ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ ಮೈಕ್ರೋ ಜೆರಾಕ್ಸ್ ಮಾಡಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ.
ಬಹು ನಿರೀಕ್ಷಿತ ಪ್ರಶ್ನೆಗಳಿಗೆ ತಕ್ಕ ಉತ್ತರವನ್ನು ಮೈಕ್ರೋ ಜೆರಾಕ್ಸ್ ಮಾಡಿಸಿ ಚಿಕ್ಕ ಮಡಿಕೆಯನ್ನು ಮಾಡಿಕೊಂಡು ಪರೀಕ್ಷೆಗಳಲ್ಲಿ ನಕಲು ಮಾಡಲು ಬಳಸಲಾಗುತ್ತಿದೆ. ಪರೀಕ್ಷಾ ಸಮಯದಲ್ಲಿ ಮೋಸದಿಂದ ನಕಲು ಮಾಡಿ ಅಂಕ ಗಳಿಸುವ ವಿದ್ಯಾರ್ಥಿಗಳಿಂದಾಗಿ ವರ್ಷವಿಡೀ ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಪರೀಕ್ಷಾ ಸಮಯದಲ್ಲಿ ಪರೀಕ್ಷೆ ನಡೆಯುವ ನಿರ್ದಿಷ್ಟ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವುದು ನಿಯಮ. ಆದರೆ ಮೈಕ್ರೋ ಜೆರಾಕ್ಸ್ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸುತ್ತಿರುವವರ ವಿರುದ್ಧವೂ ಪೊಲೀಸರು ಹಾಗೂ ಜಿಲ್ಲಾ ಆಡಳಿತದಿಂದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
-ಸಂಕರ್ಷಣ, ಮೈಸೂರು


