Mysore
15
overcast clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಕುಸ್ತಿ, ಖೋಖೋ ಅಕಾಡೆಮಿಗೆ ಜಾಗ ಶೀಘ್ರ ಹಸ್ತಾಂತರ

ಸೈಕ್ಲಿಂಗ್ ವೆಲೋಡ್ರಮ್ – ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ
ಸಾತಗಳ್ಳಿ ಸರ್ವೆ ನಂಬರ್‌ನಲ್ಲಿ ೨೨. ೧೩ ಎಕರೆ ಜಾಗ ನೀಡಲು ಮುಡಾ ಒಲವು

ಕೆ. ಬಿ. ರಮೇಶನಾಯಕ

ಮೈಸೂರು: ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ವಿವಿಧ ಅಕಾಡೆಮಿಗಳನ್ನು ಸ್ಥಾಪಿಸಲು ಅಗತ್ಯವಿರುವ ಜಾಗ ಸಿಗದ ಪರಿಣಾಮವಾಗಿ ಕಳೆದ ಒಂದು ವರ್ಷದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡೆಸಿದ್ದ ಹುಡುಕಾಟ ಕೊನೆಗೂ ಸಫಲವಾಗುವ ಲಕ್ಷಣಗಳು ಗೋಚರಿಸಿವೆ.

ಮೈಸೂರು ಹೊರವಲಯದ ಸಾತಗಳ್ಳಿ ಸರ್ವೆ ನಂಬರ್‌ನಲ್ಲಿ ೨೨. ೧೩ ಎಕರೆ ಭೂಮಿ ನೀಡಲು ಮುಡಾ ಒಲವು ತೋರಿದೆ. ಅಂತಾ ರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಮೀಸಲಿ ರಿಸಿದ್ದ ಈ ಜಾಗವನ್ನು ಹಸ್ತಾಂತರ ಮಾಡು ವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮುಡಾಕ್ಕೆ ಪ್ರಸ್ತಾವನೆ ಸಲ್ಲಿಸಿ ದ್ದರೂ ಅಂತಿಮವಾಗಿರಲಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಅವರು ತವರು ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ವಿವಿಧ ಅಕಾಡೆಮಿಗಳನ್ನು ಸ್ಥಾಪನೆ ಮಾಡಲು ಜಾಗಕ್ಕಾಗಿ ಪರ ದಾಡುತ್ತಿರುವುದನ್ನು ತಪ್ಪಿಸಲು ಇನ್ನೊಂದು ತಿಂಗಳಲ್ಲಿ ಭೂಮಿ ಹಸ್ತಾಂತರವಾಗುವ ಸಂಭವವಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೨೩-೨೪ನೇ ಸಾಲಿನ ಆಯವ್ಯಯದಲ್ಲಿ ಸೈಕ್ಲಿಂಗ್ ವೆಲೋಡ್ರಮ್ ನಿರ್ಮಾಣ, ೨೦೨೫-೨೬ನೇ ಸಾಲಿನ ಮುಂಗಡಪತ್ರದಲ್ಲಿ ಕುಸ್ತಿ, ವಾಲಿಬಾಲ್ ಮತ್ತು ಖೋ – ಖೋ ಅಕಾಡೆಮಿಗಳನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದರಿಂದಾಗಿ ನಜರ್‌ಬಾದ್‌ನಲ್ಲಿರುವ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿರುವ ಜಾಗದಲ್ಲಿ ಈ ಉದ್ದೇಶಿತ ಅಕಾಡೆಮಿಗಳನ್ನು ಸ್ಥಾಪನೆ ಮಾಡಲು ಭೂಮಿಯ ಕೊರತೆ ಇದೆ ಎಂಬ ಕಾರಣಕ್ಕಾಗಿ ಬದಲಿ ಭೂಮಿಯನ್ನು ಶೋಽಸುವ ಕೆಲಸದಲ್ಲಿ ತೊಡಗಿದ್ದರು. ಆದರೆ, ಮೈಸೂರು ತಾಲ್ಲೂಕಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ಪಕ್ಕದಲ್ಲಿರುವ ಸಾತಗಳ್ಳಿ ಸರ್ವೆ ನಂ. ೮೮, ೮೫, ೧೦೫ ಮತ್ತು ೧೦೭ರಲ್ಲಿರುವ ೨೨. ೧೩ ಎಕರೆ ಜಮೀನನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಮೀಸಲಿಟ್ಟರೂ ಮಧ್ಯದಲ್ಲಿ ಕೆರೆ ಬಂದಿದ್ದರಿಂದ ಇದನ್ನು ಕೈ ಬಿಡಲಾಗಿತ್ತು.

ಹಾಗಾಗಿ, ಈ ಭೂಮಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವಂತೆ ಮುಡಾಕ್ಕೆ ಪತ್ರ ಬರೆಯಲಾಗಿತ್ತು. ಕಳೆದ ವರ್ಷ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಸೈಕ್ಲಿಂಗ್ ವೆಲೋಡ್ರಮ್ ನಿರ್ಮಾಣಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಸ್ಥಳ ಪರಿಶೀಲಿಸಿ ಸೂಕ್ತ ಸ್ಥಳವೆಂದು ದೃಢಪಡಿಸಿದ್ದರು. ಇದಾದ ನಂತರದ ದಿನಗಳಲ್ಲಿ ಜಾಗವನ್ನು ಮಂಜೂರು ಮಾಡುವಂತೆ ಮುಡಾಕ್ಕೆ ಮತ್ತೊಮ್ಮೆ ಪತ್ರ ಬರೆದಿದ್ದರೂ ಅಂತಿಮ ನಿರ್ಧಾರವಾಗಿರಲಿಲ್ಲ. ಇದರಿಂದ ಅಽಕಾರಿಗಳು ಕೈ ಚೆಲ್ಲಿ ಕುಳಿತಿದ್ದರು.

ಆದರೆ, ಜಿಲ್ಲಾಧಿಕಾರಿಗಳೂ ಆಗಿರುವ ಮುಡಾ ಅಧ್ಯಕ್ಷ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರೇ ಮುತುವರ್ಜಿ ವಹಿಸಿ ಭೂಮಿ ನೀಡಲು ಮುಂದಾಗಿದ್ದಾರೆ. ಈಗಾಗಲೇ ಒಂದು ಸುತ್ತಿನ ಸಭೆಯನ್ನು ನಡೆಸಿದ್ದು, ಮುಂದಿನ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ.

ಕ್ರೀಡಾ ಸಂಕೀರ್ಣ ನಿರ್ಮಾಣವಾದರೆ ಜಮೀನು ಮಂಜೂರು: ಸೈಕ್ಲಿಂಗ್ ವೆಲೋಡ್ರಮ್ ಜತೆಗೆ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲು ಮುಂದಾದರೆ, ಜಮೀನು ಮಂಜೂರು ಮಾಡಬಹುದೆಂದು ಮುಡಾ ತಿಳಿಸಿದ್ದರಿಂದ, ಕ್ರೀಡಾ ಇಲಾಖೆಯು ಒಪ್ಪಿಗೆ ಸೂಚಿಸಿ ಮತ್ತೊಮ್ಮೆ ಪತ್ರ ಬರೆದಿದೆ. ೨೨ ಎಕರೆ ಪ್ರದೇಶದಲ್ಲಿ -ಟ್‌ಬಾಲ್ ಕ್ರೀಡಾಂಗಣ, ಜಲ ಸಾಹಸ ಕ್ರೀಡಾ ತರಬೇತಿ ಕೇಂದ್ರ, ಒಳಾಂಗಣ ಕ್ರೀಡಾಂಗಣ (ನಾಲ್ಕು ಷಟಲ್ ಬ್ಯಾಡ್ಮಿಂಟನ್ ಅಂಕಣಗಳು), ಹೊರಾಂಗಣ ಬ್ಯಾಸ್ಕೆಟ್‌ಬಾಲ್ ಅಂಕಣ(೧), ಹೊರಾಂಗಣ ಲಾನ್ ಟೆನ್ನಿಸ್ ಅಂಕಣ(ನಾಲ್ಕು), ವಾಲಿಬಾಲ್ ಅಕಾಡೆಮಿಯಲ್ಲಿ ಎರಡು ಅಂಕಣಗಳು, ಬಟ್ಟೆ ಬದಲಿಸುವ ಕೊಠಡಿ, ಸ್ಟೋರ್ ರೂಮ್, ವಸತಿ ನಿಲಯ, ಭೋಜನಾಲಯ, ಜಿಮ್ ಹಾಲ್, ಕ್ರೀಡಾ ವಿಜ್ಞಾನ ಕೇಂದ್ರ, ವಿಚಾರಣಾ ಸಂಕೀರ್ಣ ಕೊಠಡಿ, ಕುಸ್ತಿ ಅಕಾಡೆಮಿಯಲ್ಲಿ ಒಳಾಂಗಣ ಕ್ರೀಡಾಂಗಣ (ಎರಡು ಅಂಕಣಗಳು), ಬಟ್ಟೆ ಬದಲಿಸುವ ಕೊಠಡಿ, ಸ್ಟೋರ್ ರೂಮ್, ಖೋ ಖೋ ಅಕಾಡೆಮಿಯಲ್ಲಿ ಎರಡು ಅಂಕಣಗಳು, ಬಟ್ಟೆ ಬದಲಿಸುವ ಕೊಠಡಿ, ಸ್ಟೋರ್ ರೂಮ್, ೨೦೦ ಮೀಟರ್ ಅಥ್ಲೆಟಿಕ್ಸ್ ಟ್ರ್ಯಾಕ್, ಸೈಕ್ಲಿಂಗ್ ವೆಲೋಡ್ರಮ್, ಸೈಕ್ಲಿಂಗ್ ಪಂಪ್ ಟ್ರ್ಯಾಕ್ ನಿರ್ಮಿಸುವ ಪ್ಲಾನ್ ಮಾಡಲಾಗಿದೆ.

ಮುಡಾದಲ್ಲಿ ಚರ್ಚೆ
ಭವಿಷ್ಯದಲ್ಲಿ ಭೂಮಿಯ ಕೊರತೆಯಾಗುವ ಕಾರಣ ಅಂತಾರಾಷ್ಟ್ರೀಯ ಕ್ರೀಡಾ ಮೈದಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನೇ ನೀಡುವ ಬಗ್ಗೆ ಮುಡಾ ಸಭೆಯಲ್ಲಿ ಚರ್ಚಿಸಲಾಗಿದೆ. ಸಾತಗಳ್ಳಿ ಬದಲಿಗೆ ಇಲವಾಲ ಹೋಬಳಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಗುರುತಿಸಿರುವ ಜಾಗ ಕ್ರೀಡಾ ಸಂಕೀರ್ಣಕ್ಕೆ ಸೂಕ್ತವೆಂದು ಹೇಳಲಾಗಿದೆ. ಹೀಗಾಗಿ, ಸ್ಥಳೀಯ ಶಾಸಕ ತನ್ವೀರ್ ಸೇಠ್ ಅವರ ಅಭಿಪ್ರಾಯವನ್ನು ಪರಿಗಣಿಸಿ ಶೀಘ್ರದಲ್ಲೇ ಭೂಮಿಯ ಹಸ್ತಾಂತರಕ್ಕೆ ಬೇಕಾದ ಕ್ರಮಕೈಗೊಳ್ಳಲು ಮುಡಾ ಅಧಿಕಾರಿಗಳು ಮುಂದಾಗಿದ್ದಾರೆ.

ಮೈಸೂರಿನಲ್ಲಿ ಸೈಕ್ಲಿಂಗ್ ವೆಲೋಡ್ರಮ್ ಜತೆಗೆ, ಕ್ರೀಡಾ ಸಂಕೀರ್ಣವನ್ನೂ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿದೆ. ಮುಡಾದಿಂದ ಭೂಮಿ ಹಸ್ತಾಂತರವಾಗುವ ತೀರ್ಮಾನ ಕ್ಕಾಗಿ ಕಾದು ಕುಳಿತಿದ್ದೇವೆ. ಭೂಮಿ ನೀಡಿದ ತಕ್ಷಣವೇ ಪ್ರಕ್ರಿಯೆ ಶುರುವಾಗಲಿದೆ. -ಕೆ. ಭಾಸ್ಕರ್ ನಾಯ್ಕ್, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

Tags:
error: Content is protected !!