Mysore
21
overcast clouds

Social Media

ಸೋಮವಾರ, 21 ಸೆಪ್ಟೆಂಬರ್ 2026
Light
Dark

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…  

Ganesha Visarjane

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ ಗಣೇಶೋತ್ಸವ ಸ್ವಾತಂತ್ರ್ಯಾನಂತರವೂ ದೇಶವ್ಯಾಪಿಯಾಗಿ ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾ ಬಂದಿದ್ದರೂ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಸಾರ್ವಜನಿಕರ ಶಾಂತಿ, ನೆಮ್ಮದಿ ಕದಡಿದ ಉದಾಹರಣೆ ಇರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಮತೀಯ ಶಕ್ತಿಗಳ ಹಿಡಿತ ಬಲವಾಗತೊಡಗಿದ ಪರಿಣಾಮ ಅಲ್ಲಲ್ಲಿ ಗಣೇಶ ವಿಸರ್ಜನೆಯ ದಿನ ಕೋಮುಶಕ್ತಿಗಳು ವಿಜೃಂಭಿಸಿ ಸಾರ್ವಜನಿಕ ಸ್ವಾಸ್ಥ್ಯ ಕದಡುತ್ತಿವೆ. ಇದಕ್ಕೆ ಇತ್ತೀಚಿನ ಸೇರ್ಪಡೆ ಮೈಸೂರು ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿ ಈ ವರ್ಷ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆ.

ಗೌರಿ-ಗಣೇಶ ಹಬ್ಬದ ಪೂರ್ವದಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಯೋಜಿಸುವ ಯುವಕ ಸಂಘಗಳವರಿಗೆ ತಿಳಿಹೇಳುವ ಭರದಲ್ಲಿ ತಿ.ನರಸೀಪುರ ಠಾಣೆಯ ಇನ್‌ಸ್ಪೆಕ್ಟರ್ ಧನಂಜಯ್ ಆಡಿದ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕಿಡಿಗೇಡಿಗಳಿಗೆ ಅಸ ಸಿಕ್ಕಂತಾಯಿತು. ಅದನ್ನೇ ಬಂಡವಾಳ ಮಾಡಿಕೊಂಡು ಹಿಂದೂ ಮಹಾಗಣಪತಿ ಬ್ಯಾನರ್‌ನಡಿ ಗಣೇಶೋತ್ಸವ ಆಯೋಜಿಸಿ, ಮಸೀದಿ ಇರುವ ಕಾರಣಕ್ಕೆ ಪಟ್ಟಣದ ಲಿಂಕ್ ರಸ್ತೆಯಲ್ಲಿ ಗಣೇಶ ವಿಸರ್ಜನೆಯ ವೇಳೆ ಶಾಂತ ರೀತಿಯಿಂದ ವರ್ತಿಸುವಂತೆ ಹೇಳಿದ್ದನ್ನೇ ಸವಾಲಾಗಿ ಸ್ವೀಕರಿಸಿ, ಮಸೀದಿ ಮುಂದೆಯೇ ಡಿಜೆ ಹಾಕಿಕೊಂಡು ಕುಣಿದು, ಕುಪ್ಪಳಿಸಿ ಸಮಾಜದ ಸಾಮರಸ್ಯ ಕದಡಲು ಯತ್ನಿಸಿದ್ದು ಅಕ್ಷಮ್ಯ. ಅದರಲ್ಲೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ, ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಡಿಜೆ ವಾಹನದ ಮೇಲೇರಿ ನಿಂತು ಪ್ರಚೋದನಕಾರಿ ಭಾಷಣ ಮಾಡಿದ ನಡೆ ಖಂಡನೀಯ.

ದೇಶದ ಕಾನೂನುಗಳನ್ನು ರೂಪಿಸುವ ಪರಮೋಚ್ಚ ಜವಾಬ್ದಾರಿ ಹೊಂದಿದ್ದ ಲೋಕಸಭೆಯ ಮಾಜಿ ಸದಸ್ಯರಾಗಿ ಇನ್‌ಸ್ಪೆಕ್ಟರ್‌ವೊಬ್ಬರ ವಿರುದ್ಧ ಸಾರ್ವಜನಿಕವಾಗಿ ಅವರು ಬಳಸಿದ ಪದಗಳು ಸಾರ್ವಜನಿಕ ಜೀವನದಲ್ಲಿರುವವರಿಗೆ ಶೋಭೆಯಲ್ಲ. ಪ್ರತಾಪ್ ಸಿಂಹ ಜವಾಬ್ದಾರಿಯುತವಾಗಿ ವರ್ತಿಸಬೇಕಿತ್ತು. ಪೊಲೀಸ್ ಅಧಿಕಾರಿಯ ಹೆಸರು ಹೇಳಿ ಅವರಿಗೆ ಬಹಿರಂಗವಾಗಿ ಪಂಥಾಹ್ವಾನ ನೀಡುವುದು ಹದ್ದು ಮೀರಿದ ವರ್ತನೆ. ಹೀಗಾಗಿ ಪೊಲೀಸರು ತಡವಾಗಿಯಾದರೂ ಅವರ ವಿರುದ್ಧ ಸಾರ್ವಜನಿಕ ಸೇವಕರು ಹಾಗೂ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು, ಗುಂಪುಗಳು ಮತ್ತು ಸಮುದಾಯಗಳ ನಡುವೆ ದ್ವೇಷಕ್ಕೆ ಪ್ರಚೋದನೆ ನೀಡುವುದು, ಧಾರ್ಮಿಕ ನಂಬಿಕೆಗಳಿಗೆ ಅವಮಾನ ಹಾಗೂ ಪ್ರಚೋದನಕಾರಿ ಹೇಳಿಕೆಗಳ ಆರೋಪದಲ್ಲಿ ಎಫ್ಐಆರ್ ದಾಖಲಿಸಿರುವುದು ಸರಿಯಾಗಿಯೇ ಇದೆ.

ಯಾವುದೇ ದೇವರ ಉತ್ಸವ ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಮೂಡಿಸಬೇಕು. ಪೊಲೀಸರು ಕಾನೂನು ಕಾಪಾಡುವ ವಿಚಾರದಲ್ಲಿ ಎಚ್ಚರಿಕೆ ನೀಡುವುದು ಸಹಜ. ಸಮವಸ್ತ್ರ ಧರಿಸಿದ ಪೊಲೀಸರನ್ನು ಕಂಡರೆ ಸಮಾಜ ಭಯ ಬೀಳದಿದ್ದ ಮೇಲೆ ಆ ಇಲಾಖೆಯೇಕೆ, ಅಷ್ಟಕ್ಕೂ ರಾಜಕಾರಣಿಗಳು ಪೊಲೀಸರನ್ನು ಬೆದರು ಬೊಂಬೆಯಂತೆ ನೋಡಲು ಇಷ್ಟಪಡುತ್ತಾರೆಯೇ ಎಂಬುದನ್ನು ಪ್ರತಾಪ್‌ಸಿಂಹ ಅಂಥವರೇ ಹೇಳಬೇಕು. ಒಂದು ವೇಳೆ ಯಾರಾದರೂ ಪೊಲೀಸ್ ಅಧಿಕಾರಿ ನಿಯಮ ಮೀರಿ ವರ್ತಿಸಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಲು ಅವಕಾಶ ಇದ್ದೇ ಇದೆ. ಅದನ್ನು ಬಿಟ್ಟು ಸಾರ್ವಜನಿಕ ಗಣೇಶೋತ್ಸವವನ್ನೂ ತಮ್ಮ ರಾಜಕೀಯ ಲಾಭಗಳಿಕೆಯ ಪ್ರಯೋಗಕ್ಕೆ ಒಡ್ಡುವುದು ಸರಿಯಲ್ಲ. ಸಾರ್ವಜನಿಕವಾಗಿ ಗುಂಪು ಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾ ಸಾರ್ವಜನಿಕರ ಶಾಂತಿ-ನೆಮ್ಮದಿಗೆ ಭಂಗ ತರುವ, ಧರ್ಮ-ಧರ್ಮಗಳ ನಡುವೆ ದ್ವೇಷಾಸೂಯೆ ಮೂಡಿಸುವಂತೆ ವರ್ತಿಸಿ, ಧಾರ್ಮಿಕ ಶ್ರದ್ಧೆಯನ್ನೇ ಅವಮಾನಿಸುವುದು ಸರಿಯಲ್ಲ. ಎರಡು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ, ಭಾನುವಾರ ಮದ್ದೂರಿನಲ್ಲಿ ಮುಸ್ಲಿಮರೇ ಮುಂದೆ ನಿಂತು ಗಣೇಶ ವಿಸರ್ಜನೆಯ ಮೆರವಣಿಗೆ ನಡೆಸಿದ ಸೌಹಾರ್ದ ನಡೆ ಕಣ್ಣಮುಂದಿರುವಾಗ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯೊಬ್ಬ ಇನ್ನೊಂದು ಧರ್ಮವನ್ನು ಅವಮಾನಿಸುವಂತೆ ಯುವಕರನ್ನು ಪ್ರಚೋದಿಸುತ್ತಾ ಮಸೀದಿಯ ಮುಂದೆಯೇ ಮೆರವಣಿಗೆ ಕೊಂಡೊಯ್ದು ಡಿಜೆ ಸದ್ದಿಗೆ ಕೇಕೆ ಹಾಕಿ, ಕುಣಿದು ಕುಪ್ಪಳಿಸುವುದು ಏನನ್ನು ಸೂಚಿಸುತ್ತದೆ? ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂ ಮುಕ್ಕಾಲು ವರ್ಷವಿದೆ. ಆಗ ಪಕ್ಷಗಳ ನಡುವಿನ ರಾಜಕೀಯ ಕೆಸರೆರಚಾಟ ಸಹಜ.

ಆದರೆ, ಸಾರ್ವಜನಿಕ ಗಣೇಶೋತ್ಸವವನ್ನೇ ತಮ್ಮ ರಾಜಕೀಯ ಚದುರಂಗದ ಆಟಕ್ಕೆ ದಾಳ ಉರುಳಿಸಲು ತಾಲೀಮು ನಡೆಸುವುದು ಸರಿಯಲ್ಲ. ಈ ಬಗ್ಗೆ ಯುವ ಸಮಾಜ ಎಚ್ಚೆತ್ತುಕೊಂಡು, ಶಾಂತಿಯುತವಾಗಿ ಗಣೇಶೋತ್ಸವವನ್ನು ಆಯೋಜಿಸಬೇಕಿದೆ.

” ದೇಶದ ಕಾನೂನುಗಳನ್ನು ರೂಪಿಸುವ ಪರಮೋಚ್ಛ ಜವಾಬ್ದಾರಿ ಹೊಂದಿದ್ದ ಲೋಕಸಭೆಯ ಮಾಜಿ ಸದಸ್ಯರಾಗಿ ಇನ್ಸ್‌ ಸ್ಪೆಕ್ಟರ್‌ವೊಬ್ಬರ ವಿರುದ್ಧ ಸಾರ್ವಜನಿಕವಾಗಿ ಅವರು ಬಳಸಿದ ಪದಗಳು ಸಾರ್ವಜನಿಕ ಜೀವನದಲ್ಲಿರುವವರಿಗೆ ಶೋಭೆಯಲ್ಲ.”

 

 

Tags:
error: Content is protected !!