Mysore
31
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಮಹಾತ್ಮ ಗಾಂಧಿ ಸ್ಮಾರಕ ಕಾಮಗಾರಿ ಶೀಘ್ರದಲ್ಲೆ ಪೂರ್ಣ 

ಹೆಚ್ಚುವರಿ ೬೦ ಲಕ್ಷ ರೂ. ಅನುದಾನ ಶೀಘ್ರದಲ್ಲೇ ಬಿಡುಗಡೆ; ಚಿತಾಭಸ್ಮ ಶಾಶ್ವತವಾಗಿರಿಸಲು ಯೋಜನೆ

ನವೀನ್ ಡಿಸೋಜ

ಮಡಿಕೇರಿ: ನಗರದ ಗಾಂಧಿ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಮಹಾತ್ಮ ಗಾಂಧಿ ಸ್ಮಾರಕ ಕಾಮಗಾರಿಗೆ ಹೆಚ್ಚುವರಿ ಅನುದಾನ ಒದಗಿಸಲು ಸರ್ಕಾರ ಸಮ್ಮತಿಸಿದ್ದು, ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.

ಕೊಡಗಿನಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆಗಳ ನೆನಪಾಗಿ ಉಳಿದಿದ್ದ ಮಡಿಕೇರಿಯ ಗಾಂಧಿ ಮೈದಾನದ ಗಾಂಧಿ ಮಂಟಪವನ್ನು ತೆರವುಗೊಳಿಸಿ ಅಲ್ಲಿ ಗಾಂಧಿ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡು ಗಾಂಧೀಜಿ ಚಿತಾಭಸ್ಮವನ್ನು ಶಾಶ್ವತವಾಗಿ ಒಂದೆಡೆ ಇರಿಸಬೇಕೆಂಬುದುಸರ್ವೋದಯ ಸಮಿತಿಯ ಕನಸಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಕೆಲ ಕೆಲಸಗಳು ಬಾಕಿ ಉಳಿದಿದ್ದು, ಅನುದಾನ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಹೆಚ್ಚುವರಿ ಅನುದಾನದ ಭರವಸೆಯೂ ಸಿಕ್ಕಿದೆ.ಇತ್ತೀಚೆಗೆ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಜಿಲ್ಲಾ ಸರ್ವೋದಯ ಸಮಿತಿಯ ಪ್ರಮುಖರು, ಗಾಂಧಿ ಸ್ಮಾರಕ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಕೋರಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಸಮ್ಮತಿಸಿದ್ದು, ೬೦ ಲಕ್ಷ ರೂ. ಅನುದಾನ ಬಿಡುಗಡೆ ಕೆಲವೇ ದಿನಗಳಲ್ಲಿ ಆಗಲಿದೆ ಎಂದು ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ತಿಳಿಸಿದ್ದಾರೆ.

ಗಾಂಧಿ ಮೈದಾನದಲ್ಲಿದ್ದ ಗಾಂಧಿ ಮಂಟಪವನ್ನು ತೆರವುಗೊಳಿಸಿ ಅಲ್ಲಿ ಸುಂದರ ಸ್ಮಾರಕ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ೫೦ ಲಕ್ಷ ರೂ.ಗಳಲ್ಲಿ ಕಾಮಗಾರಿ ಆರಂಭಿಸಲಾಯಿತು. ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ನಿಧಿಯಿಂದ ತಲಾ ೫ ಲಕ್ಷ ರೂ. ಅನುದಾನ ಒದಗಿಸಿದರು. ಅದರಂತೆ ನಿರ್ಮಿತಿ ಕೇಂದ್ರದಿಂದ ೬೫ ಲಕ್ಷ ರೂ. ವೆಚ್ಚದ ಕಾಮಗಾರಿ ನಡೆದಿದೆ. ಸದ್ಯ ಸ್ಮಾರಕ ಭವನ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಒಳಾಂಗಣ ಅಲಂಕಾರ, ಹೊರಾಂಗಣದಲ್ಲಿ ಉದ್ಯಾನವನ, ಪಾತ್ ವೇ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಉಳಿದಿವೆ. ಈಗ ಹೆಚ್ಚುವರಿ ಅನುದಾನ ಬಿಡುಗಡೆಗೊಂಡಲ್ಲಿ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.

ಗಾಂಧಿ ಗುಡ್ಡವಾಗಿದ್ದ ಸ್ಥಳ!:

೧೯೩೪ರಲ್ಲಿ ಮಹಾತ್ಮ ಗಾಂಧೀಜಿ ಕೊಡಗು ಜಿಲ್ಲೆಗೆ ಭೇಟಿ ನೀಡಿ ೩ ದಿನಗಳ ಕಾಲ ಇಲ್ಲಿಯೇ ಉಳಿದಿದ್ದರು. ಆ ಸಮಯದಲ್ಲಿ ಈಗ ಗಾಂಧಿ ಸ್ಮಾರಕ ನಿರ್ಮಾಣ ಮಾಡಲಾಗುತ್ತಿರುವ ಸ್ಥಳದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಸ್ಥಳವನ್ನು ಗಾಂಧಿ ಗುಡ್ಡ ಎಂದು ಕರೆಯಲಾಗುತ್ತಿತ್ತು. ಬಳಿಕ ಕೊಡಗು ಸರ್ಕಾರವಿದ್ದ ಕಾಲದಲ್ಲಿ ಗಾಂಧೀಜಿ ಭಾಷಣ ಮಾಡಿದ ಆ ಗಾಂಧಿ ಗುಡ್ಡದಲ್ಲಿ ಗಾಂಧಿ ಮಂಟಪವನ್ನು ಕಟ್ಟಲಾಗಿತ್ತು. ಇದೇ ಸ್ಥಳದಲ್ಲೀಗ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ.

ಖಜಾನೆಯಲ್ಲಿದೆ ಚಿತಾಭಸ್ಮ:  ಮಡಿಕೇರಿಯ ಜಿಲ್ಲಾ ಖಚಾನೆಯಲ್ಲಿ ಗಾಂಧೀಜಿ ಅವರ ಚಿತಾಭಸ್ಮವನ್ನು ಇರಿಸಲಾಗಿದೆ. ಪ್ರತಿ ವರ್ಷ ಜ.೩೦ರಂದು ಗಾಂಧೀಜಿ ಹುತಾತ್ಮ ದಿನದಂದು ಹೊರತೆಗೆದು ಮೆರವಣಿಗೆ ಮೂಲಕ ಗಾಂಧಿ ಮಂಟಪಕ್ಕೆ ತಂದು ಗಾಂಧಿ ಮಂಟಪದಲ್ಲಿರಿಸಿ ಸರ್ವೋದಯ ಸಮಿತಿಯ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಗಾಂಧೀಜಿ ಅವರು ಸಾವಿಗೀಡಾದ ನಂತರ ಗಾಂಧೀಜಿ ಚಿತಾ ಭಸ್ಮವನ್ನು ದೇಶದ ಎಲ್ಲ ನದಿಗಳಲ್ಲಿ ವಿಲೀನ ಮಾಡಲು ತೀರ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೊಡಗಿನ ಕೊಳ್ಳಿಮಾಡ ಕರುಂಬಯ್ಯ ಮತ್ತಿತರರು ಗಾಂಧೀಜಿ ಚಿತಾ ಭಸ್ಮವನ್ನು ಕೊಡಗಿಗೆ ತಂದರು ಎಂದು ಹೇಳಲಾಗುತ್ತದೆ. ಸದ್ಯ ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿರುವ ಈ ಚಿತಾಭಸ್ಮವನ್ನು ರಾಜ್‌ಘಾಟ್ ಮಾದರಿಯಲ್ಲಿ ಸ್ಮಾರಕ ನಿರ್ಮಾಣ ಮಾಡಿ ಅದರಲ್ಲಿಡಲು ತೀರ್ಮಾನಿಸಲಾಗಿದೆ.

” ಗಾಂಧಿ ಸ್ಮಾರಕ ಕಾಮಗಾರಿಗೆ ಹೆಚ್ಚುವರಿ ಅನುದಾನ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಸದ್ಯದಲ್ಲಿಯೇ ಅನುದಾನ ಬಿಡುಗಡೆಯಾಗಲಿದ್ದು, ಇನ್ನೂ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಹುತಾತ್ಮ ದಿನವನ್ನು ಇನ್ನು ಸ್ಮಾರಕ ಕಟ್ಟಡದ ಎದುರಲ್ಲಿಯೇ ನಡೆಸಲಾಗುವುದು.”

-ಅಂಬೆಕಲ್ಲು ನವೀನ್ ಕುಶಾಲಪ್ಪ, ಸರ್ವೋದಯ ಸಮಿತಿ ಅಧ್ಯಕ್ಷ .

” ಮಡಿಕೇರಿಯಲ್ಲಿ ಗಾಂಧಿ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರ ಮುಂದುವರಿದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹುತಾತ್ಮರ ದಿನಾಚರಣೆ ಪ್ರಯುಕ್ತ ಖಜಾನೆಯಲ್ಲಿರುವ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಮೆರವಣಿಗೆ ಮೂಲಕ ತಂದು ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗಾಂಧಿ ಭವನ ಕಾಮಗಾರಿ ಪೂರ್ಣಗೊಂಡ ನಂತರ ಚಿತಾಭಸ್ಮವನ್ನು ಇಲ್ಲಿಯೇ ಇರಿಸಲಾಗುತ್ತದೆ.”

-ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

 

 

Tags: