Mysore
28
overcast clouds

Social Media

ಬುಧವಾರ, 14 ಅಕ್ಟೋಬರ್ 2026
Light
Dark

ಮಡಿಕೇರಿ ದಸರಾ: ಕೆಎಸ್‌ಆರ್‌ಟಿಸಿ ಪ್ರವಾಸಿ ಪ್ಯಾಕೇಜ್

ನವೀನ್ ಡಿಸೋಜ

ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ 

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವದ ಸಂಭ್ರಮಕ್ಕೆ ಪ್ರವಾಸೋದ್ಯಮದ ಮೆರುಗು ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮುಂದಾಗಿದ್ದು, ಕೊಡಗಿನ ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ಪುತ್ತೂರು ವಿಭಾಗದ ವತಿಯಿಂದ ಇದೇ ಮೊದಲ ಬಾರಿಗೆ ವಿಶೇಷ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಲಾಗಿದೆ. ದಸರಾ ರಜೆಯ ಸಂದರ್ಭದಲ್ಲಿ ಕುಟುಂಬ ಸಮೇತ ಪ್ರವಾಸ ಕೈಗೊಳ್ಳಲು ಬಯಸುವವರಿಗೆ ಈ ಯೋಜನೆ ಉತ್ತಮ ಅವಕಾಶ ಕಲ್ಪಿಸಿದೆ.

ಕೊಡಗು ಎಂದರೆ ಕೇವಲ ಹಸಿರು ಬೆಟ್ಟಗುಡ್ಡಗಳು, ಕಾಫಿ ತೋಟಗಳು, ಧಾರ್ಮಿಕ ಕ್ಷೇತ್ರಗಳು, ಜಲಪಾತಗಳು, ನಿಸರ್ಗಧಾಮಗಳು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ವೈವಿಧ್ಯಮಯ ತಾಣಗಳ ನೆಲೆ. ಆದರೆ ಸಮಯದ ಅಭಾವ ಮತ್ತು ಸ್ವಂತ ವಾಹನ ಇಲ್ಲದ ಕಾರಣ ಹಲವು ಪ್ರವಾಸಿಗರಿಗೆ ಒಂದೇ ದಿನದಲ್ಲಿ ಪ್ರಮುಖ ಸ್ಥಳಗಳನ್ನು ವೀಕ್ಷಿಸುವುದು ಕಷ್ಟವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಆರ್ಟಿಸಿ ಎರಡು ವಿಭಿನ್ನ ಪ್ರವಾಸಿ ಮಾರ್ಗಗಳನ್ನು ರೂಪಿಸಿರುವುದು ಗಮನಾರ್ಹವಾಗಿದೆ.

‘ಕಾವೇರಿ ದರ್ಶನ’ ಪ್ಯಾಕೇಜ್ ಮೂಲಕ ಕೊಡಗಿನ ಧಾರ್ಮಿಕ ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಮಡಿಕೇರಿ ಬಸ್ ನಿಲ್ದಾಣದಿಂದ ಬೆಳಿಗ್ಗೆ ೬.೩೦ಕ್ಕೆ ಹೊರಡುವ ಬಸ್ ಓಂಕಾರೇಶ್ವರ ದೇವಸ್ಥಾನ, ಇಗ್ಗುತ್ತಪ್ಪ ದೇವಸ್ಥಾನ, ಭಾಗಮಂಡಲ, ತಲಕಾವೇರಿ, ಅಬ್ಬಿ ಜಲಪಾತ ಹಾಗೂ ರಾಜಾಸೀಟಿಗೆ ಕರೆದೊಯ್ಯಲಿದೆ. ಕಾವೇರಿ ನದಿಯ ಪಾವಿತ್ರ್ಯತೆಯೊಂದಿಗೆ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬಯಸುವವರಿಗೆ ಈ ಮಾರ್ಗ ಸೂಕ್ತವಾಗಿದೆ. ‘ಕೊಡಗಿನ ಸೊಬಗು’ ಪ್ಯಾಕೇಜ್‌ನಲ್ಲಿ ಪ್ರಕೃತಿ, ಸಂಸ್ಕ ತಿ ಮತ್ತು ಪ್ರವಾಸಿ ಆಕರ್ಷಣೆಗಳ ಸಮ್ಮಿಲನವಿದೆ. ಓಂಕಾರೇಶ್ವರ ದೇವಸ್ಥಾನದಿಂದ ಆರಂಭವಾಗುವ ಪ್ರವಾಸದಲ್ಲಿ ಹಾರಂಗಿ ಜಲಾಶಯ ಅಥವಾ ಆನೆ ಕ್ಯಾಂಪ್, ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ತೋಟಗಳು, ಅಬ್ಬಿ ಜಲಪಾತ ಹಾಗೂ ರಾಜಾಸೀಟು ವೀಕ್ಷಿಸುವ ಅವಕಾಶವಿದೆ. ಕೊಡಗಿನ ಹಸಿರು ಪರಿಸರ, ಕಾಫಿ ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ಪರಿಚಯಿಸುವ ಉದ್ದೇಶ ಈ ಪ್ಯಾಕೇಜ್ನಲ್ಲಿದೆ.

ಪ್ರವಾಸಿಗರ ಅನುಕೂಲಕ್ಕಾಗಿ ವಯಸ್ಕರಿಗೆ ೪೦೦ ರೂ. ಹಾಗೂ ಮಕ್ಕಳಿಗೆ ೩೦೦ ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಊಟ ಮತ್ತು ಪ್ರವೇಶ ಶುಲ್ಕವನ್ನು ಪ್ರಯಾಣಿಕರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ. ಬೆಳಿಗ್ಗೆ ೬.೩೦ಕ್ಕೆ ಆರಂಭವಾಗುವ ಪ್ರವಾಸ ರಾತ್ರಿ ಸುಮಾರು ೭.೩೦ಕ್ಕೆ ಮಡಿಕೇರಿ ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಳ್ಳಲಿದೆ. ಅಕ್ಟೋಬರ್ ೧೧ರಿಂದಲೇ ಈ ಪ್ಯಾಕೇಜ್ ಆರಂಭವಾಗಿದ್ದು, ೨೬ರವರೆಗೆ ಈ ವಿಶೇಷ ಬಸ್ ಸೇವೆ ಲಭ್ಯವಿರಲಿದೆ. ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಽಕೃತ ವೆಬ್‌ಸೈಟ್ ಮೂಲಕ ಮುಂಗಡ ಆಸನ ಕೂಡ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಮಡಿಕೇರಿ ದಸರಾ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಉತ್ಸವದ ಸಂಭ್ರಮದ ಜತೆಗೆ ಕೊಡಗಿನ ಪ್ರವಾಸಿ ತಾಣಗಳನ್ನೂ ವೀಕ್ಷಿಸಲು ಈ ವ್ಯವಸ್ಥೆ ನೆರವಾಗಲಿದೆ. ಸಾರ್ವಜನಿಕ ಸಾರಿಗೆಯ ಮೂಲಕ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಪ್ರಯತ್ನ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಸ್ಥಳೀಯ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವ ನಿರೀಕ್ಷೆಯಿದೆ.

” ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವತಿಯಿಂದ ಇದೇ ಮೊದಲ ಬಾರಿಗೆ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಆಯೋಜಿಸಲಾಗಿದೆ. ಅ.೨೬ರವರೆಗೆ ಈ ವಿಶೇಷ ಬಸ್ ಸೇವೆ ಲಭ್ಯವಿರಲಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಕಾವೇರಿ ದರ್ಶನ, ಕೊಡಗಿನ ಸೊಬಗು ಎಂಬ ಎರಡು ವಿಭಿನ್ನ ಮಾರ್ಗಗಳನ್ನು ರೂಪಿಸಲಾಗಿದೆ. ದಸರಾ ಸಂಭ್ರಮದ ನಡುವೆ ಕೊಡಗಿನ ಸೊಬಗನ್ನು ಆಸ್ವಾದಿಸಲು ಬಯಸುವವರು ಈ ವಿಶೇಷ ಪ್ಯಾಕೇಜ್‌ನ ಪ್ರಯೋಜನ ಪಡೆದುಕೊಳ್ಳಬಹುದು.”

-ಎಂ.ಪಿ. ಶ್ರೀಹರಿಬಾಬು, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ

 

 

Tags:
error: Content is protected !!