ಪ್ರಸಾದ್ ಲಕ್ಕೂರು
ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲು ಅರಣ್ಯ ಸಚಿವರ ಸೂಚನೆ; ಸ್ಥಳೀಯ ಸೋಲಿಗರು, ಬೇಡಗಂಪಣರಿಂದ ವಿರೋಧ
ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯವಾಗಿ ಘೋಷಿಸಲು ರಾಜ್ಯ ಸರ್ಕಾರವು ಮುಂದಾಗಿದೆ. ಈ ಸಂಬಂಧ ಅರಣ್ಯ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನೊಂದೆಡೆ ಸ್ಥಳೀಯರಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಈ ವನ್ಯಧಾಮದ ಮೀಣ್ಯಂ ವಲಯಾರಣ್ಯದಲ್ಲಿ ೫ ಹುಲಿಗಳು ವಿಷಪ್ರಾಷನದಿಂದ ಮೃತಪಟ್ಟವು. ಈ ದುರ್ಘಟನೆಯ ಹಿನ್ನೆಲೆಯಲ್ಲಿ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಬೇಕು ಎಂಬ ಕೂಗು ಪರಿಸರವಾದಿಗಳಿಂದ ಮತ್ತೆ ಕೇಳಿಬಂದಿದೆ.
ಈ ಜಿಲ್ಲೆಯಲ್ಲಿ ಈಗಾಗಲೇ ಬಿಳಿಗಿರಿರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಮಹದೇಶ್ವರ ವನ್ಯಧಾಮವು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾದರೆ ೩ ಹುಲಿ ಸಂರಕ್ಷಿತಾರಣ್ಯಗಳಾಗಲಿವೆ. ಜಿಲ್ಲೆಯಲ್ಲಿ ೯೦೬ ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡು ಅಮೂಲ್ಯ ವನ್ಯ ಸಂಪತ್ತು ಹೊಂದಿರುವ ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಯೋಜನೆ ಪ್ರದೇಶವಾಗಿ ಘೋಷಣೆ ಮಾಡಬೇಕೆಂಬ ಬೇಡಿಕೆಯು ಕಳೆದ ೩ ವರ್ಷಗಳ ಹಿಂದೆಯೇ ಕೇಳಿಬಂದಿತ್ತು.
ಈ ಬಗ್ಗೆ ಬೆಟ್ಟದ ಬುಡಕಟ್ಟು ಸೋಲಿಗರು, ಬೇಡಗಂಪಣರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಅರಣ್ಯ ಇಲಾಖೆ ಮತ್ತು ಪರಿಸರ ಜೀವಿ ತಜ್ಞರು ಹುಲಿ ಯೋಜನೆ ಘೋಷಣೆ ಆಗಬೇಕೆಂದು ಒತ್ತಾಯಿಸಿದ್ದರು. ಈ ಪರ ವಿರೋಧ ಚರ್ಚೆಗಳಿಂದ ಗೊಂದಲ ಉಂಟಾಯಿತು. ಹಾಗಾಗಿ ಹುಲಿ ಯೋಜನೆ ಘೋಷಣೆ ಪ್ರಸ್ತಾಪವು ಮುಖ್ಯಮಂತ್ರಿ ಬಳಿ ಪರಿಶೀಲನೆ ಯಲ್ಲಿದೆ. ಪವಾಡ ಪುರುಷ ಹಾಗೂ ಸಮಾನತೆಗಾಗಿ ಹೋರಾಟ ನಡೆಸಿದ ಮಹದೇಶ್ವರರು ನೆಲೆಸಿರುವ ೭೭ ಬೆಟ್ಟಗಳ ಪ್ರದೇಶವಾದ ಈ ಸಂರಕ್ಷಿತ ವನ್ಯಧಾಮದಲ್ಲಿ ೫೬ ಸೋಲಿಗರ ಪೋಡುಗಳಿದ್ದು ೨,೫೦೦ ಕುಟುಂಬಗಳು ವಾಸವಾಗಿವೆ.
ಇವರ ಜನಸಂಖ್ಯೆ ಸುಮಾರು ೧೫ ಸಾವಿರದಷ್ಟಿದೆ. ಹುಲಿ ಯೋಜನೆ ಜಾರಿಗೊಂಡರೆ ಸಂಜೆ ೬ ಗಂಟೆಯಿಂದ ಬೆಳಗಿನ ೬ ಗಂಟೆ ತನಕ ವನ್ಯಧಾಮದೊಳಗೆ ವಾಹನಗಳಪ್ರವೇಶ ಬಂದ್ ಆಗಲಿದೆ. ಪವಿತ್ರ ಯಾತ್ರಾಸ್ಥಳವಾದ ಮಲೆ ಮಹದೇಶ್ವರನ ಸನ್ನಿಧಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗಲಿದೆ. ವಾಹನಗಳ ಸಂಚಾರ ಮತ್ತು ಪಾದಯಾತ್ರೆಗೆ ಕಡಿವಾಣ ಬೀಳಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಈ ವನ್ಯಧಾಮದೊಳಗೆ ಸೋಲಿಗರು, ಬೇಡಗಂಪಣರು, ಇತರೆ ಸಮುದಾಯಗಳು ವಾಸಿಸುವ ೧೫೦ ಸಣ್ಣ ಪುಟ್ಟ ಗ್ರ್ರಾಮಗಳಿವೆ. ಹುಲಿ ಯೋಜನೆ ಜಾರಿಯಾದರೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ನಿರ್ಬಂಧ ಬೀಳಲಿದೆ. ಅಲ್ಲದೆ ನಮ್ಮನ್ನು ಒಕ್ಕಲೆಬ್ಬಿಸುವ ಸಾಧ್ಯತೆಯಿದೆ ಎಂದು ಕಳವಳಗೊಂಡಿದ್ದಾರೆ.
ಏನಿದು ಹುಲಿ ಯೋಜನೆ?: ಇದೊಂದು ಕೇಂದ್ರ ಸರ್ಕಾರದ ಕಾರ್ಯಕ್ರಮವಷ್ಟೇ. ರಾಷ್ಟ್ರೀಯ ಪ್ರಾಣಿ ಹುಲಿ ಸಂರಕ್ಷಣೆಗಾಗಿ ೧೯೭೩ರಲ್ಲಿ ಆರಂಭವಾದ ಯೋಜನೆ. ನಾಗರೀಕತೆ ಬೆಳೆದಂತೆ ಕಾಡು ಕಣ್ಮರೆ ಆಗುತ್ತಿರುವ ಸಂದರ್ಭದಲ್ಲಿ ಅಳಿವಿನ ಅಂಚಿ ನಲ್ಲಿರುವ ಹುಲಿಗಳನ್ನು ಸಂರಕ್ಷಿಸುವುದಾಗಿದೆ.
ಈಗ ಅರಣ್ಯ ಸಂರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಅನುದಾನಕ್ಕಿಂತ ಸುಮಾರು ೧೦-೧೫ ಕೋಟಿ ರೂ. ಹೆಚ್ಚು ಅನುದಾನ ಸಿಗಲಿದೆ. ಇದರಿಂದ ಅರಣ್ಯ ಸಂರಕ್ಷಣೆ ಜೊತೆಗೆ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ವಹಿಸಬಹುದು. ಅಲ್ಲಿನ ಸ್ಥಳೀಯರಿಗೆ ಉದ್ಯೋಗವಕಾಶ ಹೆಚ್ಚಾಗಲಿದೆ. ಪ್ರಾಣಿಗಳ ಕಳ್ಳ ಬೇಟೆಯನ್ನು ಸಮರ್ಪಕವಾಗಿ ತಡೆಯಬಹುದು.
” ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡುವುದಾದರೆ ಅದು ಸ್ಥಳೀಯ ಜನರು ಹಾಗೂ ಭಕ್ತರಿಗೆ ಪೂರಕವಾಗಿರಬೇಕು. ತಲೆ ತಲಾಂತರದಿಂದ ವಾಸಿಸುತ್ತಿರುವ ವನ್ಯಧಾಮದ ವ್ಯಾಪ್ತಿಯ ಜನರಿಗೆ ಹಾಗೂ ಸ್ಥಳೀಯ ನೀತಿನಿಯಮಗಳಿಗೆ ಅಡ್ಡಿಯಾಗಬಾರದು. ಇವುಗಳಿಗೆ ಆದ್ಯತೆ ನೀಡಿ ಹುಲಿ ಯೋಜನೆ ಘೋಷಿಸಿದರೆ ಒಳಿತು.”
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಾಲೂರು ಮಠ, ಮಲೆ ಮಹದೇಶ್ವರ ಬೆಟ್ಟ.
” ವನ್ಯಧಾಮದ ವ್ಯಾಪ್ತಿಯ ೮ ರಿಂದ ೧೦ ಗ್ರಾಮಗಳಿಗೆ ಮೊದಲು ಮೂಲ ಸೌಕರ್ಯಗಳನ್ನು ನೀಡಿಲ್ಲ. ಹುಲಿ ಯೋಜನೆ ಘೋಷಿಸಿದರಂತೂ ಸೌಲಭ್ಯಗಳನ್ನು ನೀಡುವುದೇ ಇಲ್ಲ. ಅರಣ್ಯ ಇಲಾಖೆಯವರು ವನ್ಯಧಾಮದ ವ್ಯಾಪ್ತಿಯ ಕಂದಾಯ ಗ್ರಾಮಗಳಿಗೆ ಕುಡಿಯುವನೀರು, ವಿದ್ಯುತ್, ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬೇಕು. ನಂತರ ಹುಲಿ ಯೋಜನೆ ಘೋಷಿಸಲಿ.”
ಕೆ.ವಿ.ಮಾದೇಶ್, ಬೇಡಗಂಪಣರು, ವಡಕೆಹಳ್ಳ
” ಹುಲಿ ಯೋಜನೆ ಘೋಷಿಸಿದರೆ ವನ್ಯಧಾಮದ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಲಿದೆ. ಇಲ್ಲಿರುವವರು ಕಾಡನ್ನು ನಂಬಿ ಬದುಕುತ್ತಿದ್ದಾರೆ. ಕಾಡಿಗೆ ಮತ್ತು ಪ್ರಾಣಿಗಳಿಗೆ ಹಾನಿ ಮಾಡಿದವರಿಗೆ ಶಿಕ್ಷೆ ನೀಡಲಿ. ವನ್ಯಧಾಮದೊಳಗೆ ಇರುವ ನಾವು ಹಿಂದಿನಿಂದಲೂ ಅರಣ್ಯವನ್ನು ಸಂರಕ್ಷಣೆ ಮಾಡಿಕೊಂಡು ಬಂದಿದ್ದೇವೆ.”
ಮುರುಗೇಶ್, ಮಲೆ ಮಹದೇಶ್ವರ ಬೆಟ್ಟ.
” ಹುಲಿ ಯೋಜನೆ ಘೋಷಿಸುವ ಮೊದಲು ಸ್ಥಳೀಯರೊಂದಿಗೆ ಚರ್ಚೆ ಆಗಬೇಕು. ಪ್ರತಿಗ್ರಾಮಸಭೆ ಯಲ್ಲೂ ನಿರ್ಣಯ ಆಗಬೇಕು. ವನ್ಯಜೀವಿ ಸಂರಕ್ಷಣಾ ಕಾಯ್ದೆ- ೧೯೭೨ ಬಗ್ಗೆ ಆದ್ಯತೆ ನೀಡುತ್ತಾರೆ. ಅರಣ್ಯ ಹಕ್ಕು ಕಾಯ್ದೆ-೨೦೦೬ ಕುರಿತು ಗಮನಹರಿಸುವುದಿಲ್ಲ. ನಾವು ನೆಲದ ಕಾನೂನುಗಳನ್ನು ಗೌರವಿಸುತ್ತೇವೆ. ಆದರೆ, ಸ್ಥಳೀಯರಹಕ್ಕುಗಳನ್ನು ಧಮನಿಸುವ ಯಾವುದೇ ಕಾನೂನನ್ನು ವಿರೋಧಿಸುತ್ತೇವೆ. ಶತಮಾನಗಳಿಂದ ಆದಿವಾಸಿಗಳು ಕಾಡನ್ನು ರಕ್ಷಿಸುತ್ತಿದ್ದಾರೆ ಎಂಬುದನ್ನು ಸರ್ಕಾರ ಗಮನಿಸಬೇಕು.”
ವಿ.ಮುತ್ತಯ್ಯ, ಸಮನ್ವಯಕಾರರು, ಕರ್ನಾಟಕ ಮೂಲ ಆದಿವಾಸಿ ಬುಡಕಟ್ಟುಗಳ ಒಕ್ಕೂಟ, ಗಾಣಿಗಮಂಗಲ ಪೋಡು
” ನಾವು ಈ ಹುಲಿ ಯೋಜನೆ ವಿರೋಽಸಿ ೨ ಹೋರಾಟಗಳನ್ನು ಮಾಡಿದ್ದೇವೆ. ವನ್ಯಧಾಮದ ವ್ಯಾಪ್ತಿಯಲ್ಲಿ ೫೬ ಆದಿವಾಸಿಗಳ ಪೋಡುಗಳಿದ್ದು, ೧೫ ಸಾವಿರಜನಸಂಖ್ಯೆಯಿದೆ. ಹುಲಿ ಯೋಜನೆ ಘೋಷಿಸಿದರೆ ಸ್ಥಳೀಯರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಶುರುವಾಗಲಿದೆ. ಇಡೀ ದೇಶದಲ್ಲಿ ೫೮ ಹುಲಿ ಸಂರಕ್ಷಿತಾರಣ್ಯಗಳಿವೆ. ಇಲ್ಲಿರುವ ೬೫ ಸಾವಿರ ಜನರನ್ನು ಹೊರ ಹಾಕಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶವಾಗಿದೆ. ಹುಲಿ ಯೋಜನೆ ಮಾಡಿದರೆ ನಮ್ಮನ್ನು ಹೊರಗೆ ಹಾಕುತ್ತಾರೆ. ಓಡಾಟಕ್ಕೆ ನಿರ್ಬಂಧ, ಜಾನುವಾರುಗಳನ್ನು ಮೇಯಿಸಲು ಅವಕಾಶವಿರುವುದಿಲ್ಲ. ಹುಲಿ ಯೋಜನೆ ಘೋಷಣೆ ಮಾಡುವುದು ಬೇಡ. ವನ್ಯಧಾಮವಾಗಿಯೇ ಮುಂದುವರಿಸಬೇಕು.”
ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ
” ೩ ವರ್ಷಗಳ ಹಿಂದೆಯೇ ವಿರೋಧ ಮಾಡಿದ್ದೇವೆ. ವನ್ಯಧಾಮದ ಅಂಚಿನಲ್ಲಿ ಸಾಕಷ್ಟು ಗ್ರಾಮಗಳಿವೆ ಇಲ್ಲಿ ವಾಸಿಸುವವರು ಜಾನುವಾರು ಮೇಯಿಸುವುದು ಮತ್ತು ವ್ಯವಸಾಯ ಮಾಡುತ್ತಿದ್ದಾರೆ. ಹುಲಿ ಯೋಜನೆ ಘೋಷಿಸಿದರೆ ಸ್ಥಳೀಯರಿಗೆ ಸಮಸ್ಯೆಯಾಗಲಿದೆ. ಸಂಜೆ ೬ ಗಂಟೆ ನಂತರ ವನ್ಯಧಾಮದ ರಸ್ತೆಗಳಲ್ಲಿ ಸಂಚಾರ ನಿಷೇಧ ಮಾಡಲಿದ್ದಾರೆ. ಹಾಗಾಗಿ ಹುಲಿ ಯೋಜನೆಗೆ ನಮ್ಮ ವಿರೋಧವಿದೆ.”
ಅಮ್ಜದ್‌ಖಾನ್, ರೈತ ಮುಖಂಡರು, ಗಂಗನದೊಡಿ



