕಾರ ಲಕ್ಷಾಂತರ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತದೆ. ಆದರೆ ಗುತ್ತಿಗೆದಾರರು ಗುಣಮಟ್ಟ ಕಾಪಾಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ನಿಗಾವಹಿಸದೇ ಇರುವುದು ಬೇಸರದ ಸಂಗತಿಯಾಗಿದೆ. ಈ ಹಿಂದೆ ಸರ್ಕಾರದಿಂದ ನಿರ್ಮಾಣಗೊಂಡಿರುವ ಕಟ್ಟಡಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ನೂರಾರು ವರ್ಷಗಳಾದರೂ ಹಾಳಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಭ್ರಷ್ಟಾಚಾರ ಮಿತಿ ಮೀರಿದ್ದು, ಯಾವ ಕಾಮಗಾರಿಗಳೂ ಗುಣಮಟ್ಟದಿಂದ ನಡೆಯುತ್ತಿಲ್ಲ. ಸಂಬಂಧಪಟ್ಟವರು ಇನ್ನು ಮುಂದಾದರೂ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.
-ಮಾಚೆಟ್ಟರ ಮೊಣ್ಣಪ್ಪ , ವಿರಾಜಪೇಟೆ





