ಕೊಡಗು ಜಿಲ್ಲೆಯಲ್ಲಿಯೂ ಕಾಣಿಸಿಕೊಳ್ಳುತ್ತಿರುವ ರೋಗ; ಹತೋಟಿಗೆ ಔಷಧಿ ಜೊತೆಗೆ ಸೂಕ್ತ ಪರಿಹಾರಕ್ಕೆ ಒತ್ತಾಯ
ಮಡಿಕೇರಿ: ವಾಣಿಜ್ಯ ಬೆಳೆಯಾಗಿ ಕೃಷಿಕರ ಬದುಕಿಗೆ ಆಶ್ರಯವಾಗಿರುವ ಅಡಕೆ ಬೆಳೆಯಲ್ಲಿ ಈಗ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಕಂಗೆಡಿಸಿದೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಅಡಕೆ ಬೆಳೆಯದಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಅಡಕೆ ಬೆಳೆಯಲಾಗುತ್ತದೆ. ನೀರಿನ ವ್ಯವಸ್ಥೆ ಇರುವ ಬಹುತೇಕ ಭಾಗಗಳಲ್ಲಿ ಮಿಶ್ರ ಬೆಳೆಯಾಗಿಯೂ ಅಡಕೆ ಬೆಳೆಯಲಾಗುತ್ತದೆ. ಆದರೆ, ಈಗ ಕೊಡಗು ಜಿಲ್ಲೆಯಲ್ಲಿಯೂ ಅಡಕೆ ಬೆಳೆಗೆ ಎಲೆಚುಕ್ಕು, ಹಳದಿರೋಗ ಬಾಧೆ ಕಾಣಿಸಿಕೊಂಡಿದ್ದು, ರೈತರ ಆತಂಕ ಹೆಚ್ಚಿಸಿದೆ.
ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಸುಮಾರು ೩೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಈ ಪೈಕಿ ೮೫೦ ಹೆಕ್ಟೇರ್ ಪ್ರದೇಶದಲ್ಲಿ ಅಡಕೆಯಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಸುಮಾರು ೨,೧೪೨ ಹೆಕ್ಟೇರ್ ಪ್ರದೇಶದಲ್ಲಿ ಹಳದಿ ಎಲೆ ರೋಗ ಹರಡಿದೆ. ಇದರಿಂದಾಗಿ ಬೆಳೆಗಾರರಿಗೆ ಅಂದಾಜು ೨೦ ಕೋಟಿ ರೂ.ಗೂ ಅಧಿಕ ನಷ್ಟವಾಗಿರುವುದಾಗಿ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಇದನ್ನು ಓದಿ: 300 ಸಿಎ ನಿವೇಶನಗಳ ಹಂಚಿಕೆಗೆ ಎಂಡಿಎ ನಿರ್ಧಾರ
ಅಡಕೆ ಬೆಳೆಗಾರರನ್ನು ಹೈರಾಣು ಮಾಡುತ್ತಿರುವ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗಗಳ ನಿಯಂತ್ರಣಕ್ಕೆ ಸದ್ಯದ ತನಕ ಪರಿಣಾಮಕಾರಿ ವೈಜ್ಞಾನಿಕ ಕ್ರಮಗಳು ಇಲ್ಲ. ಈ ರೋಗಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ತಜ್ಞರನ್ನು ಒಳಗೊಂಡಿರುವ ಸಮಿತಿ ರೋಗ ಬಾಧಿತ ಜಿಲ್ಲೆಗಳಿಗೆ ಈಗಾಗಲೇ ಭೇಟಿ ಕೊಟ್ಟಿದೆ. ರೋಗ ಹರಡುವಿಕೆಗೆ ಪ್ರಮುಖ ಕಾರಣಗಳು, ರೋಗದ ತೀವ್ರತೆ ಮತ್ತು ಹಾನಿಯ ಪ್ರಮಾಣದ ಬಗ್ಗೆ ಪರೀಶೀಲನೆ ನಡೆಸಿದೆ. ರೋಗ ಬಾಧಿತ ಸಸ್ಯದ ಭಾಗಗಳನ್ನು ತೆಗೆಯುವುದು ಮತ್ತು ನಾಶಪಡಿಸುವುದು, ಪೋಷಕಾಂಶಗಳ ನಿರ್ವಹಣೆ, ಸಸ್ಯ ಸಂರಕ್ಷಣೆ ಕ್ರಮಗಳ ಅಳವಡಿಕೆ ಹಾಗೂ ತಾಂತ್ರಿಕ ಮಾಹಿತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಶಿಫಾರಸು ಮಾಡಿದೆ.
ಈ ಮಧ್ಯೆ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ಪೀಡಿತ ಪ್ರದೇಶಗಳು ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಲೇ ಇವೆ. ಸಂಶೋಧನೆ ಮೂಲಕ ರೋಗ ಹತೋಟಿ ಔಷಧಿಗಳನ್ನು ಕಂಡು ಹಿಡಿಯುವುದರೊಂದಿಗೆ ಕೂಡಲೇ ಬೆಳೆಗಾರರಿಗೆ ಪರಿಹಾರ ಒದಗಿಸಬೇಕೆನ್ನುವ ಒತ್ತಾಯ ಕೇಳಿ ಬಂದಿವೆ.
” ಅಕಾಲಿಕ ಮಳೆಯಿಂದ ಸೋಮವಾರಪೇಟೆ ತಾಲ್ಲೂಕಿನಲ್ಲಿ ನಿರಂತರವಾಗಿ ಒಂದು ದಶಕದಿಂದ ಕೃಷಿ ಫಸಲು ಹಾನಿಯಾಗುತ್ತಿದೆ. ಸೂಕ್ತ ಪರಿಹಾರವೂ ಸಿಗುತ್ತಿಲ್ಲ. ಭತ್ತದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಬಹುಪಾಲು ರೈತರು ಆಂತರಿಕ ಬೆಳೆಯಾಗಿ ಅಡಕೆ ಕೃಷಿ ಮಾಡಿದ್ದಾರೆ. ಈಗ ಫಸಲು ಸಿಗುವ ಸಂದರ್ಭದಲ್ಲಿ ರೋಗಬಾಧೆ ಹೆಚ್ಚಾಗಿ ಅಡಕೆ ಉದುರಿ ಮಣ್ಣು ಸೇರುತ್ತಿದೆ. ಸರ್ಕಾರ ಪರಿಹಾರ ನೀಡಬೇಕು.”
ಇದನ್ನು ಓದಿ: 30 ಹಾಡಿಗಳಿಗೂ ಅರಣ್ಯ ಹಕ್ಕು ಪತ್ರಗಳನ್ನು ನೀಡಲು ಆಗ್ರಹ
-ಬಿ.ಎಂ. ಲವ, ಅಧ್ಯಕ್ಷ, ಕಾಫಿ ಬೆಳೆಗಾರರ ಸಂಘ, ಸೋಮವಾರಪೇಟೆ
ಕೊಡಗು ಜಿಲ್ಲೆಯ ಅಡಕೆ ತೋಟಗಳಲ್ಲಿ ರೋಗ ಬಾಧೆ ಕಾಣಿಸಿಕೊಂಡಿದ್ದು, ಅಡಕೆ ಬೆಳೆ ಸಂಪೂರ್ಣವಾಗಿ ನಾಶವಾಗುವ ಅಪಾಯಕ್ಕೆ ತುತ್ತಾಗಿದೆ. ಅಡಕೆ ಬೆಳೆಯನ್ನು ಉಳಿಸಿ ಬೆಳೆಗಾರರ ರಕ್ಷಣೆಗೆ ಬರಬೇಕಾದ ತುರ್ತು ಅಗತ್ಯವಿದೆ. ಸರ್ಕಾರ ರೈತರಿಗೆ ಪರಿಹಾರ ಒದಗಿಸಿಕೊಡಬೇಕಿದೆ.
-ಶೌಕತ್ ಅಲಿ, ಅಡಕೆ ವ್ಯಾಪಾರಿ, ನೆಲ್ಯಹುದಿಕೇರಿ
ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಕೃತಿ ವಿಕೋಪದ ಕಾರಣದಿಂದ ಅಡಕೆ ಇಳುವರಿ ಕುಂಠಿತವಾಗುತ್ತಿದೆ. ಸರ್ಕಾರಬಅಥವಾ ಅಡಕೆ ಮಂಡಳಿಯಿಂದ ಎಲೆಚುಕ್ಕಿ ರೋಗ, ಸುಳಿಕೊಳೆ ರೋಗಗಳಿಗೆ ಪರಿಣಾಮಕಾರಿ ಔಷಧಿ ಹಾಗೂ ಸೂಕ್ತ ಮಾರ್ಗದರ್ಶನ ದೊರಕುತ್ತಿಲ್ಲ. ನಾವೇ ಕಂಡುಕೊಂಡಂತೆ ರಾಸಾಯನಿಕಮುಕ್ತ ನಿರ್ವಹಣೆ ಮತ್ತು ಸಾವಯವ ಕೃಷಿಯಿಂದಾಗಿ ರೋಗಗಳು ತುಸು ತಹಬಂದಿಗೆ ಬರುತ್ತಿವೆ. ರೋಗಗಳ ನಿರ್ವಹಣೆ ಬಗ್ಗೆ ಸರ್ಕಾರ ಮತ್ತು ಸಂಶೋಧನಾ ಸಂಸ್ಥೆಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಅಡಕೆ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.
-ಬಿ.ಆರ್. ಪ್ರದೀಪ್, ಅಡಕೆ ಬೆಳೆಗಾರ, ವಾಲ್ನೂರು
–ಪುನೀತ್ ಮಡಿಕೇರಿ





