Mysore
24
clear sky

Social Media

ಗುರುವಾರ, 26 ಫೆಬ್ರವರಿ 2026
Light
Dark

ಪೋಷಕರೊಂದಿಗೆ ಸ್ಪೇನ್‌ಗೆ ಹಾರಿದ ಪುಟ್ಟ ಕಂದಮ್ಮ

ಕೆ.ಬಿ.ರಮೇಶನಾಯಕ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಭಾರತೀಯ ಮಗು ದತ್ತು ಪಡೆದ ವಿದೇಶಿ ದಂಪತಿ

ಮೈಸೂರು: ಬಹುಶಃ ಹೆತ್ತಮ್ಮ ಇದ್ದರೂ ಅಷ್ಟೊಂದು ಮುದ್ದು ಮಾಡುತ್ತಿರಲಿಲ್ಲವೇನೋ, ನಾನು ಸಮಾಧಾನಪಡಿಸುವೆ ಎಂದು ತಂದೆಯೂ ಹೇಳುತ್ತಿರಲಿಲ್ಲ.ಆದರೆ, ದತ್ತು ಪಡೆದುಕೊಂಡ ದಂಪತಿ ಕೈಗಳಿಗೆ ಮಗು ಬರುತ್ತಿದ್ದಂತೆ ಎಲ್ಲಿಲ್ಲದ ಸಂಭ್ರಮ. ಮಗು ಪಡೆದ ಖುಷಿಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ಮಗುವಿನೊಂದಿಗೆ ಸ್ಪೇನ್ ದೇಶಕ್ಕೆ ತೆರಳಿದರು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಭಾರತೀಯ ಮಗುವನ್ನು ದತ್ತು ಪಡೆದ ಸ್ಪೇನ್ ದೇಶದ ದಂಪತಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಮಗು ದತ್ತು ಕೊಡುವ ಮೂಲಕ ಹಾರೈಸಿದರು. ಮಗು ಪಡೆದ ದಂಪತಿಯೂ ಅಷ್ಟೇ ವಿನಮ್ರವಾಗಿ ಕೈಮುಗಿಯುತ್ತಿದ್ದಂತೆ ಒಂದೂವರೆ ವರ್ಷದ ಮಗು ಬಾಯಲ್ಲಿ ಬೆರಳನ್ನಿಟ್ಟುಕೊಂಡು ನಗುತ್ತಿತ್ತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ಸರ್ಕಾರಿ ವಿಶೇಷ ದತ್ತು ಸಂಸ್ಥೆ, ಶ್ರೀ ಛಾಯಾದೇವಿ ಅನಾಥಾಶ್ರಮದಿಂದ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ನಿಯಮದಂತೆ ಆರು ಮಕ್ಕಳನ್ನು ದತ್ತು ನೀಡಲಾಯಿತು. ಸರ್ಕಾರಿ ದತ್ತು ಸಂಸ್ಥೆಯಿಂದ ಮೂರು ಮಕ್ಕಳು, ಛಾಯಾದೇವಿ ಅನಾಥಾಶ್ರಮದಿಂದ ಮೂರು ಮಕ್ಕಳನ್ನು ನಿಯಮಾನುಸಾರ ಪೋಷಕರಿಗೆ ಒಪ್ಪಿಸಲಾಯಿತು. ಪ್ರತಿಯೊಂದು ಕಡತಗಳನ್ನೂ ಪರಿಶೀಲಿಸಿದ ಜಿಲ್ಲಾಧಿಕಾರಿ, ಒಂದೊಂದು ಮಗುವನ್ನು ಕಾತರದಿಂದ ಕಾದಿದ್ದ ಪೋಷಕರ ಮಡಿಲಿಗೆ ಹಸ್ತಾಂತರ ಮಾಡಿದರು.

ಸ್ಪೇನ್ ದೇಶಕ್ಕೆ ವಿಶೇಷ ಚೇತನ ಮಗು: ಸ್ಪೇನ್ ದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಾರ್ವಜನಿಕ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ದಂಪತಿಗೆ ಮಕ್ಕಳು ಇರಲಿಲ್ಲ. ಲಕ್ಷಾಂತರ ರೂಪಾಯಿ ವೇತನ ಬರುತ್ತಿದ್ದರೂ ಮಗು ಇಲ್ಲದೆ ಕಂಗಾಲಾಗಿದ್ದ ಈ ದಂಪತಿಯು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ವೆಬ್‌ಸೈಟ್ ವೀಕ್ಷಿಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಭಾರತೀಯ ದತ್ತು ಸ್ವೀಕಾರ ಕಾನೂನಿನ ಪ್ರಕಾರ ಸಾಮಾನ್ಯ ಮಕ್ಕಳನ್ನು ದತ್ತು ಕೊಡುವಂತಿಲ್ಲ. ಆದರೆ, ವಿಶೇಷಚೇತನ ಮಗುವನ್ನು ದತ್ತುಕೊಡುವುದಕ್ಕೆ ಅವಕಾಶ ಇರುವುದರ ಬಗ್ಗೆ ತಿಳಿಸಲಾಗಿತ್ತು. ಇದಕ್ಕೆ ಒಪ್ಪಿದ ದಂಪತಿಯು ಎರಡು ವರ್ಷಗಳಿಂದಲೂ ವಿಶೇಷಚೇತನ ಮಗುವನ್ನು ಪಡೆಯುವ ಸಲುವಾಗಿ ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಮುಗಿಸಿದ್ದರು. ಸರ್ಕಾರಿ ಉದ್ಯೋಗದ ಪ್ರಮಾಣಪತ್ರ, ಆಸ್ತಿ ವಿವರ, ಮಗುವನ್ನು ನೋಡಿಕೊಳ್ಳುವ ಹೊಣೆಗಾರಿಕೆ, ವಿಶೇಷ ಮಗುವಾದರೂ ಆರೈಕೆ ಮಾಡುತ್ತೇವೆ ಎಂಬ ಷರತ್ತನ್ನು ಪೂರೈಸಿದ್ದರು. ಅದರಂತೆ, ಒಪ್ಪಂದದ ಪತ್ರ, ಅಫಿಡವಿಟ್ ಸಲ್ಲಿಸಿದ್ದರು. ಈ ಅರ್ಜಿಯನ್ನು ಅಂಗೀಕರಿಸಿ ಒಪ್ಪಿಗೆ ಕೊಡಲಾಗಿತ್ತು.

ಹಾಗಾಗಿ, ಮೈಸೂರಿಗೆ ಆಗಮಿಸಿದ್ದ ಈ ದಂಪತಿಯು ಛಾಯಾದೇವಿ ಅನಾಥಾಲಯದ ಮುಖ್ಯಸ್ಥರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಅದರಂತೆ, ಬುಧವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ ಅವರು ಮಗುವನ್ನು ಹಸ್ತಾಂತರ ಮಾಡುತ್ತಿದ್ದಂತೆ ಪೋಷಕರ ಮೊಗದಲ್ಲಿ ಸಂತಸ ಮನೆ ಮಾಡಿತು. ಮಗು ವನ್ನು ಮುದ್ದಾಡಿ ಖುಷಿಪಟ್ಟರು. ಇದುವರೆಗೂ ಛಾಯಾದೇವಿ ಅನಾಥಾಲಯ ಸಂಸ್ಥೆಯ ಪೋಷಕರ ಆಶ್ರಯದಲ್ಲಿ ಬೆಳೆದಿದ್ದ ಮಗು ಹೊಸದಾದ ತಂದೆ-ತಾಯಿ ಕೈಗೆ ಸೇರುತ್ತಿದ್ದಂತೆ ಮುಖದಲ್ಲಿ ಲವಲವಿಕೆಯೂ ಕಾಣಿಸಿತು.

ಇದುವರೆಗೂ ಆರು ಮಗು ವಿದೇಶಕ್ಕೆ: ಕಳೆದ ಮೂರು ವರ್ಷಗಳಿಂದ ಮೈಸೂರಿನಿಂದ ಆರು ಮಕ್ಕಳನ್ನು ವಿದೇಶಕ್ಕೆ ದತ್ತು ನೀಡಲಾಗಿದೆ. ವಿದೇಶದಲ್ಲಿ ಇದ್ದರೂ ಮಗುವಿನ ದತ್ತು ಸ್ವೀಕಾರಕ್ಕೆ ಅವಕಾಶ ನೀಡಿರುವುದರಿಂದ ಮಕ್ಕಳಿಲ್ಲದ ದಂಪತಿ ದತ್ತು ಸ್ವೀಕರಿಸುತ್ತಿದ್ದು, ಮೂರು ವರ್ಷಗಳಲ್ಲಿ ಆರು ಮಕ್ಕಳನ್ನು ದತ್ತು ಕೊಡಲಾಗಿದೆ.ಅಮೆರಿಕ-೨, ಇಟಲಿ-೧, ಕೆನಡಾ-೧,ಹಾಂಕಾಂಗ್-೧, ದುಬೈಗೆ ಒಂದು ಮಗುವನ್ನು ಕೊಡಲಾಗಿದೆ. ಇವರೆಲ್ಲರೂ ವಿಶೇಷಚೇತನ ಮಕ್ಕಳಾಗಿದ್ದಾರೆ. ಭಾರತದ ಒಳಗೆ ದತ್ತು ಕೊಡುವ ಮಕ್ಕಳು ಸಾಮಾನ್ಯ ಮಕ್ಕಳಿರುತ್ತಾರೆ ಎಂದು ಹೇಳಲಾಗಿದೆ.

” ೪ ಸಾವಿರ ಮಕ್ಕಳಿಗೆ ಬೇಡಿಕೆ ಅರ್ಜಿ ಕೇಂದ್ರ ಸರ್ಕಾರ ರೂಪಿಸಿರುವ ಹೊಸ ನಿಯಮದಂತೆ ಅರ್ಜಿ ಸಲ್ಲಿಕೆಯು ಆನ್‌ಲೈನ್ ವ್ಯವಸ್ಥೆಯಾಗಿದ್ದು, ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ನಾಲ್ಕು ಸಾವಿರ ಮಕ್ಕಳ ದತ್ತು ಸ್ವೀಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ೩೦೦ ಅರ್ಜಿಗಳು ಸಲ್ಲಿಕೆಯಾಗಿದ್ದು, ಮೂರು ವರ್ಷಗಳಲ್ಲಿ ೪೫ ಮಕ್ಕಳನ್ನು ದತ್ತು ಕೊಡಲಾಗಿದೆ. ಮಕ್ಕಳಿಲ್ಲದವರು ಮಗುವಿಗಾಗಿ ಅರ್ಜಿ ಸಲ್ಲಿಸುತ್ತಿರುವುದು ಹೆಚ್ಚಾದರೆ, ಮಕ್ಕಳನ್ನು ಸಾಕಲು  ಅಸಹಾಯಕರಾದವರು, ಅನಾಥಾಶ್ರಮಗಳಿಗೆ ಬಿಟ್ಟುಹೋದ, ರಸ್ತೆಬದಿಯಲ್ಲಿ ಸಿಕ್ಕ ಮಕ್ಕಳನ್ನು ತಂದು ಸಾಕಲಾಗುತ್ತದೆ.”

ಯೋಗೀಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ.

” ಮಕ್ಕಳಿಲ್ಲದ ದಂಪತಿ ಮಕ್ಕಳಿಲ್ಲವೆಂದು ಕೊರಗುವ ಬದಲಿಗೆ ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಿದರೆ ಅಂತಹವರ ಭವಿಷ್ಯವನ್ನುರೂಪಿಸಬಹುದು. ದತ್ತು ಸ್ವೀಕಾರ ಯೋಜನೆ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ. ಪೋಷಕರು ಇಲ್ಲದ ಮಗು ಬೆಳೆಯುವುದಕ್ಕೂ, ಪೋಷಕರು ಜತೆಯಾಗಿ ಇದ್ದಾಗ ಮಗು ಇರುವುದಕ್ಕೂ ವ್ಯತ್ಯಾಸವಿದೆ.”

ಜಿ.ಲಕ್ಷ್ಮಿಕಾಂತ ರೆಡ್ಡಿ,ಜಿಲ್ಲಾಧಿಕಾರಿ.

” ಅನಾಥ ಮಕ್ಕಳನ್ನು ಪೋಷಣೆ ಮಾಡಲಾಗುವುದು. ನಿಯಮಾನುಸಾರ ಅರ್ಜಿ ಸಲ್ಲಿಸುವ ಪೋಷಕರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿಫಾರಸಿನಂತೆ ದತ್ತು ನೀಡಲಾಗುವುದು. ಪೋಷಕರು ತಮ್ಮ ಮಕ್ಕಳಂತೆ ಸಾಕಿ ಸಲಹುತ್ತಾರೆ. ನಮ್ಮ ಸಂಸ್ಥೆಯಿಂದ ಇದುವರೆಗೂ ೩೦ಮಕ್ಕಳನ್ನು ದತ್ತು ನೀಡಲಾಗಿದೆ.”

ಭಾನುಪ್ರಕಾಶ್, ಅಧ್ಯಕ್ಷ, ಛಾಯಾದೇವಿ ಅನಾಥಾಲಯ.

 

 

 

Tags:
error: Content is protected !!